$83 ಬಿಲಿಯನ್ ಖರ್ಚು ಮಾಡಿ US ತರಬೇತಿ ನೀಡಿದ್ದ ಆಫ್ಘನ್ ಸೇನೆ ಗುಂಡು ಕೂಡ ಹಾರಿಸದೆ ತಾಲಿಬಾನ್​ಗೆ ಮಣಿದಿದ್ದೇಕೆ?

8300 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿ, ಅಮೆರಿಕವೇ ತರಬೇತಿ ನೀಡಿದ್ದ ಆಫ್ಘನ್ ಭದ್ರತಾ ಪಡೆಗಳು ಕೆಲವು ಕಡೆ ಒಂದು ಗುಂಡು ಕೂಡ ಹಾರಿಸದೆ ತಾಲಿಬಾನ್​ಗೆ ಶರಣಾಗಿವೆ.

$83 ಬಿಲಿಯನ್ ಖರ್ಚು ಮಾಡಿ US ತರಬೇತಿ ನೀಡಿದ್ದ ಆಫ್ಘನ್ ಸೇನೆ ಗುಂಡು ಕೂಡ ಹಾರಿಸದೆ ತಾಲಿಬಾನ್​ಗೆ ಮಣಿದಿದ್ದೇಕೆ?
ಸಾಂದರ್ಭಿಕ ಚಿತ್ರ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಸಂಖ್ಯೆ ಹಾಗೂ ಸರ್ಕಾರದೊಂದಿಗಿದ್ದ ಸೈನಿಕರ ಸಂಖ್ಯೆ ಹೋಲಿಸಿದಲ್ಲಿ ಕಾಗದದ ಮೇಲಿನ ಲೆಕ್ಕಾಚಾರದ ಪ್ರಕಾರ ಇವತ್ತಿನ ಸನ್ನಿವೇಶ ಎಂಬುದು ಕನಸಲ್ಲೂ ಊಹಿಸುವುದಕ್ಕೆ ಅಸಾಧ್ಯ. ಏಕೆಂದರೆ, ಎರಡು ದಶಕಗಳ ಕಾಲ ಆಫ್ಘನ್ ಭದ್ರತಾ ಪಡೆಗಳನ್ನು ತರಬೇತುಗೊಳಿಸಲಾಗಿದೆ. ಅದಕ್ಕಾಗಿ 8300 ಕೋಟಿ ಅಮೆರಿಕನ್ ಡಾಲರ್ ವೆಚ್ಚ ಮಾಡಲಾಗಿದೆ. ಅಂಥದ್ದರಲ್ಲಿ ಆಫ್ಘನ್ ಸೈನ್ಯ ಗೆದ್ದಲು ಹಿಡಿದ ಮರದಂತೆ ಲಟಕ್ಕನೆ ಮುರಿದುಬಿತ್ತು. ಕಲ್ಪನೆ ಕೂಡ ಮಾಡಲು ಸಾಧ್ಯವಾಗದಂತೆ, ಕೆಲವು ಕಡೆ ಒಂದೇ ಒಂದು ಗುಂಡು ಕೂಡ ಹಾರಿಸದೆ ತಾಲಿಬಾನ್​ಗಳು ವಿಜಯ ಪತಾಕೆ ನೆಟ್ಟರು. ಅಂತಿಮವಾಗಿ ಅಮೆರಿಕನ್ನರು ಮಾಡಿದ ಹೂಡಿಕೆಗೆ ಫಲಾನುಭವಿಗಳಾಗಿದ್ದು ತಾಲಿಬಾನ್. ಇಡೀ ಜಗತ್ತು ಸಿಟ್ಟು, ಅಚ್ಚರಿಯಿಂದ ನೋಡುತ್ತಿರುವಂತೆ ತಾಲಿಬಾನ್​ಗಳು ಅಫ್ಘಾನಿಸ್ತಾನದಲ್ಲಿ ಕಸಿದಿದ್ದು ರಾಜಕೀಯ ಅಧಿಕಾರವನ್ನು ಮಾತ್ರವಲ್ಲ. ಅದರ ಜತೆಜತೆಗೆ ಅಮೆರಿಕವು ಪೂರೈಕೆ ಮಾಡಿದ್ದ ಗನ್​ಗಳು, ಶಸ್ತ್ರಾಸ್ತ್ರ, ಹೆಲಿಕಾಪ್ಟರ್​ಗಳು ಇನ್ನೂ ಹಲವು ತಾಲಿಬಾನ್ ತೆಕ್ಕೆಗೆ ಬಿದ್ದವು.

ಜಿಲ್ಲಾ ಕೇಂದ್ರಗಳನ್ನು ಕಾಪಾಡಿಕೊಳ್ಳಲು ವಿಫಲವಾದ ಆಫ್ಘನ್ ಭದ್ರತಾ ಪಡೆಗಳಿಂದ ತಾಲಿಬಾನ್​ಗಳು ಆಧುನಿಕ ಮಿಲಿಟರಿ ಸಲಕರಣೆಗಳನ್ನು ಕಸಿದುಕೊಂಡಿದ್ದಾರೆ. ಅದರಲ್ಲಿ ಕಂಬ್ಯಾಟ್ ಏರ್​ಕ್ರಾಫ್ಟ್​(ಯುದ್ಧ ವಿಮಾನ)ಗಳೂ ಇವೆ. ಪ್ರಾಂತ್ಯಗಳ ರಾಜಧಾನಿಗಳನ್ನು ಮತ್ತು ಸೇನಾ ನೆಲೆಗಳನ್ನು ಮಿಂಚಿನ ವೇಗದಲ್ಲಿ ಕಬ್ಜಾ ಮಾಡುತ್ತಾ ಬಂದ ತಾಲಿಬಾನ್​ಗಳಿಗೆ ದೊರೆತ ಅತಿದೊಡ್ಡ ಬಹುಮಾನ ಕಾಬೂಲ್. ವೀಕೆಂಡ್ ಪಾರ್ಟಿ ಮಾಡುವ ಮನಸ್ಥಿತಿಯಂತೆ ಭಾನುವಾರ ಕಾಬೂಲ್​ನಲ್ಲಿ ತಾಲಿಬಾನ್​ಗಳು ಕಂಡುಬಂದರು. ತಾಲಿಬಾನ್​ಗಳು ದಿಢೀರ್ ತೆಕ್ಕೆಗೆ ಹಾಕಿಕೊಂಡ ಅಮೆರಿಕ ಪೂರೈಸಿದ್ದ ಶಸ್ತ್ರಾಸ್ತ್ರಗಳ ಪ್ರಮಾಣ ಅಪಾರವಾದದ್ದು ಎಂದು ಯು.ಎಸ್. ರಕ್ಷಣಾಧಿಕಾರಿಗಳು ಸೋಮವಾರ ಖಾತ್ರಿಪಡಿಸಿದ್ದಾರೆ.

ಆಫ್ಘನ್ ಸೈನ್ಯವನ್ನು ತಪ್ಪಾಗಿ ಗ್ರಹಿಸಿದೆವು ಅನ್ನೋದನ್ನ ಈಗ ಅಮೆರಿಕ ಅಧಿಕಾರಿಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅಮೆರಿಕ ಸೈನ್ಯ ಹಾಗೂ ಗುಪ್ತಚರ ಸಂಸ್ಥೆ ಎರಡೂ ವಿಫಲವಾಗಿವೆ. ಏಕೆಂದರೆ, ಕೆಲವು ಪ್ರಕರಣಗಳಲ್ಲಿ ಆಫ್ಘನ್ ಸರ್ಕಾರದ ಸೇನೆ ಹೋರಾಟವನ್ನೇ ಮಾಡದೆ ತಮ್ಮ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನ್​ಗೆ ಒಪ್ಪಿಸಿ, ಮಂಡಿಯೂರಿದೆ. ಸುಸ್ಥಿರವಾದ ಆಫ್ಞನ್ ಸೈನ್ಯ ಹಾಗೂ ಪೊಲೀಸ್ ಪಡೆಯನ್ನು ರೂಪಿಸುವಲ್ಲಿ ಅಮೆರಿಕ ವಿಫಲವಾಗಿದೆ ಅನ್ನೋದು ಅಂಗೈ ಹುಣ್ಣಿನಷ್ಟೇ ಸತ್ಯ. ಈಗಿನ ಈ ಕುಸಿತದ ಕಾರಣವನ್ನು ಅದೆಷ್ಟು ವರ್ಷಗಳ ಕಾಲ ಸೇನಾ ವಿಶ್ಲೇಷಕರು ಅಭ್ಯಸಿಸುತ್ತಾರೋ ನೋಡಬೇಕಿದೆ. ಪ್ರಾಥಮಿಕ ಆಯಾಮ ಅಂತ ನೋಡುವುದಾದರೆ, ಇರಾಕ್​ನಲ್ಲಿ ಆಗಿದ್ದೇ ಇಲ್ಲೂ ಆಗಿದೆ. ಭದ್ರತಾ ಪಡೆಗಳ ಕೈಲಿ ಪ್ರಬಲವಾದ ಶಸ್ತ್ರಾಸ್ತ್ರಗಳಿದ್ದವು. ಅದರ ಹೊರತಾಗಿಯೂ ಒಳಗಿಂದ ಟೊಳ್ಳಾಗಿದ್ದವರಲ್ಲಿ ಪ್ರತಿಹೋರಾಟದ ಮನಸ್ಥಿತಿಯೇ ಸತ್ತುಹೋಗಿತ್ತು. ಅಫ್ಘಾನಿಸ್ತಾನದಲ್ಲೂ ಅದೇ ಆಗಿದೆ.

american-president-joe-biden

ಅಮೆರಿಕ ಅಧ್ಯಕ್ಷ ಜೋ ಬೈಡೆನ್ (ಸಂಗ್ರಹ ಚಿತ್ರ)

ಶಸ್ತ್ರಾಸ್ತ್ರ ಒದಗಿಸಬಹುದು ವಿನಾ ನೈತಿಕ ಬಲವನ್ನಲ್ಲ
“ಹಣದಿಂದ ಇಚ್ಛಾಶಕ್ತಿಯನ್ನು ಖರೀದಿಸಲು ಆಗಲ್ಲ. ನಾಯಕತ್ವದ ಖರೀದಿ ಸಾಧ್ಯವಿಲ್ಲ,” ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮುಖ್ಯ ವಕ್ತಾರರಾದ ಜಾನ್ ಕಿರ್ಬಿ ಸೋಮವಾರ ಹೇಳಿದ ಮಾತಿನಲ್ಲಿ ಖಂಡಿತಾ ಅರ್ಥವಿದೆ. ಜಾರ್ಜ್ ಡಬ್ಲ್ಯು ಬುಷ್ ಹಾಗೂ ಬರಾಕ್ ಒಬಾಮ ಆಡಳಿತ ಅವಧಿಯಲ್ಲಿ ಆಫ್ಘನ್ ಯುದ್ಧದ ರಣತಂತ್ರ ಹೆಣೆಯುವುದರಲ್ಲಿ ನೇರವಾಗಿ ಭಾಗಿಯಾಗಿದ್ದ, ನಿವೃತ್ತ ಸೇನಾ ಲೆಫ್ಟಿನೆಂಟ್ ಜನರಲ್ ಡಗ್ ಲ್ಯುಟ್ ಹೇಳುವಂತೆ, ಆಫ್ಘನ್ನರು ಕಣ್ಣಿಗೆ ಕಾಣುವಂಥ ಸಂಪನ್ಮೂಲವನ್ನು ಪಡೆದರು, ಆದರೆ ಅದಕ್ಕೂ ಮುಖ್ಯವಾದ ಕಣ್ಣಿಗೆ ಕಾಣದಂಥದ್ದರ ಕೊರತೆ ಅವರಲ್ಲಿತ್ತು ಎನ್ನುತ್ತಾರೆ. “ಯುದ್ಧದ ಮೂಲ ಸಿದ್ಧಾಂತ ನಿಂತಿರುವುದು ವಾಸ್ತವ ಸಂಗತಿಗಳನ್ನೂ ಮೆಟ್ಟಿ ನಿಲ್ಲುವಂಥ ನೈತಿಕ ಸಂಗತಿಗಳಲ್ಲಿ,” ಎನ್ನುತ್ತಾರೆ. “ನೈತಿಕ ಬಲ, ಶಿಸ್ತು, ನಾಯಕತ್ವ, ಒಗ್ಗಟ್ಟು ಇವು ಎಷ್ಟು ದೊಡ್ಡ ಸೇನೆ ಹಾಗೂ ಎಷ್ಟು ಸಲಕರಣೆಗಳಿವೆ ಎಂಬುದಕ್ಕಿಂತ ಮುಖ್ಯವಾಗುತ್ತದೆ. ಅಫ್ಘಾನಿಸ್ತಾನಕ್ಕೆ ಹೊರಗಿನವರಾಗಿ ನಾವು ವಸ್ತುಗಳನ್ನು ಒದಗಿಸಬಹುದು, ಆದರೆ ಕಣ್ಣಿಗೆ ಕಾಣದಂಥ ನೈತಿಕ ಬಲದ ಸಂಗತಿಯನ್ನು ಒದಗಿಸುವುದಕ್ಕೆ ಸಾಧ್ಯವಿರುವುದು ಆಫ್ಘನ್ನರಿಗೆ ಮಾತ್ರ,” ಎಂದರು.

ಈ ಮೇಲಿನ ಉದಾಹರಣೆಗೆ ವಿರುದ್ಧವಾಗಿ ಅಫ್ಘನ್ ತಾಲಿಬಾನ್ ನುಸುಳುಕೋರರ ಸಂಖ್ಯೆ ಚಿಕ್ಕದಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಲ್ಲ. ಇನ್ನು ವಾಯುಸೇನೆ ಮಾತೇ ಇಲ್ಲ. ಇಷ್ಟೆಲ್ಲ ಆದರೂ ತಾಲಿಬಾನ್​ಗಳ ಕೈ ಮೇಲಾಯಿತು. ಅಮೆರಿಕ ಗುಪ್ತಚರ ಸಂಸ್ಥೆಯು ತಾಲಿಬಾನ್​ ಸಾಮರ್ಥ್ಯವನ್ನು ಅಂದಾಜು ಮಾಡುವಲ್ಲಿ ಎಡವಿತು. ನಾವು ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತೇವೆ ಎಂದು ಕಳೆದ ಏಪ್ರಿಲ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದರಲ್ಲಾ, ತಾಲಿಬಾನ್​ಗಳು ಇಂಥ ದೊಡ್ಡ ಗೆಲುವನ್ನು ಸಾಧಿಸಬಹುದು ಎಂಬ ಸಣ್ಣ ಸುಳಿವು ಕೂಡ ಅಮೆರಿಕಾದ ಗುಪ್ತಚರ ಸಂಸ್ಥೆ ಕಂಡಂತೆ ಇಲ್ಲ. ಮತ್ತೊಬ್ಬ ಸೇನಾ ವಿಶ್ಲೇಷಕರು ಹೇಳುವಂತೆ, ಕಳೆದ ಏಪ್ರಿಲ್​ನಲ್ಲಿ ಬೈಡನ್ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಘೋಷಣೆ ಮಾಡಿದಾಗಲೇ ಆಫ್ಘನ್ ಸೇನೆ ಸೋಲುವುದಕ್ಕೆ ಆರಂಭಿಸಿತ್ತು.

Trump- Obama

ಎಡ ಭಾಗದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಬಲ ಭಾಗದಲ್ಲಿ ಬರಾಕ್​ ಒಬಾಮ (ಇಬ್ಬರೂ ಅಮೆರಿಕದ ಮಾಜಿ ಆಧ್ಯಕ್ಷರು)

ಆಫ್ಘನ್ ಯುದ್ಧಕಾಗಿ ಅಮೆರಿಕ ಖರ್ಚು ಮಾಡಿದ್ದಿಷ್ಟು
ಆಫ್ಘನ್ ಸೇನೆಯನ್ನು ಕಟ್ಟಿದ್ದು ನೇರವಾಗಿ ಅಮೆರಿಕ್. ಆಫ್ಘನ್ ತುಕಡಿಗಳಿಗೆ ಪೆಂಟಗನ್​ನಿಂದ ಪಗಾರ ಬರುತ್ತಿತ್ತು. ಇನ್ನು ಇಂಧನ ಭರ್ತಿ ಮಾಡುವುದಕ್ಕೆ ಅಂತಲೂ ಅಮೆರಿಕದಿಂದ ಬರುತ್ತಿದ್ದ ಹಣವನ್ನು ಭ್ರಷ್ಟ ಅಧಿಕಾರಿಗಳು ನುಂಗಿಹಾಕಿದರು. ಇನ್ನು ಸರ್ಕಾರದ ಹಂತದಲ್ಲಿ ಸೈನಿಕರನ್ನೇ ನೇಮಕ ಮಾಡಿಕೊಳ್ಳದೆ, ಅವರ ಸಂಬಳದ ಲೆಕ್ಕ ತೋರಿಸಿ ಡಾಲರ್​ಗಳನ್ನು ಖರ್ಚು ಮಾಡದೆ ಉಳಿಸಿಕೊಳ್ಳಲಾಯಿತು. ಅಮೆರಿಕವು ಅಫ್ಘಾನಿಸ್ತಾನವನ್ನು ಕಟ್ಟಲು ಖರ್ಚು ಮಾಡಿದ್ದು ಅಂದಾಜು 14,500 ಕೋಟಿ ಡಾಲರ್ (ಬ್ಲೂಮ್​ಬರ್ಗ್​ ಬಿಲಿಯನೇರ್​ ರಿಯಲ್ ಟೈಮ್ ಸೂಚ್ಯಂಕದ ಪ್ರಕಾರ ಇವತ್ತಿಗೆ ವಿಶ್ವದ ಐದನೇ ಸಿರಿವಂತ ಬಿಲ್​ ಗೇಟ್ಸ್ ಬಳಿ ಇರುವ ಆಸ್ತಿ 15000 ಕೋಟಿ ಡಾಲರ್). ಇದನ್ನು ಹೊರತುಪಡಿಸಿ ಅಮೆರಿಕವು 2001ರ ನಂತರ ಯುದ್ಧಕ್ಕಾಗಿ ಮಾಡಿರುವ ವೆಚ್ಚ 83,700 ಕೋಟಿ ಅಮೆರಿಕನ್ ಡಾಲರ್.

george-w-bush

ಜಾರ್ಜ್ ಡಬ್ಲ್ಯು ಬುಷ್

ಕಳೆದ 20 ವರ್ಷದಲ್ಲಿ ಆಫ್ಘನ್ ಸೈನ್ಯದ ಮೇಲೆ ಅಮೆರಿಕ ಹೂಡಿಕೆ ಮಾಡಿ 8300 ಕೋಟಿ ಅಮೆರಿಕನ್ ಡಾಲರ್​ ಅಂದರೆ, ಅದಯ ಕಳೆದ ವರ್ಷ ಅಮೆರಿಕದ ನೌಕಾ ಸೇನೆಗೆ ಬಜೆಟ್​ನಲ್ಲಿ ಮೀಸಲಿಟ್ಟ ನಿಧಿಯ ಎರಡು ಪಟ್ಟು ಮೊತ್ತವಾಗುತ್ತದೆ. ಇನ್ನು ಕಳೆದ ವರ್ಷ 4 ಕೋಟಿ ಅಮೆರಿಕನ್ನರಿಗೆ ಮೀಸಲಿಟ್ಟ ಆಹಾರ ಸ್ಟ್ಯಾಂಪ್ ನೆರವಿಗಿಂತ ಸ್ವಲ್ಪ ಹೆಚ್ಚಾಗುತ್ತದೆ. ಪತ್ರಕರ್ತ ಕ್ರೆಗ್ ವೈಟ್​ಲಾಕ್ ತಮ್ಮ ಪುಸ್ತಕ “ಅಫ್ಘಾನಿಸ್ತಾನ್ ಪೇಪರ್ಸ್​”ನಲ್ಲಿ, ಅಮೆರಿಕದ ತೆರಿಗೆಪಾವತಿದಾರರ ಹಣವು ನಿಜಕ್ಕೂ ಅರ್ಹ ಸೈನ್ಯದ ಮೇಲೆ ಹೂಡಿಕೆ ಆಗುತ್ತಿದೆಯಾ ಎಂಬ ಪ್ರಶ್ನೆ ಎತ್ತಿದ್ದರು. “ಅಮೆರಿಕದ ಯುದ್ಧ ತಂತ್ರವು ಆಫ್ಘನ್ ಸೇನೆಯ ಪ್ರದರ್ಶನದ ಮೇಲೆ ಆಧಾರವಾಗಿದೆ. ಆಫ್ಘನ್ನರು ತಮ್ಮ ಸರ್ಕಾರಕ್ಕಾಗಿ ಪ್ರಾಣ ನೀಡಲು ಸಿದ್ಧರಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಪೆಂಟಗನ್ ಸ್ವಲ್ಪವಾದರೂ ಗಮನ ನೀಡಬಹುದಾ,” ಎಂದು ತಮ್ಮ ಪುಸ್ತಕದಲ್ಲಿ ಕ್ರೆಗ್ ವೈಟ್​ಲಾಕ್ ಬರೆದಿದ್ದರು.

ಇದನ್ನೂ ಓದಿ: Taliban Rule In Afghanistan: ಮೊಬೈಲ್, ಇಂಟರ್​ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ

(83 Billion Spent America Trained Afghan Security Force Collapsed Even Without Fight Taliban Why)

Read Full Article

Click on your DTH Provider to Add TV9 Kannada