ಮುಂಬೈ: ದೇಶೀಯ ಷೇರುಪೇಟೆಗಳು (Stock Markets) ಸತತ ಆರನೇ ದಿನ ಗಳಿಕೆಯ ಓಟ ಮುಂದುವರಿಸಿವೆ. ಬಿಎಸ್ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್ಎಸ್ಇ ನಿಫ್ಟಿ (NSE Nifty) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಮಂಗಳವಾರ ದಿನದ ವಹಿವಾಟು ಕೊನೆಗೊಳಿಸಿವೆ. ವಿದೇಶಿ ಹೂಡಿಕೆ ಒಳಹರಿವು, ಏಷ್ಯಾದ ಮಾರುಕಟ್ಟೆಗಳ ವಹಿವಾಟಿನ ಪರಿಣಾಮ ದೇಶೀಯ ಷೇರುಪೇಟೆಗಳ ಮೇಲೆ ಉಂಟಾಗಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ. ಬಿಎಸ್ಇ ಸೆನ್ಸೆಕ್ಸ್ 177.04 ಅಂಶ ಚೇತರಿಸಿ 62,681.84ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 62,887.40ರಲ್ಲಿ ವಹಿವಾಟು ನಡೆಸಿತ್ತು. ಎನ್ಎಸ್ಇ ನಿಫ್ಟಿ 55.30 ಅಂಶ ಚೇತರಿಸಿ 18,618.05ರಲ್ಲಿ, ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದೆ.
‘ಗಳಿಕೆಯ ಓಟ ಸತತ ಆರನೇ ದಿನವೂ ಮುಂದುವರಿದಿರುವುದರಿಂದ, ಮಾರುಕಟ್ಟೆಗಳು ಗರಿಷ್ಠ ಮಟ್ಟ ತಲುಪಿರುವ ಸಂದರ್ಭದಲ್ಲಿ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ. ಸದ್ಯ ಮಾರುಕಟ್ಟೆ ಉತ್ತಮ ವಹಿವಾಟು ನಡೆಸುತ್ತಿದ್ದರೂ ಕಟ್ಟುನಿಟ್ಟಾದ ಲಾಕ್‌ಡೌನ್ ವಿರುದ್ಧ ಚೀನಾದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳು ಹೂಡಿಕೆದಾರರಲ್ಲಿ ಸಣ್ಣ ಮಟ್ಟಿನ ಆತಂಕಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Stock Markets: ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ನಿಫ್ಟಿ ನಾಗಾಲೋಟ; ಮುಂದುವರಿದ ಸೆನ್ಸೆಕ್ಸ್ ಓಟ
‘ಪರಿಸ್ಥಿತಿ ಸುಧಾರಿಸದಿದ್ದರೆ, ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗಬಹುದು. ಆದರೆ ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತ ತುಸು ಉತ್ತಮ ಸ್ಥಿತಿಯಲ್ಲಿರುವುದರಿಂದ ಹೂಡಿಕೆದಾರರು ದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಸಿದ್ಧರಾಗಿದ್ದಾರೆ’ ಎಂದು ಕೋಟಕ್ ಸೆಕ್ಯುರಿಟೀಸ್ನ ಈಕ್ವಿಟಿ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ತಿಳಿಸಿದ್ದಾರೆ.
ಇಲ್ಲಿದೆ ಲಾಭ, ನಷ್ಟದ ಲೆಕ್ಕಾಚಾರ
ಸೆನ್ಸೆಕ್ಸ್ನಲ್ಲಿ ಹಿಂದೂಸ್ತಾನ್ ಯುನಿಲೀವರ್, ಸನ್ ಫಾರ್ಮಾ, ನೆಸ್ಲೆ, ಡಾ. ರೆಡ್ಡೀಸ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟೈಟಾನ್ ಹಾಗೂ ಎಚ್ಸಿಎಲ್ ಟೆಕ್ನಾಲಜೀಸ್ ಗಳಿಕೆಯ ಓಟ ಮುಂದುವರಿಸಿವೆ. ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫಿನ್ಸರ್ವ್, ಮಾರುತಿ, ಪವರ್ ಗ್ರಿಡ್, ಎಲ್ಆ್ಯಂಡ್ಟಿ ಷೇರು ಮೌಲ್ಯದಲ್ಲಿ ಕುಸಿತವಾಗಿದೆ.
ಬಿಎಸ್ಇ ಮಿಡ್ಕ್ಯಾಪ್ ಶೇಕಡಾ 0.39ರಷ್ಟು ಕುಸಿದಿದ್ದರೆ, ಸ್ಮಾಲ್ಕ್ಯಾಪ್ ಇಂಡೆಕ್ಸ್ ಕೂಡ ಶೇಕಡಾ 0.29ರಷ್ಟು ಕುಸಿತ ದಾಖಲಿಸಿದೆ. ಗ್ರಾಹಕ ಸೇವೆ, ಇಂಧನ, ಕೈಗಾರಿಕೆ, ಟೆಲಿಕಮ್ಯುನಿಕೇಷನ್, ಆಟೊ ಹಾಗೂ ಸೇವಾ ಕ್ಷೇತ್ರದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂತು.
ಏಷ್ಯಾದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಮಂಗಳವಾರ ಉತ್ತಮ ವಹಿವಾಟು ನಡೆದಿದೆ. ಸಿಯೋಲ್, ಶಾಂಘೈ, ಹಾಂಗ್ಕಾಂಗ್ ಷೇರುಪೇಟೆಗಳು ಚೇತರಿಕೆಯೊಂದಿಗೆ ವಹಿವಾಟು ಮುಗಿಸಿವೆ. ಟೋಕಿಯೊದಲ್ಲಿ ಮಾತ್ರ ತುಸು ನಷ್ಟ ಕಂಡುಬಂದಿದೆ. ವಾಲ್ಸ್ಟ್ರೀಟ್ನಲ್ಲಿ ನಕಾರಾತ್ಮಕವಾಗಿ ಸೋಮವಾರದ ವಹಿವಾಟು ಅಂತ್ಯಗೊಂಡಿತ್ತು.
ಕಚ್ಚಾ ತೈಲ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 2.45ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 85.23 ಡಾಲರ್ಗೆ ಮಾರಾಟವಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 3 ಪೈಸೆ ಕುಸಿದು 81.71ರಲ್ಲಿ ದಿನದ ವಹಿವಾಟು ಮುಗಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ