ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ರೇಣುಕಾಚಾರ್ಯ: ಯಾವ ಕ್ಷೇತ್ರದಿಂದ?

| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2023 | 9:34 AM

ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಮತ್ತೆ ಸ್ವಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿರುವ ರೇಣುಕಾಚಾರ್ಯ ಇದೀಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹಾಲಿ ಬಿಜೆಪಿ ಸಂಸದರು ಇರುವ ದಾವಣಗೆರೆ ಲೋಕಸಭಾ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ರೇಣುಕಾಚಾರ್ಯ: ಯಾವ ಕ್ಷೇತ್ರದಿಂದ?
ರೇಣುಕಾಚಾರ್ಯ
Follow us on

ಚಿತ್ರದುರ್ಗದಲ್ಲಿ, (ಅಕ್ಟೋಬರ್ 09): ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕದಲ್ಲಿ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress)  ಸಿದ್ಧತೆ ನಡೆಸಿವೆ. ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಕಾಂಗ್ರೆಸ್​​ ಸೆಡ್ಡು ಹೊಡೆಯಲು ಸಜ್ಜಾಗಿವೆ. ಇದರ ಮಧ್ಯೆ ಇದೀಗ ಟಿಕೆಟ್ ಫೈಟ್ ಶುರುವಾಗಿದೆ. ಹೌದು..ದಾವಣಗೆರೆ (Davanagere) ಬಿಜೆಪಿಯ ಹಾಲಿ ಸಂಸದ ಸಿದ್ದೇಶ್ವರ್ ಅವರು ಇದ್ದಾರೆ. ಆದರೂ ಸಹ ಎಂಪಿ ರೇಣುಕಾಚಾರ್ಯ (MP Renukacharya) ಈ ಬಾರಿ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳ ಮಾತನಾಡಿರುವ ರೇಣುಕಾಚಾರ್ಯ, ಬೇರೆಯವರನ್ನು ಟೀಕೆ ಮಾಡಲು ನಮಗೆ ಯಾವ ನೈತಿಕತೆ ಇದೆ. ಮೊದಲು ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ಆಯ್ಕೆ ಮಾಡಲಿ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ನೋವಿನಿಂದ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ವಿಪಕ್ಷ ನಾಯಕರ ಆಯ್ಕೆ ಆಗಲಿ. ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.

ಇದನ್ನೂ ಓದಿ: 2024ಕ್ಕೆ ಮತ್ತೆ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಮ್ಮದೇ ಪಕ್ಷದ ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸೋಲಿಗೆ ನಾಯಕರ ದೌರ್ಬಲ್ಯ ಕಾರಣ. ಬಿಜೆಪಿ ಕಾರ್ಯಕರ್ತರನ್ನೇ ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಲೋಕಸಭೆ ಚುನಾವಣೆಗೂ ಮುನ್ನ ವಿಪಕ್ಷ ನಾಯಕರ ಆಯ್ಕೆ ಆಗಲಿ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ನೋವಿನಿಂದ ಮಾತನಾಡುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಗುಡುಗಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ಬಗ್ಗೆ ಮಾತನಾಡಿ, ಜೆಡಿಎಸ್​, ಬಿಜೆಪಿ ಮೈತ್ರಿಗೆ ವಿರೋಧ ಮಾಡಲ್ಲ. ಆದ್ರೆ, ಮೈತ್ರಿ ಎಂದರೆ ಕಾರ್ಯಕರ್ತರ ನಡುವೆ ಸಾಮರಸ್ಯ ಇರಬೇಕು. ಆದ್ರೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರು ಜೆಡಿಎಸ್, ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿದ್ದಾರೆ. ಈ ಹಿಂದೆ ಜೆಡಿಎಸ್​ನವರು ವಚನ ಭ್ರಷ್ಟರು ಎಂದು ನಾವೇ ಹೇಳಿದ್ದೆವು. ಅಂತಹವರ ಜೊತೆ ಯಾವ ರೀತಿ ಮೈತ್ರಿ ಎಂದು ಜನ ಕೇಳುತ್ತಿದ್ದಾರೆ. ರಾಜ್ಯ ನಾಯಕರನ್ನು ಹೊರಗಿಟ್ಟು ಮೈತ್ರಿಯಾದ್ರೆ ಅಪೂರ್ಣ ಆಗುತ್ತದೆ. ಯಡಿಯೂರಪ್ಪ ಸೇರಿ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪರೋಕ್ಷವಾಗಿ ಹೈಕಮಾಂಡ್​ ನಾಯಕರಿಗೆ ಟಾಂಗ್ ಕೊಟ್ಟರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ