ಮನೆಯಲ್ಲಿ ಹೆಚ್ಚು ಚಿನ್ನ ಇಟ್ಟುಕೊಂಡಿದ್ದೀರಾ? ತೆರಿಗೆ, ನಿಯಮಗಳ ಬಗ್ಗೆ ಈ ಮಾಹಿತಿ ತಿಳಿದಿರಲಿ
ವ್ಯಕ್ತಿಯೊಬ್ಬರು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು, ಚಿನ್ನಕ್ಕೆ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ? ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿ ಏನೇನು ನಿಯಮಗಳಿವೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಬೆಲೆಬಾಳುವ ಲೋಹವಾಗಿರುವ ಚಿನ್ನದ ಬೆಲೆ (Gold Price) ಕಾಲಕ್ಕನುಗುಣವಾಗಿ ಏರಿಕೆಯಾಗುತ್ತಲೇ ಇರುತ್ತದೆ. ಹಬ್ಬಗಳ ಅವಧಿಯಲ್ಲಿ ಹೆಚ್ಚಿನ ಜನ ಚಿನ್ನ, ಚಿನ್ನಾಭರಣ (Gold Jewellery), ಚಿನ್ನದ ಕಾಯಿನ್ಗಳನ್ನು ಖರೀದಿಸಿ ಮನೆಯಲ್ಲಿ ಇಡುತ್ತಾರೆ. ಖರೀದಿಸಿರುವ ಚಿನ್ನವನ್ನು ಮನೆಯಲ್ಲಿ ಎಷ್ಟು ಜೋಪಾನವಾಗಿ ಇಡುತ್ತೇವೆಯೋ ಸರ್ಕಾರದ ನಿಯಮಗಳನ್ನು ತಿಳಿದಿರಬೇಕಾದದ್ದೂ ಅಷ್ಟೇ ಮುಖ್ಯ. ವ್ಯಕ್ತಿಯೊಬ್ಬರು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು, ಚಿನ್ನಕ್ಕೆ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ? ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿ ಏನೇನು ನಿಯಮಗಳಿವೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಸಿಬಿಡಿಟಿ ಏನು ಹೇಳುತ್ತದೆ?
ಬಹಿರಂಗಪಡಿಸಿದ ಆದಾಯದಿಂದ ಖರೀದಿಸಿರುವ ಅಥವಾ ವಿನಾಯಿತಿ ಹೊಂದಿರುವ ಕೃಷಿ ಆದಾಯ, ಮನೆ ಉಳಿತಾಯದಂಥ ಆದಾಯದಿಂದ ಖರೀದಿಸಿರುವ ಚಿನ್ನಕ್ಕೆ ತೆರಿಗೆ ನೀಡಬೇಕಾಗಿಲ್ಲ ಎನ್ನುತ್ತದೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ನಿಯಮ. ಕಾನೂನುಬದ್ಧವಾಗಿ ಆನುವಂಶಿಕವಾಗಿ ಸ್ವೀಕರಿಸಿರುವ ಚಿನ್ನಕ್ಕೂ ತೆರಿಗೆ ಪಾವತಿಸಬೇಕಾಗಿಲ್ಲ.
ಶೋಧ ಕಾರ್ಯ ಮತ್ತು ತಪಾಸಣೆಗಳ ಸಂದರ್ಭದಲ್ಲಿ, ನೆಗಳಲ್ಲಿ ನಿಗದಿಪಡಿಸಿದ ಮಿತಿಯಲ್ಲಿ ಚಿನ್ನ ಅಥವಾ ಚಿನ್ನಾಭರಣ ಇದ್ದರೆ ಅವುಗನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದೂ ನಿಯಮ ಹೇಳುತ್ತದೆ.
ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು?
ನಿಯಮಗಳ ಪ್ರಕಾರ, ವಿವಾಹಿತ ಮಹಿಳೆಯೊಬ್ಬರು 500 ಗ್ರಾಂ ತನಕ ಚಿನ್ನ ಅಥವಾ ಚಿನ್ನಾಭರಣವನ್ನು ಮನೆಯಲ್ಲಿಟ್ಟುಕೊಳ್ಳಬಹುದು. ಅವಿವಾಹಿತ ಸ್ತ್ರೀ 500 ಗ್ರಾಂ ವರೆಗೆ ಚಿನ್ನ ಅಥವಾ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು. ಪುರುಷರು 100 ಗ್ರಾಂ ಚಿನ್ನ ಮನೆಯಲ್ಲಿರಿಸಿಕೊಳ್ಳಬಹುದು. ಇದಲ್ಲದೆ ಕಾನೂನುಬದ್ಧವಾಗಿ, ಅಂದರೆ ಘೋಷಿತ ಆದಾಯದಿಂದ ಖರೀದಿಸಿದ ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳುವುದಕ್ಕೆ ಮಿತಿ ಹೇರಲಾಗಿಲ್ಲ.
ಯಾವಾಗ ತೆರಿಗೆ ಪಾವತಿಸಬೇಕಾಗುತ್ತದೆ?
ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲದಿದ್ದರೂ, ಅದನ್ನು ಮಾರಾಟ ಮಾಡಲು ನಿರ್ಧರಿಸಿದಾಗ ತೆರಿಗೆ ಪಾವತಿಸಬೇಕಾಗುತ್ತದೆ ಎಂಬುದು ತಿಳಿದಿರಲಿ. ಮೂರು ವರ್ಷಗಳ ವರೆಗೆ ಮನೆಯಲ್ಲಿಟ್ಟ ಚಿನ್ನವನ್ನು ಮಾರಾಟ ಮಾಡಲು ಮುಂದಾದರೆ ಅದಕ್ಕೆ ದೀರ್ಘಾವಧಿಯ ಬಂಡವಾಳ ತೆರಿಗೆ (LTCG) ಪಾವತಿಸಬೇಕಾಗುತ್ತದೆ. ಈ ತೆರಿಗೆ ಪ್ರಮಾಣವು ಹೂಡಿಕೆ ಮೊತ್ತಕ್ಕೆ ಅನ್ವಯಿಸಿ ನೀವು ಪಡೆಯುವ ಪ್ರಯೋಜನದ (indexation benefit) ಶೇಕಡಾ 20ರಷ್ಟಾಗಿರುತ್ತದೆ.
ಒಂದು ವೇಳೆ, ಖರೀದಿ ಮಾಡಿದ ಬಳಿಕ ಮೂರು ವರ್ಷದ ಒಳಗೆ ಚಿನ್ನವನ್ನು ಮಾರಾಟ ಮಾಡುವುದಿದ್ದರೆ ಅದರಿಂದ ಪಡೆದ ಆದಾಯವನ್ನು ವೈಯಕ್ತಿಕ ಆದಾಯ ಎಂದು ಪರಿಗಣಿಸಲಾಗುತ್ತಿದೆ. ವೈಯಕ್ತಿಕ ಆದಾಯಕ್ಕೆ ನೀಡಬೇಕಿರುವ ತೆರಿಗೆಯೇ ಇದಕ್ಕೂ ಅನ್ವಯವಾಗುತ್ತದೆ.
ಸವರಿನ್ ಗೋಲ್ಡ್ ಬಾಂಡ್ಗಳನ್ನು ಮಾರಾಟ ಮಾಡುವುದಿದ್ದರೆ, ಇದರ ಮೊತ್ತವನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ಆಯ್ದ ತೆರಿಗೆ ಸ್ಲ್ಯಾಬ್ ಅನ್ವಯ ತೆರಿಗೆ ಪಾವತಿಸಬೇಕಾಗುತ್ತದೆ. ಸವರಿನ್ ಗೋಲ್ಡ್ ಬಾಂಡ್ಗಳನ್ನು ಮೆಚ್ಯೂರಿಟಿ ಅವಧಿ ವರೆಗೆ ಇಟ್ಟುಕೊಂಡರೆ ಅದರ ಲಾಭದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ