ನವದೆಹಲಿ: ಅದೃಷ್ಟ ಹೇಗಾದರೂ ಒಲಿದು ಬರಬಹುದು. ಕೆಲವರಿಗೆ ಲಾಟರಿಯಲ್ಲಿ ಜಾಕ್ಪಾಟ್ ಹೊಡೆದು ಕೋಟ್ಯಾಧಿಪತಿಯಾಗುವ ಅದೃಷ್ಟ ಸಿಗಬಹುದು. ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಾರ್ತಿಕ್ ಶರ್ಮಾ (Karthik Sharma) ಈಗ 23,000 ಕೋಟಿ ರೂ ಆಸ್ತಿಯ ಕುಬೇರರಾಗಿದ್ದಾರೆ. ಇವರಿಗೆ ಯಾವುದೋ ದೊಡ್ಡ ಲಾಟರಿಯ ಜ್ಯಾಕ್ಪಾಟ್ ಹೊಡೆದದ್ದಲ್ಲ. ಕೆಲ ವರ್ಷಗಳ ಹಿಂದೆ ಇವರು ಒಂದು ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದ್ದು ಈಗ ಅವರನ್ನು ಕೋಟಿ ಕೋಟಿಗಳ ಒಡೆಯನನ್ನಾಗಿಸಿದೆ. ದಶಕದ ಹಿಂದೆ ಇವರು ಹಣ ಹೂಡಿದ್ದ ಕಂಪನಿಯ ಷೇರು 2021ರಲ್ಲಿ ಇವರಿಗೆ 2 ಬಿಲಿಯನ್ ಡಾಲರ್ (ಸುಮಾರು 16,000 ಕೋಟಿ ರೂ) ಲಾಭ ತಂದುಕೊಟ್ಟಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ 48 ವರ್ಷದ ಕಾರ್ತಿಕ್ ಶರ್ಮಾ ಬಹಳ ಸರಳ ವ್ಯಕ್ತಿ.
ಕಾರ್ತಿಕ್ ಶರ್ಮಾ ಹಾಗೇ ಸುಮ್ಮನೆ ಅದೃಷ್ಟದಲ್ಲಿ ಷೇರುಗಳ ಮೇಲೆ ಹಣ ಹಾಕಿ ಲಾಭ ಮಾಡಿಕೊಂಡವರಲ್ಲ. ಇವರು ವಿಶ್ವದ ಅಗ್ರಗಣ್ಯ ಹೆಡ್ಜ್ ಫಂಡ್ ಮ್ಯಾನೇಜರ್ಗಳಲ್ಲಿ (Hedge Fund Manager) ಒಬ್ಬರೆನಿಸಿದ್ದಾರೆ. ಐಐಟಿ ಪದವೀಧರರಾಗಿರುವ ಇವರು ಪ್ರಿನ್ಸ್ಟನ್ ಯೂನಿವರ್ಸಿಟಿಯಲ್ಲಿ ಎಂಎಸ್ ಮಾಡಿದ್ದಾರೆ. ಮೆಕಿನ್ಸೇ ಅಂಡ್ ಕಂಪನಿ (McKinsey & Company) ಎಂಬ ಕನ್ಸಲ್ಟಿಂಗ್ ಸಂಸ್ಥೆ, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಎಂಬ ಹೂಡಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಇವರೇ ಸ್ಥಾಪಿಸಿದ ಎಸ್ಆರ್ಎಸ್ ಇನ್ವೆಸ್ಟ್ಮೆಂಟ್ಸ್ ಎಂಬ ಹೆಡ್ಜ್ ಫಂಡ್ ಕಂಪನಿ 10 ಬಿಲಿಯನ್ ಡಾಲರ್ (81,000 ಕೋಟಿ ರೂ) ಮೌಲ್ಯದ ಹೂಡಿಕೆಗಳನ್ನು ನಿರ್ವಹಿಸುತ್ತದೆ.
ಐಐಟಿ ಮದ್ರಾಸ್ನಲ್ಲಿ ಓದಿ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋದ ಕಾರ್ತಿಕ್ ಶರ್ಮಾ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಮೆಕಿನ್ಸೆ, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸ ಮಾಡಿದ ಬಳಿಕ 2006ರಲ್ಲಿ ಎಸ್ಆರ್ಎಸ್ ಇನ್ವೆಸ್ಟ್ಮೆಂಟ್ ಎಂಬ ತಮ್ಮದೇ ಕಂಪನಿಯನ್ನು ಹುಟ್ಟುಹಾಕಿದರು. ಎಸ್ಆರ್ಎಸ್ ಎಂಬುದು ಅವರ ತಂದೆಯ ಹೆಸರಿನ ಇನಿಷಿಯಲ್ ಅಕ್ಷರಗಳು.
ಇದನ್ನೂ ಓದಿ: Suicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ
2010ರಲ್ಲಿ ಆವಿಸ್ (Avis) ಎಂಬ ಕಾರ್ ರೆಂಟಲ್ ಕಂಪನಿಯಲ್ಲಿ ಹೂಡಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು. ಇದು 11 ವರ್ಷಗಳ ಬಳಿಕ ಕಾರ್ತಿಕ್ ಶರ್ಮಾಗೆ ಜಾಕ್ಪಾಟ್ ತರುತ್ತದೆಂದು ಅವರೂ ಊಹಿಸಿರಲಿಕ್ಕಿಲ್ಲ. ಆವಿಸ್ ಕಂಪನಿಯ ಶೇ. 50ರಷ್ಟು ಷೇರುಗಳ ಪಾಲನ್ನು ಎಸ್ಆರ್ಎಸ್ ಹೊಂದಿದೆ. ಈ ಕಂಪನಿಯ ಷೇರು ಮೌಲ್ಯ ವರ್ಷಗಳುರುಳಿದಂತೆ 456 ಪ್ರತಿಶತದಷ್ಟು ಏರಿಕೆ ಆಗಿದೆ. 2021ರಲ್ಲಿ ಆವಿಸ್ನಲ್ಲಿರುವ ಎಸ್ಆರ್ಎಸ್ ಪಾಲಿನ ಷೇರುಗಳ 23,000 ಕೋಟಿ ರೂ ಆಗಿದೆ.
1998ರಲ್ಲಿ ಮೆಕಿನ್ಸೆ ಅಂಡ್ ಕಂಪನಿಯನ್ನು ಸೇರಿದ್ದ ಕಾರ್ತಿಕ್ ಶರ್ಮಾ ಅಲ್ಲಿ 3 ವರ್ಷಗಳ ಕಾಲ ಕನ್ಸಲ್ಟೆಂಟ್ ಆಗಿದ್ದರು. ಆ ಬಳಿಕ ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಕಂಪನಿ ಸೇರಿದರು. ಅಲ್ಲಿ ಅವರು ಹೋದ ಹೊಸತರಲ್ಲಿ ಕಾರ್ತಿಕ್ ಶರ್ಮಾ ಅವರನ್ನು ಪ್ರತಿಭೆ ಇಲ್ಲದ ಪಾರ್ಟ್ನರ್ (Most Non-Talented Partner) ಎಂದು ಕುಚೋದ್ಯ ಮಾಡಲಾಗುತ್ತಿತ್ತಂತೆ. ಆದರೆ, ಸಂಕೋಚ ಸ್ವಭಾವದ ಕಾರ್ತಿಕ್ ಶರ್ಮಾ ಅದೇ ಕಂಪನಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದರು.
ಇದನ್ನೂ ಓದಿ: Profitable Stocks; ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಷೇರುಗಳಿಗೆ ಬೇಡಿಕೆ; ಹಣ ಹಾಕೋದಾದರೆ ಈ ಷೇರುಗಳು ಗಮನದಲ್ಲಿರಲಿ
2006ರಲ್ಲಿ ತಮ್ಮದೇ ಕಂಪನಿ ಸ್ಥಾಪಿಸಿ ಒಂದೂವರೆ ದಶಕದಲ್ಲಿ ವಿಶ್ವದ ಟಾಪ್ ಹೆಡ್ಜ್ ಫಂಡ್ ಮ್ಯಾನೇಜರ್ಗಳ ಪಟ್ಟಿ ಸೇರಿದ್ದಾರೆ. ಅಷ್ಟೇ ಅಲ್ಲ 2022ರಲ್ಲಿ ಅತೀ ಕಡಿಮೆ ವಯಸ್ಸಿನ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲೂ ಅವರ ಹೆಸರು ಬಂದಿದೆ.
ಹೆಡ್ಜ್ ಫಂಡ್ ಕಂಪನಿ ಎಂಬುದು ಒಂದು ಕಂಪನಿಯ ಷೇರುಗಳ ಬೆಲೆ ಭರ್ಜರಿಯಾಗಿ ಹೆಚ್ಚಳವಾಗುವ ರೀತಿಯಲ್ಲಿ ವಿಭಿನ್ನ ಹೂಡಿಕೆ ತಂತ್ರಗಳನ್ನು ಅನುಸರಿಸುತ್ತದೆ. ಇದರ ಸೇವಾ ಶುಲ್ಕ ದುಬಾರಿಯಾಗಿದ್ದು, ದೊಡ್ಡ ದೊಡ್ಡ ಸಂಸ್ಥೆಗಳು, ಸಿರಿವಂತರು ಷೇರುಗಳಲ್ಲಿ ಲಾಭ ಪಡೆಯಲು ಹೆಡ್ಜ್ ಫಂಡ್ ಮ್ಯಾನೇಜರ್ಗಳ ಮೊರೆ ಹೋಗುತ್ತಾರೆ.