Sensex: ಬಿಎಸ್ಇ ಸೆನ್ಸೆಕ್ಸ್ 57 ಸಾವಿರ ಪಾಯಿಂಟ್ಸ್, ನಿಫ್ಟಿ 17 ಸಾವಿರ ಪಾಯಿಂಟ್ಸ್ ಸಮೀಪ; ಮತ್ತೆ ಹೊಸ ದಾಖಲೆ ಬರೆದ ಷೇರುಪೇಟೆ
Senex stocks: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಮಂಗಳವಾರ ಬೆಳಗ್ಗಿನ ವಹಿವಾಟಿನಲ್ಲಿ 57 ಸಾವಿರ ಪಾಯಿಂಟ್ಸ್ ದಾಟಿದ್ದರೆ ನಿಫ್ಟಿ 17 ಸಾವಿರ ಪಾಯಿಂಟ್ಸ್ ಸಮೀಪ ಇದೆ.
ಮಾಹಿತಿ ತಂತ್ರಜ್ಞಾನ ಮತ್ತು ಫಾರ್ಮಾಸ್ಯುಟಿಕಲ್ ವಲಯದ ಷೇರುಗಳ ಖರೀದಿಯಲ್ಲಿ ಕಂಡುಬಂದ ದೊಡ್ಡ ಮಟ್ಟದ ಭರಾಟೆಯೂ ಸೇರಿದಂತೆ ಮಂಗಳವಾರ (ಆಗಸ್ಟ್ 31, 2021) ಎಲ್ಲ ವಲಯದ ಷೇರುಗಳಲ್ಲೂ ಬಿರುಸಿನ ಚಟುವಟಿಕೆ ನಡೆದು, ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಆರಂಭದ ವಹಿವಾಟಿನಲ್ಲೇ 57 ಸಾವಿರ ಪಾಯಿಂಟ್ಸ್ ಗಡಿಯನ್ನು ದಾಟಿ ಹೊಸ ದಾಖಲೆಯನ್ನು ಬರೆಯಿತು. ಇನ್ನು ನಿಫ್ಟಿ- 50 ಸೂಚ್ಯಂಕವು 17 ಸಾವಿರ ಪಾಯಿಂಟ್ಸ್ ಸಮೀಪ ಇದೆ. 2020ರ ಏಪ್ರಿಲ್ನಿಂದ ಆರಂಭವಾದ ಏರಿಕೆಯ ನಾಗಾಲೋಟವು ಹಾಗೇ ಸ್ಥಿರವಾಗಿ ಮುಂದುವರಿದಿದೆ. ಇದೀಗ ಅಮೆರಿಕದ ಕೇಂದ್ರ ಬ್ಯಾಂಕ್ ಫೆಡ್ ಈಗ ಹೂಡಿಕೆದಾರರಿಗೆ ಉತ್ಸಾಹ ತರುವಂಥ ಹೇಳಿಕೆ ನೀಡಿರುವುದು ಸಹ ಏರಿಕೆಗೆ ಸಾಥ್ ನೀಡಿದೆ. “ಇಲ್ಲಿಯ ತನಕ ಮಾರ್ಕೆಟ್ ಎಲ್ಲ ಊಹೆಯನ್ನು ತಪ್ಪು ಎಂದು ಮಾಡಿದೆ. ಪಾರ್ಟಿ ಮಾಡುವಾಗ ಕೂಡ ಭಾರೀ ಪ್ರಮಾಣದಲ್ಲಿ ಕುಸಿತ ಕಂಡರೆ ಏನು ಮಾಡಬೇಕು ಎಂಬುದಕ್ಕೆ ಸಿದ್ಧರಾಗಿರಬೇಕು. ಸ್ವಲ್ಪ ಮಟ್ಟಿಗೆ ಲಾಭ ತೆಗೆದುಕೊಳ್ಳುವುದು ಕೆಟ್ಟ ಆಲೋಚನೆ ಏನಲ್ಲ. ಡಾಲರ್ ಮೌಲ್ಯ ಏರಿಕೆ ಹೊರತಾಗಿಯೂ ಐ.ಟಿ. ಸ್ಟಾಕ್ಗಳು ದುರ್ಬಲವಾಗಿ ಕಾಣುತ್ತಿದೆ. ಅನುಭವದಿಂದ ಹೇಳಬೇಕು ಅಂದರೆ, ಡಾಲರ್ ವಿನಿಮಯದ ಬೆಲೆಗಿಂತ ಬಂದ ವ್ಯವಹಾರಗಳು ಎಷ್ಟು ಎಂಬುದರ ಮೇಲೆ ಐ.ಟಿ. ಕಂಪೆನಿಗಳ ಪ್ರದರ್ಶನ ನಿಂತಿದೆ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಬೆಲೆ ಕುಸಿತ ಕಂಡಾಗ ಖರೀದಿ ಮಾಡಬಹುದು,” ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ಇಂದಿನ ವಹಿವಾಟು ಆರಂಭ ಆಗುತ್ತಿದ್ದಂತೆ ಸೂಚ್ಯಂಕಗಳು ಏರಿಕೆಯನ್ನು ಕಾಯ್ದಕೊಂಡವು. ಬೆಳಗ್ಗೆ 9.21 ಹೊತ್ತಿಗೆ ಸೆನ್ಸೆಕ್ಸ್ 219 ಪಾಯಿಂಟ್ಸ್ ಮೇಲೇರಿ 57,209 ಪಾಯಿಂಟ್ಸ್ನಲ್ಲಿ ವ್ಯವಹಾರ ನಡೆಸಿತು. ಇನ್ನು ನಿಫ್ಟಿ 55 ಪಾಯಿಂಟ್ಸ್ ಮೇಲೇರಿ 16,986ರಲ್ಲಿ ಇತ್ತು. ಅಂದಹಾಗೆ ಡಾಲರ್ ಮೌಲ್ಯ ಇಳಿಕೆ ಆಗಿರುವುದು ಉತ್ತಮ ಸುದ್ದಿಯಂತೆ ಕಂಡುಬಂದಿದೆ. ಆದರೆ ಚೀನಾದ ಕೈಗಾರಿಕೆ ಚಟುವಟಿಕೆ ವಿಸ್ತರಣೆ ಆಗಿದೆ. ಜಾಗತಿಕ ಮಾರ್ಕೆಟ್ಗಳನ್ನು ನೋಡಿದಾಗ ಜಪಾನ್, ಹಾಂಕಾಂಗ್ ಹಾಗೂ ಚೀನಾದ ಸೂಚ್ಯಂಕಗಳು ಇಳಿಕೆ ಕಂಡಿವೆ.
ಇನ್ನು ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ ಸೂಚ್ಯಂಕ 146.34 ಏರಿಕೆ ಕಂಡು 57,036.10 ಪಾಯಿಂಟ್ಸ್ನಲ್ಲಿ, ನಿಫ್ಟಿ- 50 ಸೂಚ್ಯಂಕ 42.35 ಪಾಯಿಂಟ್ಸ್ ಹೆಚ್ಚಾಗಿ 16973.40 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿದ್ದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಭಾರ್ತಿ ಏರ್ಟೆಲ್ ಶೇ 2.50 ಅದಾನಿ ಪೋರ್ಟ್ಸ್ ಶೇ 2.05 ಬಜಾಜ್ ಫೈನಾನ್ಸ್ ಶೇ 1.91 ಹಿಂಡಾಲ್ಕೋ ಶೇ 1.58 ಏಷ್ಯನ್ ಪೇಂಟ್ಸ್ ಶೇ 1.55
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಟಾಟಾ ಮೋಟಾರ್ಸ್ ಶೇ -1.73 ಇಂಡಸ್ಇಂಡ್ ಬ್ಯಾಂಕ್ ಶೇ -0.67 ಟೆಕ್ ಮಹೀಂದ್ರಾ ಶೇ -0.65 ರಿಲಯನ್ಸ್ ಶೇ -0.59 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.62
ಇದನ್ನೂ ಓದಿ: Unlisted Shares: ಅನ್ಲಿಸ್ಟೆಡ್ ಷೇರುಗಳ ಖರೀದಿ, ವಹಿವಾಟು ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ
ಅಮೆರಿಕದ ಗೂಗಲ್, ಆಪಲ್ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?
(Opening Bell Sensex Crosses 57000 Mark And Nifty Near 17000 Points In Early Trading Of August 31st 2021)