ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIAL) ಐಪಿಒ (Initial Public Offering) ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗೆ ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಲಿಮಿಟೆಡ್ (Fairfax India Holdings Ltd.) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಐಪಿಒದಲ್ಲಿ ಸುಮಾರು 30,000 ಕೋಟಿ ರೂ. ಮೊತ್ತದ ಷೇರು ಮಾರಾಟ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಐಪಿಒ ನಡೆಯಬಹುದು ಎಂದು ವರದಿ ಅಂದಾಜಿಸಿದೆ.
ಮುಂದಿನ ವರ್ಷ ಐಪಿಒ ನಡೆಸುವ ಸಾಧ್ಯತೆಗಳ ಬಗ್ಗೆ ಕೆನಡಾ ಮೂಲದ ಹೂಡಿಕೆ ಸಂಸ್ಥೆಯ ಭಾರತದ ಅಂಗಸಂಸ್ಥೆ ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಲಿಮಿಟೆಡ್ ಸಲಹೆಗಾರರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್ಬರ್ಗ್’ ವರದಿ ಮಾಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಇದರ ಬಹುಪಾಲು ಬಂಡವಾಳವನ್ನು ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಹೊಂದಿದೆ.
ಇದನ್ನೂ ಓದಿ: Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?
ಮುಂಬೈ ಮಾರುಕಟ್ಟೆಯಲ್ಲಿ ಆಫರಿಂಗ್ 3,000 ದಿಂದ 4,000 ಕೋಟಿ ರೂ.ಗೆ ಹೆಚ್ಚಳವಾಗಬಹುದು ಎಂದು ಮೂಲಗಳು ಅಂದಾಜಿಸಿವೆ. ಪ್ರಾಥಮಿಕ ಷೇರುಗಳು ಮತ್ತು ಉಳಿದ ಷೇರುಗಳ ಶೇಕಡಾ 7ರಷ್ಟು ಐಪಿಒ ವ್ಯಾಕ್ತಿಗೆ ಬರಲದೆ ಎಂದೂ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಐಪಿಒ ಮಾತುಕತೆ ಪ್ರಗತಿಯಲ್ಲಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಐಪಿಒ ಮಾತುಕತೆ ಪ್ರಗತಿಯಲ್ಲಿದೆ. ಲಿಸ್ಟಿಂಗ್ಗೆ ಸಂಬಂಧಿಸಿದ ವಿವರಗಳು ಬದಲಾಗಬಹುದು. ಸಮಾಲೋಚನೆಯ ಬಳಿಕ ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ವಿಮಾನ ನಿಲ್ದಾಣದ ಷೇರು ಮಾರಾಟಕ್ಕೆ ಮನ ಮಾಡದೆಯೂ ಇರಬಹುದು ಎಂದು ಮೂಲಗಳು ಹೇಳಿವೆ. ಈ ವಿಚಾರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
2017ರಲ್ಲಿ ಬಂಡವಾಳ ಖರೀದಿಸಿದ್ದ ಫೇರ್ಫ್ಯಾಕ್ಸ್ ಇಂಡಿಯಾ
ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ 2017ರಲ್ಲಿ ಮೊದಲಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಂಡವಾಳ ಖರೀದಿಸಿತ್ತು. ನಂತರದಲ್ಲಿ ಶೇಕಡಾ 54ಕ್ಕೆ ವಿಸ್ತರಿಸಿಕೊಂಡಿದೆ. 2008ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳೆದ ಜೂನ್ ವರೆಗೆ 25 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ದೇಶದ 61 ಪ್ರದೇಶಗಳಿಗೆ ಮತ್ತು ವಿದೇಶಗಳ 14 ಸ್ಥಳಗಳಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಹಾರಾಟ ನಡೆಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ