ನಿಮ್ಮುನ್ನ ಬಿಟ್ರೆ ಮುಟ್ಟಿ ನೋಡೋ ಡಾಕ್ಟ್ರೇ ಇಲ್ಲಾಗಿದೆ ಇಡೀ ತಾಲೂಕಲ್ಲಿ

| Updated By: Digi Tech Desk

Updated on: Jun 10, 2021 | 7:23 PM

Election : ‘ಜೀಂವಾ ಒಂದಿದ್ರೆ ಏನಾರೂ ಮಾಡ್ಲಕ್ಕು. ಅಪ್ಪ ಮಗ ಹಂಗೆ ಆ ತರ ತಿರುಗ್ತರೆ. ಮಾಸ್ಕಿಲ್ಲ, ಮಣ್ಣಿಲ್ಲ. ಇವ್ರು ಸೊಸೈಟಿ ಎಲೆಕ್ಷನ್ನಿಗೆ ನಿಂತಿದಾರೆ. ವೋಟಾಕ್ಬೇಕು ಅಂತ ಅದು ಮುಗುದ್ಮೇಲೆ ಟೆಸ್ಟಿಗೆ ಹೋಗ್ತೆ ಅಂತ ಹಠ. ಅವ್ರಿಗೆ ಜ್ವರಾನೇ ಬಿಡ್ಲಿಲ್ಲ ಅಂತ ದೇವ್ರಲ್ಲಿ ಕೇಳಿದ್ರೆ ಏನೂ ತೊಂದ್ರೆ ಇಲ್ಲ ಅಂತ ಪ್ರಸಾದ ಬಂತು. ಅದ್ಕೇ ಸತ್ಯಗಣಪ್ತಿ ಕತೆ, ಹ್ವಾಮ ಎಲ್ಲ ಇಟ್ಕಂಡಾರೆ.’

ನಿಮ್ಮುನ್ನ ಬಿಟ್ರೆ ಮುಟ್ಟಿ ನೋಡೋ ಡಾಕ್ಟ್ರೇ ಇಲ್ಲಾಗಿದೆ ಇಡೀ ತಾಲೂಕಲ್ಲಿ
Follow us on

‘ಮಲೇರಿಯಾ ಟೈಫಾಯ್ಡ್ ಜಾಂಡೀಸ್ ಅದ್ಯಾವ್ದೂ ನಿಮಗಿಲ್ಲ. ಆದ್ರೆ ಕೋವಿಡ್ ಟೆಸ್ಟೇ ಮಾಡಿಸಿಲ್ಲ?’
‘ನಮ್ಮನೇಲೆ ಅದೆ ಮೇಡಂ ಆಶಾ ಕಾರ್ಯಕರ್ತೆ, ನಂ ಸೊಸೆ. ಅದೇ ಹೇಳತು, ಡೋಲೊ ಗುಳಿಗೆ ತಕಣಿ, ಜರ ಕಮ್ಮಿಯಾಗ್ತು, ಟೆಸ್ಟ್ ಬೇಡ ಅಂತ.’
‘ಆಶಾ ಕಾರ್ಯಕರ್ತೆ ಜ್ವರ ಬಂದೋರಿಗೆ ಟೆಸ್ಟ್ ಬೇಡ ಅಂದ್ರಾ? ನಿಂ ಸೊಸೆ ಹೆಸರೇನು ಹೇಳಿ?’
‘ಹ್ಹೆಹ್ಹೆಹ್ಹೆ, ಅದ್ ಹಂಗಲ್ರ. ಟೆಸ್ಟ್ ಮಾಡಿ ಕಡೆಗೆ ಹೌದು ಅಂತಾದ್ರೆ ಬರೀ ರಗಳೆ. ಹೆಣ ಸುಡುಕ್ ಜನ ಬರ್ತಿಲ್ಲೆ ನೋಡಿ, ಅದುಕ್ಕೆ ಬ್ಯಾಡ ಅಂತು.’
‘ಕೋವಿಡ್ ಬಂದೋರೆಲ್ಲ ಹೆಣ ಆಗಲ್ಲ. ತುಂಬ ಜನಕ್ಕೆ ಹಾಗೇ ಕಮ್ಮಿಯಾಗುತ್ತೆ. ನಿಮ್ಮ ಸೊಸೆ ಉಳಿದೋರಿಗೆಲ್ಲ ಟೆಸ್ಟ್ ಮಾಡ್ಕಳಿ ಅಂತ ಯಾಕೆ ಹೇಳ್ತಾರಂತೆ?’
‘ಅದ್ ಹಂಗೇರಾ. ಬುದ್ದಿಲ್ದ ಹೆಂಗ್ಸು ಅದು. ಹೆಂಗುಸ್ರು ಕೈಗೆ ಕೊಟ್ರೆ ಎಲ್ಲ ಹಿಂಗೇ ಆಗದು. ಮುಕ್ಯ ನಂ ಮಗಂಗೆ ಬುದ್ದಿಲ್ಲ. ಅದು ಬಿಟ್ಟಾಕಿ, ನಂಗೊಂದ್ ಕಸುವಿನ ಇಂಜೆಷನ್ ಹಾಕಿ, ಶಕ್ತಿ ಗುಳಗಿ ಕೊಡಿ. ಕೆಮ್ಮಿಗೊಂದ್ ಬಾಟ್ಲಿ ಕೊಡಿ. ಮತ್ತೆಲ್ಲ ಅದೆ ನಮ್ಮತ್ರ.’

*

ಬೇಸಿಗೆ ಕಾಲದಲ್ಲಿ ರಮ್ಜಾನ್ ಉಪವಾಸದ ತಿಂಗಳು ಬಂದಿದೆ. ಸಂಜೆ ಪ್ರಾರ್ಥನೆಯ ಒಳಗೆ ಮನೆ ಸೇರಿ ಉಪವಾಸ ಬಿಡಬೇಕು. ಅದಕ್ಕೇ ಆ ಸಮಾಜ ಬಂಧುಗಳು ಔಷಧಿ ಪಡೆದು ಹೊರಡಲು ಕೊಂಚ ಅವಸರಿಸುವರು. ಅಂದು ಕೂಡಾ ಹಾಗೇ ಆಯಿತು. ಅದೊಂದು ದೊಡ್ಡ ಕುಟುಂಬ. ಒಬ್ಬರಾದ ಮೇಲೊಬ್ಬರು ಬನ್ನಿ ಎಂದು ದಿವ್ಯಾ ಹೇಳುತ್ತಿದ್ದರೂ ರಿಕ್ಷಾ ತುಂಬುವಂತೆ ಬಂದಿದ್ದ ಚಳ್ಳೆಪಿಳ್ಳೆಗಳೆಲ್ಲ ಒಂದೊಂದೇ ಮುಖ ತೂರಿಸಿ ಒಳಬಂದವು. ದೊಡ್ಡವರು ಹೊರಹೋಗೆನ್ನುವುದು, ಅವು ಮೊಂಡು ಹಿಡಿದು ಒಳಗೇ ನಿಲ್ಲುವುದು. ಆ ಹೆಣ್ಣು ಜೀವಗಳಿಗೆ ತಾಪತ್ರಯಗಳನ್ನು ಹೇಳುವ ಅವಕಾಶ ಸಿಕ್ಕಿದ್ದೇ ತಡ, ಕೊನೆಮೊದಲಿರದ ಮನೆಗೆಲಸದ ಏಕತಾನತೆ, ಬೇಸರಗಳು ದೇಹದ ಒಂದೊಂದೇ ಭಾಗದ ನೋವುಗಳಾಗಿ ವರ್ಣಿಸಲ್ಪಡುತ್ತಿದ್ದವು. ಅಂಥವರ ಬಳಿ ಅವಸರ ಮಾಡಲು ಸಾಧ್ಯವೇ? ನಾನೂ ನಿಧಾನವಾಗಿ ಕಿವಿ ಕೊಟ್ಟು ಕಳಿಸಿದೆ.

ಅವರಿರುವಾಗಲೇ ಆತ ಒಳನುಗ್ಗಲು ಯತ್ನಿಸುತ್ತಿದ್ದರು. ‘ನಂಬರ್ ತಗೊಳ್ಳಿ, ಹೊರಗೆ ಕೂತ್ಕಳಿ’ ಎಂಬ ಮಾತು ತಮಗೆ ಅನ್ವಯಿಸಿದ್ದಲ್ಲವೆಂಬಂತೆ ಸೀದಾ ಬರುವವರು ಅವರು. ನಂಬರು ತೆಗೆದುಕೊಳ್ಳುವಷ್ಟು ಸಣ್ಣವರಲ್ಲ. ಅವರನ್ನಾರು ನಾಯಕನೆಂದು ಪರಿಗಣಿಸಿದ್ದಾರೋ ಇಲ್ಲವೋ, ತಾನು ಮಾತ್ರ ರಾಷ್ಟ್ರಮಟ್ಟದ ಲೀಡರ್ ಎಂದವರು ಭಾವಿಸಿದ್ದಾರೆ. ಆ ತಂಡ ಹೋದದ್ದೇ ಒಳಬಂದರು. ಎರಡೂ ಕೈಜೋಡಿಸಿ ಮುಗಿದು, ಹತ್ತು ಬೆರಳಿನ ಹತ್ತು ಉಂಗುರ ಪ್ರದರ್ಶಿಸಿದರು. ರೇಶಿಮೆ ಪಂಚೆ, ಶಲ್ಯ ತೊಟ್ಟಿದ್ದಾರೆ. ಅರೆಬರೆ ಮಾಸ್ಕಿನ ಹೊರಗೆ ಬಿಳಿಯ ಗಡ್ಡ ಇಣುಕುತ್ತಿದೆ. ಈ ಜನ ಬಂದರೆ ಅಷ್ಟು ಸರಾಗವಲ್ಲ. ಅವರು ನಿಲ್ಲಿಸಲಾರರು, ನಾನೂ ಬಿಡೆ. ಹಾಗಾಗಿ ಬೇಗ ಮುಗಿಯುವುದಿಲ್ಲ.

ಡಾ. ಕೃಷ್ಣ ಗಿಳಿಯಾರ್

ಅವರ ಮಾಸ್ಕ್ ಸರಿ ಮಾಡಿಸಲೆತ್ನಿಸಿದೆವು. ಜಗ್ಗಾಟಕ್ಕೆ ಲಾಡಿ ಕಿತ್ತೇ ಹೋಯ್ತು. ಹೊಸ ಮಾಸ್ಕು ಕೊಡದಿದ್ದರೆ ಉಳಿಗಾಲವಿಲ್ಲ ಎಂದು ಉಚಿತ ಮುಖಗೌರವ ನೀಡಿದೆವು. ಏನೋ ರಹಸ್ಯ ಹಿತನುಡಿ ಹೇಳುವಂತೆ ಮುಂದೆ ಬಗ್ಗಿ ಹೇಳತೊಡಗಿದರು.

‘ಅವು ಯಂತ ಜನ ನೋಡಿ ಮೇಡಂ. ನೀವ್ ನೋಡ್ರೆ ಇಲ್ಲಿ ಜನ್ರಿಗೆ ಸರ್ವೀಸ್ ಕೊಡಕ್ಕೆ ಒಬ್ರೆ ಇಷ್ಟ್ ಕಷ್ಟ ಪಡ್ತ್ರಿ. ಇಡೀ ತಾಲೂಕಲ್ಲಿ ನಿಮ್ಮುನ್ನ ಬಿಟ್ರೆ ಮುಟ್ಟಿ ನೋಡೋ ಡಾಕ್ಟ್ರೇ ಇಲ್ಲಾಗಿದೆ. ಆದ್ರೆ ಒಂದ್ಹನಿ ಇಲ್ಲ ಅವ್ಕೆ. ಸೀದ ಏಳೆಂಟ್ ಜನ ಒಟ್ಟೊಟ್ಗೆ ಒಳಗ್ ನುಗ್ಗದು. ಅವ್ಕೆಲ್ಲ ಕೊರೊನನೇ ಬಂದಿರುಕ್ ಸಾಕು. ಅಲ್ಲೆಲ್ಲೊ ಡೆಲ್ಲಿಗ್ ಹೋಗಿ ಒಂದ್ಕಡೆ ಸೇರ್ಕಂಡು ಅವ್ರಿಂದನೇ ಈ ದೇಶಕ್ಕೇ ರೋಗ ಅಂಟಿದ್ದು. ನೀವ್ ಸೊಲ್ಪ ಹುಶಾರಾಗಿರಿ. ಹ್ಞಂ.’

‘ಕೊರೊನಾಗೆ ಜಾತಿ, ಧರ್ಮ, ದೇಶ ಭೇದವೇ ಇಲ್ಲ. ಎಲ್ಲರಿಂದ ಎಲ್ಲರಿಗೂ ಹಬ್ಬಿದೆ. ಎಲ್ಲರಿಗೂ ಬಂದಿದೆ. ಅವ್ರು ಧರ್ಮಸಭೆ ನಡೆಸಿದ್ರು, ನಾವು ಕುಂಭಮೇಳ ನಡೆಸಿದ್ವಿ. ನಂ ದೇಶ ಎಲೆಕ್ಷನ್ ನಡಸ್ತು. ಆ ದೇಶ ಮ್ಯಾಚ್ ಇಡ್ತು. ಅಲ್ವ?’

‘ಆದ್ರು ಆ ಜನ ಇದಾರೆ ನೋಡಿ, ತೆಗ್ದ್ ಹಾಕ್ದವು. ಡೇಂಜರ್ರು. ನಾವೆಲ್ಲ ಲೀಡರ್ಸು ಕೊರೊನ ಕಂಟ್ರೋಲ್ ಮಾಡ್ಬೇಕಂತ ಹಗಲೂ ರಾತ್ರಿ ಒದ್ದಾಡ್ತ ಇದೀವಿ. ನಮ್ಮ ದೀಜಿಯವರನ್ನ ನೋಡಿ, ಅವ್ರ ಮಕದ್ ಮೇಲೆ ನಿದ್ದೆ ಇಲ್ಲ, ನಗು ಇಲ್ಲ. ಗಡ್ಡ ಮಾಡ್ಕಳಕ್ಕೂ ಪುರ್ಸತ್ತು ಇಲ್ಲ. ಆದ್ರೆ ಇಂಥವ್ರು ರೂಲ್ಸ್ ಫಾಲೊ ಮಾಡ್ದೆ ಎಲ್ಲ ತಲೆಕೆಳಗಾಗ್ತ ಇದೆ. ಇವ್ರ ಬೆವರಿಳಿಸುಕೆ ನಮ್ಮ ಮಂತ್ರಿ ಇದಾರಲ, ಬೆಸ್ಟ್, ಅವ್ರು ಇಲೆಕ್ಷನ್ನಿಗೆ ನಿಂತಾಗೇ ಹೇಳ್ಬಿಟ್ಟಾರೆ, ನಂಗೆ ಆ ಜನ್ರ ಓಟು ಬ್ಯಾಡ. ಅವ್ರ ಓಟಿಂದ ಗೆದ್ದು ನಾನು ಮೈಲ್ಗೆ ಆಗುದ್ ಬ್ಯಾಡಂತ.’

‘ಒಂದೇ ಗದ್ದೇಲಿ ಬೆಳೆದ ಅಕ್ಕಿಕಾಳಲ್ಲಿ ಇದು ಇರ್ಲಿ, ಇದು ಬೇಡ ಅನ್ನಬೋದಾ? ಮಂತ್ರಿ ಆದೋರು ಎಲ್ಲಾರಿಗೂ ಮಂತ್ರಿನೇ. ಅವರಿಗೆ ಮಂತ್ರಿ, ಈ ಜನಕ್ಕೆ ಅಲ್ಲ ಅನ್ನಕ್ಕಾಗುತ್ತಾ? ಎಲ್ಲಾರನ್ನೂ ಪ್ರೀತಿಸಿ, ಭಿನ್ನಭೇದ ಬಿಡ್ರಿ ಅಂತ ಹೊಡೆದು, ಬುದ್ಧಿ ಹೇಳಕ್ಕೆ ಕೊರೊನ ಬಂದಿರದು. ಅವ್ರದ್ದೆಲ್ಲ ಬಿಡಿ, ನೀವ್ ಆರಾಮಿದೀರಾ? ಸುಸ್ತಾದಂಗೆ ಕಾಣ್ತಿದೀರ?’

ಅದು ಅಂತಿಂಥ ಕಿಲುಬಲ್ಲ. ಚೂರುಪಾರು ಹುಣಿಸೆಹಣ್ಣು ಹಾಕಿ ಉಜ್ಜಿದರೆ ಏನೂ ಶುಭ್ರವಾಗುವುದಿಲ್ಲ. ಇನ್ನೂ ಹೊರಗಿರುವ ಪೇಶೆಂಟುಗಳ ಗಡಣ ಕಂಡು, ಕೆಮ್ಮುವ ಅವರ ಕಥನ ಮುಗಿಸಿ ಬೇಗ ಕಳಿಸುವಾ ಎಂದು ಆರೋಗ್ಯದ ಕಡೆಗೆ ಮಾತು ತಿರುಗಿಸಿದೆ. ಸ್ವಲ್ಪ ಬಾತುಕೊಂಡಂತಿದ್ದ ಮುಖ, ಜೋಲುಬಿದ್ದ ಕಣ್ಣು, ಮಾತನಾಡುತ್ತ ಬರುತ್ತಿದ್ದ ಏದುಸಿರು ಅವರಿಗೆ ಸೌಖ್ಯವಿಲ್ಲ ಎಂದು ತಿಳಿಸುತ್ತಿದ್ದವು.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಅದೇನಾತು ಅಂದ್ರೆ, ನಮ್ಮತ್ತೆಗ್ ಆರಾಮಿಲ್ಲ ಅಂತ ನೋಡ್ಕಬರುಕ್ ಹೋಗಿದ್ವಿ. ಪ್ರಯಾಣಕ್ಕೆ ಮೈನೋವು, ತಲೆನೋವು. ಏನೇನು ಊಟ ಮೆಚ್ಚಲ್ಲ. ಸುಸ್ತು. ಏಳುದೇ ಬ್ಯಾಡ ಕಾಂತದೆ. ನಿಮ್ ನೆನಪಾಗಿ ಮೇಡಂ ಹತ್ರನೇ ನೋಡ್ಸುವ ಅಂತ ಬಂದ್ಬಿಟ್ಟೆ. ಬೇರೆ ಕಡೆ ಸರಿಯಾಗಲ್ಲ ನಂಗೆ. ಬಗೇಲಿ ಬಿಪಿ ಚೆಕ್ ಮಾಡಿ.’

ಸ್ಥೂಲಕಾಯ. ಕಷ್ಟಪಟ್ಟು ದೇಹವನ್ನೆಳೆದು ಟೇಬಲ್ ಮೇಲೆ ಹಾಕಿದರು. ಆರಾಮಿಲ್ಲದ ಅತ್ತೆಯನ್ನು ನೋಡಲು ಹೀಗೆ ಹೋಗಿದ್ದರೇ ಅನಿಸಿತು.

‘ಜ್ವರ ಸುಟ್ಟೋಗ್ತ ಇದೆಯಲ್ಲ?’

‘ಏ, ಜರಪರ ಏನು ತೊಂದ್ರೆ ಇಲ್ಲ, ನಂದು ಬಾಡಿನೆ ಹೀಟು. ಇಲ್ನೋಡಿ ಎಲ್ಲ ಟೆಸ್ಟ್ ಮಾಡ್ಕಂಡೇ ಬಂದಿದಿನಿ.’

ರಕ್ತ ಮೂತ್ರ ತಪಾಸಣೆಯ ನಾಲ್ಕಾರು ಪುಟ ವರದಿ ನನ್ನೆದುರು ಹರಡಿಕೊಂಡಿತು. ಬೇಡದ ಎಲ್ಲ ಟೆಸ್ಟುಗಳನ್ನೂ ಮಾಡಿಸಿಕೊಂಡೇ ಬಂದಿದ್ದರು.

‘ಮಲೇರಿಯಾ ಟೈಫಾಯ್ಡ್ ಜಾಂಡೀಸ್ ಅದ್ಯಾವ್ದೂ ನಿಮಗಿಲ್ಲ. ಆದ್ರೆ ಕೋವಿಡ್ ಟೆಸ್ಟೇ ಮಾಡಿಸಿಲ್ಲ?’
‘ನಮ್ಮನೇಲೆ ಅದೆ ಮೇಡಂ ಆಶಾ ಕಾರ್ಯಕರ್ತೆ, ನಂ ಸೊಸೆ. ಅದೇ ಹೇಳತು, ಡೋಲೊ ಗುಳಿಗೆ ತಕಣಿ, ಜರ ಕಮ್ಮಿಯಾಗ್ತು, ಟೆಸ್ಟ್ ಬೇಡ ಅಂತ.’
ಆಶಾ ಕಾರ್ಯಕರ್ತೆ ಜ್ವರ ಬಂದೋರಿಗೆ ಟೆಸ್ಟ್ ಬೇಡ ಅಂದ್ರಾ? ನಿಂ ಸೊಸೆ ಹೆಸರೇನು ಹೇಳಿ?’
‘ಹ್ಹೆಹ್ಹೆಹ್ಹೆ, ಅದ್ ಹಂಗಲ್ರ. ಟೆಸ್ಟ್ ಮಾಡಿ ಕಡೆಗೆ ಹೌದು ಅಂತಾದ್ರೆ ಬರೀ ರಗಳೆ. ಹೆಣ ಸುಡುಕ್ ಜನ ಬರ್ತಿಲ್ಲೆ ನೋಡಿ, ಅದುಕ್ಕೆ ಬ್ಯಾಡ ಅಂತು.’
‘ಕೋವಿಡ್ ಬಂದೋರೆಲ್ಲ ಹೆಣ ಆಗಲ್ಲ. ತುಂಬ ಜನಕ್ಕೆ ಹಾಗೇ ಕಮ್ಮಿಯಾಗುತ್ತೆ. ನಿಮ್ಮ ಸೊಸೆ ಉಳಿದೋರಿಗೆಲ್ಲ ಟೆಸ್ಟ್ ಮಾಡ್ಕಳಿ ಅಂತ ಯಾಕೆ ಹೇಳ್ತಾರಂತೆ?’
‘ಅದ್ ಹಂಗೇರಾ. ಬುದ್ದಿಲ್ದ ಹೆಂಗ್ಸು ಅದು. ಹೆಂಗುಸ್ರು ಕೈಗೆ ಕೊಟ್ರೆ ಎಲ್ಲ ಹಿಂಗೇ ಆಗದು. ಮುಕ್ಯ ನಂ ಮಗಂಗೆ ಬುದ್ದಿಲ್ಲ. ಅದು ಬಿಟ್ಟಾಕಿ, ನಂಗೊಂದ್ ಕಸುವಿನ ಇಂಜೆಷನ್ ಹಾಕಿ, ಶಕ್ತಿ ಗುಳಗಿ ಕೊಡಿ. ಕೆಮ್ಮಿಗೊಂದ್ ಬಾಟ್ಲಿ ಕೊಡಿ. ಮತ್ತೆಲ್ಲ ಅದೆ ನಮ್ಮತ್ರ.’

‘ನಿಮ್ಮ ಜ್ವರ ಕೋವಿಡ್ಡೇ ಹೌದಾಗಿದ್ರೆ ಎಲ್ರಿಗು ಹಬ್ಬುತ್ತೆ, ಟೆಸ್ಟ್ ಮಾಡ್ಸಿ ಗೊತ್ತಾದ್ರೆ ಉಳಿದವರಿಂದ ದೂರನಾದ್ರು ಇರಲಿಕ್ಕಾಗುತ್ತೆ. ಮೋದೀಜಿಯವರು ದೇಶಕ್ಕೆ ಅಷ್ಟು ಮಾಡ್ತಿದಾರೆ. ನಾವು ಕನಿಷ್ಟ ಟೆಸ್ಟ್ ಆದ್ರು ಮಾಡ್ಕೋಬೇಡವೇ?’ ಬಿಪಿ ನೋಡುತ್ತಾ ಮನವೊಲಿಸಲು ನೋಡಿದೆ.

‘ಥೋಥೋ, ಕೊರೊನ ಪಿರೊನ ಎಲ್ಲ ನಮ್ಗೆ ಬರ್ತಿಲ್ಲೆ ಮೇಡಂ. ಬಾರೀ ಕ್ಲೀನು ನಾವು. ಯಾರ್ನೂ ಮುಟ್ಟತಿಲ್ಲೆ. ಯಾರ್ನೂ ಮನಿಯೊಳಗೆ ಹೊಕ್ಕುಸ್ಕಂತಿಲ್ಲೆ. ದೂರದಿಂದ್ಲೆ ಎಲ್ಲ.’
‘ನಾವೇ ಬುದ್ದಿವಂತ್ರು ಅಂದುಕೊಂಡಿದಿವಿ, ಕೊರೋನಾ ನಮಗಿಂತ ಬುದ್ಧಿ ಇರೋ ವೈರಸ್ಸು. ಹೊಕ್ಕುಸ್ಕಳದೇ ಇದ್ರು ಅದೇ ಹೊಕ್ಕುತ್ತೆ. ನೀವೊಂದು ಟೆಸ್ಟ್ ಮಾಡ್ಸಿ.’
‘ಮಾಡ್ಕಬರ್ತೆ. ಮಾಡ್ಕಬರ್ತೆ. ಈಗೊಂದ್ ಇಂಜೆಷನ್ ಹೆಟ್ಟಿ. ನಮ್ಮನೆ ಅದುಕ್ಕೆ ತಂಡಿ ಕೆಮ್ಮ ಮೈಕೈನೋವು ಅಂತದೆ. ಜರಗಿರ ಇಲ್ಲ ಮತ್ತೆ ಹ್ಞಾಂ? ಅದ್ಕೂ ಎರಡು ದಿನುದ್ ಔಸ್ತ ಕೊಡಿ. ಹಂಗೇ ಇಟ್ಕಣುಕೆ ನಾಕ್ ನಾಕ್ ತಂಡಿ ಜ್ವರದ್ ಗುಳಿಗೆ, ಕೆಮ್ಮಿನ ಮದ್ದು ಹೆಚ್ಚೇ ಕೊಡಿ. ಯಾರಿಗ್ ಬೇಕು?’

ವಿವರ ದಾಖಲಿಸುತ್ತ ಅವರ ಫೋನ್ ನಂಬರ್ ಕೇಳಿದರೆ ಮೊಬೈಲು ತಂದಿಲ್ಲ, ನಂಬರು ಬಾಯಲ್ಲಿಲ್ಲ ಎಂದರು. ‘ನಾ ಬರುದು ಖಾಯಂ ಇಲ್ಲಿಗೇ, ನಂಬರ್ ಎಲ್ಲ ಬೇಡ’ ಎಂದು ಶಿಲ್ಪಾ ಬಳಿ ಹೇಳುವಾಗ ಬೇರೆ ವೈದ್ಯರ ರೆಫರೆನ್ಸ್ ಹೆಸರಿದ್ದ ರಕ್ತಪರೀಕ್ಷೆ ರಿಪೋರ್ಟು ನೆನಪಾಯಿತು. ತಾನು ಯಾರೆಂದು ತನಗೇ ಗುರುತು ಸಿಗದಷ್ಟು ಹುಸಿಯ ಒಡವೆಗಳನ್ನು ಧರಿಸಿದ್ದ ಅವರಿಗೆ ಆಮ್ಲಜನಕ ಕಡಿಮೆಯಿದೆ. ಯಾರಿಗೆ ಹೇಳುವುದೆಂದು ಯೋಚಿಸುತ್ತ ಔಷಧಿ ಕೊಟ್ಟು ಬೇಗ ಹೊರಗೆ ಕಳಿಸಿದೆವು. ಅಷ್ಟರಲ್ಲಿ ಸರ್ವಾಲಂಕೃತ ‘ನಮ್ಮನೆ ಅದು’ ಹೊರಗೆ ಇಣುಕಿತು. ಕನಿಷ್ಟ ಅರ್ಧ ಕೆಜಿ ಬಂಗಾರ ಅವರ ಹೆಂಡತಿಯ ಮೈಮೇಲಿದೆ. ಗಂಡ ಒಳಗೆ ಇಲ್ಲದ್ದು ಕಂಡು ಪಿಸುಗುಡುತ್ತ,

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಎಲ್ಲೋದ್ರು ಭಾಸಣ ಶುರು ಹಚ್ಬಿಡ್ತರೆ. ಬ್ಯಾಗ್ ಮುಗುದೇ ಇಲ್ಲ, ಈಗ ಹೊರಗ್ ಶುರುವಾಗದೆ. ಹೋದ್ರಾ?’ ಎಂದರು.
‘ಏನು ವಿಶೇಷ? ರೇಶ್ಮೆ ಸೀರೆ ಉಟ್ಕಂಡು ಬಂದಿದಿರ?’ ಎಂದೆ ನಗುತ್ತ.
‘ಅದೇ ನಮ್ಮಣ್ಣನ ಮಗನ ಮದಿ ಆತು. ಬೀಗರೂಟ ಮುಗ್ಸಿ ಅಲ್ಲಿಂದ್ ಬಂದ್ವಿ.’
‘ಈಗ ಮದುವೆನಾ? ಕೊರೊನಾ ನೋಡಿದ್ರೆ ಇಷ್ಟ್ ಜೋರಾಗಿದೆ?’

ನಾನಿಷ್ಟು ಹೇಳಿದ್ದೇ ಹಣೆಹಣೆ ಚಚ್ಚಿಕೊಂಡು ಬಾಗಿಲು ದಾಟಿ ಒಳಗೆ ಬಂದೇ ಬಿಟ್ಟರು. ‘ಅವ್ರಿಗೆ ಬಗೇಲ್ ಹೇಳಿ. ಎಷ್ಟ್ ಹೇಳ್ರೂ ತಿರ್ಗಾಟ ಬಿಡ್ತಿಲ್ಲೆ. ಹುಡುಗಂಗೆ ಉಂಗ್ರ, ಹುಡ್ಗಿಗೆ ಕುಡುಕು ಮಾಡ್ಸಿ ಇಟ್ಕಂಡು ಕೊಡುದೇ ಸೈ ಅಂತ ಹೊರಡ್ಸಿದಾರೆ. ಗನ್ನಾ ಹೆದರ್ಸಿ ಕಳುಸ್ಬೇಕಿತ್ತು’
‘ನೀವೂ ಯಾಕೆ ಹೋದ್ರಿ? ಜಾತ್ರೆ, ಮದುವೆಗಳಿಂದ್ಲೆ ಕೊರೊನಾ ಹೆಚ್ಚಿದ್ದು’

‘ಈ ಮಾತ್ ಇನ್ನೊಂದ್ಸಲ ಹೇಳ್ರಾ. ಜೀಂವಾ ಒಂದಿದ್ರೆ ಏನಾರೂ ಮಾಡ್ಲಕ್ಕು. ಅಪ್ಪ ಮಗ ಹಂಗೆ ಆ ತರ ತಿರುಗ್ತರೆ. ಮಾಸ್ಕಿಲ್ಲ, ಮಣ್ಣಿಲ್ಲ. ಇವ್ರು ಸೊಸೈಟಿ ಎಲೆಕ್ಷನ್ನಿಗೆ ನಿಂತಿದಾರೆ. ವೋಟಾಕ್ಬೇಕು ಅಂತ ಅದು ಮುಗುದ್ಮೇಲೆ ಟೆಸ್ಟಿಗೆ ಹೋಗ್ತೆ ಅಂತ ಹಠ. ಅವ್ರಿಗೆ ಜ್ವರಾನೇ ಬಿಡ್ಲಿಲ್ಲ ಅಂತ ದೇವ್ರಲ್ಲಿ ಕೇಳಿದ್ರೆ ಏನೂ ತೊಂದ್ರೆ ಇಲ್ಲ ಅಂತ ಪ್ರಸಾದ ಬಂತು. ಅದ್ಕೇ ಸತ್ಯಗಣಪ್ತಿ ಕತೆ, ಹ್ವಾಮ ಎಲ್ಲ ಇಟ್ಕಂಡಾರೆ. ನಾವುಳುದ್ರೆ ನಂ ದೇವ್ರು, ಈಗ ಬ್ಯಾಡಂತ ಎಷ್ಟ್ ಹೇಳ್ರೂ ಕೇಳ್ದೆ ಇಟ್ಕಂಡಾರೆ. ನಂಗೂ ಬಗೇಲಿ ನೋಡಿ’

ಅವರನ್ನೂ ‘ಬಗೇಲಿ’ ನೋಡಿದೆ. ಅವರಿಗೂ ಜ್ವರ, ಕೆಮ್ಮು, ಸುಸ್ತು. ಔಷಧಿ ಮಾತ್ರೆ ಕೊಟ್ಟು ಇವತ್ತೇ ಟೆಸ್ಟ್ ಮಾಡಿಸಿ ಎಂದೆ.

‘ನಂ ಸೊಸಿ ಅಂತೂ ಬಡ್ಕಂಡು ಬಡ್ಕಂಡು ಇಡ್ತು. ಮದಿಗೆ ಹೋಗುದ್ ಬ್ಯಾಡ, ಟೆಸ್ಟ್ ಮಾಡುಸ್ಕಣಿ, ಮಾಡುಸ್ಕಣಿ ಅಂತ. ಬಾಯ್ ಬಡಿತಾರೇ ಹೊರ್ತ ಹೇಳದ್ ಮಾತೇ ಕೇಳುದಿಲ್ಲ. ಇನ್ ಏನಾಎನ, ಕರಿಕಾನಮ್ನೇ ಕಾಪಾಡ್ಬೇಕು’ ಎಂದು ಹುಬ್ಬೇರಿಸಿ, ಚಿಂತಿತರಾಗಿ, ಕೈಯಾಡಿಸುತ್ತ ಹೊರಹೋದರು.

ಅವರು ತಮ್ಮ ಮನೆಯ ‘ಅದು’ ಹೇಳಿದ್ದನ್ನು ಕೇಳಿದ್ದರೆ ಬೇರೆಯೇ ಆಗುತ್ತಿತ್ತು ಎಂದುಕೊಳ್ಳುವಾಗ ಒಂದ್ನಿಮಿಷ ಅಂತ ಮಗ ಮುಖ ಒಳಗೆ ತೂರಿಸಿದ. ಅವನ ತಂದೆ, ತಾಯಿಗೆ ಹೇಳಿದ್ದನ್ನೆಲ್ಲ ಅವನಿಗೂ ಹೇಳಿದೆ.

‘ಥ, ನನ್ನೆಂಡ್ತಿಗೆ ಬಡ್ಕಂಡೆ ಮೇಡಂ, ನೀ ಆ ಮನೆಮನೆ ತಿರುಗೊ ಆಶಾ ಕೆಲ್ಸ ಬಿಡು, ದೇವ್ರ ದಯದಿಂದ ನಮಗೆ ಊಟತಿಂಡಿಗೆ ತೊಂದ್ರೆ ಇಲ್ಲ ಅಂತ. ಪಾಸಿಟಿವ್ ಆದೋರ ಮನ್ಗೆಲ್ಲ ಹೋಗಿ ಪೋಟ ಹೊಡ್ಕಂಡ್ ಬರುದಂತೆ. ಮಳ್ಳು. ಅದ್ರಿಂದ್ಲೆ ಬಂದಿರ್ಬೇಕು ಅಂತ ಡೌಟು ನಂಗೆ. ಸಾಯ್ಲಿ. ಹೆಂಗಾರಾ ಆಗ್ಲಿ ಅಂತ ನಮ್ಮೂರ ಗೌರ್ಮೆಂಟ್ ಡಾಕ್ಟರಿಗ್ ಕೇಳ್ದೆ ಮೇಡಂ, ಅವ್ರೂ ತಂಡಿ ಜ್ವರ ಇರಬೋದು, ನೋಡುವಾ, ಟೆಸ್ಟ್ ಬ್ಯಾಡ ಅಂದಿದ್ರು.’

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ನಿಮ್ಮ ತಂದೆ ನೋಡಿದ್ರೆ ಸೊಸೆ ಟೆಸ್ಟ್ ಬೇಡ ಅಂದ್ಲು ಅಂತಾರೆ. ನಿಮ್ಮಮ್ಮ ದೇವರು ಬೇಡ ಅಂತು ಅಂದ್ರು. ನೀವು ಡಾಕ್ಟ್ರು ಟೆಸ್ಟ್ ಬೇಡ ಅಂದ್ರು ಅಂತೀರಿ. ನೋಡಿ, ಜ್ವರ, ಗಂಟಲುನೋವು, ಕೆಮ್ಮು, ಸುಸ್ತು, ಊಟಸೇರಲ್ಲ– ಇಷ್ಟಿದ್ರೆ ಏನು ಮಾಡಬೇಕು ನಿಮ್ಗೇ ಗೊತ್ತಲ? ಈ ಕಾಯ್ಲೆ ಬಗ್ಗೆ ಹೇಳಲಿಕ್ಕೆ ಶುರುಮಾಡಿ ಒಂದು ವರ್ಷ ಆಯ್ತು. ಅವರ ಆಕ್ಸಿಜನ್ 90ಕ್ಕಿಂತ ಕಮ್ಮಿ ಇದೆ. ಮತ್ಯಾರನ್ನೂ ಕೇಳಬೇಡಿ. ಮೊದ್ಲು ಆಸ್ಪತ್ರೆಗೆ ಕರ್ಕೊಂಡು ಹೋಗಿ ಟೆಸ್ಟ್ ಮಾಡ್ಸಿ. ಅಷ್ಟೆ’

‘ಹೌದಾ? ಈಗ ನಮ್ಮಪ್ಪಂಗೆ ಯಂತ ಮಾಡುದು ಹೇಳಿ? ಈ ತೆಗ್ದ್ ಹಾಕಿದ್ ಗೌರ್ಮೆಂಟಲ್ಲಿ ಬೆಡ್ ಇಲ್ಲ, ಔಸ್ತ ಇಲ್ಲ, ವ್ಯಾಕ್ಸೀನ್ ಇಲ್ಲ, ಏನೂ ಇಲ್ಲ. ನಮ್ಮ ಪಾರ್ಟಿ ಗೌರ್ಮೆಂಟ್ ಇದ್ರೆ ಕತೆನೇ ಬೇರೆ ಇತ್ತು. ಜನ್ಕೆ ಬುದ್ಧಿ ಬರದು ಯಾವಾಗ್ಲೋ ಏನೋ? ಮತ್ತೆ ನಂ ಹೆಸ್ರು ನಂಬ್ರ ರಿಪೋರ್ಟ್ ಮಾಡ್ಬೇಡಿ. ತ್ಯಾಂಕ್ಸ್, ಆಂ’ ಎಂದು ಜಾರಿದ.

ಇವನೊಂದು ಬಣ್ಣದ ಗುಂಪಿನ ಮರಿ ನಾಯಕ. ಅಪ್ಪನೊಂದು ಬಣ್ಣದ ಗುಂಪಿನ ಗಿರಿ ನಾಯಕ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಜನನಾಯಕರು ಇವರು! ಮನೆಯಲ್ಲಿ ನಿತ್ಯ ಎಷ್ಟು ಕುರುಕ್ಷೇತ್ರವೋ! ಅವರ ನಡುವೆ `ಬುದ್ದಿಲ್ದ ಹೆಣ್ಣು’ಗಳ ಪಾಡು ಏನೋ?

ಅವರದಾಯಿತು. ಆದರೆ ನಮ್ಮಗಳ ಪಾಡೇನು? ಎಂದುಕೊಳ್ಳುತ್ತ ತೊಳೆಯುವ, ಬದಲಿಸುವ ಕೆಲಸಕ್ಕೆ ಸಿದ್ಧರಾದೆವು. ಅಆ ದಿಂದ ಹಿಡಿದು ಯರಲವಶಷಸಹಳಕ್ಷತ್ರಜ್ಞ ವರೆಗೆ ಒಬ್ಬರಾದಮೇಲೊಬ್ಬರು ಹಾಡುತ್ತ, ನರ್ತಿಸುತ್ತ ಕೈಗಳನ್ನು ಸೋಪಿನಲ್ಲಿ ತಿಕ್ಕಿತಿಕ್ಕಿ ತೊಳೆದು, ಉಪಕರಣಗಳ ಮೇಲ್ಮೈಗೆ ಹೊಸ ಹೊದಿಕೆ ಹಾಸಿ ಮುಂದಿನ ಪೇಶೆಂಟ್ ಕರೆಯಲು ಸಿದ್ಧರಾದೆವು.
*
ಪದಗಳ ಅರ್ಥ

ಕಸುವು = ಕಸ, ಮೂಳೆಮಾಂಸಖಂಡಗಳ ನೋವು
ಕುಡುಕು = ಓಲೆ
ಏನಾಎನ = ಏನೋ ಏನೋ, ಏನೇನಾಗುತ್ತೋ
*
ಫೋಟೋ : ಎಸ್. ವಿಷ್ಣುಕುಮಾರ್

ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್- 11 ; ‘ಮೇಡಂ, ಹೋಪ್ಲೆಸ್ ಅನಿಸ್ತಿದೆ ಇಂವಾ ಬಿಟ್ ಹೋದ ಅಂತ ಕಾಣ್ತ ಇದೆ’ 

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಕೊರೊನಾ ಮಗಳು ಭವಿಷ್ಯ ಹೇಳಲು ಕಲಿತಿದ್ದು

Published On - 10:55 am, Thu, 10 June 21