ಮೈಸೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಾಂಗ್ರೆಸ್ ಹಾಗೂ ಬಿಜೆಪಿ ಯಾತ್ರೆ ಆರಂಭಿಸಿವೆ. ಇತ್ತ ಜೆಡಿಎಸ್ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ನೀಡಲು ಮೈಸೂರಿನಲ್ಲಿ ಕಾರ್ಯಾಗಾರ ನಡೆಸಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ್ರು ಉರುಳಿಸಿದ ದಾಳ ಒಂದು ಫಲ ನಿಡಿದೆ.
ಹೌದು….ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಅಲ್ಲದೇ ಜೆಡಿಎಸ್ನಿಂದ ಒಂದು ಕಾಲು ಆಚೆ ಇಟ್ಟಿದ್ದರು. ಆದ್ರೆ, ಇದೀಗ ಅಂತಿಮವಾಗಿ ದೇವೇಗೌಡ ಅವರು ಜಿಟಿಡಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ರೂಪಿಸಿದ ತಂತ್ರ ವರ್ಕೌಟ್ ಆಗಿದೆ.
Karnataka Elections 2022: ಎಲ್ಲ 224 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧೆ; ಎಚ್ಡಿ ಕುಮಾರಸ್ವಾಮಿ ಘೋಷಣೆ
ಸ್ವತಃ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಾರಾ ಮಹೇಶ್ ಸೇರಿದಂತೆ ಹಲವು ಜೆಡಿಎಸ್ ನಾಯಕರು ಜಿಟಿ ದೇವೇಗೌಡ ಮನವೊಲಿಕೆಗೆ ಇನ್ನಿಲ್ಲದ ಕಸರತ್ತ ನಡೆಸಿದ್ದರು. ಆದ್ರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ದೊಡ್ಡಗೌಡ್ರೆ ಅಖಾಡಕ್ಕಿಳಿದು ಜಿಟಿಡಿ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಜಿಟಿಡಿ ನಿವಾಸಕ್ಕೆ ದೇವೇಗೌಡ ಭೇಟಿ
ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಗಾರದಲ್ಲಿ ಭಾಗವಹಿಸಿದ ದೇವೇಗೌಡ, ಇದೇ ಸಂದರ್ಭದಲ್ಲಿ ನಗರದ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸಕ್ಕೆ ಇಂದು(ಅಕ್ಟೋಬರ್ 20) ಅಚ್ಚರಿ ಭೇಟಿ ನೀಡಿದರು. ಈ ಮೂಲಕ ಜಿಟಿಡಿಯನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ದೇವೇಗೌಡ ಈ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಇನ್ನು ಮನೆಗೆ ಬಂದ ಎಚ್.ಡಿ. ದೇವೇಗೌಡರನ್ನು ಜಿಟಿಡಿ ಕುಟುಂಬ ಪ್ರೀತಿಯಿಂದ ಬರ ಮಾಡಿಕೊಂಡಿದೆ.
ರಾಜಕೀಯ ನಿಲುವು ಪ್ರಕಟಿಸಿದ ಜಿಟಿಡಿ
ಎಚ್ಡಿಡಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಜೆಡಿಎಸ್ ಬಿಟ್ಟು ಹೋಗಲ್ಲ. ಎಲ್ಲ ಪಕ್ಷದವರೂ ನನ್ನನ್ನ ಕರೆದಿದ್ದಾರೆ, ದಯವಿಟ್ಟು ನನ್ನ ಕ್ಷಮಿಸಿ. ಕಾಂಗ್ರೆಸ್ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದು ಹೇಳಿದ್ದಾರೆ. ಆದರೆ ನಾವು JDS ಪಕ್ಷದಿಂದ ನಾವು ಬೆಳೆದಿದ್ದೇವೆ. ಜೆಡಿಎಸ್ ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ ಎಂದ ಜಿಟಿಡಿ ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್, ಬಿಜೆಪಿ ಸೇರುವ ವದಂತಿಗಳಿಗೆ ತೆರೆ ಎಳೆದರು. ಅಲ್ಲದೇ ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರೀ ನಿರಾಸೆಯಾಗಿದೆ.
ನಾನು 3 ವರ್ಷ ದೂರ ಇದ್ದಾಗಲೂ ತಪ್ಪಾಗಿ ಅರ್ಥೈಸಿಲ್ಲ. ಜಿಟಿಡಿ ನಮ್ಮ ಹೆಸರು ಉಳಿಸುತ್ತಾನೆ ಎಂದು ನಂಬಿದ್ದಾರೆ.ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೊಳಿಸಿದ್ದು ದೇವೇಗೌಡರು. ದೇವೇಗೌಡರನ್ನ ಎಲ್ಲಾ ರಾಜ್ಯದ ಜನರು ಇಷ್ಟಪಡುತ್ತಾರೆ. ರೈತರಿಗೋಸ್ಕರ JDS ಪಕ್ಷ ಇರುವುದು ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿಯತ್ತ ಸುಳಿದಾಡಿದ್ದ ಜಿಟಿಡಿ
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜಿಟಿ ದೇವೇಗೌಡ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕ ಮಧ್ಯೆ ಕಾಣಿಸಿಕೊಂಡಿದ್ದರು. ಅಲ್ಲದೇ ಮೊದಲು ಬಿಜೆಪಿ ಸೇರ್ಪಡೆ ಬಗ್ಗೆ ಒಲವು ತೋರಿದ್ದ ಜಿಟಿಡಿ, ಕೆಲ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಅದ್ಯಾಕೋ ಏನೋ ಬಿಜೆಪಿ ಬಿಟ್ಟು ಕಾಂಗ್ರೆಸ್ ಮನೆ ಸೇರಲು ಮುಂದಾಗಿದ್ದರು. ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಒಂದು ಸುತ್ತಿನ ಮಾತುಕತೆ ಸಹ ಮಾಡಿ ಮುಗಿಸಿದ್ದರು. ಇಷ್ಟೇ ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಜಿಟಿಡಿ, ಒಂದು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ವೇದಿಕೆ ಹಂಚಿಕೊಂಡು ತಮ್ಮ ಅಭಿಮಾನಿಗಳು ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದರು. ಆದ್ರೆ, ಇದೀಗ ದೊಡ್ಡಗೌಡ್ರ ಎಂಟ್ರಿಯಿಂದ ಜಿಟಿಡಿ ಮನಸ್ಸು ಬದಲಿಸಿದ್ದಾರೆ.
ಮೈಸೂರು ಭಾಗದಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ಯತ್ನ
ಯೆಸ್…ಹಳೇ ಮೈಸೂರು ಭಾಗಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ದಿನದಿಂದ ದಿನಕ್ಕೆ ಕುಗ್ಗತ್ತಿದೆ. ಇದರಿಂದ ಎಚ್ಚೆತ್ತುಕೊಂಡ ದಳಪತಿಗಳು ಮುನಿಸಿಕೊಂಡಿರುವ ಈ ಭಾಗದ ಪ್ರಮುಖ ನಾಯಕರ ಮನವೊಲಿಕೆಗೆ ಮುಮದಾಗಿದೆ. ಅಲ್ಲದೇ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಈ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ದೇವೇಗೌಡ ಹಾಗೂ ಕುಮಾರಸ್ವಾಮಿ ಕಸರತ್ತು ನಡೆಸಿದ್ದಾರೆ. ಈ ಕಾರಣಕ್ಕಾಗಿಯೇ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಗಾರ ನಡೆಸಿದೆ ಎನ್ನಲಾಗಿದೆ.
Published On - 3:11 pm, Thu, 20 October 22