World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
ಉಳಿತಾಯದ ಮಹತ್ವ ಸಾರಲು ಆರಂಭಿಸಿರುವ ವಿಶ್ವ ಉಳಿತಾಯ ದಿನ ಯಾವಾಗ ಆರಂಭವಾಯಿತು? ಈ ವರ್ಷದ ಧ್ಯೇಯವೇನು? ಇಂದಿಗೂ ಜಗತ್ತಿನಾದ್ಯಂತ ಬ್ಯಾಂಕ್ ಖಾತೆ ಹೊಂದಿರದವರು ಎಷ್ಟು ಜನ ಇದ್ದಾರೆ? ಇಲ್ಲಿದೆ ವಿವರ.
ಪ್ರತಿ ವರ್ಷ ಅಕ್ಟೋಬರ್ 30ರಂದು ವಿಶ್ವ ಉಳಿತಾಯ ದಿನ (World Savings Day) ಆಚರಿಸಲಾಗುತ್ತಿದೆ. ಉಳಿತಾಯದ ಮಹತ್ವವನ್ನು ಸಾರುವ ಸಲುವಾಗಿ ಈ ದಿನ ಆಚರಿಸಲಾಗುತ್ತಿದೆ. ವಿಶ್ವ ಮಿತವ್ಯಯ ದಿನ (World Thrift Day) ಎಂಬುದಾಗಿಯೂ ಈ ದಿನವನ್ನು ಪರಿಗಣಿಸಲಾಗುತ್ತಿದೆ. ಜನರು ತಮ್ಮ ಆದಾಯದ ಒಂದು ಭಾಗವನ್ನು ಬ್ಯಾಂಕ್ಗಳಲ್ಲಿ ಉಳಿತಾಯ ಮಾಡುವಂತೆ ಮತ್ತು ಅದರಿಂದ ಅವರಿಗೆ ಮುಂದಿನ ದಿನಗಳಲ್ಲಿ ದೊರೆಯಬಹುದಾದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನ ಬಹಳ ಮುಖ್ಯದ್ದಾಗಿದೆ. ಯುರೋಪ್ನಲ್ಲಿ ಮೊದಲು ಈ ದಿನಾಚರಣೆ ಆರಂಭವಾಗಿದ್ದರೂ ಪ್ರಸ್ತುತ ಅಭಿವೃದ್ಧಿಶೀಲ ದೇಶಗಳಲ್ಲಿ ಸಹ ಆಚರಿಸಲಾಗುತ್ತದೆ.
ಉಳಿತಾಯ ದಿನ ಇತಿಹಾಸ
ವಿಶ್ವ ಉಳಿತಾಯ ದಿನ 1924ರಲ್ಲಿ ಮೊದಲ ಬಾರಿಗೆ ಆರಂಭವಾಯಿತು. ವಿಶ್ವ ಉಳಿತಾಯ ಸಮುದಾಯದ (World Society of Savings) ಮೊದಲ ಅಂತಾರಾಷ್ಟ್ರೀಯ ಸೇವಿಂಗ್ಸ್ ಬ್ಯಾಂಕ್ ಕಾಂಗ್ರೆಸ್ನಲ್ಲಿ ಜನರನ್ನು ಬ್ಯಾಂಕ್ಗಳಲ್ಲಿ ಉಳಿತಾಯ ಮಾಡುವಂತೆ ಪ್ರೇರೇಪಿಸಲಾಯಿತು. ಇನ್ನು ಕೆಲವು ದೇಶಗಳಲ್ಲಿ ಉಳಿತಾಯಕ್ಕೆ ಸಂಬಂಧಿಸಿದಂತೆ ಅದಕ್ಕೂ ಮೊದಲೇ ಕೆಲವು ರಾಷ್ಟ್ರೀಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಟಲಿಯ ಪ್ರಾಧ್ಯಾಪಕ ಫಿಲಿಪ್ಪೊ ರೇವಿಜಾ ಎಂಬವರು ಉಳಿತಾಯದ ಮಹತ್ವವನ್ನು ಸಾರ್ವತ್ರಿಕವಾಗಿ ಸಾರುವ ಕಾರ್ಯ ಕೈಗೊಂಡಿದ್ದರು.
ಇದನ್ನೂ ಓದಿ: Mutual Funds: ಎಫ್ಡಿಗಿಂತ ಮ್ಯೂಚುವಲ್ ಫಂಡ್ ಉತ್ತಮ ಎನ್ನುವ ಭಾರತೀಯರು: ಕಾರಣ ಇಲ್ಲಿದೆ ನೋಡಿ
ಉಳಿತಾಯದ ಮಹತ್ವ
ಪ್ರಪಂಚದಾದ್ಯಂತ ಸುಮಾರು 1.4 ಶತಕೋಟಿ ಜನರು ಇನ್ನೂ ಬ್ಯಾಂಕಿಂಗ್ ಸೌಲಭ್ಯ ಹೊಂದಿಲ್ಲ ಮತ್ತು ತಮ್ಮ ಹಣವನ್ನು ನಗದು ಆಗಿ ಇಟ್ಟುಕೊಳ್ಳಬೇಕಾದ ಅಥವಾ ಇತರ ವಿಧಾನಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಈ ಪೈಕಿ ಅರ್ಧದಷ್ಟು ಮಂದಿ ಬಾಂಗ್ಲಾದೇಶ, ಭಾರತ, ಈಜಿಪ್ಟ್, ನೈಜೀರಿಯಾ ಮತ್ತಿತರ ದೇಶಗಳಲ್ಲಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಖಾತೆಗಳಿಲ್ಲದ ಕಾರಣ ಈ ವ್ಯಕ್ತಿಗಳಿಗೆ ಅನೇಕ ಹಣಕಾಸು ಸೇವೆಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಉಳಿತಾಯ ಖಾತೆ ಮೇಲಿನ ಬಡ್ಡಿಯಂಥ ಸವಲತ್ತುಗಳು ಅವರಿಗೆ ದೊರೆಯುತ್ತಿಲ್ಲ.
ಈ ವರ್ಷದ ಧ್ಯೇಯವೇನು?
ಪ್ರತಿ ವರ್ಷವೂ ಒಂದು ನಿರ್ದಿಷ್ಟ ಧ್ಯೇಯದೊಂದಿಗೆ ವಿಶ್ವ ಉಳಿತಾಯ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಚಿಲ್ಲರೆ ಬ್ಯಾಂಕಿಂಗ್ ಸಂಸ್ಥೆ ಸಂಘಟನೆಗಳು ನಿರ್ದಿಷ್ಟ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. 64 ದೇಶಗಳು ಜತೆಯಾಗಿ ಕಾರ್ಯಕ್ರಮ ಆಚರಿಸುತ್ತವೆ. ‘ಉಳಿತಾಯವು ಎಲ್ಲಾ ಬದಲಾವಣೆಗಳನ್ನೂ ಮಾಡಬಹುದು’ ಎಂಬುದು ಈ ವರ್ಷದ ಧ್ಯೇಯವಾಗಿದೆ. ಇದು ತುರ್ತು ಪರಿಸ್ಥಿತಿಗಳಲ್ಲಿ ಉಳಿತಾಯದ ಮೊತ್ತವು ಹೇಗೆ ನೆರವಿಗೆ ಬರಬಹುದು ಎಂಬುದರ ಕುರಿತು ಅರಿವು ಮೂಡಿಸಲಿದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ಕೆಲವು ದೇಶಗಳ ನಡುವಣ ಸಶಸ್ತ್ರ ಸಂಘರ್ಷದಿಂದಾಗಿ ಜಗತ್ತಿನ ವಿವಿಧೆಡೆಗಳಲ್ಲಿ ಜನ ಸಂಕಷ್ಟಕ್ಕೀಡಾದ ಬಳಿಕ ಈ ಧ್ಯೇಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
(ಮಾಹಿತಿ – ವಿವಿಧ ಮೂಲಗಳಿಂದ)
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ