Stock Markets: ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ನಿಫ್ಟಿ ನಾಗಾಲೋಟ; ಮುಂದುವರಿದ ಸೆನ್ಸೆಕ್ಸ್ ಓಟ
ಎಚ್ಯುಎಲ್, ಟಾಟಾ ಸ್ಟೀಲ್, ಅಪೋಲೊ ಹಾಸ್ಪಿಟಲ್, ಸಿಪ್ಲಾ ಹಾಗೂ ಹಿಂಡಾಲ್ಕೊ ಷೇರು ಮೌಲ್ಯದಲ್ಲಿ ವೃದ್ಧಿ ಕಾಣಿಸಿದೆ. ಲಾರ್ಸೆನ್, ಟಾಟಾ ಮೋಟಾರ್ಸ್, ಪವರ್ ಗ್ರಿಡ್, ಬಿಪಿಸಿಎಲ್ ಹಾಗೂ ಇಂಡಸ್ಇಂಡ್ ಬ್ಯಾಂಕ್ಗಳ ಷೇರು ಮೌಲ್ಯದಲ್ಲಿ ಕುಸಿತವಾಗಿದೆ.
ಮುಂಬೈ: ವಾರದ ಮೊದಲ ದಿನವೇ ಉತ್ತಮ ಗಳಿಕೆಯ ಮೂಲಕ ಹೂಡಿಕೆದಾರರಲ್ಲಿ ಸಂತಸಕ್ಕೆ ಕಾರಣವಾಗಿರುವ ದೇಶೀಯ ಷೇರುಪೇಟೆಗಳು (Stock Markets) ಮಂಗಳವಾರದ ಆರಂಭಿಕ ವಹಿವಾಟಿನಲ್ಲಿಯೂ ಭರವಸೆ ಮೂಡಿಸಿವೆ. ಬಿಎಸ್ಇ ಸೆನ್ಸೆಕ್ಸ್ (BSE Sensex) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿದ್ದು, ಎನ್ಎಸ್ಇ ನಿಫ್ಟಿ (NSE Nifty) 19000 ದತ್ತ ನಾಗಾಲೋಟ ಮುಂದುವರಿಸಿದೆ. ಟಾಟಾ ಸ್ಟೀಲ್, ಅಪೋಲೊ ಹಾಸ್ಪಿಟಲ್, ಹಿಂಡಾಲ್ಕೊ ಉತ್ತಮ ಗಳಿಕೆ ದಾಖಲಿಸುತ್ತಿವೆ. ಬೆಳಿಗ್ಗೆ 10 ಗಂಟೆ ವೇಳೆಗೆ ಸೆನ್ಸೆಕ್ಸ್ 173.58 ಅಂಶ ಚೇತರಿಕೆಯೊಂದಿಗೆ 62,678.38ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 57.95 ಅಂಶ ಗಳಿಕೆಯೊಂದಿಗೆ 18,670.20ರಲ್ಲಿ ವಹಿವಾಟು ನಡೆಸುತ್ತಿದೆ.
ಎಚ್ಯುಎಲ್, ಟಾಟಾ ಸ್ಟೀಲ್, ಅಪೋಲೊ ಹಾಸ್ಪಿಟಲ್, ಸಿಪ್ಲಾ ಹಾಗೂ ಹಿಂಡಾಲ್ಕೊ ಷೇರು ಮೌಲ್ಯದಲ್ಲಿ ವೃದ್ಧಿ ಕಾಣಿಸಿದೆ. ಲಾರ್ಸೆನ್, ಟಾಟಾ ಮೋಟಾರ್ಸ್, ಪವರ್ ಗ್ರಿಡ್, ಬಿಪಿಸಿಎಲ್ ಹಾಗೂ ಇಂಡಸ್ಇಂಡ್ ಬ್ಯಾಂಕ್ಗಳ ಷೇರು ಮೌಲ್ಯದಲ್ಲಿ ಕುಸಿತವಾಗಿದೆ. ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ ಹಾಗೂ ಅಪೋಲೊ ಹಾಸ್ಪಿಟಲ್ ಉತ್ತಮ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: Stock Market Updates: ಐದನೇ ದಿನವೂ ಸೆನ್ಸೆಕ್ಸ್ ಭರ್ಜರಿ ವಹಿವಾಟು; ರಿಲಯನ್ಸ್, ಹೀರೋ ಉತ್ತಮ ಗಳಿಕೆ
ಸೋಮವಾರದ ದಿನದ ವಹಿವಾಟು ಮುಗಿಯು ವೇಳೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 369.08 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ್ದರು. ಇದು ಭಾರತೀಯ ಷೇರುಪೇಟೆಗಳ ಗಳಿಕೆಯ ಓಟಕ್ಕೆ ನೆರವಾಗಿತ್ತು. ಏಷ್ಯಾದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಮಂಗಳವಾರ ಬೆಳಿಗ್ಗೆ ಉತ್ತಮವಾಗಿ ವಹಿವಾಟು ನಡೆಯುತ್ತಿವೆ. ಸಿಯೋಲ್, ಶಾಂಘೈ, ಹಾಂಗ್ಕಾಂಗ್ ಷೇರುಪೇಟೆಗಳು ಚೇತರಿಕೆ ಕಂಡಿವೆ. ಟೋಕಿಯೊದಲ್ಲಿ ಮಾತ್ರ ತುಸು ನಷ್ಟ ಕಂಡುಬಂದಿದೆ. ವಾಲ್ಸ್ಟ್ರೀಟ್ನಲ್ಲಿ ನಕಾರಾತ್ಮಕವಾಗಿ ಸೋಮವಾರದ ವಹಿವಾಟು ಅಂತ್ಯಗೊಂಡಿತ್ತು.
ಕಚ್ಚಾ ತೈಲ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 1.39ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 84.35 ಡಾಲರ್ಗೆ ಮಾರಾಟವಾಗುತ್ತಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಇದು 81.03 ಡಾಲರ್ ಆಗಿತ್ತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 8 ಪೈಸೆ ವೃದ್ಧಿಯಾಗಿ 81.60ರಲ್ಲಿ ವಿನಿಮಯಗೊಳ್ಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ