Stock Market Updates: ಐದನೇ ದಿನವೂ ಸೆನ್ಸೆಕ್ಸ್ ಭರ್ಜರಿ ವಹಿವಾಟು; ರಿಲಯನ್ಸ್, ಹೀರೋ ಉತ್ತಮ ಗಳಿಕೆ
ಸೆನ್ಸೆಕ್ಸ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯದಲ್ಲಿ ಶೇಕಡಾ 3.48 ಜಿಗಿತ ಕಾಣಿಸಿತು. ನಿಸ್ಲೆ, ಏಷ್ಯನ್ ಪೈಂಟ್ಸ್, ಬಜಾಜ್ ಫಿನ್ಸರ್ವ್, ವಿಪ್ರೋ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಉತ್ತಮ ವಹಿವಾಟು ದಾಖಲಿಸಿದವು.
ಮುಂಬೈ: ದೇಶೀಯ ಷೇರುಪೇಟೆಗಳು (Stock Markets) ಸತತ ಐದನೇ ದಿನವೂ ಗಳಿಕೆಯ ಓಟ ಮುಂದುವರಿಸಿದ್ದು, ಉತ್ತಮ ವಹಿವಾಟು ದಾಖಲಿಸಿದೆ. ಶುಕ್ರವಾರದ ವಹಿವಾಟಿನಲ್ಲಿ ಉತ್ತಮ ವಹಿವಾಟು ದಾಖಲಿಸಿದ್ದ ಬಿಎಸ್ಇ ಸೆನ್ಸೆಕ್ಸ್ (BSE Sensex) ಸೋಮವಾರವೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದೆ. ಎನ್ಎಸ್ಇ ನಿಫ್ಟಿ ಕೂಡ (NSE Nifty) ಉತ್ತಮ ವಹಿವಾಟು ನಡೆಸಿದೆ. ವಿದೇಶಿ ನಿಧಿಯ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ ಮಾರುಕಟ್ಟೆ ವಹಿವಾಟಿಗೆ ಪೂರಕವಾಗಿ ಪರಿಣಮಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಹಾಗೂ ಹೀರೋ ಮೋಟರ್ಕಾರ್ಪ್ (Hero Motocorp) ಉತ್ತಮ ಲಾಭ ದಾಖಲಿಸಿವೆ.
ಸೆನ್ಸೆಕ್ಸ್ 211.16 ಅಂಶ ಚೇತರಿಸಿ 62,504.80ರಲ್ಲಿ ವಹಿವಾಟು ಕೊನೆಗೊಳಿಸಿತು. ಈ ಮೂಲಕ ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ಒಂದು ಹಂತದಲ್ಲಿ 62,701.40ರ ವರೆಗೂ ವಹಿವಾಟು ದಾಖಲಿಸಿತ್ತು. ಮತ್ತೊಂದೆಡೆ ನಿಫ್ಟಿ 50 ಅಂಶ ಗಳಿಕೆ ದಾಖಲಿಸಿ 18,562.75ರಲ್ಲಿ ವಹಿವಾಟು ಕೊನೆಗೊಳಿಸಿತು.
ಸೆನ್ಸೆಕ್ಸ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯದಲ್ಲಿ ಶೇಕಡಾ 3.48 ಜಿಗಿತ ಕಾಣಿಸಿತು. ನಿಸ್ಲೆ, ಏಷ್ಯನ್ ಪೈಂಟ್ಸ್, ಬಜಾಜ್ ಫಿನ್ಸರ್ವ್, ವಿಪ್ರೋ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಉತ್ತಮ ವಹಿವಾಟು ದಾಖಲಿಸಿದವು. ಟಾಟಾ ಸ್ಟೀಲ್, ಎಚ್ಡಿಎಫ್ಸಿ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂತು.
ಇದನ್ನೂ ಓದಿ: Bank Holidays In December: ಡಿಸೆಂಬರ್ನಲ್ಲಿ 14 ದಿನ ಬ್ಯಾಂಕ್ ರಜೆ! ಕರ್ನಾಟಕದ ರಜೆ ವಿವರ ಇಲ್ಲಿದೆ
ಬಿಎಸ್ಇ ಸ್ಮಾಲ್ಕ್ಯಾಪ್ ಶೇಕಡಾ 0.77ರ ಚೇತರಿಕೆ ದಾಖಲಿಸಿದರೆ, ಮಿಡ್ಕ್ಯಾಪ್ ಶೇಕಡಾ 0.72ರ ವೃದ್ಧಿ ದಾಖಲಿಸಿದೆ. ಕಮಾಡಿಟಿ, ಟೆಲಿಕಮ್ಯುನಿಕೇಷನ್, ಯುಟಿಲಿಟಿ, ಪವರ್ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಕುಸಿತ ಕಾಣಿಸಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 369.08 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದರು.
ಏಷ್ಯಾದಾದ್ಯಂತ ವಹಿವಾಟಿನಲ್ಲಿ ಕುಸಿತ
ಭಾರತದಲ್ಲಿ ಷೇರುಪೇಟೆಗಳು ಉತ್ತಮ ವಹಿವಾಟು ನಡೆಸಿದರೆ ಏಷ್ಯಾದಾದ್ಯಂತ ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದಿತು. ಸಿಯೋಲ್, ಟೋಕಿಯೊ, ಶಾಂಘೈ ಹಾಗೂ ಹಾಂಗ್ಕಾಂಗ್ನಲ್ಲಿ ವಹಿವಾಟು ಕುಸಿಯಿತು.
ಕಚ್ಚಾ ತೈಲ ಬೆಲೆ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 3.11ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 81.03 ಡಾಲರ್ನಂತೆ ಮಾರಾಟವಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 5 ಪೈಸೆ ಹೆಚ್ಚಾಗಿ 81.66ರಲ್ಲಿ ವಹಿವಾಟು ಕೊನೆಗೊಳಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ