ಸುಷ್ಮಾ ತನ್ನ ಕಾಗದಪತ್ರಗಳ ಸಮೇತ ಮನೆ ಬಿಟ್ಟಿದ್ದಳಂತೆ. ರಿಜಿಸ್ಟರ್ ಮದುವೆಯೂ ಆದಳಂತೆ. ಆಗಿನಿಂದ ಗಂಡ ಬಾಗಿಯ ಕುಮ್ಮಕ್ಕಿನಿಂದ ಹೀಗಾದದ್ದು ಎಂದು ಕೆರಳಿ ಹೊಡೆತ ಹೆಚ್ಚು ಮಾಡಿದನಂತೆ. ಇವಳು ಮೂರು ತಿಂಗಳು ಅನ್ನ, ನೀರು ಬಿಟ್ಟು ಮೇಲೇಳದೆ ಅತ್ತತ್ತು, ಮೈಮೇಲೆ ಚೌಡಿ ದೇವರ ಆವಾಹನೆಯಾಯಿತಂತೆ. ಊಟ ಕಂಡರೆ ವಾಂತಿ. ಆಗ ಅವಳನ್ನು ಆಯುರ್ವೇದಿಕ್ ಔಷಧಿ ಕೊಡಿಸಲು ಕರೆದೊಯ್ದರು. ಆ ಡಾಕ್ಟರು ‘ಹೃದಯಶಾಂತಿ’ ಎಂಬ ಮದ್ದು ಕೊಟ್ಟರಂತೆ. ಹೃದಯ ಶಾಂತಿಯೇನೋ ಆಯಿತು. ಆದರೆ ಮದ್ದಿನ ಫೋರ್ಸಿಗೆ ಕಣ್ಣೀರು ಬರುವುದು ನಿಂತುಬಿಟ್ಟಿತು! ಅವಳ ಗಂಡ ಇಡಿಯ ದಿನ ಮಗಳನ್ನು ನೆನೆಸುತ್ತ, ಅಬ್ಬೆಯಾಗಿ ನೀನವಳನ್ನು ಸರಿಯಾಗಿ ತಿದ್ದಲಿಲ್ಲವೆಂದು ಬೈಯುತ್ತ ಬಡಿಯುತ್ತಾನೆ. ಅತ್ತು ಭೋರಾಡಿದರಷ್ಟೇ ಅವ ಬಡಿಯುವುದು ನಿಲ್ಲಿಸುವುದು. ಆದರೆ ಹೃದಯಶಾಂತಿ ಅವಳಿಂದ ಕಣ್ಣೀರನ್ನು ಕಿತ್ತುಕೊಂಡಿದೆ. ಏನು ಮಾಡಲಿ ಎನ್ನುವುದು ಅವಳ ಅಳಲು.
*
ಇತ್ತೀಚೆಗೆ ಬಾಗಿ ಕ್ಲಿನಿಕ್ಕಿಗೆ ಬಂದಾಗ ಈಗೇನು ನೆಲಕ್ಕುರುಳುತ್ತಿರುವ ಬಾಳೆಯ ಗಿಡವನ್ನು ನಿಲ್ಲಿಸಿ ನಡೆಸುತ್ತಿರುವನೋ ಎಂಬಂತೆ ಕಾಲೇಜು ಕಲಿಯುವ ಅವಳ ಮಗ ಎಳೆದುಕೊಂಡು ಬಂದ. ಮತ್ತೇನು ರಾದ್ಧಾಂತವಾಗಿರಬಹುದೋ ಎಂದು ಬೇಗ ಒಳಗೆ ಕರೆದೆವು. ಮಗ ಮಲಗಿಸಿ ಅವಳ ಕಾಲನ್ನೂ ಎತ್ತಿ ಮೇಲಿಡುತ್ತಿರುವುದು ನೋಡಿದರೆ ಗಹನ ಹೊಡೆತವೇ ಬಿದ್ದಿರಬಹುದು ಅಂದುಕೊಂಡೆ. ಬಾಗಿ ಅಲಿಯಾಸ್ ಭಾಗೀರಥಿ ಎದೆ ಜಪ್ಪಿಕೊಳ್ಳುತ್ತಿದ್ದಾಳೆ. ಅಯ್ಯೋ, ಅಮ್ಮ, ಏನಾತು ಇದು ಎಂದು ನಿಟ್ಟುಸಿರು ಬಿಡುತ್ತಿದ್ದಾಳೆ.
ನೀವು ಅವಳ ಮುಖ ನೋಡಿದರೆ ಎಷ್ಟು ಹೊಡೆತ ತಿಂದವಳು ಎಂದು ಹೇಳಿಬಿಡುತ್ತೀರಿ. ಹೊಡೆತ ತಿಂದ ಹೆಂಡತಿಯರ ಮುಖಗಳು ಬೆಂಕಿಯಲ್ಲಿ ಬಾಡಿಸಿದ ಬಾಳೆಲೆಯ ಹಾಗೆ. ದೀಪದ ಕಂಬಕ್ಕೆ ಸುತ್ತಿದ ಹೂಮಾಲೆಯ ಹಾಗೆ ಬಾಡಿ ಹೋಗಿರುತ್ತವೆ. ಸುಟ್ಟ ಗುರುತು ಕಂಡಕೂಡಲೇ ತಿಳಿದುಬಿಡುತ್ತದೆ. ಎಲ್ಲ ಇದ್ದೂ ಏನೂ ಇಲ್ಲದ ದಿಗ್ಭ್ರಮೆ, ಎಲ್ಲರೊಡನಿದ್ದೂ ಯಾರೂ ಇಲ್ಲದ ಅನಾಥತೆ, ಎಲ್ಲ ಬಲವಿದ್ದೂ ಬದುಕುವ ಚೈತನ್ಯವೇ ಸೋರಿಹೋದ ಖಾಲಿತನಗಳು ಅವರ ಕಣ್ಣುಗಳಲ್ಲಿ ಮಡುಗಟ್ಟಿರುತ್ತವೆ. ಎಲ್ಲೋ ಒಮ್ಮೊಮ್ಮೆ ಕಾರ್ಗಾಲದ ಮೋಡಗಳ ನಡುವೆ ಸೂರ್ಯದರ್ಶನವಾದ ಹಾಗೆ ಅವರ ನಗೆಯ ಹರಳು ಹೊಳೆಯುವುದು. ಎಲ್ಲೋ ಒಮ್ಮೊಮ್ಮೆ ಬೇಸಗೆಯಲ್ಲೂ ಕೋಗಿಲೆಯ ಇಂಪಿನ ದನಿ ಕೇಳುವ ಹಾಗೆ ಅವರ ಬಾಳಿನಲ್ಲಿ ಪ್ರೀತಿ, ಸಾಂತ್ವನದ ಹಾಡು ಹುಟ್ಟಬಹುದು.
‘ಅಮಾ, ಎಷ್ಟ್ ತೀಡಿದ್ರೂ ನಂಗೆ ಕಣ್ಣೀರೇ ಬರುದಿಲ್ಲಲ. ಕಣ್ಣಲ್ ನೀರು ಹೊರಡುವಂಥದ್ದೇನಾರ ಕೊಟ್ಟು ಪುಣ್ಯ ಕಟ್ಕ್ಯಳಿ’ ಎಂಬ ವಿಲಕ್ಷಣ ಬೇಡಿಕೆಯನ್ನು ಒಂದು ಕಾಲದಲ್ಲಿ ಮುಂದಿಟ್ಟಿದ್ದ ಬಾಗಿ ಈಗಾಗಲೇ ಒಮ್ಮೆ ನನ್ನ ಕಥಾನಾಯಕಿಯಾದವಳು. ಮನ್ನಿಸಿ. ಕೊರೊನಾ ಕಾರಣವಾಗಿ ಅವಳನ್ನು ಮತ್ತೆ ಎಳೆದು ತರುವ ಹಾಗೆ ಆಗಿದೆ. ಅವಳ ಮಾತು, ಬದುಕುಗಳು ಬರಹಗಾರ್ತಿಯ ಸರಿತಪ್ಪುಗಳ ಜಾಲರಿಯಿಂದ ಸೋಸಿಕೊಳ್ಳದೇ, ಅದು ಇದ್ದ ಹಾಗೆ ಬರಲಿ ಎಂಬ ಎಚ್ಚರದಿಂದ ಮೊದಲಿನಿಂದ ಅವಳ ಕತೆ ಹೇಳುತ್ತಿರುವೆ.
ಅವಳು ಈ ಸುತ್ತು ಇರುವ ಅಂಥ ಎಷ್ಟೋ ಹೆಣ್ಣುಗಳಲ್ಲಿ ಒಬ್ಬಳು. ಊಟತಿಂಡಿಗೆ ತೊಂದರೆಯಿಲ್ಲದಷ್ಟು ತೋಟ, ಗದ್ದೆ, ಹಾಡಿಯಿದೆ. ಗೇರು ಹಕ್ಕಲಿದೆ. ನೆಲದಲ್ಲಿ ಸದಾ ಕೈಯಿಟ್ಟುಕೊಂಡೇ ಇರುವ ಕೆಲಸಗಾರ ಗಂಡನಿದ್ದಾನೆ. ಒಬ್ಬ ಮಗ, ಒಬ್ಬಳು ಮಗಳು. ಮನೆಯಲ್ಲಿ ವಯಸ್ಸಾದ ಅತ್ತೆ, ಮಾವ ಇರುವರು.
ಅವಳ ಗಂಡನಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಎಲ್ಲವೂ ಆಗಬೇಕು. ಬೆಳಿಗ್ಗೆ ಎದ್ದ ಮಗ್ಗುಲಿಗೆ ಚಾ ಕುಡಿದು ಸೊಪ್ಪಿಗೋ ದರಕಿಗೋ ಹೊರಡುತ್ತಾನೆ. ತಂದದ್ದನ್ನು ಗಂಟಿಯ ಕಾಲಡಿಗೆ ಹರಡಿ, ಒಂದು ಮೆದೆ ದೋಸೆ ಬೆಲ್ಲ ತಿಂದು, ಮತ್ತೆ ಹೊರಟನಲ್ಲ ಎಂದರೆ ಮಧ್ಯಾಹ್ನ ಕಳೆಯುವಾಗಲೇ ಊಟಕ್ಕೆ ಬರುವುದು. ಮತ್ತೆ ಹೋಗಿ, ಕಪ್ಪಾಗುವ ಹೊತ್ತಿಗೆ ಬಂದವನೇ ಚಹಾ ಕುಡಿದು, ಬಿಸಿಬಿಸಿ ನೀರು ಮಿಂದು ಒಳಗೆ ಬರುತ್ತಾನೆ. ಆ ಹೊತ್ತಿಗೆ ಮನೆ ಒಪ್ಪವಾಗಿರಬೇಕು. ಒಗೆಯದ ಬಟ್ಟೆ, ತೊಳೆಯದ ಪಾತ್ರೆ, ಗುಡಿಸದ ಕಸ, ರಗಳೆ ಕೊಡುವ ಮಕ್ಕಳು, ತಯಾರಾಗದ ಅಡುಗೆ ಇವೆಲ್ಲ ಅವನನ್ನು ಕೆರಳಿಸುವ ವಿಷಯಗಳು. ಹಾಗೇನಾದರೂ ಆಗಿ ಸಿಟ್ಟು ಬಂತೋ, ಉಗ್ರಾವತಾರ. ಹಂದಿಯಂತೆ ಗುಟುರು ಹಾಕಿ ಎದುರು ಬಂದ ಹೆಂಡತಿಯನ್ನೋ, ಮಕ್ಕಳನ್ನೋ ಜಪ್ಪುತ್ತಾನೆ. ಮಕ್ಕಳನ್ನು ಹೊಡೆಯುವಾಗ ಅವನ ಕೈ ಮೇಲೇಳುವುದಿಲ್ಲ. ಎಷ್ಟಾದರೂ ಅವನ ಬೀಜಕ್ಕೆ ಹುಟ್ಟಿದವರಲ್ಲವೆ? ಆದರೆ ಹೆಂಡತಿ ಎಂದರೆ ಹಾಗಲ್ಲ. ಅನ್ನಕ್ಕೆ ಗತಿಯಿಲ್ಲದ ಬಡವರ ಮನೆಯಿಂದ ತಂದು ಕೆಲಸಕ್ಕೆಂದೇ ಅನ್ನ, ಬಟ್ಟೆ ಕೊಟ್ಟು ಇಟ್ಟುಕೊಂಡಿರುವುದು. ಹಾಗಾಗಿ ಸರಿಯಾಗಿ ಮಾಡದ ಕೆಲಸಗಳಿಗೆ ಕ್ಷಮೆಯಿಲ್ಲ. ಒಂದು ಅಂತ ಹೋದವ ಮಕಮಾರೆ ನೋಡದೆ ನಾಲ್ಕು ಪೆಟ್ಟು ಹೆಚ್ಚೇ ಕೊಡುತ್ತಾನೆ. ಹೊಡೆತ ತಿನ್ನದ ದಿನ ಅವಳಿಗೆ ಅನ್ನ ಸೇರುವುದಿಲ್ಲ ಎಂದು ಹೇಳುವನಾದರೂ ಅವಳಿಗೆ ಹೊಡೆಯದಿದ್ದರೆ ಅವನಿಗೆ ತಿಂದದ್ದು ಕರಗುವುದಿಲ್ಲ ಎನ್ನುವುದು ಹೆಚ್ಚು ನಿಜ. ಅಷ್ಟಾದ ಮೇಲೆ ರಾತ್ರಿಗೆ ಗಡದ್ದು ಊಟ. ಮಕ್ಕಳು, ಅಪ್ಪ ಅಮ್ಮ ಯಾರೂ ಕುಂಯ್ಞ್ ಕೊಂಯ್ಞ್ ಅನ್ನುವಂತಿಲ್ಲ. ಕೊರಕೊರ ಮಾಡುವಂತಿಲ್ಲ. ಬಡಿಸುವಾಗ ಆಚೀಚೆ ಬಿದ್ದರೆ, ರುಚಿ ಕೆಟ್ಟಿದ್ದರೆ ರೊಂಯ್ಞನೆ ಊಟದ ತಟ್ಟೆ ಒಗೆಯುತ್ತಾನೆ. ಅಂಥ ಕೋಪ.
ಅವನು ಕುಡುಕನೇ? ಅಲ್ಲ. ಹೊಗೆಸೊಪ್ಪು, ನಶ್ಯ, ಕವಳ, ಹೆಂಡ? ಕೇಳಬಾರದು. ಅವರಿವರ ಸಂಗ? ಛೇ, ಎಲ್ಲಾದ್ರೂ ಇದೆಯಾ? ತನ್ನ ಬಟ್ಟೆ ತಾನೇ ತೊಳೆಯುವವ. ತನ್ನ ಊಟದ ತಟ್ಟೆ ತಾನೇ ತೊಳೆಯುವವ. ಬಚ್ಚಲಹಂಡೆಗೆ ನೀರು ತಾನೇ ತುಂಬುತ್ತಾನೆ. ಕೊಟ್ಟಿಗೆ ಕೆಲಸ ಅವನದೇ. ಹೆಂಡತಿಗೆ ಹೊಡೆಯುವುದೂ ಅವನ ಕೆಲಸದಲ್ಲಿ ಸೇರಿದೆ ಎನ್ನುವುದನ್ನು ಬಿಟ್ಟರೆ, ಬಾಗಿಯ ಮಾತಿನಲ್ಲಿ ಹೇಳುವುದಾದರೆ ‘ಕ್ವಾಪ ಒಂದಿಲ್ದಿದ್ರೆ ಅವ್ರು ರಾಮದೇವ್ರಿಗೆ ಸಮಾ.’
ಮೊದಲೆಲ್ಲ ಹೊಡೆತ ತಿಂದು, ಬಳೆ ಚೂರುಚೂರಾಗಿ, ಕೈ ಮುಖ ಹಣೆಗೆ ಗಾಯವಾಗಿ ಬಂದರೂ ‘ಗಂಟಿ ಕೋಡು ತಾಗ್ತು’, ‘ಮಕ್ಳಿಗ್ ಹೊಡೆಯುಕ್ ಹೋಗಿ ಹೀಂಗಾಯ್ತು’, ‘ಆಕಳ ಒದಿತು’ ಮುಂತಾಗಿ ಏನೇನೋ ಹೇಳುತ್ತಿದ್ದಳು. ಬಾರುಬಾರು ಬಾಸುಂಡೆ ನೋಡಿದರೇ ಹೊಡೆತ ಎಂದು ತಿಳಿಯುತ್ತದೆ. ಆದರೂ ಮುಚ್ಚಿಡುತ್ತಿದ್ದಾಳಲ್ಲ ಎನಿಸುತ್ತಿತ್ತು. ಎಂದೋ ಒಂದು ದಿನ ತಡೆಯಲಾರದೆ, ‘ಬಿದ್ದಿದ್ದೋ ಅಥವಾ ಬೇರೆಯವರಿಂದ ಹೊಡೆತ ಬಿದ್ದದ್ದೋ?’ ಎಂದು ಕೇಳಿಯೇಬಿಟ್ಟೆ. ತಗೊಳ್ಳಿ, ಶರಾವತಿ ಅವಳ ಎರಡೂ ಕಣ್ಣುಗಳಲ್ಲಿ ಉಕ್ಕಿ ಜೋಗ ಜಲಪಾತವನ್ನೂ ನಾಚಿಸುವಂತೆ ಧುಮ್ಮಿಕ್ಕಿಬಿಟ್ಟಳು. ಅದಾದಬಳಿಕ ಅವಳ ಗುಟ್ಟಿನ ಖಜಾಂಚಿ ನಾನು.
ಅವಳು ಗಟ್ಟದ ಮೇಲಿನ ಹೆಣ್ಣು. ಬಡವರ ಮನೆಯವಳು. ಮದುವೆಯಾಗಿ ಕಡಲ ತಡಿಯ ಊರಿಗೆ ಬಂದಿದ್ದಳು. ಹೇಳ್ಕ್ಯಂಡು, ಮಾಡ್ಕ್ಯಂಡು, ಇದ್ಕ್ಯಂಡಿ, ತಿನ್ಕ್ಯಳದು ಇತ್ಯಾದಿ ಹೆಚ್ಚು ಯಕಾರ ಒತ್ತನ್ನು ಒಳಗೊಂಡ ಕ್ರಿಯಾಪದಗಳು ಅವಳ ಮಾತಿನಲ್ಲಿದ್ದದ್ದು ನೋಡಿ ಅವಳು ಗಟ್ಟದ ಮೇಲಿನವಳೆಂದು ಗೊತ್ತಾದದ್ದು. ನಾನೂ ಘಟ್ಟದ ಮೇಲಿನವಳೇ ಎಂದು ತಿಳಿದು ನನ್ನಲ್ಲಿ ಆ ಜೀವಕ್ಕೊಂದು ಆಪ್ತಭಾವ ಹುಟ್ಟಿತ್ತು.
‘ಯಾಕೆ ಸುಮ್ಮನೆ ಹೊಡೆತ ತಿಂತೀ ಮಾರಾಯ್ತಿ. ತಿರುಗ್ಸಿ ಎರಡು ಬಿಡು. ನೋಡು, ನೀನೂ ಎಷ್ಟು ಗಟ್ಟಿ ಇದ್ದೀ’ ಎಂದು ಅವಳ ರಟ್ಟೆ ತೋರಿಸಿ ಹೇಳುತ್ತಿದ್ದೆ. ಅಷ್ಟಾದರೆ ಮುಗಿಯಿತು, ‘ಅಷ್ಟ್ ಸೊಕ್ ಬಂತಾ ನಿಂಗೆ?’ ಎಂದು ಕೇಳಿ ಮತ್ತೆಮತ್ತೆ ಹೊಡೆಯುವನಂತೆ. ಯಾರನ್ನೇ ಆಗಲಿ ಹೊಡೆಯುವುದು ಅಪರಾಧ, ಕಂಪ್ಲೆಂಟ್ ಕೊಟ್ಟರೆ ಜೈಲಿಗೆ ಹೋಗುತ್ತಾನೆ ಎಂದಿದ್ದೆ. ‘ನಮಿಗ್ ಹೆಂಗಸ್ರಿಗೆ ಮನಿ ತುಂಬ ಕೆಲ್ಸ ಇರತ್ತೆ. ಔರಿಗೆ ಗಣಸ್ರಿಗೆ ಮನಿಗ್ ಬಂದ್ಮ್ಯಾಲೆ ಕೆಲ್ಸಾನೇ ಇಲ್ಲ. ಕೆಲ್ಸಿಲ್ದ ಬ್ಯಾಜಾರಿಗೆ ಜಪ್ಪುದು ಅಷ್ಟೆಯ’ ಎಂದು ಗಂಡನ ಹೊಡೆತಕ್ಕೆ ಕಾರಣ ಕೊಟ್ಟುಕೊಂಡು ನನ್ನನ್ನು ದಂಗುಬಡಿಸಿದ್ದಳು. ಪೊಲೀಸ್ ಸ್ಟೇಷನ್, ಕಂಪ್ಲೆಂಟ್, ಜೈಲು ಇತ್ಯಾದಿಗಳು ತನಗೆ ಅನ್ವಯಿಸದ ಪದಗಳು ಎಂಬಂತೆ ಮುಖ ಮಾಡಿದ್ದಳು. ಗಂಡನಿಗೆ ಒಂದು ಮಾತು ಹೇಳಲೇ ಎಂದರೆ, ‘ಅಯ್ಯಯ್ಯಯ್ಯ, ಅದೊಂದ್ ಮಾಡಬ್ಯಾಡಿ. ಮುಗದೋತು ಮತ್ತೆ. ಅಮ್ಮೋರ ಹತ್ರನು ಹೇಳ್ದ್ಯ ಅಂತ ನಾಕು ಹೆಚ್ಚೇ ಬೀಳ್ತವೆ’ ಎಂದು ಅದಕ್ಕೂ ತಡೆಯೊಡ್ಡಿದ್ದಳು. ಎಲ್ಲಾ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳ ಪಾಡು, ಜಾಡು ಇದೇ. ಮುಳುಗಿದಲ್ಲಿಂದ ಏಳಲಾಗದ, ಹೊರ ಹಾರಲಾಗದ ಬಾವಿಕಪ್ಪೆಯ ಪರಿಸ್ಥಿತಿ. ಅವಳೇ ಧೈರ್ಯ ತಗೊಳ್ಳಬೇಕು ಎಂದು ಪರೋಕ್ಷವಾಗಿ ಅವಳತನ ಉದ್ದೀಪಿಸುವ ಏನಾದರೂ ಹೇಳುತ್ತಿದ್ದೆ.
ಹೊಡೆಯುವಾಗಲಷ್ಟೇ ಹೆಂಡತಿಯನ್ನು ಮುಟ್ಟುವ ಅವನಿಂದ ಹೇಗೆ ಎರಡು ಮಕ್ಕಳನ್ನು ಹೆತ್ತಳೋ? ಅವನ ಜೊತೆ ಹೇಗೆ ಏಗುವಳೋ? ಯೋಚಿಸಲೂ ಅಸಾಧ್ಯ ಎನಿಸುತ್ತಿತ್ತು.
ಆದರೆ ಒಮ್ಮೊಮ್ಮೆ ಅವಳು ವಿಚಿತ್ರವಾಗಿ ಮಾತನಾಡುತ್ತಿದ್ದಳು. ‘ಅವ್ರ ಕಂಡ್ರೆ ಪಾಪ ಅನಸ್ತದೆ. ಅವ್ರಿಗೆ ಯಾರಿಲ್ಲ. ಅಪ್ಪ ಅವ್ವಿ ಹತ್ರ ಮಾತಿಲ್ಲ. ಅಣ್ತಮ್ಮದಿರು ಇಲ್ಲ. ದೋಸ್ತರೂ ಇಲ್ಲ. ಹೇಳ್ಕಳಕ್ಕೆ ಒಬ್ರೂ ಇಲ್ಲ. ನಮ್ಮ ಹತ್ರನಾರೂ ಚೆನಾಗರ‍್ಬೋದು, ಆದ್ರೆ ಬಿಂಕ ಬಿಡಲ್ಲ. ಅದ್ಕೆ ಹಂಗಿದಾರೆ. ಆದ್ರೆ ಒಂದ್ ಜರ ಬಂದ್ರೆ ಹೆದ್ರಿ ಗಡಗಡ ನಡುಗ್ತರೆ, ಮಕ್ಳಿಗೆ ಆರಾಂ ತಪ್ಪಿದ್ರೆ ಎಲ್ಲಾ ದೇವ್ರಿಗೂ ಕಾಯಿ ತೆಗೆದಿಡ್ತರೆ. ಸುದಾರುಸ್ಕಬೇಕು, ಹಣೆಬರ’ ಎನ್ನುವಳು.
ಅವನೂ ನನ್ನ ಬಳಿ ಬರುವವನೇ. ಹೆಂಡತಿಯನ್ನು ಹೊಡೆಯುವ ಈ ಗಂಡನ ಮೇಲೆ ನನಗೆ ಒಳ್ಳೆಯ ಭಾವನೆಯಿಲ್ಲ. ಅವನು ತೋರಿಸಿಕೊಳ್ಳುವಾಗ ಅವಳು, ‘ಮನ್ನೆ ಜಾರಿಬಿದ್ದ ನೋವು ಅಂದ್ರಲ, ತೋರುಸ್ಕಳಿ’, ‘ಅವ್ರಿಗು ಒಂದ್ ಜಂತು ಮದ್ದು ಕೊಡಿ, ಊಟ ಕಮ್ಮಿ ಮಾಡ್ತದಾರೆ’, ‘ಇಡೀ ದಿನ ಕೆಲ್ಸ ಕೆಲ್ಸ. ಏನಾರಾ ಟಾನಿಕ್ ಕೊಡಿ’, ‘ಕತ್ತಿ ಬಾಯಿ ತಾಗಿತ್ತು, ಟಿಟಿ ಇಂಜೆಷನ್ ಹಾಕಿ’ ಮುಂತಾಗಿ ತಾರೀಫು ಮಾಡುವಳು. ‘ಬಾರೀ ಸಿಟ್ಟು, ಒಂದ್ ಬಿಪಿ ನೋಡಿ’ ಎಂದು ಕಾಳಜಿ ಮಾಡುವಳು.
ಈ ಇವಳ ಹೇರಿಕೊಂಡ ಸೈರಣೆ, ತಾಯ್ತನಕ್ಕೆ ಕೊನೆಯಿದೆಯೆ? ಒಳ್ಳೆಯತನದ ಗೀಳಿಗೆ ಮದ್ದಿದೆಯೆ?! ಹೆಣ್ಣುಗಳ ಈ ದೌರ್ಬಲ್ಯವೇ ಇದ್ದದ್ದು ಇದ್ದಂತೆ ಮುಂದುವರೆಯಲು ಕಾರಣವಾಗಿದೆ ಎಂದು ಯೋಚಿಸುತ್ತಿದ್ದೆ.
ಹೀಗೆ ದಿನಗಳು ಕಳೆಯುತ್ತಿದ್ದವು. ನನ್ನಂತೆಯೇ ನೋಡಿಯೂ ಏನೂ ಮಾಡಲಾರದೆ ಸೂರ್ಯಚಂದ್ರರು ಹುಟ್ಟುವರು, ಮುಳುಗುವರು. ಹೀಗಿರುತ್ತ ಬೆಳೆದ ತನ್ನ ಮಗಳು ಸುಷ್ಮಾಳನ್ನು ಒಂದು ದಿನ ಕರೆದುಕೊಂಡು ಬಂದಳು. ‘ನಮ್ಮಲ್ಲೆಲ್ಲಾ ಇಂಥಾದ್ದು ನಡಯದೇ ಇಲ್ಲ. ಇದ್ಕೆ ಬುದ್ದಿ ಹೇಳಿ ಬಗೇಲಿ’ ಎಂದಳು. ಅವಳ ಅಪ್ಪನಿಗೆ ಬುದ್ಧಿ ಹೇಳಿ ಈ ಮೊದಲು ಕಾಲೇಜಿಗೆ ಕಳಿಸಲು ಒಪ್ಪಿಸಿದ್ದೆ. ಹುಶಾರಿ ಮಗಳು. ನಮ್ಮ ಲೈಬ್ರರಿಯ ಪುಸ್ತಕ ಕೊಂಡು ಹೋಗುತ್ತಿದ್ದಳು. ಕಾಲೇಜಿಗೆ ಸೇರಿಸಿ, ಓದಲಿ ಎಂದದ್ದೇ ಅವಳಪ್ಪ ಸೇರಿಸಿಬಿಟ್ಟಿದ್ದ. ಅಂಥವಳಿಗೇನಾಯಿತು? ಹುಬ್ಬು, ಉಗುರು, ಕೂದಲು, ಕಣ್ಣನ್ನೆಲ್ಲ ತಿದ್ದಿ ತೀಡಿ ಅಲಂಕಾರ ಮಾಡಿಕೊಂಡು ಬಂದ ಸುಷ್ಮಾ ಕರ್ಚೀಫು ತಿರುವುತ್ತ ನಿಂತಿರುವಳಲ್ಲ?!
ಸುತ್ತಿ ಬಳಸಿ ವಿಷಯ ಹೊರಗೆ ಬಂತು. ಅವಳ ಮಗಳು ಲವ್ ಮಾಡಿಬಿಟ್ಟಿದ್ದಳು. ಅವರ ಜಾತಿಯ ಹುಡುಗನೇ ಆದರೂ ಲವ್‌ಗಿವ್ ಎಂಬ ಅನಿಷ್ಟಗಳೆಲ್ಲ ತಮ್ಮನೆ ಹೊಸಿಲು ತುಳಿಯುವುದುಂಟೇ?
‘ನಮ್ಮ ಮಂತಾನದಾಗೇ ಇನ್ನೂ ಯಾರೂ ಇಂತದ್ ಮಾಡ್ಲಿಲ್ಲ ಅಮಾ. ಎಲ್ಲ ಚೊಲೊ ಬಾಳೇ ಮಾಡಿದಿವಿ. ಗಂಡ್ನ ಬಿಟ್ ಹೋಗುದು, ಅಪ್ಪ ಅಮ್ನ ಬಿಟ್ ಹೋಗುದೂ, ಕೇಳಬರ‍್ದು.’
‘ಈ ಕಾಲದಲ್ಲಿ ಲವ್ ಮಾಡಿ ಮದುವೆಯಾಗೋದೇ ಒಳ್ಳೆಯದು ಬಾಗಿ. ಗಂಡುಹೆಣ್ಣು ಒಬ್ಬರನ್ನೊಬ್ರು ಅರ್ಥ ಮಾಡ್ಕೋತಾರೆ.’
‘ಎಂತ ಹೇಳ್ತಿದಿರಿ ಅಮ? ಲವ್ ಮಾಡಿ ಓಡೋದ ಮಗಳು ಅನ್ನೋ ಹೆಸ್ರು ನಮ್ಗೆ ಬ್ಯಾಡ. ದಾದ ಚಲೋ ಜಾಗ ನೋಡಿ ಮದಿ ಮಾಡ್ತರೆ, ಅವ್ನುನ್ನ ಬಿಡಂತ ಹೇಳಿ ಇದ್ಕೆ.’
‘ಅಲ್ಲ ಮಾರಾಯ್ತಿ. ಬಾಳಿ ಬದುಕಬೇಕಾದೋರು ಅವ್ರು. ನಿಂಗೆ ಬರೋ ಹೆಸ್ರು ತಗಂಡು ಏನ್ ಮಾಡ್ತೆ? ಅವಳಿಗಿಷ್ಟ ಬಂದೋನ ಜೊತೆ ಚೆನ್ನಾಗ್ ಇರ್ಲಿ ಬಿಡು’ ಎಂದೆ.
ಇದುವರೆಗೆ ಸುಮ್ಮನಿದ್ದ ಸುಷ್ಮಾ ನನ್ನ ಮಾತು ಕೇಳಿದ್ದೇ, ‘ಹುಡ್ಕಿ ಮದ್ವೆ ಮಾಡಿದ್ರೆ ನಿಂಗೆ ಸಿಕ್ಕಂತ ಗಂಡ್ನೇ ಸಿಗ್ತಾನೆ. ಅಂಥವ್ನು ಮಾತ್ರ ಹರ್ಗಿಸ್ ನಂಗ್ ಬ್ಯಾಡ. ನಾನು ಇವ್ನನ್ನೇ ಮದ್ವೆ ಆಗುದು’ ಎಂದು ಬಿಗಿದುಕೊಂಡಳು.
‘ನೋಡಿ ನೋಡಿ ಹೆಂಗ್ ಮಾತಾಡ್ತಾಳೆ ಅಂತ, ಅಪ್ಪಅವ್ವಿ ಅಂತ ಹನಿ ಗೌರವಾ ಇಲ್ಲ. ನೀನು ಲವ್‌ಗಿವ್ ಎಲ್ಲ ಬಿಡು. ಇಲ್ಲಂದ್ರೆ ನೀನೂ ನಾನೂ ಹೊಡುಸ್ಕಂಡ್ ಸಾಯ್ಬೇಕಷ್ಟೆ ಹೇಳಿದಿನಿ.’
‘ನೀ ಬೇಕಾರೆ ಹೊಡುಸ್ಕಂಡ್ ಇರು. ನಾ ಮನೆ ಬಿಟ್ಟೋಗ್ತೆ. ನಾ ಬಾಸ್ಕರುನ್ನೇ ಮದ್ವೆ ಆಗದು.’
ಅಮ್ಮ ಮಗಳ ಜಗಳ ತಹಬಂದಿಗೆ ತಂದು, ಅವಳಿಗಿಷ್ಟದವನನ್ನು ಮದುವೆ ಆಗಲಿ ಬಿಡಿ ಎಂದು ಹೇಳಿದ್ದೆ. ಆದರೆ ಬುದ್ಧಿ ಹೇಳುವುದು ಬಿಟ್ಟು ಅವರಿಗಿಷ್ಟವಾದವರನ್ನೇ ಮದುವೆಯಾಗಲಿ ಎಂದು ನಾನು ಹೇಳುವುದು ನೋಡಿ ಅವಳು ನಿರಾಶಳಾಗಿದ್ದಳು. ನಂತರ ಅವರಿವರಿಂದ ತಿಳಿದದ್ದು ಸುಷ್ಮಾ ಮನೆ ಬಿಟ್ಟು ಹೋದಳು, ರಿಜಿಸ್ಟರ್ ಮದುವೆ ಆದಳು ಎಂದು.
ಅದಾದಮೇಲೆ ಒಂದೆರೆಡು ವರ್ಷ ಬಾಗಿ ಬಂದಿರಲಿಲ್ಲ. ಆಮೇಲೊಂದು ದಿನ ಬಂದು ‘ಅಮಾ, ನಂಗೆ ಕಣ್ಣಲ್ ನೀರು ಹುಟ್ಟೂವಂತ ಮದ್ದೇನಾದ್ರು ಕೊಡ್ರ’ ಎಂದು ಕೇಳಿದಳು. ಯಾಕೆ ಕಣ್ಣಲ್ಲಿ ನೀರು ಹುಟ್ಟಬೇಕು ಎಂದು ನಾನು ಗಾಬರಿಯಿಂದ ಕೇಳಿದರೆ, ‘ಗಣಸ್ರು ಬಗ್ಗುದು ಅದೊಂದಕ್ಕೆಯ’ ಎಂದಳು!
ಸುಷ್ಮಾ ತನ್ನ ಕಾಗದಪತ್ರಗಳ ಸಮೇತ ಮನೆ ಬಿಟ್ಟಿದ್ದಳಂತೆ. ರಿಜಿಸ್ಟರ್ ಮದುವೆಯೂ ಆದಳಂತೆ. ಆಗಿನಿಂದ ಗಂಡ ಬಾಗಿಯ ಕುಮ್ಮಕ್ಕಿನಿಂದ ಹೀಗಾದದ್ದು ಎಂದು ಕೆರಳಿ ಹೊಡೆತ ಹೆಚ್ಚು ಮಾಡಿದನಂತೆ. ಇವಳು ಮೂರು ತಿಂಗಳು ಅನ್ನ, ನೀರು ಬಿಟ್ಟು ಮೇಲೇಳದೆ ಅತ್ತತ್ತು, ಮೈಮೇಲೆ ಚೌಡಿ ದೇವರ ಆವಾಹನೆಯಾಯಿತಂತೆ. ಊಟ ಕಂಡರೆ ವಾಂತಿ. ಆಗ ಅವಳನ್ನು ಆಯುರ್ವೇದಿಕ್ ಔಷಧಿ ಕೊಡಿಸಲು ಕರೆದೊಯ್ದರು. ಆ ಡಾಕ್ಟರು ‘ಹೃದಯಶಾಂತಿ’ ಎಂಬ ಮದ್ದು ಕೊಟ್ಟರಂತೆ. ಹೃದಯ ಶಾಂತಿಯೇನೋ ಆಯಿತು. ಆದರೆ ಮದ್ದಿನ ಫೋರ್ಸಿಗೆ ಕಣ್ಣೀರು ಬರುವುದು ನಿಂತುಬಿಟ್ಟಿತು! ಅವಳ ಗಂಡ ಇಡಿಯ ದಿನ ಮಗಳನ್ನು ನೆನೆಸುತ್ತ, ಅಬ್ಬೆಯಾಗಿ ನೀನವಳನ್ನು ಸರಿಯಾಗಿ ತಿದ್ದಲಿಲ್ಲವೆಂದು ಬೈಯುತ್ತ ಬಡಿಯುತ್ತಾನೆ. ಅತ್ತು ಭೋರಾಡಿದರಷ್ಟೇ ಅವ ಬಡಿಯುವುದು ನಿಲ್ಲಿಸುವುದು. ಆದರೆ ಹೃದಯಶಾಂತಿ ಅವಳಿಂದ ಕಣ್ಣೀರನ್ನು ಕಿತ್ತುಕೊಂಡಿದೆ. ಏನು ಮಾಡಲಿ ಎನ್ನುವುದು ಅವಳ ಅಳಲು.
ನನ್ನ ತಲೆ, ಬಾಯಿ ಬಂದ್ ಮಾಡಿ ಪ್ರಶ್ನೆ ಕೇಳುವ ಅವಳಿಗೆ ಏನಂತ ಉತ್ತರ ಹೇಳಲಿ ಹೇಳಿ?
ಅದಾದಮೇಲೆ ಹೋದವಳು ಇವತ್ತೇ ಬಂದಿದ್ದು. ಬಂದವನೇ ಅವಳ ಮಗ ಕೋವಿಡ್ ಬಂದು ಅಪ್ಪ ತೀರಿಕೊಂಡರು ಎಂದ. ಅಪ್ಪನ ವಯಸ್ಸಾದ ತಾಯ್ತಂದೆಯರು ವಾರವೊಪ್ಪತ್ತಿನಲ್ಲಿ ಜ್ವರ ಬಂದು ತೀರಿಕೊಂಡಿದ್ದರು. ಅವನಿಗೂ ಜ್ವರ ಬಂದರೂ ಆಸ್ಪತ್ರೆಗೆ ಹೋಗಲು ಒಪ್ಪಲಿಲ್ಲ. ಕೆಮ್ಮು, ಸುಸ್ತು, ವಾಂತಿ ಶುರುವಾಗಿ, ಉಸಿರು ಕಟ್ಟಿದಂತಾದಾಗ ಆಸ್ಪತ್ರೆಗೊಯ್ದರಂತೆ. ಕೋವಿಡ್ ಪಾಸಿಟಿವ್ ಎಂದಾಯಿತು. ಅಮ್ಮ, ಮಗ ನೆಗೆಟಿವ್ ಇದ್ದರು. ವಾರ್ಡಿಗೆ ಅಡ್ಮಿಟ್ ಮಾಡಿದರೆ ಇಡಿಯ ದಿನ ಹೆಂಡತಿಯನ್ನು ಒಳಗೆ ಬಿಡಿ, ಬಿಡಿ ಎಂದು ಗಲಾಟೆ ಮಾಡುತ್ತಿದ್ದನಂತೆ. ಪೇಶೆಂಟ್ ಜೊತೆಗೆ ಯಾರೂ ಇರುವಂತಿಲ್ಲ ಎಂದು ಅವಳನ್ನು ಬಿಟ್ಟಿರಲಿಲ್ಲ. ಬರಬರುತ್ತ ಉಸಿರು ಕಟ್ಟುವುದು ಹೆಚ್ಚಾಯಿತು. ಐಸಿಯುಗೆ ಹಾಕಿದರು. ಸೀರಿಯಸ್ ಎಂದು ವೈದ್ಯರೂ ಹೇಳಿದರು. ಮುಂದೇನು ಎಂದು ಅಮ್ಮ, ಮಗ ಕಂಗಾಲಾಗಿ ಕೂತಿರುವಾಗ ನೋಡನೋಡುತ್ತ, ಹೆಂಡತಿಯನ್ನು ಹೆಸರು ಹಿಡಿದು ಕರೆಯುತ್ತ ಅವ ಉಸಿರು ನಿಲ್ಲಿಸಿದ್ದ. ಅವತ್ತಿನಿಂದ ಬಾಗಿ ಊಟತಿಂಡಿ ಬಿಟ್ಟಿದ್ದಾಳೆ. ಅವರನ್ನು ಸುಟ್ಟ ಜಾಗದ ಬಳಿ ಹೋಗಿ, ನೆಲದ ಮೇಲೆ ಹೊರಳಾಡಿ, ಹುಚ್ಚಿಯಂತಾಡುತ್ತಿದ್ದಾಳೆ. ನಿದ್ರೆಯಿಲ್ಲ, ಕೆಲಸ ಮಾಡುತ್ತಿಲ್ಲ ಎಂದು ಮಗ ದಿಕ್ಕೆಟ್ಟು ಹೇಳಿದ.
ನಿಮಗೆ ಕೆಡುಕೆನಿಸಬಹುದು, ದುಷ್ಟತನವೆನಿಸಬಹುದು, ಆದರೆ ನಿಜ ಹೇಳುತ್ತೇನೆ, ಅವಳ ಗಂಡ ತೀರಿಕೊಂಡ ಸುದ್ದಿ ಕೇಳಿ ನನಗೆ ನಿರಾಳವೆನಿಸಿತು. ಇನ್ನಾದರೂ ಅವಳು ಶಾಂತಿಯಿಂದ ಬದುಕಲಿ ಎಂದು ಮನ ಹಾರೈಸಿತು. ಮರುಕ್ಷಣವೇ ನನ್ನ ದುರ್ಬುದ್ಧಿಗೆ ನಾನೇ ನಾಚಿಕೆ ಪಡುವಂತೆ ಅವಳು, ‘ನನ್ ಹಣೇ ಕುಂಕ್ಮ ಹೋಯ್ತಲ ಅಮಾ, ನಮಿಗ್ಯಾರೂ ಇಲ್ಲ ಈಗ. ಹುಡ್ಗ ದೊಡ್ಡಾದ್ಮೇಲಾದ್ರೂ ನನ್ ಮಕ ಬೆಳ್ಳಗಾಗ್ತದೆ ಮಾಡಿದ್ದೆ. ಈಗ ಹೀಂಗಾಯ್ತು. ಇನ್ಯಾಕ್ ಬದುಕ್ಬೇಕು ನಾನು’ ಎಂದು ರೋದಿಸತೊಡಗಿದಳು. ಅವಳಿಗೆ ನಿದ್ರೆ ಬರುವಂಥ ಮದ್ದು ಕೊಡಿ ಎಂದು ಮಗನೂ, ಸಾವು ಬಂದು ‘ಔರಿರುವಲ್ಲೇ ಹೋಗೂ ಹಂಗ್ಮಾಡಿ’ ಎಂದು ಅವಳೂ ಕೇಳುತ್ತಿರುವಾಗ ಮಹಿಳಾ ಸಬಲೀಕರಣ, ಸ್ವಾತಂತ್ರ್ಯ, ಸ್ವಾಯತ್ತತೆ, ಘನತೆಯ ಬದುಕು ಮೊದಲಾದ ಪದಗಳೆಲ್ಲ ಅಲ್ಲೆಲ್ಲೆಲ್ಲೋ ಹಾರಿಹೋದವು. ಇವರಿಗೆ ಬೇಕಾದ ಮದ್ದು ಯಾವುದು? ಅದನ್ನು ಹೇಗೆ ಕೊಡುವುದು? ಎಂಬ ಪ್ರಶ್ನೆಗಳು ಮುತ್ತಿಕೊಂಡವು.
*
ಪದಗಳ ಅರ್ಥ
ತೀಡು = ಅಳು
ದರಕು = ಒಣ ಎಲೆ
ಮೆದೆ = ಹನ್ನೆರೆಡು
ದಾದ = ಅಪ್ಪ
ಹರ್ಗಿಸ್ = ಖಂಡಿತಾ
ಮಕ ಬೆಳ್ಳಗಾಗು = ನೆಮ್ಮದಿ ಕಾಣು
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 18 : ಇಂಗ್ಲೆಂಡಿನ ಪೋರ್ಟ್ಸ್ಮೌತ್ ಹಡಗುಕಟ್ಟೆಯಲ್ಲಿ ಕಾಯುತ್ತಿರುವ ಟ್ರೀಜಾ
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಕ್ಷಮಿಸಿ, ತರುಣ ಭಾರತದ ಕಥೆಯಲ್ಲಿ ‘……’ ಪದ ಬಹಳಸಲ ಪ್ರಯೋಗಿಸಿದೆ