Stock Market Updates: ದಿಢೀರ್ ಚೇತರಿಕೆ ಕಂಡ ಸೆನ್ಸೆಕ್ಸ್; ಈ ಷೇರುಗಳನ್ನು ಗಮನಿಸಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ಮತ್ತಷ್ಟು ಬಲಿಷ್ಠಗೊಳ್ಳುವತ್ತ ಸಾಗಿರುವ ರೂಪಾಯಿ ಮೌಲ್ಯದಲ್ಲಿ ಶುಕ್ರವಾರ ಬೆಳಿಗ್ಗೆ 71 ಪೈಸೆಯಷ್ಟು ಚೇತರಿಕೆಯಾಗಿದೆ. ಬೆಳಿಗ್ಗೆ 10 ಗಂಟೆ ವೇಳೆಗೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 80.69ಕ್ಕೆ ತಲುಪಿದೆ.
ಮುಂಬೈ: ಎರಡು ದಿನಗಳಿಂದ ಕುಸಿತ ಕಂಡಿದ್ದ ದೇಶೀಯ ಷೇರುಪೇಟೆ ವಹಿವಾಟು (Stock Market) ವಾರಾಂತ್ಯದ ದಿನ ಬೆಳಿಗ್ಗೆಯೇ ದಿಢೀರ್ ಜಿಗಿತ ಕಂಡವು. ಒಂದು ಹಂತದಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) 1,000ಕ್ಕೂ ಹೆಚ್ಚು ಅಂಶ ಹೆಚ್ಚಳ ದಾಖಲಿಸಿತು. ಬ್ಯಾಂಕ್ ನಿಫ್ಟಿ ಇದೇ ಮೊದಲ ಬಾರಿಗೆ 42,000 ಗಡಿ ದಾಟಿ ದಾಖಲೆ ಬರೆದಿದೆ. ಎನ್ಎಸ್ಇ ನಿಫ್ಟಿ (NSE Nifty) ಕೂಡ ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ಬೆಳಿಗ್ಗೆ 11.30ರ ವೇಳೆಗೆ ಸೆನ್ಸೆಕ್ಸ್ 983.76 ಅಂಶ ಚೇತರಿಸಿ 61,597.46ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 278.70 ಅಂಶ ಚೇತರಿಸಿ 18306.90 ರಲ್ಲಿ ವಹಿವಾಟು ನಡೆಸುತ್ತಿದೆ.
ಬಿಎಸ್ಇಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಆ್ಯಕ್ಸಿಸ್ ಬ್ಯಾಂಕ್, ಟಿಸಿಎಸ್ ಹಾಗೂ ಇನ್ಫೋಸಿಸ್ ಷೇರುಗಳು ಉತ್ತಮ ವಹಿವಾಟು ನಡೆಸುತ್ತಿವೆ. ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಅಪೋಲೊ ಹಾಸ್ಪಿಟಲ್, ಇನ್ಫೋಸಿಸ್, ಎಚ್ಸಿಎಲ್ ಟೆಕ್ ಷೇರುಗಳು ಉತ್ತಮ ಗಳಿಕೆ ದಾಖಲಿಸುತ್ತಿವೆ. ಈಚೆರ್ ಮೋಟರ್ಸ್, ಬ್ರಿಟಾನಿಯಾ, ಎನ್ಟಿಪಿಸಿ, ಹೀರೊ ಮೋಟರ್ಕಾರ್ಪ್, ಡಾ. ರೆಡ್ಡೀಸ್ ಲ್ಯಾಬ್ಗಳ ಷೇರು ಮೌಲ್ಯದಲ್ಲಿ ಕುಸಿತವಾಗಿದೆ.
ಡಾಲರ್ ವಿರುದ್ಧ 71 ಪೈಸೆ ಚೇತರಿಸಿದ ರೂಪಾಯಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ಮತ್ತಷ್ಟು ಬಲಿಷ್ಠಗೊಳ್ಳುವತ್ತ ಸಾಗಿರುವ ರೂಪಾಯಿ ಮೌಲ್ಯದಲ್ಲಿ ಶುಕ್ರವಾರ ಬೆಳಿಗ್ಗೆ 71 ಪೈಸೆಯಷ್ಟು ಚೇತರಿಕೆಯಾಗಿದೆ. ಬೆಳಿಗ್ಗೆ 10 ಗಂಟೆ ವೇಳೆಗೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 80.69ಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆ ಇಳಿಕೆ ಸೇರಿದಂತೆ ಹಲವು ಕಾರಣಗಳು ರೂಪಾಯಿ ಬಲವರ್ಧನೆಗೆ ನೆರವಾಗಿವೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 80.76ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ, ಹಿಂದಿನ ದಿನದ ಮುಕ್ತಾಯದ ವೇಳೆ ಇದ್ದ ಮೌಕ್ಯಕ್ಕಿಂತ 71 ಪೈಸೆ ಹೆಚ್ಚಾಗಿ 80.69ರಲ್ಲಿ ವಹಿವಾಟು ನಡೆಸುತ್ತಿದೆ.
ವಾರದ ಹಿಂದೆಯಷ್ಟೇ ಪಾತಾಳಕ್ಕೆ ಕುಸಿದಿದ್ದ ರೂಪಾಯಿ ಮೌಲ್ಯ ಒಂದು ಹಂತದಲ್ಲಿ ಡಾಲರ್ ವಿರುದ್ಧ 83 ತಲುಪಿತ್ತು. ಇದು 83.50 ವರೆಗೆ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು. ಆದರೆ ಜಾಗತಿಕ ಆರ್ಥಿಕ ಅನಿಶ್ಚಿತತೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರು ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ತೋರಿರುವುದು ರೂಪಾಯಿ ಮೇಲೆ ಪ್ರಭಾವ ಬೀರಿದೆ. ಹಾಗೂ ದೇಶೀಯ ಕರೆನ್ಸಿಯ ಬಲವರ್ಧನೆಗೆ ಕಾರಣವಾಗಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ