ಮುಂಬೈ: ಷೇರುಪೇಟೆಗಳಲ್ಲಿ (Stock Market) ಕಳೆದ ಎರಡು ವಾರಗಳ ಗಳಿಕೆಯ ಟ್ರೆಂಡ್ ಸೋಮವಾರವೂ ಮುಂದುವರಿದಿದೆ. ಬಿಎಸ್ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್ಎಸ್ಇ ನಿಫ್ಟಿಗಳು (NSE Nifty) ನಿತ್ಯದ ವಹಿವಾಟಿನಲ್ಲಿ ಚೇತರಿಕೆ ದಾಖಲಿಸಿದ್ದು, ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ವಾಲ್ಸ್ಟ್ರೀಟ್ ಮಾರುಕಟ್ಟೆಯಲ್ಲಿನ ವಹಿವಾಟು, ಕಚ್ಚಾ ತೈಲ ಬೆಲೆ ಇಳಿಕೆ, ಚೀನಾದ ಫ್ಯಾಕ್ಟರಿ ದತ್ತಾಂಶದಲ್ಲಿನ ಕುಸಿತ ದೇಶೀಯ ಮಾರುಕಟ್ಟೆಯಲ್ಲಿ ಪ್ರತಿಫಲಿಸಿತು.
ಅಮೆರಿಕದ ಷೇರುಗಳು ಟೆಕ್ ಷೇರುಗಳ ಮಾರಾಟದಿಂದ ಚೇತರಿಸಿಕೊಂಡಿರುವುದು, ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳದ ಸುಳಿವು, ಹಣದುಬ್ಬರಕ್ಕೆ ಸಂಬಂಧಿಸಿ ಆರ್ಬಿಐ ಹಣಕಾಸು ನೀತಿ ಸಮಿತ ವಿಶೇಷ ಸಭೆ ಕರೆದಿರುವುದು ಮಾರುಕಟ್ಟೆ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.
ಸೋಮವಾರದ ವಹಿವಾಟಿನಲ್ಲಿ ಕೊನೆಯಲ್ಲಿ 786.74 ಅಂಶ ಚೇತರಿಕೆಯೊಂದಿಗೆ ಸೆನ್ಸೆಕ್ಸ್ 60,746.59 ರಲ್ಲಿ ವಹಿವಾಟು ಕೊನೆಗೊಳಿಸಿತು. 225.40 ಅಂಶ ಗಳಿಕೆಯೊಂದಿಗೆ ನಿಫ್ಟಿ 18,012.20 ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ ಚೇತರಿಕೆಯು ಭರವಸೆ ಮೂಡಿಸಿರುವುದಲ್ಲದೆ, ಮುಂದಿನ ದಿನಗಳಲ್ಲಿಯೂ ಇದೇ ಟ್ರೆಂಡ್ ಮುಂದುವರಿಯುವ ಆಶಾವಾದ ಮೂಡಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಪಾವಧಿಗೆ ಇದೇ ಟ್ರೆಂಡ್ ಮುಂದುವರಿಯಲಿದ್ದು ಗರಿಷ್ಠ 18100/18300 ರಲ್ಲಿ ವಹಿವಾಟು ನಡೆಸಬಹುದು ಎಂದು ಅಂದಾಜಿಸಲಾಗಿದೆ.
ಮುಂದುವರಿದ ಮಾರುತಿ ಓಟ
ಕಳೆದ ವಾರವಷ್ಟೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದ ಮಾರುತಿ ಸುಜುಕಿ ಇಂಡಿಯಾ ನಿವ್ವಳ ಲಾಭದಲ್ಲಿ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಕಂಪನಿಯ ಷೇರುಗಳು ಉತ್ತಮ ವಹಿವಾಟು ನಡೆಸಿದ್ದಲ್ಲದೆ, ಭಾರಿ ಗಳಿಕೆ ದಾಖಲಿಸಿದ್ದವು. ಅದೇ ಟ್ರೆಂಡ್ ಸೋಮವಾರವೂ ಮುಂದುವರಿದಿದೆ. ಉಳಿದಂತೆ, ಎಚ್ಡಿಎಫ್ಸಿ ಬ್ಯಾಂಕ್, ಸನ್ ಫಾರ್ಮಾ, ರಿಲಯನ್ಸ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್ ಹಾಗೂ ಬಜಾಜ್ ಫೈನಾನ್ಸ್ ಉತ್ತಮ ಗಳಿಕೆ ದಾಖಲಿಸಿವೆ.
ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ
ಅಪೋಲೊ ಹಾಸ್ಪಿಟಲ್, ಡಾ. ರೆಡ್ಡೀಸ್, ಎನ್ಟಿಪಿಸಿ ಹಾಗೂ ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಕುಸಿತ ಕಂಡಿವೆ.
ಮತ್ತೆ ಕುಸಿದ ರೂಪಾಯಿ
ದಿನದ ವಹಿವಾಟಿನ ಆರಂಭದಲ್ಲಿ ಚೇತರಿಕೆಯ ಸುಳಿವು ನೀಡಿದ್ದ ರೂಪಾಯಿ ಮೌಲ್ಯ, ಕೊನೆಯಲ್ಲಿ 31 ಪೈಸೆ ಕುಸಿದು ಅಮೆರಿಕನ್ ಡಾಲರ್ ವಿರುದ್ಧ 82.78 ರಲ್ಲಿ ವಹಿವಾಟು ಮುಗಿಸಿತು. 82.35ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಒಂದು ಹಂತದಲ್ಲಿ 82.80ರ ವರೆಗೂ ವೃದ್ಧಿ ಕಂಡಿತ್ತು.
ಯುರೋಪ್ನಲ್ಲಿ ದಾಖಲೆಯ ಕುಸಿತ ಕಂಡ ಹಣದುಬ್ಬರ
ರಷ್ಯಾ-ಉಕ್ರೇನ್ ಯುದ್ಧ, ತೈಲ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಯುರೋಪ್ನಲ್ಲಿ ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಅಕ್ಟೋಬರ್ನಲ್ಲಿ ಶೇಕಡಾ 10.7ರ ಹಣದುಬ್ಬರ ವರದಿಯಾಗಿದೆ ಎಂದು ಯುರೋಪ್ ಒಕ್ಕೂಟದ ಸಾಂಖ್ಯಿಕ ಏಜೆನ್ಸಿ ತಿಳಿಸಿದೆ. ಸೆಪ್ಟೆಂಬರ್ನಲ್ಲಿ ಹಣದುಬ್ಬರ ಶೇಕಡಾ 9.9ರಷ್ಟಿತ್ತು ಎಂದು ಏಜೆನ್ಸಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ