ICICI Bank Share Price: ಐದೇ ತಿಂಗಳಲ್ಲಿ ಶೇ 40ರಷ್ಟು ವೃದ್ಧಿ ಕಂಡ ಐಸಿಐಸಿಐ ಬ್ಯಾಂಕ್ ಷೇರು ಮೌಲ್ಯ; ಈಗ ಖರೀದಿ ಸೂಕ್ತವೇ?
ಷೇರು ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ, ಐಸಿಐಸಿಐ ಬ್ಯಾಂಕ್ ಷೇರುಗಳು ಇನ್ನೂ ಚೇತರಿಕೆ ಕಾಣುವ ಸಾಧ್ಯತೆ ಇದೆ.
ಐಸಿಐಸಿಐ ಬ್ಯಾಂಕ್ (ICICI Bank) ಷೇರು 2022-23ನೇ ಸಾಲಿನಲ್ಲಿ ಷೇರುಪೇಟೆಯಲ್ಲಿ (Stock Market) ಉತ್ತಮ ಗಳಿಕೆ ದಾಖಲಿಸುತ್ತಿದೆ. ಕಳೆದ ಐದು ತಿಂಗಳುಗಳಲ್ಲಿ ಕಂಪನಿಯ ಷೇರು ಮೌಲ್ಯ 675 ರೂ.ನಿಂದ 950 ರೂ.ಗೆ ವೃದ್ಧಿಯಾಗಿದೆ. ಇದರೊಂದಿಗೆ ಅಲ್ಪಾವಧಿಯಲ್ಲಿ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 40ರ ಜಿಗಿತವಾದಂತಾಗಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿಯೂ ಕಂಪನಿಯ ಷೇರುಗಳು ಉತ್ತಮ ವಹಿವಾಟು ನಡೆಸಿವೆ. ಈ ವಾರದ ವಹಿವಾಟಿನಲ್ಲಿಯೂ ಬುಧವಾರದ ವರೆಗೆ ಉತ್ತಮ ವಹಿವಾಟು ನಡೆಸಿವೆ.
ಷೇರು ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ, ಐಸಿಐಸಿಐ ಬ್ಯಾಂಕ್ ಷೇರುಗಳು ಇನ್ನೂ ಚೇತರಿಕೆ ಕಾಣುವ ಸಾಧ್ಯತೆ ಇದೆ. ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಖಾಸಗಿ ಬ್ಯಾಂಕ್ನ ವಾರ್ಷಿಕ ಅಡ್ವಾನ್ಸ್ ಬೆಳವಣಿಗೆ ಶೇಕಡಾ 23, ರಿಟೇಲ್ ಸಾಲ ಶೇಕಡಾ 43ರಷ್ಟು ಹೆಚ್ಚಾಗಿದೆ. ಎನ್ಪಿಎ ಅನುಪಾತ ಶೇಕಡಾ 0.70 ರಿಂದ 0.61ಕ್ಕೆ ಇಳಿಕೆಯಾಗಿದೆ.
ಷೇರುಪೇಟೆಯಲ್ಲಿ ಐಸಿಐಸಿಐ ಬ್ಯಾಂಕ್ ಲಾಭದ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗದವರು ಈಗಲೂ ಕಂಪನಿಯ ಷೇರು ಖರೀದಿಸಬಹುದು. ಆದರೆ ಸದ್ಯ 940 ರೂ.ಗಿಂತ ಮೇಲ್ಪಟ್ಟದಲ್ಲೇ ಖರೀದಿಸಬೇಕಾದ ಅನಿವಾರ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
ಐಸಿಐಸಿ ಬ್ಯಾಂಕ್ ಉತ್ತಮ ನಿರ್ವಹಣೆ ತೋರುತ್ತಿದೆ. ಬ್ಯಾಂಕ್ನ ವಾರ್ಷಿಕ ಅಡ್ವಾನ್ಸ್ ಬೆಳವಣಿಗೆ ಶೇಕಡಾ 23, ರಿಟೇಲ್ ಸಾಲ ಶೇಕಡಾ 43ರಷ್ಟು ಹೆಚ್ಚಾಗಿದೆ. ಠೇವಣಿ ಪ್ರಮಾಣದಲ್ಲಿ ಶೇಕಡಾ 12ರಷ್ಟು ಹೆಚ್ಚಳವಾಗಿದೆ. ಬ್ಯಾಂಕ್ನ ಸ್ವತ್ತು ಗುಣಮಟ್ಟದಲ್ಲಿಯೂ ಈ ವರ್ಷ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಎನ್ಪಿಎ ಅನುಪಾತ ಶೇಕಡಾ 0.70ಯಿಂದ ಶೇಕಡಾ 0.61ಕ್ಕೆ ಇಳಿಕೆಯಾಗಿದೆ. ಈ ಅಂಶಗಳು ಕಂಪನಿಯ ಷೇರು ವಹಿವಾಟಿನ ಉತ್ತೇಜನಕ್ಕೆ ಕಾರಣವಾಗಲಿದೆ ಎಂದು ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್ನ ಸಂಶೋಧಕಿ ಸೀಮಾ ಶ್ರೀವಾಸ್ತವ ತಿಳಿಸಿರುವುದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ.
ಸದ್ಯ ಐಸಿಐಸಿಐ ಬ್ಯಾಂಕ್ ಖಾಸಗಿ ಕ್ಷೇತ್ರದ ಇತರೆ ಬ್ಯಾಂಕ್ಗಳಿಗಿಂತಲೂ, ಅದರಲ್ಲಿಯೂ ಎಚ್ಡಿಎಫ್ಸಿಗಿಂತಲೂ ಉತ್ತಮ ನಿರ್ವಹಣೆ ತೋರುತ್ತಿದೆ. ಆದಾಗ್ಯೂ, ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಈ ವರ್ಷ ಉತ್ತಮ ಗಳಿಕೆ ದಾಖಲಿಸುತ್ತಿವೆ ಎಂದು ಸ್ವಸ್ತಿಕ ಇನ್ವೆಸ್ಟ್ಮೆಂಟ್ನ ಸಂಶೋಧನಾ ಮುಖ್ಯಸ್ಥೆ ಮೀನಾ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
(ಇದು ಷೇರು ಮಾರುಕಟ್ಟೆ ತಜ್ಞರ ಸಲಹೆ ಆಧಾರಿತ ವರದಿ ಮಾತ್ರ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮ ಹೂಡಿಕೆ ಸಲಹೆಗಾರರ ಬಳಿ ಸಮಾಲೋಚಿಸುವುದು ಉತ್ತಮ)