Covid Diary : ಕವಲಕ್ಕಿ ಮೇಲ್ ; ‘ಈ ಲೇಡೀಸನ್ನ ನಂಬಬಾರದು ಲವ್ ಅಂತೂ ಮಾಡಲೇಬಾರದು’ 

|

Updated on: Jun 08, 2021 | 1:13 PM

Freedom : ‘ಆದ್ರೆ ತಮಾ ಅದು ಕಾಡುಪ್ರಾಣಿ. ಅದನ್ನ ಕಾಡಿಗೆ ಬಿಡು. ಇತ್ತ ನಾಯಿನೂ ಕಟ್ಟಿ ಹಾಕಿ, ಅತ್ತ ಅದನ್ನೂ ಒಳಗೆ ಕೂಡಿ ಹಾಕಿ ಎರಡು ತಪ್ಪು ಮಾಡ್ತಿದೀ. ಅದರ ಜಾಗದಲ್ಲಿ ನಿನ್ನನ್ನೇ ಇಟ್ಕೊಂಡು ನೋಡ್ಕೊ. ಹೊಟ್ಟೆಗೊಂದು ಸಿಕ್ರೆ ಸಾಕಾ, ಸ್ವಾತಂತ್ರ್ಯ ಬೇಕಲ್ಲ?’ ಎಂದು ಮನವೊಲಿಸಲು ನೋಡಿದೆ.

Covid Diary : ಕವಲಕ್ಕಿ ಮೇಲ್ ; ‘ಈ ಲೇಡೀಸನ್ನ ನಂಬಬಾರದು ಲವ್ ಅಂತೂ ಮಾಡಲೇಬಾರದು’ 
Follow us on

ತಮ್ಮ ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ಭಯಭಕ್ತಿಯಿಂದ ಉದ್ದಾನುದ್ದ ನಮಸ್ಕರಿಸಿ, ಹೂಹಾರ ಹಾಕಿ, ಅವರ ದೊಡ್ಡದೊಡ್ಡ ಹೋರ್ಡಿಂಗ್ ನಿಲ್ಲಿಸುವುದೇ ದೇಶಸೇವೆ ಎಂದುಕೊಂಡ ತರುಣರು ಹೆಚ್ಚಿರುವಾಗ ಇವನೊಬ್ಬ ಹೀಗೆ ಮಾತಾಡುವನಲ್ಲ ಎನಿಸಿ ಕುತೂಹಲವಾಯಿತು. ಎಲ್ಲೋ ತಾಗಿರಬೇಕು ಎಂಬ ನನ್ನ ಊಹೆ ನಿಜವಾಗಿತ್ತು. ಹುಲ್ಲು ಇಲ್ಲ, ಬೆಳೆಸಾಲದ ದುಡ್ಡೂ ಬರಲಿಲ್ಲವೆಂದು ಕರು ಹಾಕಿದ ದನವನ್ನು ಇದೇ ತಾಲೂಕಿನ ಒಂದೂರಿನ ಕೃಷಿಕರಿಗೆ ಮಾರಿದ್ದ. ಅದನ್ನೊಯ್ಯಲು ಯಾವ ಗೂಡ್ಸ್ ಗಾಡಿಯವರೂ ಬರುತ್ತಿಲ್ಲ! ಅವರಿಗೆಲ್ಲ ಗೋರಕ್ಷಕರ ಭಯ. ಕೊನೆಗಂತೂ ತಿಕ್ಕಿತಿಕ್ಕಿ ಒಬ್ಬ ಬಂದ. ಆದರೆ ಡ್ರೈವರು ಭಯ ಪಟ್ಟಂತೆ ಗೋರಕ್ಷಕರು ತಡೆದೇ ಬಿಟ್ಟರು. ಚಕಮಕಿಯ ಮಾತಾಯಿತು. ಮಾಂಸಕ್ಕಾಗಿ ಅಲ್ಲ, ಕರಾವಿಗೆಂದು ದನಕರು ಬೇಕಾದವರಿಗೆ ಮಾರುತ್ತಿರುವುದು ಎಂದು ಹೇಳಿದರೂ ಅವರು ನಂಬುತ್ತಿಲ್ಲ. ಕೊನೆಗೆ ಆಚೆಬದಿಯಿಂದ ದನ ಕೊಂಡ ಭಟ್ಟರೇ ಫೋನ್ ಮಾಡಿ ಹೇಳಿದ ಮೇಲೆ ಬಿಟ್ಟರಂತೆ. ಮತ್ತೊಮ್ಮೆ ತೆಂಗಿನ ಕಾಯಿ ಕೊಯ್ದು, ಅಂಗಡಿಗೆ ಕೊಟ್ಟು, ಸಾಮಾನು ತರುತ್ತಿರುವಾಗ ಪೊಲೀಸರ ಲಾಠಿ ಹೊಡೆತ ತಿಂದಿದ್ದೇನೆ ಎಂದ.

*

ಅವ ಬೆಳಿಗ್ಗೆಯಿಂದ ತುಂಬ ಹೊತ್ತು ಕಾದಿದ್ದ. ಗ್ಲುಕೋಸ್ ಹಾಕಿಕೊಳ್ಳಲೇಬೇಕು ಅಂತ ಮತ್ತಷ್ಟು ಕಾದ. ಅವನ ಪಾಳಿ ಬಂತು. ಪರೀಕ್ಷೆಗೆಂದು ಅವನೆದುರು ಹೋದಾಗ ತನಗೆ ಏನು ಕಾಯಿಲೆ ಅಂತ ಹೇಳಲೇ ತಿಳಿಯುತ್ತಿಲ್ಲ ಎಂದು ಗಲಿಬಿಲಿಗೊಂಡ. ಜ್ವರ ಇರುವವರೂ ತಮಗೆ ಜ್ವರ ಬಂದೇ ಇಲ್ಲ ಎಂದು ಬೆಳಿಗ್ಗೆಯಿಂದ ಹೇಳುವುದನ್ನು ಕೇಳಿ ಕೇಳಿ ಸಾಕಾಗಿದ್ದ ನಾನು, ‘ಜ್ವರ ಬಂದಿತ್ತಾ?’ ಎಂಬ ಮಾಮೂಲಿ ಪ್ರಶ್ನೆಯ ಹೂವನ್ನು ಕೊಟ್ಟೆ.

‘ನಂಗೊತ್ತಿತ್ತು ನೀವು ಕೇಳ್ತೀರಿ ಅಂತ. ಜ್ವರನು ಇಲ್ಲ, ಗಿರನು ಇಲ್ಲ, ನೋಡಿ’

ಮೊಬೈಲು ಮುಂದೆ ಹಿಡಿದ. ಕೋವಿಡ್ ನೆಗೆಟಿವ್ ಎಂಬ ಮೆಸೇಜು. ಅರೆ, ಎಷ್ಟು ಹೇಳಿದರೂ ಜ್ವರ ಬಂದವರು ಮಾಡಿಸದ ಟೆಸ್ಟ್ ಅನ್ನು ಇವ ಮೊದಲೇ ಮಾಡಿಸಿಕೊಂಡಿದ್ದಾನಲ್ಲ ಎಂದು ಅಚ್ಚರಿಯಾಯಿತು. ‘ದೇಶ ಉಳಿಯೋದು ನಿನ್ನಂಥವರಿಂದಲೇ ಮಾರಾಯ, ಭಾರೀ ಜಾಣ ನೀನು’ ಎಂದು ಉಬ್ಬಿಸಿದೆ. ‘ಯಾಕ್ ಟೆಸ್ಟ್ ಮಾಡ್ಸಿದೆ, ಯಾಕೆ ಮಾಡ್ಸಿದೆ ಅಂತ ಮನ್ಲಿ ಎಲ್ಲಾರು ಬೈತೇ ಇದಾರೆ. ನೀವೊಬ್ರೇ ಹೀಂಗೆ ಹೇಳಿದ್ದು’ ಎಂದ. ‘ಅದೆಲ್ಲ ಆಯ್ತು, ಏನಾಯ್ತು ನಿಂಗೆ? ಕಾಯಿಲೆ ಇರೋ ತರ ಕಾಣಲ್ಲವಲ್ಲ’ ಅಂದೆ.

‘ಒಂದ್ ವರ್ಷಲಿದ ನಾ ತುಂಬ ಮೆಡಿಸಿನ್ ಮಾಡ್ದೆ. ರಾಶೀ ದುಡ್ ಖರ್ಚು ಮಾಡ್ದೆ, ಆದ್ರು ಏನೂ ಉಪೇಗಿಲ್ಲ.’
‘ಅಂಥಾದೇನಾಗಿದೆ? ನೋಡಕ್ಕೆ ಆರೋಗ್ಯವಂತನ ಹಂಗೆ ಕಾಣ್ತೀ.’
‘ಅದೆ ಮೇಡಂ, ಏನು ಕಾಯ್ಲೆ ಅಂತ ಯಾರ್ಗೂ ಗೊತ್ತಾಗ್ತ ಇಲ್ಲ. ಏನಿಲ್ಲ ಅಂತಾರೆ. ಆದ್ರೆ ನಂಗೆ ವೀಕ್‌ನೆಸ್, ಎದೆ ಧಕಧಕ ಅಂಬದು ಕಮ್ಮಿಯಿಲ್ಲ. ತೂಕ ಇಳೀತಿದೆ, ಧಾತು ಹೋಗ್ತದೆ. ಕೈಕಾಲು ತರಗೆಡ್ತದೆ.’

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇಪ್ಪತ್ಮೂರರ ಅವ ಎಲ್ಲ ಟೆಸ್ಟ್ ಮಾಡಿಸಿದ್ದ. ಅವನಿಗೆ ಎಂಥದೂ ದೈಹಿಕ ಕಾಯಿಲೆ ಇಲ್ಲ. ವೀರ್ಯನಾಶ ಅವನ ವಯಸ್ಸಿಗೆ ಸಹಜ. ಧಾತು ಹೋಗುವುದು ಎನ್ನುವುದು ಭ್ರಮೆ. ತೆಳ್ಳಗಿರುವುದು ರೋಗಲಕ್ಷಣ ಅಲ್ಲ. ಆದರೆ ಅವೆಲ್ಲ ತನ್ನ ಆರೋಗ್ಯ ಸಮಸ್ಯೆಯೆಂದು ಅವ ಭಾವಿಸಿದ್ದ. ಅವನ ತೃಪ್ತಿಗೆ ಒಂದು ಟಾನಿಕ್ ಕೊಟ್ಟೆ. ಪೇಶೆಂಟ್‌ಗಳು ಮುಗಿದು ಮನೆಗೆ ಹೊರಡುವ ಸಮಯ ಹುಟ್ಟಿಸಿದ ನಿರಾಳಕ್ಕೆ ಲೋಕಾಭಿರಾಮ ಮಾತಿಗಿಳಿದೆ. ಅವ ಐಟಿಐ ಮುಗಿಸಿದ್ದ. ಫ್ರಿಜ್ ಮೆಕ್ಯಾನಿಕ್ ಆಗಲು ಹೋಗಿ ಕೊನೆಗೆ ಎಲ್ಲೂ ಸರಿಯಾದ ಕೆಲಸ ಸಿಗದೇ ಜೆಸಿಬಿ ಡ್ರೈವರನಾಗಿ ರಾಜಧಾನಿಯ ಬಳಿ ಒಂದು ವರ್ಷ ಕ್ವಾರಿಯ ಕೆಲಸ ಮಾಡಿದ್ದ. ಕೊರೋನಾ ಬಂದು ಎಲ್ಲ ಬಂದ್ ಆಗಿ, ಮತ್ತಲ್ಲಿಗೆ ಹೋಗುವುದಿಲ್ಲ ಎಂದುಕೊಂಡು ಊರಿಗೆ ಬಂದಿದ್ದಾನೆ. ಬಂದು ವರ್ಷ ಆಯ್ತು. ಕೆಲಸ ಇಲ್ಲ. ಊಟತಿಂಡಿಗೆ ತೊಂದರೆಯಿಲ್ಲದಿದ್ದರೂ ತನ್ನದೇ ಆದಾಯ ಇಲ್ಲದೆ ಬೇಸರ.

‘ಕೋವಿಡ್ ಕಾಲದಲ್ಲಿ ಏನೇನು ಕಷ್ಟಪಡ್ತ ಇದಾರೆ ಜನ, ನೋಡು. ನಿಂಗೊಂದು ಮನೆ, ಅಪ್ಪ ಅಮ್ಮ, ಊಟತಿಂಡಿನಾದ್ರೂ ಸಿಗುತ್ತೆ. ಅಲ್ವ? ಸ್ವಲ್ಪ ತಾಳಿಕೋ, ಒಂದಷ್ಟ್ ದಿನ ಆದಮೇಲೆ ಎಲ್ಲ ಸರಿ ಹೋಗುತ್ತೆ. ಅಲ್ಲೀ ತಂಕ ಯಾವ್ದಾದ್ರೂ ಪ್ರಾಣಿ ಸಾಕು, ಬೇಜಾರು ಕಮ್ಮಿಯಾಗಬೋದು’ ಎಂದೆ.

ಸಾಕಿದೀನಿ ಅಂದ. ಯಾವುದನ್ನು? ಕೆಂದಳಿಲನ್ನು. ಬೆಟ್ಟಕ್ಕೆ ಸೊಪ್ಪಿಗೆ ಹೋದಾಗ ಹೆಮ್ಮರದ ಕಾಸರಕನ ಮರದ ಪೊಟರೆಯಲ್ಲಿ ಸಣ್ಣ ಮರಿಗಳನ್ನು ನೋಡಿದನಂತೆ. ಅದರಲ್ಲಿ ಒಂದನ್ನು ತಂದುಬಿಟ್ಟಿದ್ದಾನೆ. ನಾಯಿ ಹಿಡಿದೀತು ಎಂದು ಮನೆಯೊಳಗೇ ಇಟ್ಟುಕೊಂಡು ಸಾಕಿದ್ದಾನೆ. ನಾಯಿಯನ್ನು ಹೊರಗೆ ಕಟ್ಟಿದ್ದಾನೆ. ಇವೆರೆಡಲ್ಲದೆ ದನಗಳೂ ಇವೆ. ಪ್ರಾಣಿಗಳ ದೇಖರೇಖೆ ಅವನದೇ ಅಂತೆ. ಪ್ರಾಣಿಗಳೆಂದರೆ ಅವನಿಗೆಷ್ಟು ಇಷ್ಟ ಎಂದರೆ ತನಗೆ ಕೋವಿಡ್ ಬಂದು, ತನ್ನಿಂದ ಪ್ರಾಣಿಗಳಿಗೂ ಬಂದರೆ ಅಂತ ಪದೇಪದೆ ಟೆಸ್ಟ್ ಮಾಡಿಸಿದ್ದಾನಂತೆ. ಇಷ್ಟು ಪ್ರಾಣಿ ಪ್ರೀತಿಯ ಇವ ಭಾವುಕನೂ, ಏಕಾಂತಪ್ರಿಯನೂ, ಅಂತರ್ಮುಖಿಯೂ ಇರಬೇಕು. ಈ ಸೂಕ್ಷ್ಮತೆಯೇ ತೊಂದರೆ ಕೊಡುತ್ತಿದೆ ಅನಿಸಿತು.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಲಾಕ್‌ಡೌನಲ್ಲಿ ನಮ್ದಾರೂ ಬಿಡಿ, ಹ್ಯಾಂಗೋ ನಡೀತದೆ. ಗಂಟಿ ಕತೆ ಏನು? ನಮ್ಮನೇಲಿ ಹತ್ತನ್ನೆರಡು ಗಂಟಿ ಅವೆ. ಲಾಕ್‌ಡೌನ್ ಹೇಳಿ ಹುಲ್ಲಿನ ಗಾಡಿ ಬರ್ಲಿಲ್ಲ. ಒಣ ಹುಲ್ಲಿಲ್ದೆ ಬಾರಿ ಕಷ್ಟ. ಅಲ್ಲಿ ಇಲ್ಲಿ ಕೇಳಿ ನೂರು ಕಟ್ಟು, ಇನ್ನೂರು ಕಟ್ಟು ಹುಲ್ಲು ತಕಬಂದೆ. ಅಷ್ಟೆಲ್ಲ ಯಂತಕ್ಕೂ ಸಾಕಾಗಲ್ಲ. ಒಂದು ಬದಿ ಬೂಸ, ಹಿಂಡಿನೂ ತುಟ್ಟಿ. ಇಡೀ ದಿನ ಅವುಕ್ಕೆ ಹಸಿ ಕೊಯ್ಕಬಂದು ಹೊಟ್ಟೆ ತುಂಬ್ಸುದೇ ನನ್ನ ಕೆಲ್ಸ ಆಗದೆ. ಒಂದ್ ಬೈಕ್ ತಕಳುವ ಅಂದ್ರೆ ನಮಪ್ಪ ಬೆಳೆಸಾಲ ಬರ‍್ಲಿ ಅದು ಇದು ಅಂತ ಇಷ್ಟ್ ದಿನ ಮಾಡ್ದ.’

ಲಾಕ್‌ಡೌನ್ ಬಗೆಗೆ ಅವನಿಗೆ ಅಪಾರ ಸಿಟ್ಟಿತ್ತು. ಓಡಾಡಲಿಕ್ಕೆ ಬಸ್ ಬಿಟ್ಟಿಲ್ಲ, ಟೆಂಪೋ ಇಲ್ಲ. ಸಣ್ಣಸಣ್ಣ ಊರು ಕೇರಿಗಳಲ್ಲೆಲ್ಲ ಕಿರಾಣಿ, ತರಕಾರಿ ಅಂಗಡಿ ಇರಲ್ಲ. ಆರಾಮ ತಪ್ಪಿದ ಜನ ಆಸ್ಪತ್ರೆಗೆ ಹೋಗುವುದು ಹೇಗೆ? ಕಿರಾಣಿ-ತರಕಾರಿ ತರುವುದು ಹೇಗೆ? ಎಲ್ಲರ ಮನೆಯಲ್ಲೂ ಕಾರು, ಬೈಕು ಇರುತ್ತಾ? ಮನೇಲಿರಿ ಮನೇಲಿರಿ ಅಂದರೆ ಎಲ್ಲರ ಮನೆಯಲ್ಲಿ ಹದಿನೈದು ದಿನದ ಸ್ಟಾಕ್ ತರಲಿಕ್ಕೆ ಹಣ ಇರುತ್ತಾ? ಇಡಲಿಕ್ಕೆ ಫ್ರಿಜ್ ಇರುತ್ತಾ? ‘ಬುದ್ದಿಲ್ದ ಜನ ಹೊರಗೆ ಬಂದ್ರು ಓಡಾಡಿದ್ರು ಅಂತ ಸುದ್ದಿ ಬಿಡ್ತಾರೆ. ಯಾಕೆ ಹೊರಗೆ ರ‍್ತಾರೆ ಅಂತ ಅವ್ರಿಗೆ ಅರ್ಥನೇ ಆಗಿಲ್ಲ’ ಎಂದು ಸಿಟ್ಟಿನಿಂದ ಬೈದ.

ತಮ್ಮ ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ಭಯಭಕ್ತಿಯಿಂದ ಉದ್ದಾನುದ್ದ ನಮಸ್ಕರಿಸಿ, ಹೂಹಾರ ಹಾಕಿ, ಅವರ ದೊಡ್ಡದೊಡ್ಡ ಹೋರ್ಡಿಂಗ್ ನಿಲ್ಲಿಸುವುದೇ ದೇಶಸೇವೆ ಎಂದುಕೊಂಡ ತರುಣರು ಹೆಚ್ಚಿರುವಾಗ ಇವನೊಬ್ಬ ಹೀಗೆ ಮಾತಾಡುವನಲ್ಲ ಎನಿಸಿ ಕುತೂಹಲವಾಯಿತು. ಎಲ್ಲೋ ತಾಗಿರಬೇಕು ಎಂಬ ನನ್ನ ಊಹೆ ನಿಜವಾಗಿತ್ತು. ಹುಲ್ಲು ಇಲ್ಲ, ಬೆಳೆಸಾಲದ ದುಡ್ಡೂ ಬರಲಿಲ್ಲವೆಂದು ಕರು ಹಾಕಿದ ದನವನ್ನು ಇದೇ ತಾಲೂಕಿನ ಒಂದೂರಿನ ಕೃಷಿಕರಿಗೆ ಮಾರಿದ್ದ. ಅದನ್ನೊಯ್ಯಲು ಯಾವ ಗೂಡ್ಸ್ ಗಾಡಿಯವರೂ ಬರುತ್ತಿಲ್ಲ! ಅವರಿಗೆಲ್ಲ ಗೋರಕ್ಷಕರ ಭಯ. ಕೊನೆಗಂತೂ ತಿಕ್ಕಿತಿಕ್ಕಿ ಒಬ್ಬ ಬಂದ. ಆದರೆ ಡ್ರೈವರು ಭಯ ಪಟ್ಟಂತೆ ಗೋರಕ್ಷಕರು ತಡೆದೇ ಬಿಟ್ಟರು. ಚಕಮಕಿಯ ಮಾತಾಯಿತು. ಮಾಂಸಕ್ಕಾಗಿ ಅಲ್ಲ, ಕರಾವಿಗೆಂದು ದನಕರು ಬೇಕಾದವರಿಗೆ ಮಾರುತ್ತಿರುವುದು ಎಂದು ಹೇಳಿದರೂ ಅವರು ನಂಬುತ್ತಿಲ್ಲ. ಕೊನೆಗೆ ಆಚೆಬದಿಯಿಂದ ದನ ಕೊಂಡ ಭಟ್ಟರೇ ಫೋನ್ ಮಾಡಿ ಹೇಳಿದ ಮೇಲೆ ಬಿಟ್ಟರಂತೆ. ಮತ್ತೊಮ್ಮೆ ತೆಂಗಿನ ಕಾಯಿ ಕೊಯ್ದು, ಅಂಗಡಿಗೆ ಕೊಟ್ಟು, ಸಾಮಾನು ತರುತ್ತಿರುವಾಗ ಪೊಲೀಸರ ಲಾಠಿ ಹೊಡೆತ ತಿಂದಿದ್ದೇನೆ ಎಂದ.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಲಾಕ್‌ಡೌನ್ ಅಂದ್ರೆ ನಿಂನಿಂ ಕಷ್ಟನಷ್ಟ, ಕಾಯ್ಲೆ ವೈರಸ್ಸಿನ ಜೊತೆಗೆ ನೀವು ಎಲ್ಲೆಲ್ಲಿದೀರೋ ಅಲ್ಲಲ್ಲೇ ಸಾಯ್ರಿ ಅಂದಂಗೆ ಅಲ್ವ?’ ಎಂದ ರೋಷದಿಂದ.

ನಿಜ. ಎಷ್ಟೇ ಪೂರ್ವತಯಾರಿ ಮಾಡಿದೆವೆಂದು ಉಬ್ಬಿದರೂ ಗ್ರಾಮಭಾರತಕ್ಕೆ ಲಾಕ್‌ಡೌನ್ ಅರ್ಥ ಇಷ್ಟೇ.

ಅವನಿಷ್ಟು ಹೇಳುವಾಗ ಸಲೈನ್ ಹಚ್ಚಿ ಮುಗಿಸಿದೆವು. ಉಳಿದ ಪೇಶೆಂಟುಗಳನ್ನು ನೋಡಿ, ತೊಳೆದು, ಬಳಿದು, ದಿರಿಸು ಬದಲಿಸಿ ಮಧ್ಯಾಹ್ನ ಊಟಕ್ಕೆ ಹೋಗಲೆಂದು ಹೊರಬಂದರೆ ಅವ ಇನ್ನೂ ಹೊರಗೆ ನಿಂತಿದ್ದ. ಅರೆ, ಮನೆಗೆ ಹೋಗಲಿಲ್ಲವೆ ಎಂದರೆ ಕೆಂದಳಿಲಿನ ವೀಡಿಯೋ ತೋರಿಸಲೆಂದು ನಿಂತೆ ಎಂದು ಮೊಬೈಲ್ ತಂದ. ಮುಂಗುಸಿಯ ಎರಡರಷ್ಟು ಇರುವ ಕೆಂಬಣ್ಣದ ದಪ್ಪ ಬಾಲದ ಅಳಿಲು. ಇದು ಪಶ್ಚಿಮ ಘಟ್ಟ ಪ್ರದೇಶದ ವಿಶೇಷ. ಅಳಿವಿನಂಚಿನಲ್ಲಿರುವಂಥದು. ಅವನ ಅಕ್ಕನ ಮಗುವಿನ ಜೊತೆಗೆ ಅದು ಸೇಂಗಾ ತಿನ್ನುತ್ತಿರುವ, ದಾಸವಾಳ ಹೂವು ತಿನ್ನುತ್ತಿರುವ ವೀಡಿಯೋ.

‘ಆದ್ರೆ ತಮಾ ಅದು ಕಾಡುಪ್ರಾಣಿ. ಅದನ್ನ ಕಾಡಿಗೆ ಬಿಡು. ಇತ್ತ ನಾಯಿನೂ ಕಟ್ಟಿ ಹಾಕಿ, ಅತ್ತ ಅದನ್ನೂ ಒಳಗೆ ಕೂಡಿ ಹಾಕಿ ಎರಡು ತಪ್ಪು ಮಾಡ್ತಿದೀ. ಅದರ ಜಾಗದಲ್ಲಿ ನಿನ್ನನ್ನೇ ಇಟ್ಕೊಂಡು ನೋಡ್ಕೊ. ಹೊಟ್ಟೆಗೊಂದು ಸಿಕ್ರೆ ಸಾಕಾ, ಸ್ವಾತಂತ್ರ್ಯ ಬೇಕಲ್ಲ?’ ಎಂದು ಮನವೊಲಿಸಲು ನೋಡಿದೆ.

‘ನೀವ್ ಹಿಂಗೇ ಹೇಳ್ತೀರಿ ಅಂತ ನಂಗೆ ಗೊತ್ತಿತ್ತು, ನಂಗೂ ಕಾಡಿಗೆ ಬಿಡುವಾ ಅನ್ಸಿದೆ, ಬಿಡ್ತೆ. ಆದ್ರೆ ಯಾರ್ಗೂ ಹೇಳ್ಬೇಡಿ’ ಎಂದ. ಹೆಣ್ಣೋ ಗಂಡೋ ಎಂದೆ. ಹೆಣ್ಣಂತೆ. ಹಾಗಾದರೆ ಮೊದಲು ಬಿಡು, ಎಷ್ಟು ಗಂಡಳಿಲುಗಳಿಗೆ ಗರ್ಲ್ ಫ್ರೆಂಡ್ ಸಿಗದೆ ಕಾಡಲ್ಲಿ ಬೇಸರವಾಗಿದೆಯೋ ಎಂದೆ. ‘ಇವತ್ತೇ ಹೋಗಿ ಬಿಟ್ ಬರ‍್ತೆ, ಮತ್ ನೀವು ಯಾರಿಗೂ ಹೇಳ್ಬ್ಯಾಡಿ’ ಎಂದು ಮೊಬೈಲು ಕಿಸೆಗಿಳಿಸಿದ. ಫೋನ್ ಹಿಂದಿನ ಕವರಿನಲ್ಲಿ ಹುಡುಗ ಹುಡುಗಿ ಕೈ ಹಿಡಿದಿರುವ ಚಿತ್ರ ಕಾಣಿಸಿತು.

‘ಓಹೋ, ಯಾರೋ ಒಬ್ರ ಕಾಯಿಲೆ ಮೂಲ ಎಲ್ಲಿದೆ ಅಂತ ಗೊತ್ತಾಯ್ತು. ಲವ್ ಮಾಡಿ ಟೆನ್ಶನ್ನಲ್ಲಿದ್ರೆ, ಸಹಾಯ ಬೇಕಾದ್ರೆ ಕೇಳು’ ಅಂದೆ ನಗುತ್ತ.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಥಥ, ಇಲ್ಲಇಲ್ಲ ಮೇಡಂ. ಲೇಡೀಸ್‌ನ ನಂಬಬಾರ್ದು. ಲವ್ ಮಾತ್ರ ಮಾಡಬಾರ್ದು ಅಂತ ಡಿಸೈಡ್ ಮಾಡ್ಬಿಟ್ಟಿದಿನಿ’ ಎಂದು ನಡುಗುವ ದನಿಯಲ್ಲಿ ಹೇಳಿ ಗೆಳೆಯನ ಬೈಕ್ ಹತ್ತಿದ. ಗೆಳೆಯ ಮೀಸೆಯಲ್ಲೇ ನಗುತ್ತಿದ್ದಾನೆ.

‘ನಿಮ್ಮಮ್ಮನೂ ಲೇಡೀಸೇ, ಆ ಅಳಿಲೂ ಲೇಡೀಸೇ, ಲೇಡೀಸ್‌ನ ನಂಬದಿದ್ರೆ ಇನ್ನು ನಂಬಲಿಕ್ಕೇನೂ ಉಳಿಯಲ್ಲ ಕೊನೆಗೆ. ಸಾವಕಾಶ’ ಎಂದೆ.

‘ನಿಮಗ್ಗೊತ್ತಿಲ್ಲ ಮೇಡಂ, ದುಡ್ ಇಲ್ದಿರೋರೆಲ್ಲ ಲವ್ ಮಾಡು ಹಂಗೇ ಇಲ್ಲ. ನಾ ಬರ‍್ತೆ’ ಎಂದ. ಭರ‍್ರನೆ ಓಡಿದ ಬೈಕ್ ಮರೆಯಾಯಿತು.
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 9 ; ‘ಕೊರೊನಾ ಮಗಳು ಭವಿಷ್ಯ ಹೇಳಲು ಕಲಿತಿದ್ದು’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಸತ್ಯಕ್ಕೆ ಬ್ಹಾಳ ಮುಖಗಳಿರ‍್ತವೆ ಎಲ್ವನ್ನೂ ಮುಟ್ಟಿ ನೋಡಬೇಕ, ಇಲ್ದಿದ್ರೆ ಗೊಣಕ್ಕಂತ ಸತ್ತೋಗಿಬಿಡ್ತೀವಿ’

Published On - 12:09 pm, Tue, 8 June 21