Stock Market Update: ಇಂದು ಮುಂಚೂಣಿಯಲ್ಲಿ ವಹಿವಾಟು ನಡೆಸಲಿವೆ ಈ ಷೇರುಗಳು; ಕಾರಣ ಇಲ್ಲಿದೆ
ಇಂದಿನ ವಹಿವಾಟಿನಲ್ಲಿ ಕೆಲವು ಷೇರುಗಳು ಹೆಚ್ಚು ಸುದ್ದಿಯಾಗುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಅವುಗಳು ಹೀಗಿವೆ;
ಮುಂಬೈ: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಾರಾಂತ್ಯದ ವಹಿವಾಟನ್ನು ಮುಗಿಸಿದ್ದ ಭಾರತೀಯ ಷೇರುಪೇಟೆಗಳು (Stock Market) ಸೋಮವಾರವೂ ಉತ್ಸಾಹದಿಂದ ವಹಿವಾಟು ಆರಂಭಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ (Reliance Industries), ವಿಪ್ರೋ (Wipro), ಮಾರುತಿ (Maruti) ಷೇರುಗಳು ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿವೆ. ಬೆಳಿಗ್ಗೆ 10 ಗಂಟೆ ವೇಳೆಗೆ ಬಿಎಸ್ಇ ಸೆನ್ಸೆಕ್ಸ್ (BSE Sensex) 126.75 ಅಂಶ ಚೇತರಿಕೆಯೊಂದಿಗೆ 62,420.39ರಲ್ಲಿ ವಹಿವಾಟು ನಡೆಸುತ್ತಿದೆ. ಎನ್ಎಸ್ಇ ನಿಫ್ಟಿ 27.80 ಅಂಶ ಚೇತರಿಕೆಯೊಂದಿಗೆ 18,541.45ರಲ್ಲಿ ವಹಿವಾಟು ನಡೆಸುತ್ತಿದ್ದು, 19,000 ದಾಟು ನಿರೀಕ್ಷೆ ಮೂಡಿಸಿದೆ. ಇಂದಿನ ವಹಿವಾಟಿನಲ್ಲಿ ಕೆಲವು ಷೇರುಗಳು ಹೆಚ್ಚು ಸುದ್ದಿಯಾಗುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಅವುಗಳು ಹೀಗಿವೆ;
ಬಜಾಜ್ ಫೈನಾನ್ಸ್ (Bajaj Finance)
ಸ್ನ್ಯಾಪ್ವರ್ಕ್ ಟೆಕ್ನಾಲಜಿಯ ಶೇಕಡಾ 40ರಷ್ಟು ಷೇರು ಖರೀದಿಸುವ ಬಗ್ಗೆ ಬಜಾಜ್ ಫೈನಾನ್ಸ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಷೇರು ಖರೀದಿ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಪ್ರಬಲವಾಗುವುದು ಕಂಪನಿಯ ಉದ್ದೇಶವಾಗಿದೆ. ಷೇರು ಖರೀದಿ ಪ್ರಕ್ರಿಯೆ ಡಿಸೆಂಬರ್ ತಿಂಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಕಂಪನಿಯ ಷೇರುಗಳು ಇಂದು ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೀರೋ ಮೋಟೊಕಾರ್ಪ್ (Hero MotoCorp)
ಬೈಕ್ಗಳ ಎಕ್ಸ್-ಶೋರೂಂ ಬೆಲೆ ಹೆಚ್ಚಿಸಲು ಹೀರೋ ಮೋಟೊಕಾರ್ಪ್ ನಿರ್ಧರಿಸಿದೆ. ಇದು ಡಿಸೆಂಬರ್ 1ರಿಂದ ಅನ್ವಯವಾಗಲಿದೆ. ಕಂಪನಿಯ ಬೈಕ್ಗಳ ಬೆಲೆಯಲ್ಲಿ 1,500 ರೂ.ವರೆಗೆ ಹೆಚ್ಚಳವಾಗಲಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ಬೆಲೆ ಹೆಚ್ಚಳದಲ್ಲಿ ವ್ಯತ್ಯಾಸವಿರಲಿದೆ. ಇದು ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರಲಿದೆ.
ಎಲ್&ಟಿ ಫೈನಾನ್ಸ್ ಹೋಲ್ಡಿಂಗ್ಸ್ (L&T Finance Holdings)
ಅಂಗ ಸಂಸ್ಥೆ ಎಲ್&ಟಿ ಇನ್ವೆಸ್ಟ್ ಮ್ಯಾನೇಜ್ಮೆಂಟ್ನ ಶೇಕಡಾ 100ರ ಬಂಡವಾಳ ಮಾರಾಟ ಪ್ರಕ್ರಿಯೆಯನ್ನು ಎಲ್&ಟಿ ಫೈನಾನ್ಸ್ ಹೋಲ್ಡಿಂಗ್ಸ್ ಪೂರ್ಣಗೊಳಿಸಿದೆ. ಈ ಮೂಲಕ 3,484 ಕೋಟಿ ರೂ. ಸಂಗ್ರಹಿಸಿದೆ. 764 ಕೋಟಿ ರೂ. ಸರ್ಪ್ಲಸ್ ಕ್ಯಾಷ್ ಬ್ಯಾಲೆನ್ಸ್ ಅನ್ನೂ ಸಂಗ್ರಹಿಸಿದೆ.
ನೈಕಾ (Nykaa)
ಸೌಂದರ್ಯ ಸಾಧನಗಳ ಇ-ಕಾಮರ್ಸ್ ಮಾರಾಟ ತಾಣ ನೈಕಾ ಒಟ್ಟು ವ್ಯಾಪಾರದ ಮೌಲ್ಯದಲ್ಲಿ ಶೇಕಡಾ 75ರಷ್ಟು ಬೆಳವಣಿಗೆ ದಾಖಲಾಗಿದ್ದು, ಪಿಂಕ್ ಫ್ರೈಡೇ ಸೇಲ್ ಆದಾಯದಲ್ಲಿ ಶೇಕಡಾ 12 ಪಟ್ಟು ಹೆಚ್ಚಳ ಕಂಡುಬಂದಿದೆ. ಪಿಂಕ್ ಫ್ರೈಡೇ ಸೇಲ್ನ ಮೊದಲ ದಿನ, ನವೆಂಬರ್ 21ರಂದು ಪ್ರತಿ ನಿಮಿಷಕ್ಕೆ 400 ಆರ್ಡರ್ಗಳನ್ನು ಸ್ವೀಕರಿಸಿರುವುದಾಗಿ ಕಂಪನಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ