Forbes Rankings: ವಿಶ್ವದ ಅತ್ಯುತ್ತಮ ಉದ್ಯೋಗದಾತ ಕಂಪನಿಗಳು; ಟಾಪ್ 20ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್
ಆದಾಯ ಗಳಿಕೆ, ಲಾಭ ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ದೇಶದಲ್ಲಿ ಅತಿಹೆಚ್ಚು ಉದ್ಯೋಗ ಕಲ್ಪಿಸುವ ಕಂಪನಿ ಎಂದು ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿದೆ.
ನವದೆಹಲಿ: ವಿಶ್ವದ ಅತ್ಯುತ್ತಮ ಉದ್ಯೋಗದಾತ ಕಂಪನಿಗಳಿಗೆ ಸಂಬಂಧಿಸಿ ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯ ಅಗ್ರ 20ರಲ್ಲಿ (Forbes’ World’s Best Employers rankings) ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಸ್ಥಾನ ಪಡೆದಿದೆ. ಆದಾಯ ಗಳಿಕೆ, ಲಾಭ ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ದೇಶದಲ್ಲಿ ಅತಿಹೆಚ್ಚು ಉದ್ಯೋಗ ಕಲ್ಪಿಸುವ ಕಂಪನಿ ಎಂದು ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ (Samsung Electronics) ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕದ ಮೈಕ್ರೋಸಾಫ್ಟ್ (Microsoft), ಐಬಿಎಂ (IBM) ಅಲ್ಫಾಬೆಟ್ (Alphabet) ಹಾಗೂ ಆ್ಯಪಲ್ (Apple) ನಂತರದ ಸ್ಥಾನದಲ್ಲಿವೆ.
ಮೊದಲ 2ರಿಂದ 12ನೇ ಸ್ಥಾನ; ಅಮೆರಿಕದ ಕಂಪನಿಗಳ ಪಾರಮ್ಯ
ಮೊದಲ 2ರಿಂದ 12ರ ವರೆಗೆ ಅಮೆರಿಕದ ಕಂಪನಿಗಳೇ ಸ್ಥಾನ ಪಡೆದಿವೆ. ಜರ್ಮನಿಯ ಬಿಎಂಡಬ್ಲ್ಯೂ 13ನೇ ಸ್ಥಾನ ಪಡೆದಿದೆ. ಜಗತ್ತಿನ ಅತಿದೊಡ್ಡ ಆನ್ಲೈನ್ ಚಿಲ್ಲರೆ ಮಾರಾಟ ಕಂಪನಿ ಅಮೆಜಾನ್ 14ನೇ ಸ್ಥಾನ ಪಡೆದಿದೆ. ಫ್ರೆಂಚ್ನ ಡೆಕತ್ಲಾನ್ 15ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: Reliance: ಸಲೂನ್ ಉದ್ಯಮಕ್ಕೆ ಎಂಟ್ರಿ ಕೊಡಲಿದೆ ಅಂಬಾನಿಯ ರಿಲಯನ್ಸ್; ವರದಿ
ರಿಲಯನ್ಸ್ನಿಂದ 2.30 ಲಕ್ಷ ಮಂದಿಗೆ ಉದ್ಯೋಗ
ತೈಲ, ಟೆಲಿಕಾಂ, ಚಿಲ್ಲರೆ ಮಾರಾಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ 2,30,000 ಮಂದಿಗೆ ಉದ್ಯೋಗ ನೀಡಿದೆ. ಇದು ಜರ್ಮನಿಯ ಮರ್ಸಿಡಿಸ್-ಬೆಂಜ್, ಅಮೆರಿಕದ ಕೋಕಾ-ಕೋಲ, ಜಪಾನ್ನ ಹೋಂಡಾ ಹಾಗೂ ಯಮಹಾ, ಸೌದಿ ಆರಾಮ್ಕೊವನ್ನು ಹಿಂದಿಕ್ಕಿದೆ.
ಭಾರತದ ಇತರ ಕಂಪನಿಗಳ ಸ್ಥಾನವೇನು?
ಅತಿ ಹೆಚ್ಚು ಉದ್ಯೋಗ ನೀಡುತ್ತಿರುವ ಕಂಪನಿಗಳ ಪಟ್ಟಿಯ ಮೊದಲ ನೂರು ಸ್ಥಾನಗಳಲ್ಲಿ ರಿಲಯನ್ಸ್ ಹೊರತುಪಡಿಸಿ ಭಾರತದ ಬೇರೆ ಯಾವ ಕಂಪನಿಯೂ ಗುರುತಿಸಿಕೊಂಡಿಲ್ಲ. ಎಚ್ಡಿಎಫ್ಸಿ ಬ್ಯಾಂಕ್ 137ನೇ ಸ್ಥಾನ, ಬಜಾಜ್ 173, ಆದಿತ್ಯಾ ಬಿರ್ಲಾ ಗ್ರೂಪ್ 240, ಹೀರೊ ಮೋಟೊಕಾರ್ಪ್ 333, ಎಲ್ ಆ್ಯಂಡ್ ಟಿ 354, ಐಸಿಐಸಿಐ ಬ್ಯಾಂಕ್ 365, ಎಚ್ಸಿಎಲ್ ಟೆಕ್ನಾಲಜೀಸ್ 455, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 499, ಅದಾನಿ ಎಂಟರ್ಪ್ರೈಸಸ್ 547 ಹಾಗೂ ಇನ್ಫೋಸಿಸ್ 668ನೇ ಸ್ಥಾನ ಪಡೆದಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಹಲವು ಕ್ಷೇತ್ರಗಳಿಗೆ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡಿದೆ. ಇತ್ತೀಚೆಗಷ್ಟೇ, ಚೆನ್ನೈ ಮೂಲದ ‘ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ’ ಕಂಪನಿಯ ಶೇಕಡಾ 49ರಷ್ಟು ಷೇರು ಖರೀದಿಗೆ ರಿಲಯನ್ಸ್ ರಿಟೇಲ್ ಮುಂದಾಗಿದೆ. ಈ ಮೂಲಕ ಸ್ಥಳೀಯ ಸಲೂನ್ ಉದ್ಯಮಕ್ಕೂ ಪೈಪೋಟಿ ನೀಡಲಿದೆ ಎಂದು ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ