ಮನಸ್ಸಿನ ನೆಮ್ಮದಿಗಾಗಿ ಕತ್ತಲ ಹಾಡು ನಿನಾದ.. ನಾದ ಮಣಿನಾಲ್ಕೂರು ಪರಿಕಲ್ಪನೆಗೆ ಮನಸೋತ ಯುವಜನತೆ

ಬೆಂಗಳೂರು, ಮಂಗಳೂರು, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಯುವಕರು ಶಿಬಿರದಲ್ಲಿ ಭಾಗವಹಿಸಿದ್ದರು. 5 ದಿನಗಳ ಅವಧಿಯಲ್ಲಿ ನೆಮ್ಮದಿಯನ್ನು ಎಲ್ಲಿಯೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಕಂಡುಕೊಂಡರು. ಅನೇಕರ ಬಳಿ ಆಸ್ತಿ, ಅಂತಸ್ತು, ಹಣ, ಐಷಾರಾಮಿ ಬದುಕು ಇದ್ದರೂ ನೆಮ್ಮದಿ ಮಾತ್ರ ಇಲ್ಲ. ಎಲ್ಲಾ ಇದ್ದಾಗ್ಯೂ ನಿದ್ರೆ ಬಾರದೇ ರಾತ್ರಿ ಕಳೆಯುವುದು ಸಾಮಾನ್ಯವಾಗಿದೆ.

ಮನಸ್ಸಿನ ನೆಮ್ಮದಿಗಾಗಿ ಕತ್ತಲ ಹಾಡು ನಿನಾದ.. ನಾದ ಮಣಿನಾಲ್ಕೂರು ಪರಿಕಲ್ಪನೆಗೆ ಮನಸೋತ ಯುವಜನತೆ
ನಾದ ಮಣಿನಾಲ್ಕೂರು ಹಾಡುತ್ತಿರುವ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 09, 2021 | 3:46 PM

ಧಾರವಾಡ: ಆಧುನಿಕತೆಯ ಭರಾಟೆಯಲ್ಲಿ ಜನರು ತಮ್ಮನ್ನು ತಾವೇ ಕಳೆದುಕೊಂಡಿದ್ದಾರೆ. ಒಂದು ಕಡೆ ಐಷಾರಾಮಿ ಜೀವನ ಮತ್ತೊಂದು ಕಡೆ ನೆಮ್ಮದಿಗಾಗಿ ನಿರಂತರ ಹುಡುಕಾಟ. ಎಲ್ಲವೂ ಕೈಯಲ್ಲಿದ್ದರೂ ಮನಸ್ಸಿಗೆ ಮಾತ್ರ ನೆಮ್ಮದಿಯ ದರ್ಶನವೇ ಇಲ್ಲ. ಹೀಗಾಗಿ ಜನರು ನೆಮ್ಮದಿಯ ಬೆನ್ನು ಹತ್ತಿ ಎಲ್ಲೆಲ್ಲೋ ತಿರುಗುತ್ತಾರೆ.

ಇಷ್ಟಾದರೂ ನೆಮ್ಮದಿ ಸಿಕ್ಕಿತಾ ಎಂದರೆ ಉತ್ತರ ಮಾತ್ರ ಇಲ್ಲ. ಹೀಗೆ ನೆಮ್ಮದಿಯನ್ನು ಅರಸುತ್ತಾ ಹೋದ ವ್ಯಕ್ತಿಯೊಬ್ಬರು ಕೊನೆಗೆ ನೆಮ್ಮದಿ ಕಂಡುಕೊಂಡಿದ್ದು ಏಕತಾರಿಯ ಝೇಂಕಾರಿಯಲ್ಲಿ. ಈ ವ್ಯಕ್ತಿಯ ಹೆಸರು ನಾದ ಮಣಿನಾಲ್ಕೂರು ಇದೀಗ ನೆಮ್ಮದಿಯ ಸಿಹಿಯನ್ನು ಇತರರಿಗೂ ಉಣ್ಣಿಸುತ್ತಾ ಸಾಗುತ್ತಿದ್ದಾರೆ ಎನ್ನುವುದು ಆಶ್ಚರ್ಯ.

ಕಾಡಿನ ನಡುವೆ ಹರಿದ ನಾದ ಝರಿ! ಗಡ್ಡಧಾರಿ ವ್ಯಕ್ತಿ ನಾದ ಮಣಿನಾಲ್ಕೂರು Naada Maninalkar ಕಣ್ಣು ಮುಚ್ಚಿ ಏಕತಾರಿ ವಾದ್ಯದೊಂದಿಗೆ ಹಾಡು ಹಾಡುತ್ತಿದ್ದರೆ ಎಲ್ಲೆಲ್ಲಿಯೂ ಮೌನ. ಕತ್ತಲೆಯೊಂದಿಗೆ ಮೌನ ಸೇರಿಕೊಂಡರೆ ಅದೇ ನೆಮ್ಮದಿಯ ಮೂಲ ಎನ್ನುವುದನ್ನು ಮೊದಲು ಕಂಡುಕೊಂಡ ನಾದ ಮಣಿನಾಲ್ಕೂರು ಅದನ್ನು ಅನುಭವಿಸಿದರು.

39 ವರ್ಷದ ನಾದ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದವರು. ಅವರ ಕೈಗೆ ಸಿಕ್ಕ ಏಕತಾರಿ ವಾದ್ಯ ಅವರ ಒಳಗಣ್ಣನ್ನು ತೆರೆಸಿತು. ಕಣ್ಣುಮುಚ್ಚಿ ಹಾಡಿನಲ್ಲಿ ಲೀನವಾದರೆ, ನೆಮ್ಮದಿ ಎನ್ನುವುದು ಅರಸಿ ಬರುತ್ತದೆ. ಗ್ರಾಮದ ಹೊರಗೆ ಹೋಗಿ ಏಕತಾರಿಯನ್ನು ನುಡಿಸುತ್ತಾ ಹಾಡುತ್ತಿದ್ದರೆ, ಮನಸ್ಸಿಗೆ ಅದೆಂತಹದ್ದೋ ಸಮಾಧಾನ. ಈ ಸಮಾಧಾನವನ್ನು ಇತರರಿಗೂ ಹಂಚಬೇಕು ಎಂದು ಮನಸ್ಸಾಗಿದ್ದೇ ತಡ, ಹೊಸದೊಂದು ಪರಿಕಲ್ಪನೆ ಮೂಡತೊಡಗಿತು.

ಇಡೀ ಪ್ರಪಂಚವೇ ನೆಮ್ಮದಿಗಾಗಿ ಹಂಬಲಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕುಳಿತಲ್ಲಿಯೇ ನೆಮ್ಮದಿಯನ್ನು ಪಡೆಯುವ ಪರಿಕಲ್ಪನೆಯನ್ನು ಹುಟ್ಟುಹಾಕಿದ ನಾದ ಅವರು ಅದಕ್ಕೆ ಬಳಸಿಕೊಂಡಿದ್ದು ಕೇವಲ ಏಕತಾರಿ ವಾದ್ಯ. ದೇಸೀಯ ವಾದ್ಯವಾಗಿರುವ ಈ ಏಕತಾರಿ ವಾದ್ಯದೊಂದಿಗೆ ತತ್ವ ಪದದ ಶೈಲಿಯ ಹಾಡುಗಳನ್ನು ಹಾಡುತ್ತಿದ್ದರೆ, ಮನಸ್ಸಿಗೆ ಸಮಾಧಾನ. ಇನ್ನು ಈ ಹಾಡುಗಳನ್ನು ಕತ್ತಲಲ್ಲಿ ಹಾಡಿದರಂತೂ ಎಂತಹ ಭಾರವಾದ ಮನಸ್ಸುಗಳು ಕೂಡ ಹಗುರಾಗುತ್ತವೆ ಎನ್ನುವುದನ್ನು ನಾದ ಕಂಡುಕೊಂಡರು. ಆಗಲೇ ಹೊರ ಬಂದ ಪರಿಕಲ್ಪನೆ ಕತ್ತಲೆ ಹಾಡು.

ನಾದ ಮಣಿನಾಲ್ಕೂರು ತೋಟದ ಮಧ್ಯೆ ಕುಳಿತು ಹಾಡುತ್ತಿರುವ ದೃಶ್ಯ

ಕತ್ತಲಲ್ಲಿಯೇ ಬೆಳಕು ಹುಡುಕುವ ಪರಿ: ಕತ್ತಲ ಹಾಡು ಎನ್ನುವ ಪರಿಕಲ್ಪನೆಯನ್ನು ಹೊತ್ತು ಹಾಡಿದ ಕೆಲವು ಕಡೆಗಳಲ್ಲಿ ಶಿಬಿರವನ್ನು ನಡೆಸಿದ ನಾದ ಅವರಿಗೆ ಅನೇಕ ಒಳ್ಳೆಯ ಅನುಭವಗಳಾದವು. ಸಂಜೆ ಹೊತ್ತಿಗೆ 8-10 ಹಣತೆಗಳನ್ನು ಹಚ್ಚಿ ಏಕತಾರಿ ಜೊತೆಗೆ ಹಾಡು ಆರಂಭವಾದರೆ, ಅದು ಕೊನೆಗೊಳ್ಳುವುದು ಮೂರ್ನಾಲ್ಕು ಗಂಟೆಗಳ ಬಳಿಕವೆ.

ಈ ವೇಳೆಗಾಗಲೇ ಹಣತೆಗಳು ನಂದಿ ಹೋಗಿರುತ್ತವೆ. ಸುತ್ತಮುತ್ತಲೆಲ್ಲಾ ಕತ್ತಲು ಆವರಿಸಿರುತ್ತದೆ. ಇಂತಹ ಕತ್ತಲಲ್ಲೇ ಬೆಳಕನ್ನು ಹುಡುಕುವುದೇ ಈ ಶಿಬಿರಗಳ ಮುಖ್ಯ ಉದ್ದೇಶ. ಈ ವೇಳೆ ಹಾಡುಗಳ ಪ್ರಸ್ತುತಿ ಜೊತೆ ಸಂವಾದವೂ ನಡೆಯುವುದರಿಂದ ಇದು ಎಲ್ಲರನ್ನು ಚಿಂತನೆಗೆ ಹಚ್ಚುತ್ತದೆ. ಇಂತಹ ಶಿಬಿರವೊಂದು ಧಾರವಾಡದಲ್ಲಿ ನಡೆದಿದ್ದೇ ಒಂದು ವೈಶಿಷ್ಟ್ಯ. (Suman Sangam Forest Farm)

ಕತ್ತಲೆ ಹಾಡಿಗೆ ಸಾಕ್ಷಿಯಾಯಿತು ಧಾರವಾಡದ ಸುಗಮ-ಸಂಗಮ ಕಾಡು ತೋಟ:

ಧಾರವಾಡದ ಪ್ರಸಿದ್ಧ ಸ್ತ್ರೀರೋಗ ತಜ್ಞರಾದ ಡಾ. ಸಂಜೀವ ಕುಲಕರ್ಣಿ ಅವರ ಸುಗಮ-ಸಂಗಮ ಕಾಡು ತೋಟದಲ್ಲಿ 5 ದಿನಗಳ ಕಾಲ ಈ ಕತ್ತಲೆ ಹಾಡು ಶಿಬಿರವನ್ನು ಆಯೋಜಿಸಲಾಗಿತ್ತು. ಕತ್ತಲೆ-ಮೌನ ಮತ್ತು ನೆಮ್ಮದಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದನ್ನು ಯುವಕರು ಅನುಭವಿಸಲು ಈ ಶಿಬಿರ ಸಹಕಾರಿಯಾಯಿತು. ಬೆಳಿಗ್ಗೆ 6 ಗಂಟೆಯಿಂದ ಧ್ಯಾನ, ಯೋಗದೊಂದಿಗೆ ಇಡೀ ದಿನ ಶ್ರಮದಾನವೂ ಇರುತ್ತಿತ್ತು.

ಶಿಬಿರಾರ್ಥಿಗಳು ಪರಿಸರದೊಂದಿಗೆ ಬೆರೆತು, ಮೈ ದಣಿಯುವ ಹಾಗೆ ಕೆಲಸವನ್ನು ಮಾಡಿದರು. ಒಂದು ಕಡೆ ನಾದ ಅವರ ಸಂಗೀತದ ಝೇಂಕಾರ ಹರಿದು ಬರುತ್ತಿದ್ದರೆ ಮತ್ತೊಂದು ಕಡೆ ಅದನ್ನು ಕೇಳುತ್ತಲೇ ಶಿಬಿರಾರ್ಥಿಗಳು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತಿದ್ದರು. ಗುಂಡಿ ತೋಡುವುದು, ಗಿಡ ನೆಡುವುದು, ಬದುಗಳ ನಿರ್ಮಾಣ ಸೇರಿದಂತೆ ಎಲ್ಲಾ ಬಗೆಯ ಕೆಲಸಗಳನ್ನು ಮಾಡುತ್ತಲೇ ಸಂಗೀತದ ಅಲೆಯಲ್ಲಿ ತೇಲಾಡಿದರು.

ಸಂಗಮದ ಚಿತ್ರಣ

ನಾಡಿನ ವಿವಿಧ ಕಡೆಗಳಿಂದ ಬಂದಿದ್ದ ಶಿಬಿರಾರ್ಥಿಗಳು: ಬೆಂಗಳೂರು, ಮಂಗಳೂರು, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಯುವಕರು ಶಿಬಿರದಲ್ಲಿ ಭಾಗವಹಿಸಿದ್ದರು. 5 ದಿನಗಳ ಅವಧಿಯಲ್ಲಿ ನೆಮ್ಮದಿಯನ್ನು ಎಲ್ಲಿಯೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಕಂಡುಕೊಂಡರು. ಅನೇಕರ ಬಳಿ ಆಸ್ತಿ, ಅಂತಸ್ತು, ಹಣ, ಐಷಾರಾಮಿ ಬದುಕು ಇದ್ದರೂ ನೆಮ್ಮದಿ ಮಾತ್ರ ಇಲ್ಲ. ಎಲ್ಲಾ ಇದ್ದಾಗ್ಯೂ ನಿದ್ರೆ ಬಾರದೇ ರಾತ್ರಿ ಕಳೆಯುವುದು ಸಾಮಾನ್ಯವಾಗಿದೆ.

ಇತ್ತೀಚಿನ ದಿನಗಳಲ್ಲಂತೂ ಒತ್ತಡದಿಂದಾಗಿ ಬದುಕೇ ಬೇಸರವಾಗುವಂತಾಗಿದ್ದು, ಇದನ್ನೇ ಗಮನದಲ್ಲಿಟ್ಟುಕೊಂಡು ಈ ಕತ್ತಲೆ ಹಾಡು ಶಿಬಿರವನ್ನು ಆಯೋಜಿಸಲಾಗುತ್ತಿದೆ. ಹಾಡುಗಳ ಜೊತೆಗೆ ಅದರ ಸಾಹಿತ್ಯ ಇಟ್ಟುಕೊಂಡು ನಿತ್ಯದ ಜೀವನದ ಗೊಂದಲ, ಸಂಶಯ ಜೊತೆಗೆ ಸಂವಾದ ಮಾಡುತ್ತಾ 5 ದಿನಗಳ ಕಾಲ ತಮ್ಮೊಳಗೆ ತಾವು ಹೋಗಿ ತಮ್ಮನ್ನು ತಾವೇ ಅರಿತುಕೊಳ್ಳುವ ಪ್ರಯತ್ನವಿದು. ಒಟ್ಟಿನಲ್ಲಿ ನೆಮ್ಮದಿಯನ್ನು ಅರಸಿಕೊಂಡು ಎಲ್ಲಿಗೊ ಹೋಗುವ ಬದಲಿಗೆ ನಮ್ಮೊಳಗೆ ಇರುವ ಅದನ್ನು ಅರಿತು ನಡೆಯುವುದೇ ಜೀವನ ಎನ್ನುವ ಪಾಠವನ್ನು ಇಲ್ಲಿ ಕಲಿಯಬಹುದಾಗಿದೆ.

ಕತ್ತಲ ಹಾಡಿನ ಬಗ್ಗೆ ನಾದ ಅವರು ಹೇಳುವುದೇನು? ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ತಮ್ಮ ಅನುಭವ ಹಂಚಿಕೊಂಡ ನಾದ ಅವರು, ಕತ್ತಲೆ ಹಾಡುಗಳ ಜೊತೆಗೆ ಹಾಡಿನ ಸಾಹಿತ್ಯ, ಜೀವನದ ಸಂಬಂಧದ ಬಗ್ಗೆ ಚರ್ಚೆ, ಮಾತುಕತೆ, ಸಂವಾದ ಇರುತ್ತದೆ. ಶಿಬಿರದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಅನುಭವಗಳ ಜೊತೆಗೆ ಮಾತನಾಡುತ್ತೇವೆ. ಕೊನೆಗೆ ಎಲ್ಲರೂ ಮುಕ್ತರಾಗುತ್ತೇವೆ. ಇಲ್ಲಿ ಯಾವುದೇ ಪಂಥ, ತತ್ವ, ರಾಜಕೀಯವಿಲ್ಲ. ರಾಜ್ಯದ ವಿವಿಧ ಅನಾಥಾಶ್ರಮ, ವೃದ್ಧಾಶ್ರಮ, ಮಂದಿರ, ಚರ್ಚ್, ದರ್ಗಾ, ಶಿಶು ಮಂದಿರ, ಕೇಂದ್ರ ಕಾರಾಗೃಹ ಹೀಗೆ ವಿವಿಧ ರೀತಿಯ ಗುಂಪುಗಳ ಮಧ್ಯೆ ಈ ರೀತಿಯ ಶಿಬಿರ ಮಾಡಿ ಯಶಸ್ವಿಯಾಗಿದೆ ಎನ್ನುತ್ತಾರೆ.

ನಾದ ಮಣಿನಾಲ್ಕೂರು

ಶಿಬಿರಾರ್ಥಿಗಳ ಅನುಭವಗಳೇನು? ನಾನೊಬ್ಬ ರಂಗಭೂಮಿ ಕಲಾವಿದ ಕತ್ತಲೆ ಹಾಡಿನ ಬಗ್ಗೆ ಕೇಳಿದ್ದೆ. ಈಗ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ನನ್ನಲ್ಲಿರುವ ಸಾಕಷ್ಟು ಗೊಂದಲಗಳು ಪರಿಹಾರವಾಗಲು ಸಹಾಯಕವಾಗಿವೆ ಎನ್ನುತ್ತಾರೆ. ಅದೇ ರೀತಿ ಹಾವೇರಿಯ ಲಾಲ್​ಸಾಬ, ಕತ್ತಲೆ ಹಾಡು ಬರೀ ಹಾಡಲ್ಲ, ಜೀವನದ ಪಾಠ ಹೇಳುವ ಸಂವೇದನೆ. ಅವಸರದ ಬದುಕು ಬೇಡ; ನಿಧಾನ ಬದುಕನ್ನು ಕಲಿಸಿದೆ ಎಂದು ಧಾರವಾಡ ಜಿಲ್ಲೆಯ ನವಲಗುಂದದ ಉಮೇಶ ಹೇಳಿದ್ದಾರೆ.

ಕೊಪ್ಪಳದ ಬಸವರಾಜ, ಹೂವಿನಹಡಗಲಿಯ ಪ್ರಶಾಂತ, ಗದಗನ ಸುರೇಶ, ಪಾಲಾಕ್ಷ ಅಕ್ಕಿ, ಮೈಸೂರಿನ ಕೋಮಲಕುಮಾರ, ಶ್ವೇತಾ ತುಪ್ಪದಮನೆ, ಮಂಗಳೂರಿನ ಸಿದ್ಧಾರ್ಥ ಎಲ್ಲರೂ ಸುಮನ ಸಂಗಮ ಕಾಡು ತೋಟದ ಮಧ್ಯದಲ್ಲಿ ಬೆಳಕು ಮೂಡಿಸಿದೆ ಕತ್ತಲೆಯ ಹಾಡು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇಂಥದ್ದೊಂದು ಶಿಬಿರವನ್ನು ಆಯೋಜಿಸಿದ ಡಾ. ಸಂಜೀವ ಕುಲಕರ್ಣಿ ಅವರಿಗಂತೂ ಯುವಕರ ಈ ಮಾತನ್ನು ಕೇಳಿ ಸಾಕಷ್ಟು ಸಂತಸವಾಗಿದೆ. ಕಳೆದ 5 ದಿನಗಳಿಂದ ನಾದ ಅವರ ಶಿಬಿರದಲ್ಲಿ ನಾನು ಕೂಡ ಅನೇಕ ಹೊಸ ವಿಚಾರಗಳನ್ನು ಕಲಿತಿದ್ದೇನೆ. ಅವರು ಹಲವು ವರ್ಷಗಳಿಂದ ಏಕತಾರಿ ಹಿಡಿದು ಕರ್ನಾಟಕದ ಉದ್ದಕ್ಕೂ ಕತ್ತಲೆ ಹಾಡು ಕಾರ್ಯಕ್ರಮ ಮಾಡಿದ್ದಾರೆ.

ಇದು ಕೇವಲ ಹಾಡಿನ ಶಿಬಿರ ಮಾತ್ರವಲ್ಲ, ಕತ್ತಲೆ ಮತ್ತು ಮೌನದೊಂದಿಗೆ ಅರಿವಿನ ಪಯಣ. ಹಾಡುಗಳ ಜೊತೆಗೆ ಅದರ ಸಾಹಿತ್ಯ ಇಟ್ಟುಕೊಂಡು ನಿತ್ಯದ ಜೀವನದ ಗೊಂದಲ, ಸಂಶಯ ಜೊತೆಗೆ ಸಂವಾದ ಮಾಡುತ್ತಾ 5 ದಿನಗಳ ಕಾಲ ತಮ್ಮೊಳಗೆ ತಾವು ಹೋಗಿ ತಮ್ಮ ನಿಜವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಿದು. ಜೊತೆಗೆ ಧ್ಯಾನ, ಸರಳ ಜೀವನ ಸಹ ಇಲ್ಲಿದೆ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು.

ಒಟ್ಟಿನಲ್ಲಿ ನೆಮ್ಮದಿಯನ್ನು ಅರಸುತ್ತಾ ಎಲ್ಲೆಲ್ಲಿಗೋ ಹೋಗುವ ಜನರು ಕೂಡ ಇಂತಹದ್ದೊಂದು ಕತ್ತಲೆ ಹಾಡಿನ ಶಿಬಿರಕ್ಕೆ ಬರಬೇಕು. ಒಂದು ಬಾರಿ ಈ ಶಿಬಿರದಲ್ಲಿ ಪಾಲ್ಗೊಂಡರೆ ಖಂಡಿತಾ ಅವರ ಮನಸ್ಸಿನಲ್ಲಿ ಬೆಳಕಿನ ಹೊಂಗಿರಣ ಮೂಡುವುದು ನಿಶ್ಚಿತ ಎನ್ನುವುದು ಖುಷಿಯ ವಿಚಾರ.

ಸಾಂಸ್ಕೃತಿಕ ನಗರಿಯಲ್ಲಿ ಸುಗ್ಗಿ ಸಂಭ್ರಮ: ಕಲರ್​ಪುಲ್ ವೇದಿಕೆಯಲ್ಲಿ ಕಲಾತಂಡಗಳ ಕಲರವ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್