Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಕುಸಿತವಾಗಿರುವುದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಐಟಿ ಕ್ಷೇತ್ರದ ಷೇರುಗಳ ಕುಸಿತಕ್ಕೆ ಕಾರಣವಾಗಿದೆ.
ವಾಷಿಂಗ್ಟನ್: ಗೂಗಲ್ (Google), ಮೈಕ್ರೋಸಾಫ್ಟ್ (Microsoft) ಸೇರಿದಂತೆ ಪ್ರಮುಖ ಐಟಿ ಕಂಪನಿಗಳ (IT Companies) ತ್ರೈಮಾಸಿಕ ಫಲಿತಾಂಶದಲ್ಲಿ ಕುಸಿತವಾಗಿರುವುದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಐಟಿ ಕ್ಷೇತ್ರದ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಇಂಕ್ ಆದಾಯದಲ್ಲಿ ಮೂರನೇ ತ್ರೈಮಾಸಿಕ ಫಲಿತಾಂಶದಲ್ಲಿ ಶೇಕಡಾ 7.4ರ ಕುಸಿತ ದಾಖಲಾಗಿದೆ. ಇದು ನಿರೀಕ್ಷೆಗಿಂತಲೂ ತುಂಬಾ ಕಡಿಮೆಯಾಗಿದೆ. ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ ಆದಾಯ ಮುನ್ಸೂಚನೆಯಲ್ಲಿಯೂ ಶೇಕಡಾ 8.1ರ ಕುಸಿತವಾಗಿದೆ. ಸೆಮಿ ಕಂಡಕ್ಟರ್ ಉದ್ಯಮ ಸಂಸ್ಥೆ ಟೆಕ್ಸಾಸ್ ಇನ್ಸ್ಟ್ರೂಮೆಂಟ್ಸ್ ಇಂಕ್ ಕೂಡ ವಿಶ್ಲೇಷಕರ ಅಂದಾಜನ್ನು ತಲೆಕೆಳಗಾಗಿಸಿ ಶೇಕಡಾ 6.1 ಕುಸಿತ ದಾಖಲಿಸಿದೆ.
ದಕ್ಷಿಣ ಕೊರಿಯಾದ ಚಿಪ್ ತಯಾರಕ ಎಸ್ಕೆ ಹೈನಿಕ್ಸ್ ಇಂಕ್ ಲಾಭದಲ್ಲಿ ಶೆಕಡಾ 60ರಷ್ಟು ಕುಸಿತವಾಗಿದೆ. ಹೀಗಾಗಿ ಕಂಪನಿಯು ಬಂಡವಾಳ ವೆಚ್ಚವನ್ನು ಅರ್ಧಕ್ಕಿಂತಲೂ ಹೆಚ್ಚು ಕಡಿತ ಮಾಡುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ಭಾರಿ ಕ್ಷೀಣತೆಯ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದೆ ಎಂದು ‘ಬ್ಲೂಮ್ಬರ್ಗ್’ ತಾಣ ವರದಿ ಮಾಡಿದೆ.
ಈ ಎಲ್ಲ ಬೆಳವಣಿಗೆಗಳಿಂದ ಜಾಗತಿಕವಾಗಿ ಐಟಿ ಷೇರುಗಳಲ್ಲಿ ಕುಸಿತವಾಗಿದೆ. Nasdaq 100 Indexನಲ್ಲಿ ಅಮೆರಿಕದ ಐಟಿ ಕಂಪನಿಗಳ ಷೇರುಗಳು ತೀವ್ರ ಕುಸಿತ ಕಂಡಿವೆ. Invesco QQQ ಮಾರುಕಟ್ಟೆಯಲ್ಲಿ ಕೂಡ ಐಟಿ ಷೇರುಗಳು ಶೇಕಡಾ 2.1ರ ಕುಸಿತ ದಾಖಲಿಸಿವೆ. ಅಮೆಜಾನ್ ಡಾಟ್ ಕಾಮ್ ಇಂಕ್ ಷೇರುಗಳು ಶೇಕಡಾ 4.9ರಷ್ಟು ಕುಸಿತ ಕಂಡಿವೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
ಅಲ್ಫಾಬೆಟ್, ಮೆಟಾ ಪ್ಲಾಟ್ಫಾರ್ಮ್ ಇಂಕ್ ಹಾಗೂ ಪಿಂಟ್ರೆಸ್ಟ್ ಇಂಕ್ ಆನ್ಲೈನ್ ಜಾಹೀರಾತಿನಿಂದ ಪಡೆಯುವ ಆದಾಯದಲ್ಲಿ ಕುಸಿತವಾಗಿದೆ. ಈ ಕಂಪನಿಗಳ ಆನ್ಲೈನ್ ಜಾಹೀರಾತು ಆದಾಯದಲ್ಲಿ ಶೇಕಡಾ 4ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ.
ಸಾಫ್ಟ್ವೇರ್ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್, ಡೇಟಾಡಾಗ್ ಇಂಕ್ ಶೇಕಡಾ 7ರಷ್ಟು, ಸ್ನೋಫ್ಲೇಕ್ ಇಂಕ್ ಶೇಕಡಾ 5ರಷ್ಟು ಹಾಗೂ ಸೇಲ್ಸ್ಫೋರ್ಸ್ ಇಂಕ್ ಶೇಕಡಾ 3ರಷ್ಟು ಕುಸಿತ ಕಂಡಿವೆ. ಚಿಪ್ ಮಾರಾಟ ಕ್ಷೇತ್ರದಲ್ಲಿ ಅನಲಾಗ್ ಡಿವೈಸಸ್ ಇಂಕ್, ಆನ್ ಸೆಮಿಕಂಡಕ್ಟರ್ ಕಾರ್ಪೊರೇಷನ್, ಮಾರ್ವೆಲ್ ಟೆಕ್ನಾಲಜೀಸ್ ಇಂಕ್ ಕೂಡ ಕುಸಿತ ದಾಖಲಿಸಿವೆ.
ಇದನ್ನೂ ಓದಿ: CCI Penalty on Google: ಗೂಗಲ್ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ
ಮೈಕ್ರೋಸಾಫ್ಟ್ನ ತ್ರೈಮಾಸಿಕ ಮಾರಾಟದಲ್ಲಿ ಐದು ವರ್ಷಗಳಲ್ಲೇ ಹೆಚ್ಚಿನ ಕುಸಿತ ದಾಖಲಾಗಿದೆ. ಅಲ್ಫಾಬೆಟ್ನ ಮಾರಾಟವೂ ಕುಸಿದಿದೆ. ಹಣದುಬ್ಬರದ ಪರಿಣಾಮವಾಗಿ ಡಿಜಿಟಲ್ ಜಾಹಾರಾತಿನ ಬೆಳವಣಿಗೆಯೂ ಕುಂಠಿತವಾಗಿದೆ ಎಂದು ವರದಿ ಹೇಳಿದೆ.
ಯುರೋಪ್ ಬಿಕ್ಕಟ್ಟು, ಜಾಗತಿಕ ಆರ್ಥಿಕ ಅನಿಶ್ಚಿತತೆ, ಆದಾಯ ಕುಸಿತ ಹಾಗೂ ಹಣದುಬ್ಬರಗಳು ಪ್ರಮುಖ ಐಟಿ ಕಂಪನಿಗಳ ವಹಿವಾಟಿಗೆ ಹೊಡೆತ ನೀಡಿವೆ. ಆರ್ಥಿಕ ಹಿನ್ನಡೆಯಿಂದಾಗಿ ಮೈಕ್ರೋಸಾಫ್ಟ್ 1,000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿರುವ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಇಷ್ಟೇ ಅಲ್ಲದೆ, ಅಮೆರಿಕದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ. ಮೆಟಾ ಕೂಡ ಇತ್ತೀಚೆಗೆ 60 ಗುತ್ತಿಗೆದಾರರನ್ನು ವಜಾಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ