ಮುಂಬೈ: ವಾರದ ಮೊದಲ ದಿನ ಉತ್ತಮ ವಹಿವಾಟು ನಡೆಸಿದ್ದ ಷೇರುಪೇಟೆಗೆ (Stock Market) ಇಂದು ಬಿಡುವು. ಬಿಎಸ್ಇ ಹಾಗೂ ಎನ್ಎಸ್ಇ ಮಾರುಕಟ್ಟೆಗಳಿಗೆ ಇಂದು ಗುರು ನಾನಕ್ ಜಯಂತಿ (Guru Nanak Jayanti) ಪ್ರಯುಕ್ತ ರಜೆ ಇದೆ. ಹೀಗಾಗಿ ಮಂಗಳವಾರ ಪೂರ್ಣಾವಧಿಗೆ ಯಾವುದೇ ರೀತಿಯ ಷೇರು ವಹಿವಾಟು ನಡೆಯುವುದಿಲ್ಲ ಎಂದು ಉಭಯ ಮಾರುಕಟ್ಟೆಗಳ ವೆಬ್ಸೈಟ್ಗಳಲ್ಲಿ ಪ್ರಕಟಣೆ ನೀಡಲಾಗಿದೆ. ಕರೆನ್ಸಿ ವಹಿವಾಟಿಗೂ ಇಂದು ಬಿಡುವು ಇದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಮೊದಲ ಅವಧಿಗೆ ರಜೆ ಇರಲಿದ್ದು, ಸಂಜೆ 5 ಗಂಟೆಗೆ ಟ್ರೇಡಿಂಗ್ ಆರಂಭವಾಗಲಿದೆ. ನವೆಂಬರ್ 9ರಂದು, ಅಂದರೆ ಬುಧವಾರ ಎಲ್ಲ ರೀತಿಯ ವಹಿವಾಟುಗಳು ಎಂದಿನಂತೆ ನಡೆಯಲಿದೆ ಎಂದು ಬಿಎಸ್ಇ ಹಾಗೂ ಎನ್ಎಸ್ಇ ವೆಬ್ಸೈಟ್ಗಳಲ್ಲಿ ತಿಳಿಸಲಾಗಿದೆ.
ಮತ್ತೆ 61,000 ಗಡಿ ದಾಟಿದ ಸೆನ್ಸೆಕ್ಸ್
ಸೋಮವಾರದ ವಹಿವಾಟಿನಲ್ಲಿ ಉತ್ತಮ ಗಳಿಕೆ ದಾಖಲಿಸಿದ್ದ ಬಿಎಸ್ಇ ಸೆನ್ಸೆಕ್ಸ್ ಮತ್ತೆ 61 ಸಾವಿರ ಗಡಿ ದಾಟಿತ್ತು. ನಿಫ್ಟಿ ಬಹು ನಿರೀಕ್ಷಿತ 18 ಸಾವಿರ ಗಡಿ ದಾಟಿತ್ತು. ವಹಿವಾಟಿನ ಕೊನೆಯಲ್ಲಿ ಬಿಎಸ್ಇ 234.79 ಅಂಶ ಚೇತರಿಸಿ 61,185.15 ತಲುಪಿತು. ಎನ್ಎಸ್ಇ ನಿಫ್ಟಿ 85.65 ಅಂಶ ಚೇತರಿಸಿ 18,202.80 ಆಯಿತು. ಕಳೆದ ವಾರ ಮಧ್ಯದಲ್ಲಿ ಬಿಎಸ್ಇ 61,000 ಗಡಿ ದಾಟಿತ್ತು. ಆದರೆ, ನಂತರ ತುಸು ಕುಸಿದು ಮತ್ತೆ 60,000ಕ್ಕಿಂತ ಕೆಳಗೆ ವಹಿವಾಟು ದಾಖಲಿಸಿತ್ತು.
ಹರಿದು ಬರುತ್ತಿದೆ ವಿದೇಶಿ ಹೂಡಿಕೆ
ಕಳೆದ ಕೆಲವು ತಿಂಗಳುಗಳಿಂದಲೂ ದೇಶೀಯ ಷೇರುಪೇಟೆಗಳಲ್ಲಿ ಷೇರುಗಳ ಮಾರಾಟ ಮಾಡಿ ಬಂಡವಾಳ ಹಿಂಪಡೆಯುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜಾಗತಿಕ ಮಾರುಕಟ್ಟೆಗಳ ತಲ್ಲಣದಿಂದಾಗಿ ಮತ್ತೆ ಹೂಡಿಕೆ ಆರಂಭಿಸಿದ್ದಾರೆ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಿರುವುದು, ಇತರ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸುತ್ತಿರುವುದು, ಯುರೋಪ್ನಲ್ಲಿ ಕೈಗೊಳ್ಳಲಾಗುತ್ತಿರುವ ಕಠಿಣ ಕ್ರಮ, ರೂಪಾಯಿ ಮೌಲ್ಯದಲ್ಲಿ ಗಣನೀಯ ಚೇತರಿಕೆ ಇತ್ಯಾದಿ ಕಾರಣಗಳಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಗಳತ್ತ ಮುಖಮಾಡಿದ್ದಾರೆ.
ಇದನ್ನೂ ಓದಿ: Credit Card Closure: ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದು ಹೇಗೆ? ಇಲ್ಲಿದೆ ಪೂರ್ತಿ ವಿವರ
ಸೋಮವಾರ ಬೆಳಿಗ್ಗಿನ ವಹಿಟು ಸೇರಿದಂತೆ ಅದಕ್ಕೂ ಮೊದಲಿನ ಒಟ್ಟು 10 ಸೆಷನ್ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಲ್ಲಿ ಸುಮಾರು 3 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ. ಅಕ್ಟೋಬರ್ 20ರಿಂದ ನವೆಂಬರ್ 2ರ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2.74 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ. ನವೆಂಬರ್ 3ರಂದು ಒಂದೇ ದಿನ 677 ಕೋಟಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದರು. ಇದು ಭಾರತೀಯ ಮಾರುಕಟ್ಟೆಗಳಲ್ಲಿ ಆಶಾವಾದ ಮೂಡಿಸಿದೆ.
ಇನ್ನು ಕಳೆದ ವಾರದ ಒಟ್ಟು ವಹಿವಾಟಿನ ಬಗ್ಗೆ ಹೇಳುವುದಾದರೆ, ವಾರದ ಅವಧಿಯಲ್ಲಿ ಸೆನ್ಸೆಕ್ಸ್ 990.51ರ ಚೇತರಿಕೆ ದಾಖಲಿಸಿದ್ದು, ಶೇಕಡಾ 1.65ರ ಬೆಳವಣಿಗೆ ಸಾಧಿಸಿತ್ತು. ನಿಫ್ಟಿ 330.35 ಅಂಶ ಚೇತರಿಸಿ ಶೇಕಡಾ 1.85ರ ವೃದ್ಧಿ ದಾಖಲಿಸಿತ್ತು. ಆರೋಗ್ಯ, ಐಟಿ, ಟೆಕ್ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ