ಮುಂಬೈ: ಕಳೆದ ಮೂರು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ದೇಶೀಯ ಷೇರುಪೇಟೆಗಳು (Stock Markets) ಮಂಗಳವಾರ ತುಸು ಚೇತರಿಕೆ ದಾಖಲಿಸಿವೆ. ಇನ್ಫೊಸಿಸ್ (Infosys) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ವಹಿಸಿದರು. ಬಿಎಸ್ಇ ಸೆನ್ಸೆಕ್ಸ್ (BSE Sensex) 274.12 ಅಂಶ, ಅಂದರೆ ಶೇಕಡಾ 0.45ರಷ್ಟು ಗಳಿಕೆ ದಾಖಲಿಸಿ 61,418.96ರಲ್ಲಿ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 61,466.63ರ ವರೆಗೂ ವಹಿವಾಟು ದಾಖಲಿಸಿತ್ತು. ಎನ್ಎಸ್ಇ ನಿಫ್ಟಿ (NSE Nifty) ಶೇಕಡಾ 0.46ರಷ್ಟು, ಅಂದರೆ 84.25 ಅಂಶ ಚೇತರಿಸಿ 18,244.20ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.
ಸೆನ್ಸೆಕ್ಸ್ನಲ್ಲಿ ಇಂಡ್ಇಂಡ್ ಬ್ಯಾಂಕ್, ಎನ್ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಿಸಿಎಸ್, ಎಲ್ ಆ್ಯಂಟ್ ಟಿ ಉತ್ತಮ ಗಳಿಕೆ ದಾಖಲಿಸಿವೆ. ನೆಸ್ಲೆ, ಭಾರ್ತಿ ಏರ್ಟೆಲ್, ಪವರ್ ಗ್ರಿಡ್, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರು ಮೌಲ್ಯದಲ್ಲಿ ಕುಸಿತವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,593.83 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ವಿದೇಶಿ ಮಾರುಕಟ್ಟೆಗಳ ಸ್ಥಿತಿಗತಿ…
ಏಷ್ಯಾದಲ್ಲಿ ಟೋಕಿಯೊ, ಶಾಂಘೈ ಮಾರುಕಟ್ಟೆಗಳು ಚೇತರಿಕೆ ದಾಖಲಿಸಿವೆ. ಸಿಯೋಲ್ ಮತ್ತು ಹಾಂಕಾಂಗ್ ಮಾರುಕಟ್ಟೆಗಳಲ್ಲಿ ವಹಿವಾಟು ಕುಸಿದಿದೆ. ಯುರೋಪ್ನಲ್ಲಿ ಈಕ್ವಿಟಿ ಎಕ್ಸ್ಚೇಂಜ್ ಉತ್ತಮ ವಹಿವಾಟು ದಾಖಲಿಸಿದೆ. ವಾಲ್ಸ್ಟ್ರೀಟ್ ವಹಿವಾಟು ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಶೇಕಡಾ 0.67ರಷ್ಟು ಹೆಚ್ಚಾಗಿ 88.04 ಡಾಲರ್ನಂತೆ ವಹಿವಾಟು ನಡೆಸಿದೆ.
ಚೇತರಿಸಿದ ರೂಪಾಯಿ ಮೌಲ್ಯ
ಕಳೆದ ಕೆಲವು ದಿನಗಳಿಂದ ಮತ್ತೆ ಕುಸಿತದ ಹಾದಿಯಲ್ಲಿದ್ದ ರೂಪಾಯಿ ಮೌಲ್ಯ ಮಂಗಳವಾರ ತುಸು ಚೇತರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಅಂತ್ಯದ ವೇಳೆಗೆ 12 ಪೈಸೆ ಚೇತರಿಕೆ ದಾಖಲಿಸಿದ ರೂಪಾಯಿ ಮೌಲ್ಯ, ಅಮೆರಿಕನ್ ಡಾಲರ್ ವಿರುದ್ಧ 81.67 ಆಗಿದೆ. ಒಂದು ಹಂತದಲ್ಲಿ 81.64ರಲ್ಲಿ ವಹಿವಾಟು ನಡೆಸಿದ್ದ ರೂಪಾಯಿ, 81.83ರ ವರೆಗೂ ಚೇತರಿಕೆ ದಾಖಲಿಸಿತ್ತು. ನಂತರ ಕುಸಿಯಿತು. ಕೊನೆಗೆ 81.67ರಲ್ಲಿ ವಹಿವಾಟು ಮುಗಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Tue, 22 November 22