ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕ ಪರಿಷ್ಕರಿಸಿದ ಪೇಮೆಂಟ್ಸ್ ಬ್ಯಾಂಕ್; ಇಲ್ಲಿದೆ ಪರಿಷ್ಕೃತ ದರ
ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕವನ್ನು ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ ಪರಿಷ್ಕರಿಸಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ನವದೆಹಲಿ: ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ (AePS) ಸೇವಾ ಶುಲ್ಕವನ್ನು ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)’ ಪರಿಷ್ಕರಿಸಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ ಬೇರೆ ನೆಟ್ವರ್ಕ್ಗೆ ಪಾವತಿ ಮಾಡುವುದಿದ್ದರೆ ತಿಂಗಳಿಗೆ ಒಂದು ವಹಿವಾಟು ಉಚಿತವಾಗಿರಲಿದೆ. ನಂತರದ ವಹಿವಾಟಿಗೆ ಶುಲ್ಕ ತೆರಬೇಕಾಗುತ್ತದೆ. ಇವುಗಳಲ್ಲಿ ನಗದು ಠೇವಣಿ, ಹಿಂಪಡೆಯುವಿಕೆ ಅಥವಾ ವಿತ್ಡ್ರಾ, ಮಿನಿ ಸ್ಟೇಟ್ಮೆಂಟ್ ಸೇರಿವೆ ಎಂದು ಪೇಮೆಂಟ್ಸ್ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪರಿಷ್ಕೃತ ಸೇವಾ ಶುಲ್ಕದ ವಿವರ
ನಗದು ವಿತ್ಡ್ರಾ ಮತ್ತು ಠೇವಣಿಗೆ ಉಚಿತ ವಹಿವಾಟಿನ ಮಿತಿಯ ನಂತರ 20 ರೂ. ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸಬೇಕಾಗುತ್ತದೆ. ಎಇಪಿಎಸ್ ಮಿನಿ ಸ್ಟೇಟ್ಮೆಂಟ್ಗೆ ಪೇಮೆಂಟ್ಸ್ ಬ್ಯಾಂಕ್ 5 ರೂ. ಸೇವಾ ಶುಲ್ಕ ವಿಧಿಸಲಿದೆ.
ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ
ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ವೆಬ್ಸೈಟ್ ಮಾಹಿತಿಯ ಪ್ರಕಾರ, ಎಇಪಿಎಸ್ ಎಂಬುದು ಬ್ಯಾಂಕ್ ನೇತೃತ್ವದ ಮಾದರಿಯಾಗಿದೆ. ಇದು ಆಧಾರ್ ದೃಢೀಕರಣವನ್ನು ಬಳಸಿಕೊಂಡು ಯಾವುದೇ ಬ್ಯಾಂಕಿನ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಪಿಒಎಸ್ನಲ್ಲಿ (MicroATM) ಆನ್‌ಲೈನ್ ಇಂಟರ್‌ಆಪರೇಬಲ್ ಹಣಕಾಸು ಸೇರ್ಪಡೆ ವಹಿವಾಟನ್ನು ಅನುಮತಿಸುತ್ತದೆ. ಈ ವಿಧಾನದಲ್ಲಿ ಆರು ವಿಧಧ ವಹಿವಾಟು ನಡೆಸಬಹುದಾಗಿದೆ.
ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಎಂದರೆ…
‘ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ ಬ್ಯಾಂಕ್ ನೇತೃತ್ವದ ಮಾದರಿಯಾಗಿದೆ. ಈ ವ್ಯವಸ್ಥೆಯ ಮೂಲಕ ಮೈಕ್ರೋ ಎಟಿಎಂ, ಕಿಯೋಸ್ಕ್, ಮೊಬೈಲ್ ಸಾಧನಗಳನ್ನು ಬಳಸಿಕೊಂಡು ಯಾವುದೇ ಬ್ಯಾಂಕಿನ ಅಧಿಕೃತ ಉದ್ಯಮ ಕರೆಸ್ಪಾಂಡೆಂಟ್ ಮೂಲಕ ಆಧಾರ್ ದೃಢೀಕರಣದೊಂದಿಗೆ ಆನ್‌ಲೈನ್ ವ್ಯವಹಾರ ನಡೆಸಬಹುದು. ಆಧಾರ್ ಲಿಂಕ್ ಮಾಡಿರುವ ಖಾತೆದಾರರಿಗೆ ದೃಢೀಕರಣದ ಮೂಲಕ ವಿವಿಧ ಸೇವೆಗಳನ್ನು ನೀಡುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಣೆ ಮಾಡಿರುವ ಭಾರತೀಯರು ಈ ಸೇವೆಯನ್ನು ಪಡೆಯಬಹುದಾಗಿದೆ’ ಎಂದು ರಾಷ್ಟ್ರೀಯ ಪಾವತಿ ನಿಗಮದ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ