Stock Market Holiday: ಬಿಎಸ್​ಇ, ಎನ್​ಎಸ್​ಇ ಷೇರುಪೇಟೆಗಳಿಗೆ ಇಂದೇಕೆ ರಜೆ?

TV9 Digital Desk

| Edited By: ಗಣಪತಿ ಶರ್ಮ

Updated on: Oct 26, 2022 | 10:16 AM

ದೇಶದ ಷೇರುಪೇಟೆಗಳಾದ ಬಿಎಸ್​ಇ ಹಾಗೂ ಎನ್​ಎಸ್​ಇಗಳಿಗೆ ಇಂದು (ಬುಧವಾರ) ರಜೆ. ಕರೆನ್ಸಿ ವಹಿವಾಟು ಕೂಡ ಇಂದು ನಡೆಯುವುದಿಲ್ಲ.

Stock Market Holiday: ಬಿಎಸ್​ಇ, ಎನ್​ಎಸ್​ಇ ಷೇರುಪೇಟೆಗಳಿಗೆ ಇಂದೇಕೆ ರಜೆ?
ಬಿಎಸ್​ಇ (ಸಾಂದರ್ಭಿಕ ಚಿತ್ರ)

ಮುಂಬೈ: ದೇಶದ ಷೇರುಪೇಟೆಗಳಾದ (Stock market) ಬಿಎಸ್​ಇ (BSE) ಹಾಗೂ ಎನ್​ಎಸ್​ಇಗಳಿಗೆ (NSE) ಇಂದು (ಬುಧವಾರ) ರಜೆ. ಉಭಯ ಮಾರುಕಟ್ಟೆಗಳಲ್ಲಿ ಇಂದು ಯಾವುದೇ ವಹಿವಾಟು ನಡೆಯುತ್ತಿಲ್ಲ. ದೀಪಾವಳಿಯ (Diwali) ಬಲಿಪಾಡ್ಯಮಿ ನಿಮಿತ್ತ ಮಾರುಕಟ್ಟೆ ತೆರೆದಿಲ್ಲ. ಅಕ್ಟೋಬರ್ 26ರಂದು ಮಾರುಕಟ್ಟೆಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ಬಿಎಸ್​ಇ ಹಾಗೂ ಎನ್ಎಸ್​ಇ ವೆಬ್​ಸೈಟ್​ಗಳಲ್ಲಿ ಉಲ್ಲೇಖಿಸಲಾಗಿದೆ.

ಬಿಎಸ್​ಇ ಅಧಿಕೃತ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿರುವ ಈ ವರ್ಷದ ರಜಾ ದಿನಗಳ ಪಟ್ಟಿಯಲ್ಲಿ ಇಂದೂ ಸೇರಿದೆ. ಈ ಮಧ್ಯೆ, ಕರೆನ್ಸಿ ವಹಿವಾಟಿಗೂ ಇಂದು ರಜೆ ಇದೆ. ಇನ್ನು, ಷೇರು ಮಾರುಕಟ್ಟೆಯ ಮೊದಲ ಮೂರು ದಿನಗಳಲ್ಲಿ ರಜೆ ಇರುವ ಕಮಾಡಿಟಿ ಮಾರುಕಟ್ಟೆ ಕೊನೆಯ ರಜೆಯ ದಿನದ ಎರಡನೇ ಅವಧಿಯಲ್ಲಿ, ಅಂದರೆ ಸಂಜೆ 5ರ ನಂತರ ತುಸು ಹೊತ್ತು ವಹಿವಾಟು ನಡೆಸಲಿದೆ.

ಇದನ್ನೂ ಓದಿ: Petrol Price on October 26: ನೊಯ್ಡಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ, ಲಕ್ನೋದಲ್ಲಿ ಏರಿಕೆ; ನಿಮ್ಮ ನಗರದಲ್ಲಿ ಇಂದಿನ ದರವೆಷ್ಟು?

ಇದನ್ನೂ ಓದಿ

ನವೆಂಬರ್ 8ರಂದು ಕೂಡ ಬಿಎಸ್​ಇ, ಎನ್ಎಸ್​ಇ ರಜೆ ಇರಲಿವೆ. ಷೇರುಪೇಟೆ ರಜಾ ದಿನಗಳಂದು ಈಕ್ವಿಟಿ ವಿಭಾಗ, ಇಕ್ವಿಟಿ ಉತ್ಪನ್ನ ವಿಭಾಗ ಮತ್ತು ಎಸ್​ಎಲ್​ಬಿ ವಿಭಾಗಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ಬಿಎಸ್​ಇ ಹೇಳಿದೆ.

ಈ ಮಧ್ಯೆ, ದೇಶದ ಷೇರುಪೇಟೆಗಳ 7 ದಿನಗಳ ಓಟಕ್ಕೆ ಮಂಗಳವಾರ ತಡೆ ಬಿದ್ದಿತ್ತು. ಸತತ ಗಳಿಕೆಯ ಓಟ ಮುಂದುವರಿಸಿದ್ದ ಬಿಎಸ್​ಇ ಹಾಗೂ ಎನ್​ಎಸ್​ಇಗಳು ಮಂಗಳವಾರದ ವಹಿವಾಟಿನ ಕೊನೆಯಲ್ಲಿ ತುಸು ಕುಸಿತ ಕಂಡಿದ್ದವು. ಬಿಎಸ್​ಇ 317.87 ಅಂಶ ಇಳಿಕೆಯೊಂದಿಗೆ 59,513.79 ರಲ್ಲಿ ವಹಿವಾಟು ಕೊನೆಗೊಳಿಸಿದ್ದರೆ, ಎನ್​ಎಸ್​ಇ ನಿಫ್ಟಿ ಕೂಡ 74.40 ಇಳಿಕೆಯಾಗಿ 17,656.35 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ಟೆಕ್ ಮಹೀಂದ್ರಾ, ಮಾರುತಿ, ಎಲ್​ ಆ್ಯಂಡ್ ಟಿ, ಡಾ. ರೆಡ್ಡೀಸ್, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎನ್​ಟಿಪಿಸಿ ಷೇರುಗಳು ಗಳಿಕೆ ದಾಖಲಿಸಿದ್ದವು. ಸೋಮವಾರ ಸಂಜೆ ನಡೆದಿದ್ದ ಮುಹೂರ್ತ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 524.51 ಅಂಶ ಏರಿಕೆ ಕಂಡು 89,831.66ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ನಿಫ್ಟಿ 154.45 ಅಂಶ ಚೇತರಿಕೆ ಕಂಡು 17,730.75ರಲ್ಲಿ ವಹಿವಾಟು ಕೊನೆಗೊಳಿಸಿತ್ತು.

ರೂಪಾಯಿ ಮೌಲ್ಯ ಮಾತ್ರ ಮಂಗಳವಾರ ಸಂಜೆ ವೇಳೆಗೆ ತುಸು ಚೇತರಿಕೆ ದಾಖಲಿಸಿ ಭರವಸೆ ಮೂಡಿಸಿತ್ತು. ಅಮೆರಿಕನ್ ಡಾಲರ್ ವಿರುದ್ಧ 7 ಪೈಸೆ ಚೇತರಿಕೆ ದಾಖಲಿಸಿದ ರೂಪಾಯಿ ಮೌಲ್ಯ ಕೊನೆಯಲ್ಲಿ 82.81 ರಲ್ಲಿ ವಹಿವಾಟು ಕೊನೆಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada