Reliance: ಸಲೂನ್ ಉದ್ಯಮಕ್ಕೆ ಎಂಟ್ರಿ ಕೊಡಲಿದೆ ಅಂಬಾನಿಯ ರಿಲಯನ್ಸ್; ವರದಿ
ಚೆನ್ನೈ ಮೂಲದ ‘ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ’ ಕಂಪನಿಯ ಶೇಕಡಾ 49ರಷ್ಟು ಷೇರು ಖರೀದಿಗೆ ರಿಲಯನ್ಸ್ ರಿಟೇಲ್ ಮುಂದಾಗಿದೆ. ಈ ಮೂಲಕ ಸ್ಥಳೀಯ ಸಲೂನ್ ಉದ್ಯಮಕ್ಕೂ ಪೈಪೋಟಿ ನೀಡಲಿದೆ ಎಂದು ವರದಿಯಾಗಿದೆ.
ಬೆಂಗಳೂರು: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ರಿಲಯನ್ಸ್ ರಿಟೇಲ್ (Reliance Retail) ಕಂಪನಿ ಸಲೂನ್ ಉದ್ಯಕ್ಕೆ ಕಾಲಿಡುವ ಬಗ್ಗೆ ವರದಿಯಾಗಿದೆ. ಚೆನ್ನೈ ಮೂಲದ ‘ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ’ (Naturals Salon & Spa) ಕಂಪನಿಯ ಶೇಕಡಾ 49ರಷ್ಟು ಷೇರು ಖರೀದಿಗೆ ರಿಲಯನ್ಸ್ ರಿಟೇಲ್ ಮುಂದಾಗಿದೆ. ಈ ಮೂಲಕ ಹಿಂದೂಸ್ತಾನ್ ಯುನಿಲೀವರ್ನ ಲ್ಯಾಕ್ಮೆ ಬ್ರ್ಯಾಂಡ್, ಎನ್ರಿಚ್ ಮತ್ತು ಗೀತಾಂಜಲಿಯಂಥ ಇತರ ಸ್ಥಳೀಯ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡಲಿದೆ ಎಂದು ‘ಎಕಾನಾಮಿಕ್ ಟೈಮ್ಸ್’ ವರದಿ ಮಾಡಲಿದೆ.
ಪ್ರಸ್ತುತ ಗ್ರೂಮ್ ಇಂಡಿಯಾ ಸಲೂನ್ಸ್ ಆ್ಯಂಡ್ ಸ್ಪಾ ಹಾಗೂ ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಶೇಕಡಾ 49ರ ಷೇರು ಖರೀದಿ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿವೆ. ಗ್ರೂಮ್ ಇಂಡಿಯಾ ಸಲೂನ್ಸ್ ಆ್ಯಂಡ್ ಸ್ಪಾ ಸದ್ಯ ದೇಶದಾದ್ಯಂತ 700 ನ್ಯಾಚುರಲ್ ಸಲೂನ್ಗಳನ್ನು ನಡೆಸುತ್ತಿದೆ. ಈ ಸಲೂನ್ಗಳು ರಿಲಯನ್ಸ್ ಖರೀದಿ ಒಪ್ಪಂದದ ಬಳಿಕ ಆ ಕಂಪನಿಯ ಫಂಡ್ನಿಂದ ಕಾರ್ಯಾಚರಿಸಲಿವೆ ಎಂದು ಬೆಳವಣಿಗೆಗಳ ಬಗ್ಗೆ ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Reliance Swadesh Stores: ರಿಲಯನ್ಸ್ ರಿಟೇಲ್ ನಲ್ಲಿ ಸ್ವದೇಶ್ ಸ್ಟೋರ್‌ಗಳು -ದೇಶೀಯ ಉತ್ಪನ್ನಗಳಿಗಾಗಿ ವಿಶೇಷ ಮಳಿಗೆಗಳು!
ಆದರೆ, ಒಪ್ಪಂದಕ್ಕೆ ಸಂಬಂಧಿಸಿದ ವರದಿ ಬಗ್ಗೆ ನ್ಯಾಚುರಲ್ಸ್ ಆಗಲೀ ರಿಲಯನ್ಸ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ತಿಳಿಸಿದೆ.
2000ನೇ ಇಸ್ವಿಯ ಆರಂಭದಲ್ಲಿ ಆರಂಭವಾಗಿರುವ ಚೆನ್ನೈ ಮೂಲದ ನ್ಯಾಚುರಲ್ಸ್, 2025ರ ವೇಳೆಗೆ ದೇಶದಲ್ಲಿ 3,000 ಸಲೂನ್ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಕಂಪನಿಯ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇ ಲೈಫ್ಸ್ಟೈಲ್ ಸ್ಟೋರ್ ಆರಂಭಿಸಿದ್ದ ರಿಲಯನ್ಸ್
ರಿಲಯನ್ಸ್ ಇತ್ತೀಚೆಗಷ್ಟೇ ಮೊದಲ ಇನ್-ಹೌಸ್ ಪ್ರೀಮಿಯಂ ಫ್ಯಾಷನ್ ಆ್ಯಂಡ್ ಲೈಫ್ಸ್ಟೈಲ್ ಸ್ಟೋರ್ ಆರಂಭಿಸಿದೆ. ಇದರ ಬೆನ್ನಲ್ಲೇ ನ್ಯಾಚುರಲ್ಸ್ ಷೇರು ಖರೀದಿಸುವ ಬಗ್ಗೆ ವರದಿಯಾಗಿದೆ. ರಿಲಯನ್ಸ್ ಕಂಪನಿಯು ಇತ್ತೀಚೆಗೆ ಹಲವು ಕ್ಷೇತ್ರಗಳಿಗೆ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ರಿಲಯನ್ಸ್ ಇದೀಗ ಸಲೂನ್ ಖರೀದಿಗೆ ಮುಂದಾಗಿರುವುದು ಸಹಜವಾಗಿಯೇ ಉದ್ಯಮ ವಲಯದ ಕುತೂಹಲಕ್ಕೆ ಕಾರಣವಾಗಿದೆ. ಸ್ಥಳೀಯ ಸಲೂನ್ಗಳಿಗೂ ಮುಂದಿನ ದಿನಗಳಲ್ಲಿ ರಿಲಯನ್ಸ್ ಸವಾಲು ಎದುರಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕದಿಂದ ಸಲೂನ್ಗಳಿಗೆ ಭಾರಿ ಹೊಡೆತ ಬಿದ್ದಿತ್ತು. 2020ರ ಮೇ ತಿಂಗಳಲ್ಲಿ ನ್ಯಾಚುರಲ್ಸ್ನ ಸಿಇಒ ಕುಮಾರವೇಲ್ ಸರ್ಕಾರದ ನೆರವು ಕೋರಿದ್ದರು. ಆದಾಗ್ಯೂ ಕೋವಿಡೋತ್ತರ ಕಾಲಘಟ್ಟದಲ್ಲಿ ಸಲೂನ್ಗಳು ಮತ್ತೆ ಹಳಿಗೆ ಮರಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ