ದೇವಾಲಯದ ಆದಾಯದ ಮೇಲೆ ರಾಜ್ಯ ಸರ್ಕಾರದ ಕಣ್ಣು: ವಿಜಯೇಂದ್ರ-ರಾಮಲಿಂಗಾರೆಡ್ಡಿ ಟ್ವೀಟ್ ವಾರ್

| Updated By: Rakesh Nayak Manchi

Updated on: Feb 22, 2024 | 1:03 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ದೇವಾಲಯದ ಆದಾಯವನ್ನು ಇತರೆ ಧರ್ಮಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಅಧಿವೇಶನದಲ್ಲಿ, ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ನಡುವೆ ಟ್ವೀಟ್ ವಾರ್ ನಡೆದಿದೆ.

ದೇವಾಲಯದ ಆದಾಯದ ಮೇಲೆ ರಾಜ್ಯ ಸರ್ಕಾರದ ಕಣ್ಣು: ವಿಜಯೇಂದ್ರ-ರಾಮಲಿಂಗಾರೆಡ್ಡಿ ಟ್ವೀಟ್ ವಾರ್
ದೇವಾಲಯದ ಆದಾಯ ಮೇಲೆ ರಾಜ್ಯ ಸರ್ಕಾರದ ಕಣ್ಣು: ವಿಜಯೇಂದ್ರ-ರಾಮಲಿಂಗಾರೆಡ್ಡಿ ಟ್ವೀಟ್ ವಾರ್
Follow us on

ಬೆಂಗಳೂರು, ಫೆ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ದೇವಾಲಯದ ಆದಾಯವನ್ನು ಇತರೆ ಧರ್ಮಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಅಧಿವೇಶನದಲ್ಲಿ, ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನಡುವೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ​ ಟ್ವೀಟ್ ವಾರ್ ನಡೆದಿದೆ.

ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಬಿವೈ ವಜಯೇಂದ್ರ ಟ್ವೀಟ್

ಅಲ್ಲದೆ, ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣವನ್ನು ಸರ್ಕಾರ ಬಾಚಿಕೊಳ್ಳಲಿದೆ, ಇದು ದರಿದ್ರತನವಲ್ಲದೇ ಬೇರೇನೂ ಅಲ್ಲ, ದೇವರ ಅರಿಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕೇ ಹೊರತೂ, ಅದು ಬೇರೊಂದು ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆಯಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸಲಹೆ ಮೇರೆಗೆ ಕರ್ನಾಟಕದ ತೆರಿಗೆದಾರರ ಹಣ ದುರುಪಯೋಗ: ವಿಜಯೇಂದ್ರ ಆಕ್ರೋಶ

ಇತರ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಎಂಬುದು ಕೋಟಿ ಭಕ್ತರ ಪ್ರಶ್ನೆಯಾಗಿದೆ. ಭಕ್ತರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಪಾಲು ಕಸಿಯುವ ಬದಲು ‘ಸರ್ಕಾರ ನಡೆಸಲು ನೆರವಾಗಿ’ ಎಂದು ದೇವಸ್ಥಾನಗಳ ಬಳಿ ಗೋಲಕಗಳನ್ನಿಡಲಿ ಸಹಾನುಭೂತಿ ಮನಸ್ಸಿನ ಭಕ್ತರು ನಿಮ್ಮ ಸರ್ಕಾರಕ್ಕೆ ಕಾಣಿಕೆ ನೀಡಲೂ ಬಹುದು? ಎಂದು ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

ವಿಧಾನಸೌಧದ ಮುಂದೆ ಹುಂಡಿ ಇಡಲು ವಿಜಯೇಂದ್ರ ಸಲಹೆ

ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಸರಕಾರ, ಶ್ರೀಮಂತ ದೇವಾಲಯಕ್ಕೂ ಕನ್ನ ಹಾಕುವ ಕೆಲಸ ಮಾಡುತ್ತಿದೆ. ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಡಿ ಎಂದು ಕುಟುಕಿದರು. ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅತ್ಯಂತ ಹೆಚ್ಚು ತೆರಿಗೆಯನ್ನು ಅದು ಸಂಗ್ರಹ ಮಾಡುತ್ತದೆ. ಇಂಥ ಕರ್ನಾಟಕ ರಾಜ್ಯದ ಪರಿಸ್ಥಿತಿ ಹೀಗಾಗಿದೆ ಎಂಬುದು ನಿಜಕ್ಕೂ ದುರದೃಷ್ಟ. ಸರಕಾರ ಈ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ ಎಂದು ಆಕ್ಷೇಪ ಸೂಚಿಸಿದರು.
ಗ್ಯಾರಂಟಿಗೆ ನಮ್ಮ ಟೀಕೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದನ್ನು ಅನುಷ್ಠಾನಕ್ಕೆ ತರುವುದು ಅವರ ಕರ್ತವ್ಯವಾಗಿದೆ. ಅವರು ಕೊಟ್ಟಿರುವ ಭರವಸೆಗಳನ್ನು ಈಡೇರಿಸಬೇಕಿದೆ. ಆದರೆ, ಅದರ ಅರ್ಥ ರಾಜ್ಯದಲ್ಲಿ ಅಭಿವೃದ್ಧಿ ಮಾಡಬಾರದು ಎಂದಲ್ಲ ಎಂದರು.

ನಾವು ಶಾಸಕರು ಕ್ಷೇತ್ರಕ್ಕೆ ಹೋದಾಗ ರಸ್ತೆಗಳು, ಶಾಲಾ ಕೊಠಡಿ, ಆಸ್ಪತ್ರೆಗಳ ಬಗ್ಗೆ ಜನರು ನಮ್ಮನ್ನು ಕೇಳುತ್ತಾರೆ. ಆದರೆ, 224 ಕ್ಷೇತ್ರಗಳ ಯಾವುದೇ ಒಬ್ಬ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ವಿಚಾರದಲ್ಲಿ ಮಾತನಾಡಲು ಸಾಧ್ಯವೇ ಇಲ್ಲ. ಯಾಕೆಂದರೆ, ರಾಜ್ಯ ಸರಕಾರ ಒಂದು ರೂಪಾಯಿಯನ್ನೂ ಅನುದಾನವಾಗಿ ಕೊಡುತ್ತಿಲ್ಲ. ರಾಜ್ಯ ಸರಕಾರವು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಒಂದು ರೂಪಾಯಿ ಅನುದಾನವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು. ಸರಕಾರಿ ನೌಕರರಿಗೆ ಸಂಬಳ ಕೊಡತಕ್ಕಂಥ ಸಾಧ್ಯತೆ ಕಡಿಮೆ ಆಗುತ್ತಿದೆ. ಅಂಥ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಒರಿಜಿನಲ್ ಹಿಂದೂಗಳು ನಾವು: ರಾಮಲಿಂಗಾರೆಡ್ಡಿ

ವಿಜಯೇಂದ್ರ ಟ್ವೀಟ್​ಗೆ ಪ್ರತಿ ಟ್ವೀಟ್ ಮೂಲಕ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ವಿಜಯೇಂದ್ರ ಅವರೇ, ನೀವು ರಾಜಕೀಯ ಲಾಭಕ್ಕಾಗಿ ಕೇವಲ ಹಿಂದೂ ವಿರೋಧಿ ಧೋರಣೆ ಎಂದು ನಮ್ಮ ಸರ್ಕಾರವನ್ನು ದೂರುತ್ತಿದ್ದೀರಿ. ಒರಿಜಿನಲ್ ಹಿಂದೂಗಳು ನಾವು.. ಇಷ್ಟು ವರ್ಷ ದೇವಸ್ಥಾನಗಳನ್ನು, ಹಿಂದುಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರಗಳೇ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರವು ಯಾವ ಧರ್ಮದ ಮೇಲು ವಕ್ರ ದೃಷ್ಟಿ ಬೀರುವುದಿಲ್ಲ, ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಬಾಳುವುದೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ನೀವು ಹೇಳುತ್ತಿರುವುದು ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯ ಮೇಲೆ ವಕ್ರದೃಷ್ಟಿ ಕಾಂಗ್ರೆಸ್ ಸರಕಾರ ಬೀರಿದೆ ಅಂತ. 2008 ರಿಂದ 2013, 2019 ರಿಂದ 2023ರ ವರೆಗೂ ನಿಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಆಗ ಕೂಡ ಈ ವಿದೇಯಕ ಅನುಷ್ಠಾನದಲ್ಲಿತ್ತು ಆಗ ಕೂಡ ನಿಮ್ಮ ಸರ್ಕಾರವು ಹಿಂದುಗಳ ಮೇಲೆ ವಕ್ರ ಕಣ್ಣು ಬೀರಿ ಆದಾಯ ಮಾಡಿಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ರಾಮಲಿಂಗಾರೆಡ್ಡಿ ಟ್ವೀಟ್

ಆಗ ಕೂಡ ನಿಮ್ಮ ಆಡಳಿತದಲ್ಲಿ ದರಿದ್ರ ತನವಿತ್ತೆ? ಏಕೆಂದರೆ ಈ ವಿದಾಯಕ 2001 ರಿಂದ ಜಾರಿಯಲ್ಲಿದೆ. ಯಾವ ಧರ್ಮದ ಆದಾಯದ ಮೇಲು ನಮ್ಮ ಕಾಂಗ್ರೆಸ್ ಸರ್ಕಾರದ ಕಣ್ಣು ಬೀಳುವುದಿಲ್ಲ ಎಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ ಬಾಳುವುದೇ ಕಾಂಗ್ರೆಸ್ ಸರ್ಕಾರದ ಗುರಿ. ನೀವು ಎರಡು ಬಾರಿ ಆಡಳಿತದಲ್ಲಿದ್ದಾರಲ್ಲ ಆಗ ಕೂಡ ಭಕ್ತರ ಹಣದಲ್ಲಿ ಬಿಜೆಪಿ ಸರ್ಕಾರ ಪಾಲು ಕಸಿಯುವ ಕೆಲಸ ಮಾಡಿತ? ನಿಮ್ಮ ಸುಳ್ಳು ಮೋಸದ ಪ್ರಚಾರವನ್ನು ರಾಜ್ಯದ ಜನತೆ ನಂಬುವುದಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Thu, 22 February 24