ಅಕಾಲಿಕ ಮಳೆಯಿಂದ ಧಾನ್ಯ, ತರಕಾರಿ ಸೇರಿ ಆಹಾರೋತ್ಪನ್ನ ಬೆಲೆ ಏರಿಕೆ; ಎಸ್ಬಿಐ ಸಂಶೋಧನಾ ವರದಿ
ಅಕಾಲಿಕ ಮಳೆಯ ಪರಿಣಾಮವಾಗಿ ಧಾನ್ಯ, ತರಕಾರಿ, ಹಾಲು, ಕಾಳುಗಳು, ಖಾದ್ಯ ತೈಲಗಳ ದರ ಏರಿಕೆಯಾಗಲಿದೆ ಎಂದು ಎಸ್ಬಿಐ ಸಂಶೋಧನಾ ವರದಿ ಮುನ್ಸೂಚನೆ ನೀಡಿದೆ.
ನವದೆಹಲಿ: ದೇಶದ ಹಲವೆಡೆಗಳಲ್ಲಿ ಅಕಾಲಿಕವಾಗಿ ಮಳೆಯಾಗಿರುವುದು (Unseasonal rains) ಆಹಾರ ಹಣದುಬ್ಬರದ (food inflation) ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಸ್ಬಿಐ (SBI) ಸಂಶೋಧನೆಯು ‘ಇಕೋವ್ರಾಪ್’ ವರದಿಯಲ್ಲಿ ತಿಳಿಸಿದೆ. ಅಕಾಲಿಕ ಮಳೆಯು ಮುಂಗಾರು ಅವಧಿಯ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಸಾಮಾನ್ಯವಾಗಿ ಜೂನ್ ಹಾಗೂ ಜುಲೈ ಅವಧಿಯಲ್ಲಿ ಮುಂಗಾರು ಅವಧಿಯ ಬಿತ್ತನೆ ನಡೆಯುತ್ತದೆ. ಅಕ್ಟೋಬರ್ – ನವೆಂಬರ್ ಅವಧಿಯಲ್ಲಿ ಕೊಯ್ಲು ಪ್ರಕ್ರಿಯೆ ನಡೆಯುತ್ತದೆ.
‘ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಅಕಾಲಿಕ ಮಳೆ ಪ್ರಮಾಣ ಶೇಕಡಾ 400ರಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ ಭಾರತದಲ್ಲಿ ಅಕ್ಟೋಬರ್ ವರೆಗೆ ವಾಡಿಕೆಗಿಂತ ಶೇಕಡಾ 54ರಷ್ಟು ಹೆಚ್ಚು ಮಳೆಯಾಗಿದೆ’ ಎಂದು ವರದಿ ತಿಳಿಸಿದೆ.
ಧಾನ್ಯ, ತರಕಾರಿ ಬೆಲೆ ಏರಿಕೆ ಆತಂಕ
ಧಾನ್ಯ, ತರಕಾರಿ, ಹಾಲು, ಕಾಳುಗಳು, ಖಾದ್ಯ ತೈಲಗಳ ದರ ಏರಿಕೆಯಾಗಲಿದೆ. ಕಳೆದ ತ್ರೈಮಾಸಿಕ ಅವಧಿಯಿಂದ ಹೆಚ್ಚುತ್ತಿರುವ ಗ್ರಾಹಕ ದರ ಸೂಚ್ಯಂಕ (Consumer Price Index), ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಏರಿಕೆ ಕಾಣಲಿದೆ ಎಂದು ವರದಿ ತಿಳಿಸಿದೆ.
‘2019ರಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇಕಡಾ 44ರಷ್ಟು ಹೆಚ್ಚು ಮಳೆಯಾಗಿತ್ತು. ಮೂರು ತಿಂಗಳ ಸರಾಸರಿ ಗ್ರಾಹಕ ದರ ಸೂಚ್ಯಂಕ ಶೇಕಡಾ 10.9ರಷ್ಟಿತ್ತು. ಅದಕ್ಕೂ ಹಿಂದಿನ ಮೂರು ತಿಂಗಳ ಗ್ರಾಹಕ ದರ ಸೂಚ್ಯಂಕ ಶೇಕಡಾ 4.9ರಷ್ಟಿತ್ತು. ಇದು, ಅಕಾಲಿಕ ಮಳೆಯಿಂದಾಗಿ ಮುಂದಿನ ತಿಂಗಳುಗಳಲ್ಲಿ ಆಹಾರ ಹಣದುಬ್ಬರ ಏರಿಕೆಯಾಗಲಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ವರದಿ ಹೇಳಿದೆ.
ಇದನ್ನೂ ಓದಿ: RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್ಬಿಐ
ದೇಶದ ಚಿಲ್ಲರೆ ಹಣದುಬ್ಬರ ಸೆಪ್ಟೆಂಬರ್ ವೇಳೆಗೆ ಶೇಕಡಾ 7.41ಕ್ಕೆ ತಲುಪಿದೆ. ಅದಕ್ಕೂ ಹಿಂದಿನ ತಿಂಗಳು ಶೇಕಡಾ 7ರಷ್ಟಿತ್ತು. ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಆರ್ಬಿಐ ವಿಫಲವಾಗಿದೆ. ಇದಕ್ಕಾಗಿ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಕಾರಣ ನೀಡಬೇಕಿದೆ. ಸರ್ಕಾರಕ್ಕೆ ಉತ್ತರ ನೀಡಲು ವರದಿ ಸಿದ್ಧಪಡಿಸುವುದಕ್ಕಾಗಿ ನವೆಂಬರ್ 3ರಂದು ಹಣಕಾಸು ನೀತಿ ಸಮಿತಿಯ ವಿಶೇಷ ಸಭೆಯನ್ನೂ ಆರ್ಬಿಐ ಕರೆದಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ ‘45 ಝಡ್ಎನ್’ ಪ್ರಕಾರ, ಸತತ ಮೂರು ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ವಿಫಲವಾದರೆ ಆರ್ಬಿಐ ಸರ್ಕಾರಕ್ಕೆ ಕಾರಣ ನೀಡಬೇಕಾಗುತ್ತದೆ. ಜತೆಗೆ ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದನ್ನೂ ವಿವರವಾಗಿ ತಿಳಿಸಬೇಕಾಗುತ್ತದೆ. ಹೀಗಾಗಿ ಆರ್ಬಿಐ ಹಣಕಾಸು ನೀತಿ ಸಮಿತಿ ನವೆಂಬರ್ 3ಕ್ಕೆ ಸಭೆ ಸೇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ