AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವಿಧೇಯಕ ಮಿಕ್ಸ್ ಮಾಡಿದ್ದರಿಂದ ಬಿದ್ದೋಗಿದೆ: ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ; ಸಿಎಂ ಸಿದ್ದರಾಮಯ್ಯ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಹಿನ್ನಡೆಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಇಂಡಿಯಾ ಒಕ್ಕೂಟ ಸೋಲಿಸಿರುವುದು ಇದಕ್ಕೆ ಕಾರಣ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ವಿರೋಧಿಯಲ್ಲ ಎಂದಿದ್ದಾರೆ.

ಮೂರು ವಿಧೇಯಕ ಮಿಕ್ಸ್ ಮಾಡಿದ್ದರಿಂದ ಬಿದ್ದೋಗಿದೆ: ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ; ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯImage Credit source: CMofKarnataka
ಗಂಗಾಧರ​ ಬ. ಸಾಬೋಜಿ
|

Updated on:Apr 18, 2026 | 4:18 PM

Share

ಬೆಂಗಳೂರು, ಏಪ್ರಿಲ್​ 18: ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ಸೋಲಾಗಿದೆ. ಸದ್ಯ ಇದೇ ವಿಚಾರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ಕಿತ್ತಾಟಕ್ಕೂ ಕಾರಣವಾಗಿದೆ. ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ(Siddaramaiah) ಮಾತನಾಡಿದ್ದು, ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ. 2023ರಲ್ಲೇ ಸಂಸತ್​ನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು, ಆದರೆ ಕೇಂದ್ರ ಸರ್ಕಾರ ಇದುವರೆಗೆ ಏಕೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಪ್ರಶ್ನಿಸಿದರು.

3 ವಿಧೇಯಕ ಮಿಕ್ಸ್ ಮಾಡಿದ್ದರಿಂದ ಲೋಕಸಭೆಯಲ್ಲಿ ಬಿದ್ದೋಗಿದೆ: ಸಿಎಂ ಸಿದ್ದರಾಮಯ್ಯ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ. ಈಗ ಮಹಿಳಾ ಮೀಸಲಾತಿ ವಿಧೇಯಕ, ಕ್ಷೇತ್ರ ಮರುವಿಂಗಡಣೆ ಬಿಲ್, ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಬಿಲ್ ಮಿಕ್ಸ್ ಮಾಡಿದ್ದರು. ಮಹಿಳಾ ಮೀಸಲಾತಿ ವಿಧೇಯಕ ಒಂದೇ ಆಗಿದ್ದರೆ ಅಂಗೀಕಾರವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ

3 ವಿಧೇಯಕ ಮಿಕ್ಸ್ ಮಾಡಿದ್ದರಿಂದ ಲೋಕಸಭೆಯಲ್ಲಿ ಬಿದ್ದೋಗಿದೆ. ಬಿಜೆಪಿಯವರು ರಾಜಕೀಯ ಆಟ ಆಡಿದ್ದಾರೆ. ರಾಜಕೀಯ ಮಾಡುವುದಕ್ಕಾಗಿ 3 ವಿಧೇಯಕ ಮಿಕ್ಸ್ ಮಾಡಿದ್ದರು. ನಾವು ಕ್ಷೇತ್ರ ಮರುವಿಂಗಡಣಾ ವಿಧೇಯಕಕ್ಕೆ ಮಾತ್ರ ವಿರೋಧಿಸಿದ್ದೇವೆ. ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ ಎಂದಿದ್ದಾರೆ ಸಿಎಂ ಸಿದ್ಧರಾಮಯ್ಯ.

ಕಾಂಗ್ರೆಸ್​ನವರು ಮಹಿಳಾ ಮೀಸಲಾತಿ ವಿರೋಧಿಗಳಲ್ಲ: ಬಿ.ಕೆ.ಹರಿಪ್ರಸಾದ್

ಇನ್ನು ಈ ಬಗ್ಗೆ ದೆಹಲಿಯಲ್ಲಿ ಪರಿಷತ್​ನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು,  ವಿಧೇಯಕಕ್ಕೆ ಸೋಲಾಗಿಲ್ಲ, ಬಿಜೆಪಿಯ ಕುಟಿಲ ನೀತಿಗೆ ಸೋಲಾಗಿದೆ. ಲಕ್ಷಾಂತರ ಜನ ಕಷ್ಟಪಟ್ಟು ಸ್ವಾತಂತ್ರ್ಯ ಕೊಡಿಸಿದ ದೇಶದಲ್ಲಿ ಕುಟೀಲ ನೀತಿ ಮಾಡಿ ಅಧಿಕಾರಕ್ಕೆ ಬರಲು ಸಂಚು ರೂಪಿಸಲಾಗಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಇಲಿಗಳನ್ನು ಹೊಡೆದರೆ ಡಿಕೆಶಿ ಹುಲಿಗಳನ್ನೇ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ: ಅಶೋಕ್ ಹೀಗಂದಿದ್ಯಾಕೆ ನೋಡಿ!

ಬಿಲ್ ಬೆಂಬಲ ಸಿಗದಿರುವುದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಸಿಕ್ಕ ಜಯ. ಆರ್​ಎಸ್ಎಸ್, ಬಿಜೆಪಿ ತಂತ್ರಗಳನ್ನು ಸೋಲಿಸಿದ್ದಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್, ವಿಪಕ್ಷಗಳಿಗೆ ಧನ್ಯವಾದ ಹೇಳಬೇಕು. 2023ರಲ್ಲಿ ಪಾಸ್ ಆಗಿದ್ದ ವಿಧೇಯಕ ಯಾಕೆ ಅನುಷ್ಠಾನಕ್ಕೆ ತರಲಿಲ್ಲ. ಬಿಜೆಪಿಯವರು ಕೇವಲ ಮೊಸಳೆ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಎಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. 543 ಕ್ಷೇತ್ರಗಳಲ್ಲಿ ಮೀಸಲಾತಿ ತರಬಹುದು, ಮಾಡಲಿ ಬೆಂಬಲಿಸುತ್ತೇವೆ. ಕಾಂಗ್ರೆಸ್​ನವರು ಮಹಿಳಾ ಮೀಸಲಾತಿ ವಿರೋಧಿಗಳಲ್ಲ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:16 pm, Sat, 18 April 26

Follow Us