ಅನ್ನದಾತನೊಂದಿಗೆ ನಾವು: ಹೆಗ್ಗಡತಿಯೂ ಚೋಮನೂ ಬೆಳ್ಳಿಯೂ ತಿಮ್ಮಿಯೂ ನಾಗವೇಣಿಯೂ…

'ಕುವೆಂಪು ಅವರ ಕಾದಂಬರಿಗಳಲ್ಲಿ ಪಲಾಯನ ಕೇವಲ ಪಾರಾಗುವ ಪ್ರಯತ್ನ ಮಾತ್ರ ಆಗಿರದೆ ಒಂದು ರೀತಿಯಲ್ಲಿ ಪ್ರತಿಭಟನೆ ಕೂಡ ಆಗಿರುವುದು ಅವರು, ಕೃಷಿಕರ ಬದುಕಿನ ಸಂಕೀರ್ಣತೆಯನ್ನು ಅರಿತಿದ್ದಾರೆ ಎನ್ನುವುದಕ್ಕೆ ನಿದರ್ಶನ. ಇನ್ನು ಕಾರಂತರ ಕಾದಂಬರಿಗಳಲ್ಲಿ ಆದರ್ಶದ ಜೊತೆಗೆ ವಾಸ್ತವದ ಪರಿಚಯವೂ ಇದ್ದುದರಿಂದ ಇಂದಿನ ಕೃಷಿ ಸಮಸ್ಯೆಗಳಿಗೂ ಅನ್ವಯವಾಗಬಲ್ಲ ಪರಿಹಾರವನ್ನು ಅವರು ಆಗಲೇ ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರ್ಥ ' ಎನ್ನುತ್ತಾರೆ ಎನ್. ಎಸ್. ಶ್ರೀಧರಮೂರ್ತಿ.

ಅನ್ನದಾತನೊಂದಿಗೆ ನಾವು: ಹೆಗ್ಗಡತಿಯೂ ಚೋಮನೂ ಬೆಳ್ಳಿಯೂ ತಿಮ್ಮಿಯೂ ನಾಗವೇಣಿಯೂ...
ಫೋಟೋ : ಗುರುಗಣೇಶ ಡಬ್ಗುಳಿ
Follow us
ಶ್ರೀದೇವಿ ಕಳಸದ
|

Updated on:Jan 11, 2021 | 12:54 PM

ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಬೇಸಾಯ ಮತ್ತು ರೈತರನ್ನು ಕನ್ನಡ ಪರಂಪರೆ ಕಂಡ ಬಗೆಯ ಬಗ್ಗೆ ಲೇಖನ ಸರಣಿ ಇಂದಿನಿಂದ ಟಿವಿ9 ಕನ್ನಡ ವೆಬ್​ಸೈಟಿನಲ್ಲಿ ಆರಂಭ. ಓದಿ, ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಿ. ಈ ಸರಣಿಯ ಆರಂಭ ಪತ್ರಕರ್ತ, ಲೇಖಕ ಎನ್​. ಎಸ್​. ಶ್ರೀಧರಮೂರ್ತಿ ಅವರಿಂದ. 

‘ಕೃಷಿಕರ ಸಮಸ್ಯೆ’ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.ರಾಜಕೀಯವಾಗಿಯೂ ಸಾಕಷ್ಟು ಅಯಾಮಗಳಲ್ಲಿ ಚರ್ಚಿತವಾಗುತ್ತಿದೆ. ವೈಚಾರಿಕವಾದ ಈ ಸಮಸ್ಯೆಯನ್ನು ಸೃಜನಶೀಲವಾಗಿ ಹೇಗೆ ಗ್ರಹಿಸಬಹುದು ಎನ್ನುವುದಕ್ಕೆ ಭಾರತೀಯ ಸಾಹಿತ್ಯದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಆದರೆ ಕನ್ನಡಕ್ಕೆ ಬಂದರೆ ಕೃಷಿ ಸಮಸ್ಯೆ ಸೃಜನಶೀಲ ರೂಪವನ್ನು ಪಡೆದ ಸಂಭವ ಕಡಿಮೆ. ಅದು ಹೆಚ್ಚಾಗಿ ವೈಚಾರಿಕ ರೂಪದಲ್ಲಿಯೇ ಕಾಣಿಸಿ ಕೊಂಡಿದೆ. ಕೃಷಿ ಹಿನ್ನೆಲೆ ಕಾದಂಬರಿಗಳೂ ಕೂಡ ಕೌಟಂಬಿಕ ನೆಲೆಗೆ ಅದನ್ನು ಹಿನ್ನೆಲೆಯಾಗಿಸಿ ಕೊಂಡ ಪ್ರಸಂಗಗಳೇ ಹೆಚ್ಚು. ತ.ರಾ.ಸು ಅವರ ‘ಚಂದವಳ್ಳಿಯ ತೋಟ’ ಶ್ರೀಕೃಷ್ಣ ಆಲನಹಳ್ಳಿ, ಬೆಸಗರಳ್ಳಿ ರಾಮಣ್ಣ ಅವರ ಕಥೆ ಕಾದಂಬರಿಗಳನ್ನು ಇದಕ್ಕೆ ಪ್ರಾತಿನಿಧಿಕ ಉದಾಹರಣೆಗಳಾಗಿ ನೋಡ ಬಹುದು. ತೇಜಸ್ವಿಯವರು ಸ್ವತ: ಕೃಷಿಕರೂ ಆಗಿ ಬದಲಾಗುತ್ತಿರುವ ಮಲೆನಾಡಿನ ಸ್ವರೂಪವನ್ನು ಅಧಿಕೃತವಾಗಿ ಬಲ್ಲವರು. ಈ ಕಾರಣದಿಂದ ಅವರ ‘ಚಿದಂಬರ ರಹಸ್ಯ’ ಮತ್ತು ‘ಜುಗಾರಿ ಕ್ರಾಸ್’ಗಳಂತಹ ಕೃತಿಗಳಲ್ಲಿ ಕೃಷಿಕರ ಸಮಸ್ಯೆಗಳ ಸಂಕೀರ್ಣತೆ ಬಿಂಬಿತವಾಗಿದೆ. ಆದರೆ ಇದಕ್ಕಿರುವ ಬಹುಮುಖಿ ಸಾಧ್ಯತೆಯೇ ಅದನ್ನು ಸೃಜನಾತ್ಮಕವಾಗಿ ಅಷ್ಟೇ ಉಳಿಸದೆ ಆ ಸಾಧ್ಯತೆಯನ್ನೂ ಮೀರುತ್ತದೆ.

ಈ ಹಿನ್ನೆಲೆಯಲ್ಲಿ ಕುವೆಂಪು ಮತ್ತು ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಗುರುತಿಸಿರುವ ಕೃಷಿಕರ ಸಮಸ್ಯೆಗಳ ಸೃಜನಶೀಲ ಸಾಧ್ಯತೆಗಳು ಕುತೂಹಲಕರ ಅಷ್ಟೇ ಅಲ್ಲ ಅಧ್ಯಯನಕ್ಕೂ ಯೋಗ್ಯ ಎನ್ನಿಸುತ್ತದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕೃಷಿಕರ ಅದಲ್ಲಿಯೂ ಕೆಳಜಾತಿಯ ಅಸಹಾಯಕತೆಯನ್ನು ಕುವೆಂಪು ಧ್ವನಿಪೂರ್ಣವಾಗಿ ಹಿಡಿದಿದ್ದಾರೆ. ತಿಮ್ಮಿ ಮದುವೆ ವಿಚಾರದಲ್ಲಿ ಸಣ್ಣ ಬೀರನಿಗೆ ಆಗುವ ಉಗ್ರಶಿಕ್ಷೆಯ ಸ್ವರೂಪವನ್ನು ಚಿತ್ರಿಸುವಾಗ ಅವರು ಅವರ ತಾಯಿ ಸೇಸಿಯ ಪ್ರತಿಕ್ರಿಯೆಯನ್ನೂ ಚಿತ್ರಿಸುತ್ತಾರೆ. ‘ಮೈಮೇಲೆ ಜಕಣಿ ಬಂದಿತೋ ಎಂಬಂತೆ, ಗೌಡರನ್ನು ಕಂಡರೆ ನೂರು ಮಾರು ದೂರದಲ್ಲಿಯೇ ಕುಗ್ಗಿ ಹೆದರಿ ಹುದುಗಿ ಕೊಳ್ಳುವ ಸ್ವಭಾವದ ಸಹಜಭೀರು ಆ ಹೊಲತಿ, ಏದುತ್ತಾ ನಿಡಿದಾಗಿ ಉಸಿರೆಳೆದು ಬಿಡುತ್ತಾ ಗೌಡರ ಕಡೆ ತಿರುಗಿ ರೋದನ ಮಿಶ್ರವಾದ ತಾರಸ್ವರದಲ್ಲಿ ‘ಸ್ವಾಮಿ ನನ್ನ ಬೇಕಾದ್ರೆ ಹೊಡೆದು ಹಾಕಿಸಿ! ನನ್ನ ಗಂಡು ಮಕ್ಕಳನ್ನು ಕೊನ್ನಬೇಡಿ, ದಮ್ಮಯ್ಯ ನನ್ನ ತಂದೇ… ತಪ್ಪಾಯ್ತು ಕಾಲಿಗೆ ಬಿದ್ದೆ’ ಎನ್ನುತ್ತಾಳೆ (ಮಲೆಗಳಲ್ಲಿ ಮದುಮಗಳು ಪುಟ 326) ಇಲ್ಲಿ ಕುವೆಂಪು ಅವರು ಸ್ಪಷ್ಟವಾಗಿ ಕೆಳವರ್ಗದ ಕೃಷಿಕರನ್ನು ನಿರ್ದಯವಾಗಿ ನೋಡುವ ಕ್ರಮ ಮತ್ತು ಅದರ ಜೊತೆಗಿನ ಭಾವನಾತ್ಮಕ ತಾಕಲಾಟವನ್ನು ಗುರುತಿಸಿದ್ದಾರೆ.

ಜೀತ, ಊಳಿಗಮಾನ್ಯ ಪದ್ದತಿಯ ಒಂದು ಮುಖವಾದರೆ ಲೈಂಗಿಕ ಶೋಷಣೆ ಅದರ ಇನ್ನೊಂದು ಮುಖ. ಹಣವಂತರು, ಭೂಮಾಲೀಕರು, ಕೇವಲ ಹೊಟ್ಟೆಪಾಡಿಗಾಗಿ ಹೊಲಗದ್ದೆಯಲ್ಲಿ ದುಡಿಯುವ ಹೆಣ್ಣು ಮಕ್ಕಳನ್ನು ಶೋಷಿಸುವ ಕ್ರಮವನ್ನು ಕುವೆಂಪು ವಿವರಿಸುತ್ತಾರೆ. ಬೇರೆ ಸಂದರ್ಭಗಳಲ್ಲಿ ಕಾಡುವಂತೆ ಅಸ್ಪೃಶ್ಯತೆ ಆಗ ಅವರನ್ನು ಕಾಡುವುದಿಲ್ಲ. ಬದು, ಹೊಟ್ಟಿನ ಬಣವೆ ಸಂದು ಇದೇ ಅವರ ವಿಹಾರ ಸ್ಥಳವಾಗುತ್ತದೆ. ಇದೇ ಭೌಗೋಳಿಕ ಹಿನ್ನೆಲೆಯಿಂದ ಬಂದ ಯು. ಆರ್. ಅನಂತಮೂರ್ತಿಯವರ ಕಾದಂಬರಿಗಳಲ್ಲಿಯೂ ಇಂತಹ ಚಿತ್ರಣ ಕಂಡರೂ ಅಲ್ಲಿ ಶೋಷಣೆಯ ಸ್ವರೂಪ ಇಲ್ಲ ಎನ್ನುವುದನ್ನು ತುಲನಾತ್ಮಕವಾಗಿ ಗುರುತಿಸಬಹುದು.

ಕುವೆಂಪು ಅವರ ಕಾದಂಬರಿಗಳು ಊಳಿಗಮಾನ್ಯ ವ್ಯವಸ್ಥೆಯ ಅವನತಿಯನ್ನು ಸೂಚಿಸುವುದರಿಂದ ಕೃಷಿಕರ ಸಂಕೀರ್ಣ ಘಟ್ಟವನ್ನೂ ಸೂಚಿಸುತ್ತದೆ ಎಂದು ಹೇಳಬಹುದು. ಮುಂದೆ ರೂಪುಗೊಳ್ಳುವ ವ್ಯವಸ್ಥೆ ಯಾವುದು? ಅದರ ಆರ್ಥಿಕ ಸ್ವರೂಪ ಹೇಗಿರಬೇಕು ಇಂತಹ ಪ್ರಶ್ನೆಗಳ ಬಗ್ಗೆ ಕುವೆಂಪು ಆಸಕ್ತರಲ್ಲ. ಇಲ್ಲಿ ಸ್ಥಾನಪಲ್ಲಟವಾಗುವ ಕೃಷಿಕರ ಮಾದರಿಗಳನ್ನು ಕಾಣುತ್ತಾ ಹೋಗುತ್ತೇವೆ ಅಷ್ಟೇ, ಆದರೆ ಸ್ತ್ರೀಪಾತ್ರಗಳನ್ನು ಚಿತ್ರಿಸುವಾಗ ಇಂತಹ ಪಲ್ಲಟವನ್ನು ಕ್ರಿಯಾಶೀಲವಾಗಿ ಕುವೆಂಪು ಹಿಡಿಯಬಲ್ಲರು. ‘ಕಾನೂರು ಹೆಗ್ಗಡತಿ’ಯ ಸೀತೆ ರಾಮಯ್ಯನೊಂದಿಗಿನ ಮದುವೆಗೆ ತೋರುವ ರೋಗದ ಪ್ರತಿಭಟನೆ ಸುಪ್ತ ನೆಲೆಯದಾಗಿದೆ. ಚಂದ್ರಯ್ಯಗೌಡನ ಕ್ರೂರ ದಬ್ಬಾಳಿಕೆಗೆ ಹೆದರಿ ಆಕೆ ಪರಾರಿಯಾಗುವ ಮೂಲಕ ಪ್ರತಿರೋಧ ತೋರಿಸುವುದಷ್ಟೇ ಅಲ್ಲ ರಾಮಯ್ಯನೊಂದಿಗೆ ಬದುಕಲು ಕಾನೂರಿಗೆ ಬರಲು ನಿರಾಕರಿಸುತ್ತಾಳೆ. ಮುಂದೆ ಆತ ಸತ್ತ ನಂತರ ಹೂವಯ್ಯನೊಂದಿಗೆ ಆದರ್ಶ ತಪಸ್ವಿನಿಯಂತೆ ಕಾನೂರಿಗೆ ಬಂದು ನೆಲೆಸುತ್ತಾಳೆ. ಆದರೆ ಇಂತಹ ಪಲ್ಲಟವನ್ನು ಅವರ ಕೃಷಿಕರ ಚಿತ್ರಣಗಳು ಇನ್ನೊಂದು ನೆಲೆಯಲ್ಲಿ ಹಿಡಯುತ್ತವೆ.

ಹೀಗಾಗಿ ಕುವೆಂಪು ಅವರ ಕಾದಂಬರಿಗಳಲ್ಲಿ ಪಲಾಯನ ಕೇವಲ ಪಾರಾಗುವ ಪ್ರಯತ್ನ ಮಾತ್ರ ಆಗಿರದೆ ಒಂದು ರೀತಿಯಲ್ಲಿ ಪ್ರತಿಭಟನೆ ಕೂಡ ಆಗಿರುವುದು ಅವರು ಕೃಷಿಕರ ಬದುಕಿನ ಸಂಕೀರ್ಣತೆಯನ್ನು ಅರಿತಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ತಿಮ್ಮಿ-ಚಿನ್ನಮ್ಮರ ಪ್ರತೀಕಗಳನ್ನು ಇದಕ್ಕೆ ಗಮನಿಸ ಬಹುದು. ಪಲಾಯನ ಅಲ್ಲಿ ಕೌಟಂಬಿಕ ಭದ್ರತೆಯನ್ನು ಮೀರಿ ಗಂಡಾತರಗಳಿಗೆ ಸಮುಖಾಮುಖಿಯಾಗುವ ಎದೆಗಾರಿಕೆಯನ್ನು ಸೂಚಿಸಿದೆ. ಓಡಿಹೋಗುವ ಕ್ರಿಯೆ ತನಗೂ ಮತ್ತು ಮುಕುಂದಯ್ಯನಿಗೂ ಸಮಾನವಾಗಿದ್ದರೂ ಪರಿಣಾಮ ಬೇರೆ ಎನ್ನುವುದನ್ನು ಚಿನ್ನಮ್ಮ ಬಲ್ಲಳು. ಅದರಂತೆ ಕೆಳಸ್ತರದ ತಿಮ್ಮಿ ಒಡ್ಡಯರ ದಬ್ಬಾಳಿಕೆ ಭೀತಿಯನ್ನು ದಾಟಿ ಗುತ್ತಿಯೊಂದಿಗೆ ಊರು ಬಿಟ್ಟು ಬೇರೆ ಕಡೆ ಆಶ್ರಯ ಪಡೆದರೂ ಬಯಸಿದ್ದನ್ನು ಪಡೆದೆ ಎನ್ನುವ ತೃಪ್ತಿ ಇದ್ದರೂ ಆತಂಕ ತಪ್ಪುವುದಿಲ್ಲ. ಕುವೆಂಪು ಆದರ್ಶವಾದಿ ನೆಲೆಯಲ್ಲಿ ತಮ್ಮ ಕಾದಂಬರಿಗಳನ್ನು ರಚಿಸಿದರೂ ವಾಸ್ತವದ ಆತಂಕಗಳನ್ನು ಬಲ್ಲರು ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಕೃಷಿಕರ ಚಿತ್ರಣ ನೀಡುವಲ್ಲಿಯೂ ಇಂತಹ ವಾಸ್ತವದ ನೆಲೆಗಳು ಕುವೆಂಪು ಅವರ ಕಾದಂಬರಿಗಳಲ್ಲಿ ಇದೆ ಎನ್ನುವುದನ್ನು ಗಮನಿಸಬಹುದು.

ಮಲೆನಾಡಿನ ಕವಿಯಾದ ಕುವೆಂಪು ಪ್ರಕೃತಿ ಕವಿಯಾಗಿ ಪ್ರಸಿದ್ದರು. ವರ್ಡ್ಸ್​ವರ್ತ್​ನ ಪ್ರಭಾವ ಅವರ ಮೇಲೆ ಅತಿಶಯವಾಗಿ ಆಯಿತು. ಈ ಕಾರಣದಿಂದ ಅವರು ಕೃಷಿಕರ ಸಮಸ್ಯೆಗಳನ್ನು ಆರ್ಥಿಕ ನೆಲೆಯಲ್ಲಿ ಚರ್ಚಿಸಲು ಹೋಗುವುದಿಲ್ಲ. ಆದರೆ ಅವರ ಕಾಲದ ಕೃಷಿಯ ಆರ್ಥಿಕ ನೆಲೆಗಳು ಪಡೆಯುತ್ತಿದ್ದ ಪಲ್ಲಟಗಳನ್ನು ಅವರು ಗುರುತಿಸಿದ್ದಾರೆ. ಅವರ ಕಾದಂಬರಿಗಳಲ್ಲಿ ಸೋಗೆಮನೆ, ಹೆಂಚಿನಮನೆ, ತಾರಸಿಮನೆಗಳು ಆರ್ಥಿಕ ಸಾಧ್ಯತೆಗಳನ್ನು ಗುರುತಿಸುವ ನೆಲೆಯಲ್ಲಿ ಬರುತ್ತವೆ. ಮಗನಿಗೆ ಹೆಂಚು ಹಾಕಿಸುವಾಸೆ ತಂದೆಗೆ ಧಿಮಾಕಿನಂತೆ ಕಾಣುತ್ತದೆ.ಅಷ್ಟೇ ಅಲ್ಲ ಗಂಧದಮರ ಕಳ್ಳಸಾಗಾಣಿಕೆಯ ಪ್ರಸ್ತಾಪವೂ ಅವರ ಕಾದಂಬರಿಗಳಲ್ಲಿ ಕಾಣುತ್ತದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಸುಬ್ಬಣ್ಣ ಹೆಗಡೆಗೆ ಹಂದಿಯನ್ನು ಕಂಡರೆ ಗದ್ದೆ, ತೋಟಗಳಷ್ಟೇ ಪ್ರೀತಿ. ಅವನಿಗೆ ಕಾಜಾಣದ ಆಲಾಪನೆಯಾಗಲಿ, ಹಕ್ಕಿಯ ಸಿಳ್ಳಿನ ಕಡೆ ಆಗಲಿ ಗಮನವಿಲ್ಲ. ಹಂದಿ ಒಡ್ಡಿಯಲ್ಲಿ ಕೇಳಿ ಬರುವ ಸದ್ದುಗಳೇ ಗುಪ್ತಲಿಪಿಯ ಸಂಕೇತ ಸ್ವರಗಳಾಗಿ ಮಾರ್ಪಡುತ್ತವೆ. ಇದು ಮೇಲುಸ್ತರದಲ್ಲಿ ಇರುವವರ ಪ್ರಾಣಿ ವ್ಯಾಮೋಹ ಇಲ್ಲಿ ಆರ್ಥಿಕ ನೆಲೆಗಳೂ ಇವೆ. ಗುತ್ತಿ ಮತ್ತು ಅವನ ನಾಯಿ ಹುಲಿಯನೊಡನೆಯ ಸಂಬಂಧವನ್ನು ಕುವೆಂಪು ಸಾಕಷ್ಟು ವಿಸ್ತಾರವಾಗಿ ವರ್ಣಿಸುತ್ತಾರೆ. ಅಲ್ಲಿ ಇರುವುದು ಸಹಜವಾದ ಸಂಬಂಧ. ಇದಲ್ಲದೆ ಪ್ರಕೃತಿಯಲ್ಲಿಯೇ ಸಹಜವಾದ ವಿನ್ಯಾಸವೊಂದಿದೆ. ‘ಎಲ್ಲ ಮನುಷ್ಯರ ಸದ್ದು ಅಡಗಿದರೂ ಪೊದೆಯಲ್ಲಿ ಪಿಕಳಾರಗಳು ಕೂಗುತ್ತಿದ್ದದೂ ಹಾರಿ ಹೋಗುತ್ತಿದ್ದ ಗಿಳಿ ಕಾಮಳ್ಳಿಗಳ ಹಿಂಡು ಉಲಿಯುತ್ತಿದ್ದದು, ಮಿಂಚುಳ್ಳಿಯೊಂದು ಮೀಮೀಮಿ ಎಂದು ಕರೆಯುತ್ತಿದ್ದದೂ’ (ಪುಟ 157) ಅವರಿಗೆ ಸಹಜವಾಗಿ ಕಾಣುತ್ತದೆ. ಕೃಷಿ ಕೂಡ ಕುವೆಂಪು ಅವರಿಗೆ ಇಂತಹ ಪ್ರಕೃತಿ ಸಹಜ ವಿದ್ಯಮಾನ. ಕೂಣಿ ತಯಾರಿಸುವುದು, ಕೂಣಿ ಹಾಕುವುದು, ಹಳ್ಳಕ್ಕೆ ಯಾಪೆ ಕಟ್ಟುವುದು, ಮೀನು ಕಡಿಯುವುದು ಮುಂತಾದ ವಿವರಗಳನ್ನು ಅವರು ಜೋಡಿವುದು ಕ್ರಮದಲ್ಲಿಯೇ ಇದನ್ನು ಗಮನಿಸಬಹುದು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪ್ರಧಾನ ಮದುಮಗಳು ಚಿನ್ನಮ್ಮ ಕೂಡ ಕೂಲಿಯಾಳಾಗುವುದನ್ನು ಇಲ್ಲಿ ಗಮನಿಸ ಬಹುದು. ಮುಕುಂದಯ್ಯ ‘ಎಲ್ಲರ ಮನೆಯಲ್ಲೂ ಸಸಿ ನೆಟ್ಟು ಪೂರೈಸುತ್ತಾ ಬಂದದೆ. ನಾವು ನಾಳೇನೇ ಸುರು ಮಾಡಬೇಕು ಕೆಲಸಕ್ಕೆ. ನೀನೂ ಬರ್ತೀಯಷ್ಟೆ. ನನ್ನ ಜೊತೆ ಗದ್ದೆ ಕೆಲಸಕ್ಕೆ’ ಎಂದು ಚಿನ್ನಮ್ಮನನ್ನು ಆಹ್ವಾನಿಸುತ್ತಾನೆ. ನಾವೇನೂ ಸುಮ್ಮನೆ ಕೂಳು ಕತ್ತರಿಸುತ್ತಾ ಕೂತಿಲ್ಲ, ನಾಗಕ್ಕನ ಜೊತೆ ಆಗ್ಲೇ ಕೆಲಸಕ್ಕೆ ಹೋಗುತ್ತಿದ್ದೀನಿ ಎಂದು ಚಿನ್ನಮ್ಮ ಉತ್ತರಿಸುತ್ತಾಳೆ. ಈ ಉಲ್ಲೇಖಕ್ಕೂ ಕಾರಣವಿದೆ. ಚಿನ್ನಮ್ಮನಿಗೆ ಕೃಷಿ ಕೆಲಸ ಸಹಜವಲ್ಲ ಎನ್ನುವ ಸೂಚನೆಯನ್ನು ಕುವೆಂಪು ಹಿಂದೆಯೇ ಕೊಟ್ಟಿದ್ದಾರೆ.

ಪಿಂಚಲುವೊಂದಿಗೆ ಚಿನ್ನಮ್ಮ ಒಲ್ಲದ ವಿವಾಹದಿಂದ ತಪ್ಪಿಸಿಕೊಂಡು ಪಲಾಯನ ಮಾಡುವಾಗ ಬರುವ ಮಾತುಗಳು ಇವು. ‘ಪೀಂಚಲುಗಿಂತಲೂ ಚಿನ್ನಮ್ಮನಿಗೇ ಹಾದಿ ನಡೆಯುವುದು ಕಷ್ಟತರವಾಗಿತ್ತು. ಎಷ್ಟೆಂದರೂ ಪೀಂಚಲು ಕೆಲಸದ ಆಳು; ಅವಳು ದಿನದಿನವೂ ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿ ಗದ್ದೆಯಲ್ಲಿ ತೋಟದಲ್ಲಿ ಕಾಡಿನಲ್ಲಿ ನಡೆದೂ ದುಡಿದೂ ಅಭ್ಯಾಸವಾದವಳು. ಚಿನ್ನಮ್ಮ ಚಿಕ್ಕವಳಿದ್ದಾಗ ಆ ಹಾಡ್ಯ, ಕಾಡು, ಗದ್ದೆಗಳಲ್ಲಿ ಅಡ್ಡಾಡಿದ್ದರೂ ದೊಡ್ಡವಳಾದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಅವಳು ಶ್ರೀಮಂತ ಗೃಹಿಣಿಯಂತೆ ಹೆಚ್ಚು ಕಾಲವನ್ನು ಮನೆಯೊಳಗಣ ಮೃದುಲತಾ ವಲಯದಲ್ಲಿ ಕಳೆಯುತ್ತಿದ್ದಳು. ಹಳು ಕೀಳುವುದಕ್ಕೂ, ಸಸಿ ನೆಡುವುದಕ್ಕೂ ಇತರ ಶ್ರಮಜೀವಿ ಸ್ತ್ರೀಯರೊಡನೆ ಸ್ವಸಂತೋಷದಿಂದ ವಿಲಾಸಾರ್ಥವಾಗಿಯೇ ಗೊರಬು ಸೂಡಿಕೊಂಡು ಆಗೊಮ್ಮೆ, ಈಗೊಮ್ಮೆ ಗದ್ದೆ ತೋಟಗಳಿಗೆ ಹೋಗುತ್ತಿದ್ದದ್ದು ಉಂಟು. ಆದರೆ ಅದೆಲ್ಲಾ ಕಲಾಪರೂಪದ್ದಾಗಿರುತ್ತಿತ್ತೇ ಹೊರತು ಅವಶ್ಯ ದುಡಿಮೆಯ ಶ್ರಮರೂಪದ್ದಾಗಿರುತ್ತಿರಲಿಲ್ಲ(ಪುಟ 553). ಇಂತಹ ಚಿನ್ನಮ್ಮ ಈಗ ದುಡಿಮೆಗೆ ಸಿದ್ದಳಾಗಿದ್ದಾಳೆ. ಇದು ಕೃಷಿಕರ ಸಮಸ್ಯೆಗಳನ್ನು ಕುವೆಂಪು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.

ಸಮಾಜವಾದವೆಂದರೆ ದರೋಡೆಯಲ್ಲ; ಶಿವರಾಮ ಕಾರಂತ

ಕೃಷಿಕರ ಸಮಸ್ಯೆಗಳ ಆರ್ಥಿಕ ಅಯಾಮದ ಕುರಿತು ಶಿವರಾಮ ಕಾರಂತರಿಗೆ ಹೆಚ್ಚು ಸ್ಪಷ್ಟತೆ ಇದೆ. ಅದಕ್ಕಿರುವ ಕಾರಣಗಳ ಕುರಿತು ಅವರಿಗೆ ಅರಿವಿದೆ. ‘ಪ್ರಜೆಗಳ ಆರ್ಥಿಕ ಜೀವನ, ಪ್ರತಿಯೊಂದು ಕ್ಷೇತ್ರದಲ್ಲೂ ಸರ್ಕಾರದ ವಿವಿಧ ರೀತಿಯ ಹತೋಟಿಗೆ ಒಳಪಟ್ಟು, ಜನ ಸ್ವಂತಕ್ಕೆ ಏನು ಮಾಡುವುದಿದ್ದರೂ ಸರ್ಕಾರದ ಅಪ್ಪಣೆಯಿಲ್ಲದೆ ಕದಲುವಂತಿಲ್ಲ. ಆಳುವ ಪಕ್ಷವು ತನ್ನ ಲಾಭಕ್ಕಾಗಿ, ಸ್ವತಂತ್ರ ಉದ್ದಿಮೆಗಳ ಮೇಲೆ ಅಂಕಿ ಅಂಕುಶ ಹೇರಿದರು’ (ಸ್ಮೃತಿ ಪಟಲದಿಂದ ಭಾಗ-2 ಪುಟ 104) ‘ಚೋಮನ ದುಡಿ’ ಕಾದಂಬರಿಯನ್ನು ಗಮನಿಸಿದರೆ ಚೋಮನ ಕುಟುಂಬದಲ್ಲಿ ಐವರು ಮಕ್ಕಳು. ಆದರೆ ದುಡಿಮೆ ಮತ್ತು ಸಂಪಾದನೆ ಲೆಕ್ಕ ಹಾಕಿ ಬೇಕಾದರೆ ಇಷ್ಟು ಸದಸ್ಯರನ್ನು ಪರಿಗಣಿಸುವಂತಿಲ್ಲ. ಇಬ್ಬರು ಮಕ್ಕಳಾದ ನೀಲ, ಕಾಳ ಕಾಯಿಲೆಯಿಂದ ಕೂಡಿದವರು. ಇಡೀ ಕುಟುಂಬದ ದುಡಿಮೆಯ ಪ್ರಮಾಣ, ಸಂಪಾದನೆಯ ರೀತಿ ನೀತಿ, ಪಡೆಯ ಬೇಕಾದ ಊಟದ ಪ್ರಮಾಣ ಇದನ್ನು ಮೀರಿ ಚೋಮನಿಗೆ ಅನಿವಾರ್ಯವಾದ ಹೆಂಡ ಪಡೆಯುವ ಅಗತ್ಯ. ಚೋಮನ ಮಗಳು ಬೆಳ್ಳಿ ಮನೆ ನೋಡಿಕೊಳ್ಳುವುದರ ಜೊತೆಗೆ ಕೆಲಸಕ್ಕೂ ಹೋಗಬೇಕು. ಈ ಎಲ್ಲಾ ವಿವರಗಳನ್ನೂ ಕಾರಂತರು ಗುರುತಿಸುತ್ತಾರೆ. ಇಂತಹ ಚೋಮನಿಗೆ ಒಂದು ಆಸೆ ಇದೆ ಅಥವಾ ಅವನ ಮಾತುಗಳಲ್ಲೇ ಹೇಳುವುದಾದರೆ ‘ಏನೋ ನನ್ನ ಮನಸ್ಸಿನಲ್ಲಿ ಒಂದು ಭ್ರಮೆಯಿದೆ’ ಅದು ನೆಲವನ್ನು ಉತ್ತಿ ಬೆಳೆಯಬೇಕು, ಬೇಸಾಯಗಾರನಾಗಬೇಕು. ಆದರೆ ಅವನು ಹೊಲೆಯ ಮಾತ್ರವಲ್ಲ ಮಾರಿ ಹೊಲೆಯ ಕೂಡ. ಸಾಗುವಳಿ ಮಾಡುವಂತಿಲ್ಲ, ಮಗಳು ಬೆಳ್ಳಿಗೆ ಈ ವಾಸ್ತವ ಗೊತ್ತಿದೆ. ಮುಂದೆ ಚೋಮ ತಾನು ಉಳುಮೆ ಮಾಡುವೆ ಎಂದು ಕನಸು ಕಂಡಿದ್ದ ಎತ್ತುಗಳನ್ನೇ ಬಳಸಿ ಧನಿಯರ ಹೊಲವನ್ನು ಉಳುಮೆ ಮಾಡಬೇಕಾಗಿ ಬರುತ್ತದೆ. ಚೋಮನ ಜೀವನ ಚಕ್ರ ಅವನು ಬಯಸಿದಂತೆ ತಿರುಗದೆ ಎಲ್ಲರಿಂದ ತಿರಸ್ಕೃತನಾದೆ ಎಂಬ ಭಾವನೆ ಮೂಡಿ ಪ್ರಜ್ಞಾಪೂರ್ವಕವಾಗಿ ಎತ್ತುಗಳನ್ನು ಬಿಡುಗಡೆ ಮಾಡುತ್ತಾನೆ. ಕೃಷಿಕರ ಸಮಸ್ಯೆಗಳ ಸಂಕೀರ್ಣತೆಯನ್ನು ಹಿಡಿದಿಡುವ ಈ ಕಾದಂಬರಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ಬೆಸೆದು ಕೃಷಿಕರು ಅನುಭವಿಸುವ ಕಷ್ಟಗಳನ್ನು ಸೊಗಸಾಗಿ ಹಿಡಿದಿಡುತ್ತದೆ.

ದುಡಿಮೆಯ ಚಕ್ರ ಕೃಷಿಕರ ಬದುಕಿನ ಅನಿವಾರ್ಯ ಸ್ಥಿತಿಯಾದರೂ ಅದರಲ್ಲಿ ಪಲ್ಲಟಗಳೂ ಇವೆ ಎನ್ನವುದನ್ನು ‘ಮರಳಿ ಮಣ್ಣಿಗೆ’ ಕಾದಂಬರಿ ಗುರುತಿಸುತ್ತದೆ. ಇಲ್ಲಿ ಭೂಮಿಯನ್ನು ಗೇಣಿಗೆ ಕೊಡುವ ಕೃಷಿಕರ ಕೂಡ ಚಿತ್ರಣ ಬರುತ್ತದೆ. ಕೃಷಿ ಕುಟುಂಬಗಳು ನಡೆಯುವುದೇ ಹೆಂಗಸರಿಂದ. ಅದರಲ್ಲೂ ಸ್ವಂತಬೇಸಾಯ ಮಾಡಿ ಕೊಂಡು ಆಳುಕಾಳು ನೆರವಿಲ್ಲದೆ ಕೃಷಿ ಕುಟಂಬದಲ್ಲಿ ಇದು ಅನಿವಾರ್ಯ. ಆದರೆ ಮನೆ ಯಜಮಾನ ಹೆಂಗಸರಿಂದ ದುಡಿಮೆ ಮಾತ್ರ ಬಯಸುತ್ತಾನೆ. ವಿವರಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಗೇಯ್ದು ತಿನ್ನುವ ಕಾಲ ಬಂದಾಗ ಕಾದಂಬರಿಯ ಸತ್ಯಭಾಮೆ, ನಾಗವೇಣಿಯರೇ ಕೃಷಿಯ ಹೊಣೆ ಹೊರಬೇಕಾಗುತ್ತದೆ. ಈಗ ಆಳುಗಳನ್ನು ಕೂಡಿ ತಾವೂ ಕೆಲಸ ಮಾಡ ಬೇಕೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಸೂರನ ಕುಟುಂಬದ ನೆರವಿನಿಂದ ಅದೂ ಸಾಧ್ಯವಾಗುತ್ತದೆ. ನಾಗವೇಣಿ ಒನಕೆ ಹಿಡಿದವಳಲ್ಲ. ತವರು ಮನೆಯಲ್ಲಿ ಸುಭಿಕ್ಷ ಕಂಡವಳು. ಹೊಸ ಕೆಲಸದಿಂದ ರಟ್ಟೆ ನೊಂದಿತು, ನಾಲ್ಕೆಂಟು ದಿನ ತೋಳುಗಳು ಊದಿ ಅವಳನ್ನು ದಣಿಸಿದವು. ಆದರೆ ಜೀವನ ನಡೆಯ ಬೇಡವೆ. ಕಾರಂತರು ಕೃಷಿಕರ ಬದುಕಿನ ಪಲ್ಲಟಗಳನ್ನು ಗುರುತಿಸುವುದು ಹೀಗೆ. ಕಾದಂಬರಿಯಲ್ಲಿ ನಗರದೆಡೆಗಿನ ವಲಸೆಯ ಚಿತ್ರಣವೂ ಬರುತ್ತದೆ. ಅಲ್ಲಿಂದ ಮರಳಿ ಮಣ್ಣಿನ ಕಡೆ ಬರುವ ಚಿತ್ರಣವೂ ಇದೆ. ವಿದ್ಯೆ ಕಲಿತು, ನಗರ ಜೀವನದ ಅನುಭವ ಪಡೆದು ಮತ್ತೆ ಗ್ರಾಮದಲ್ಲಿ ಕೃಷಿ ಮತ್ತು ಮಾಸ್ತರಿಕೆ ಮಾಡುವ ರಾಮನ ಚಿತ್ರದೊಂದಿಗೆ ಕಾದಂಬರಿ ಮುಗಿಯುತ್ತದೆ. ಇದು ಒಂದು ರೀತಿಯಲ್ಲಿ ಕಾರಂತರಿಗೆ ಕೃಷಿಯ ಬಗ್ಗೆ ಇದ್ದ ಅದಮ್ಯ ನಂಬಿಕೆಯ ಚಿತ್ರಣ ಕೂಡ ಹೌದು. ಇದನ್ನು ಹೋಲುವ ಸಂವಿಧಾನ ಪಡೆದಂತಹ ಇನ್ನೊಂದು ಕಾದಂಬರಿ ‘ಚಿಗುರಿದ ಕನಸು’ ಆದರೆ ಇದು ಹೆಚ್ಚು ಆದರ್ಶವಾದಿ ಕಾದಂಬರಿ. ಆದರೆ ಭಾವನಾತ್ಮಕ ನೆಲೆಯಲ್ಲಿಯೇ ಇಲ್ಲ. ಬೇರುಗಳನ್ನು ಹುಡುಕುವ, ರೈತನಾಗುವ ಕನಸು ಇದ್ದಕಿದ್ದ ಹಾಗೆಯೇ ಚಿಗುವುದಿಲ್ಲ. ಮೊದಲು ಇಂತಹ ಭಾವನೆಗಳು ಅಸ್ಪಷ್ಟವಾಗಿಯೇ ಇರುತ್ತವೆ. ಕೃಷಿಯ ಸಮಸ್ಯೆಗಳೂ ಇಲ್ಲಿ ವರ್ಣಿತವಾಗಿದೆ. ಈ ಕಾದಂಬರಿಯ ಕೃಷಿಕರು ಗುರುತಿಸುವಂತೆ ಕೂಲಿಗಳು ಸಿಕ್ಕುವುದಿಲ್ಲ, ಬಂದರೂ ನೆಲೆ ನಿಲ್ಲುವುದಿಲ್ಲ ಸಿಕ್ಕಿದ್ದರೆ ನಾವೂ ‘ದೊರೆಗಳು’ ಆಗುತ್ತಿದ್ದೆವು ಎಂಬುದು ಇವರ ವಾದ.

‘ದುಡಿಯುವುದಕ್ಕೆ ಬೇಕಾದ ಆಳುಗಳಿದ್ದರೆ, ಸೀಮೆ ನೋಡಿ ಬಂದಿರಲ್ಲ, ಆ ಭೂಮಿ ಎಂದಾದರೂ ಹಾಗೆ ಪಾಳು ಬೀಳುತ್ತಿತ್ತೇ? ಹೊರಗಿನ ಜನರು ಇಲ್ಲಿ ಬರುವುದಿಲ್ಲ. ಇಲ್ಲಿನ ಚಳಿಜ್ವರಕ್ಕೆ ಹೆದರುತ್ತಾರೆ. ನ್ಯಾಯವಾಗಿ ಅಷ್ಟು ಹೆದರ ಬೇಕಾಗಿಲ್ಲ ಘಟ್ಟದ ಮೇಲಿನ ತೋಟಕ್ಕೆ ಹೋಗುತ್ತಾರೆ. ಸಾವಿರಾರು ಜನ. ಅಲ್ಲಿಗೆ ಹೋಗುತ್ತಾರೆಂದು ಇಲ್ಲಿಗೆ ಬರುವುದಿಲ್ಲ. ಘಟ್ಟದಲ್ಲಿ ಚಳಿಜ್ವರ ಕಡಿಮೆಯೇ? ಪ್ರಾಯಶಃ ಅವರಿಗೆ ಬೇಕಾದ ಕಾಫಿ ಹೋಟೆಲು, ಜುಗಾರಿಮಂಡ, ಹೆಂಡದಂಗಡಿಗಳು ಯಾವುದೂ ನಮ್ಮೂರಿನಲ್ಲಿ ಇಲ್ಲ, ಇಲ್ಲೊಂದು ಹೆಂಡದಂಗಡಿಯನ್ನು ಕಾಯಂ ಆಗಿ ತೆಗೆದರೆ, ಒಂದಿಷ್ಟು ಆಳುಗಳು ಬಂದು ನಿಂತಾರು’(ಪುಟ 68) ಗಮನಿಸಬೇಕಾದ ಸಂಗತಿ ಎಂದರೆ ಶಂಕರನ ‘ಚಿಗುರಿದ ಕನಸಿ’ನಲ್ಲಿ ಆದರ್ಶ ಮಾತ್ರವಲ್ಲ ವಾಸ್ತವದ ಪ್ರಜ್ಞೆ ಕೂಡ ತೀವ್ರವಾಗಿದೆ. ಅವನಿಗೆ ಬೆಂಬಲವಾಗಿ ನಿಂತ ಮುತ್ತಯ್ಯ ಗೌಡನಿಗೆ ಇದು ಗೊತ್ತು ‘ಎರಡು ಮೂರು ವರ್ಷಗಳ ತನಕ ಇಲ್ಲಿ ಏನೂ ಆಗದೆಂಬುದು ನನಗೂ ಗೊತ್ತು, ಧನಿಗಳಿಗೂ ಗೊತ್ತು, ನಾನು ಅವರಿಗೆ ಇಲ್ಲದ ಆಸೆ ಹುಟ್ಟಿಸಿಲ್ಲ. ಐದು ವರ್ಷ ಕಣ್ಣ ಮುಚ್ಚಿ ಹಣ ಸುರಿಯ ಬೇಕು ಎಂದು ಹೇಳಿದ್ದೇನೆ. ಅವರೂ ಒಪ್ಪಿದ್ದಾರೆ.’ ಈ ಅರಿವಿನ ವಿನ್ಯಾಸ ಕೇವಲ ಕೃಷಿಗೆ ಮಾತ್ರ ಸಂಬಂಧಿಸಿದ್ದಲ್ಲ ಶಂಕರನ ವ್ಯಕ್ತಿತ್ವದ ಬದಲಾವಣೆಗೂ ಸಂಬಂಧಿಸಿದ್ದು. ಮತ್ತೊಬ್ಬನೊಡನೆ ಒಡನಾಟ ಹೊಂದಿ ಇವನ ಪ್ರೀತಿಯನ್ನೇ ಬಯಸುವ ವರಲಕ್ಷ್ಮಿಯನ್ನು ವಿವಾಹವಾಗುವಲ್ಲಿ ಅದು ವ್ಯಕ್ತವಾಗುತ್ತದೆ.

‘ಬೆಟ್ಟದ ಜೀವ’ ಕಾದಂಬರಿಯ ಗೋಪಾಲಯ್ಯ-ಶಂಕರಮ್ಮ ದಂಪತಿಗಳಿಗೆ ದುಡಿಮೆಯೇ ಜೀವನ ಶೈಲಿ. ಅದು ಪ್ರಕೃತಿ ಸಹಜಕ್ರಿಯೆ ಎಂಬಂತೆ ಅವರು ನೋಡುತ್ತಾರೆ. ಹಾದಿ ತಪ್ಪಿದ ನಿರೂಪಕನಿಗೆ ಅವರ ಮನೆಯಲ್ಲಿ ತಂಗುದಾಣ, ಅತಿಥ್ಯ ಎಲ್ಲವೂ ಸಿಗುತ್ತದೆ ಎಂದು ದೇರಣ್ಣ ಹೇಳುತ್ತಾ ಪರಿಚಯ ಮಾಡುವುದೇ ಹೀಗೆ ‘ಅವರು ಮೊದಲಿಂದಲೂ ತುಂಬಾ ಅನುಕೂಲಸ್ಥರು, ಸ್ವಂತ ದುಡಿಮೆಯವರಾದ್ದರಿಂದ, ದೇವರ ದಯೆಯಿಂದ ಅವರಿಗೆ ಏನೂ ಕಡಿಮೆಯಾಗಿಲ್ಲ’ ಅವರ ದುಡಿಮೆಯ ರೀತಿಯೂ ವಿಶಿಷ್ಟವಾದದ್ದೇ ‘ಗೋಪಾಲಯ್ಯ ಅಂಗಳಕ್ಕಿಳಿದು ಅಲ್ಲಿದ್ದ ಮೆಟ್ಟುಕತ್ತಿಯನ್ನು ಎಳೆದುಕೊಂಡು ಅದರ ಮೇಲೆ ಕುಳಿತರು. ರಾಶಿಯ ಅಡಿಕೆಗಳನ್ನು ಒಂದೊಂದಾಗಿ ತೆಗೆದು ಸಿಪ್ಪೆ ಸುಲಿಯ ತೊಡಗಿದರು. ಮನೆಯ ಆಳುಗಳು ಆ ಕೆಲಸ ಮಾಡಿ ಮುಗಿಸ ಬಹುದಿತ್ತು, ಆದರೆ ಉದ್ಯೋಗವಿಲ್ಲದೆ ಸಮಯ ಕಳೆಯುವುದು ಅವರ ಜೀವಕ್ಕೆ ಒಗ್ಗದ ಸಂಗತಿ. ಇತ್ತ ಕತ್ತಿಯಿಂದ ಸುಲಿದ ಅಡಿಕೆಗಳು ಒಂದೊಂದಾಗಿ ಬುಟ್ಟಿಗೆ ಬೀಳುತ್ತಿರುವಂತೆ ಬಾಯಿಯಂದಲೂ ಮಾತು ಉರುಳುತ್ತಿತ್ತು. (ಪುಟ 33) ಇಡೀ ಕಾದಂಬರಿಯಲ್ಲಿ ಕೃಷಿ ಕೆಲಸಗಳು ಒಂದು ರೀತಿಯಲ್ಲಿ ಆರಾಧನೆಯಂತೆ ವರ್ಣಿತವಾಗಿದೆ. ಹೀಗಾಗಿ ಹುಲಿಯ ಬೇಟೆ ಕೂಡ ಇಲ್ಲಿ ಸಾಹಸದಂತೆ ಬಾರದೆ ಮನೆವಾರ್ತೆಯಂತೆ ಬರುತ್ತದೆ.

ಕೃಷಿಯ ಸಹಜತೆಯ ಇನ್ನೊಂದು ಮುಖದಂತೆ ಕಾಣಿಸುವ ಕಾದಂಬರಿ ‘ಕುಡಿಯರ ಕೂಸು’ ಅವರ ಬದುಕು ಕೂಡ ಹೀಗೆ ಕೃಷಿಗೆ ಸಹಜವೆಂಬಂತೆ ಹೊಂದಿ ಕೊಂಡಿರುವುದು.ಆದರೆ ಅರಣ್ಯದ ಸೌಂದರ್ಯ ‘ಮನಮೋಹಕವಾಗಿ ಕಾಣಿಸ ಬಹುದಾದರೂ, ಅದರಲ್ಲಿಯೇ ಬಾಳಿ, ಬದುಕಿ, ಜೀವನ ಸಂಸಾರ ಸಾಗಿಸುವ ಮಲೆ ಕುಡಿಯರಿಗೆ ಯಾವ ಕಾವ್ಯದೃಷ್ಟಿ ಬರಬೇಕು? ಬದಲಿಗೆ ಬೆಟ್ಟದ ಕೋಡುಗಳು, ಬಂಡೆಯ ನಿಲುವುಗಳು, ಆಗಾಗ ತಲೆದೋರುವ ಕಾಡ್ಗಿಚ್ಚುಗಳು, ಕುಲೆ, ದೈವ ಪ್ರೇತ ಮೊದಲಾದ ಹಲವಾರು ಅಶರೀರ ಪಿಶಾಚಿಗಳ ನೆನಪುಗಳನ್ನು ಮಾತ್ರ ಕೆರಳಿಸುತ್ತವೆ (ಪುಟ 206) ಈ ಕಾದಂಬರಿಯನ್ನು ಕೃಷಿಕರ ಸಮಸ್ಯೆಗಳ ದೃಷ್ಟಿಯಿಂದ ನೋಡಿದರೆ ಎರಡು ನೆಲೆಗಳಾಗಿ ಗುರುತಿಸಬಹುದು ಒಂದು ಮಲೆ ಕುಡಿಯರ ಜೀವನ, ಬೇಸಾಯ, ಜೀವನ ಶೈಲಿ, ನಂಬಿಕೆ ಆಚರಣೆ ಇಂತಹ ಸಹಜತೆಯದು. ಇನ್ನೊಂದು ಕರಿಯ, ತಿಮ್ಮ-ಗಿಡ್ಡಿಯರ ಜೊತೆ ಸ್ಥಾಪಿಸಿದ ‘ಕರಿಮಲೆ’ ಯದು ಇಲ್ಲಿ ಕೃಷಿ ಮುಂದೆ ಪಡೆಯ ಬಹುದಾದ ಸಾಧ್ಯತೆಗಳ ಚಿತ್ರಣವಿದೆ.

ಶಿವರಾಮ ಕಾರಂತರಿಗೆ ಮುಖ್ಯವಾಗುವುದು ವ್ಯಕ್ತಿನಿಷ್ಠೆ, ನೈತಿಕತೆ, ಇನ್ನೊಬ್ಬರನ್ನು ಸುಲಿದು ಮಾಡುವ ದಾನ ಅವರಿಗೆ ಒಪ್ಪಿಗೆ ಇಲ್ಲ. ಅವರ ಪ್ರಕಾರ ದರೋಡೆ ಸಮಾಜವಾದವಲ್ಲ. (ಹುಚ್ಚು ಮನಸ್ಸಿನ ಹತ್ತುಮುಖಗಳು, ಪುಟ 289) ‘ಹಳ್ಳಿಯ ಹತ್ತು ಸಮಸ್ತರು’ ‘ಔದಾರ್ಯದ ಉರುಳಿನಲ್ಲಿ’ ಮೊದಲಾದ ಕಾದಂಬರಿಗಳಲ್ಲಿ ಅವರು ಕೃಷಿ ಬದುಕಿನ ಧ್ಯೇಯವಾಗ ಬೇಕು ಎಂದು ಒತ್ತಿ ಹೇಳಿದರು. ಆದರೆ ಇಂತಹ ಆದರ್ಶದ ಜೊತೆಗೆ ಅವರಿಗೆ ವಾಸ್ತವದ ಪರಿಚಯ ಕೂಡ ಇತ್ತು. ಹೀಗಾಗಿ ಇಂದಿನ ಕೃಷಿ ಸಮಸ್ಯೆಗಳಿಗೂ ಅನ್ವಯವಾಗಬಲ್ಲ ಪರಿಹಾರ ಅವರ ಕಾದಂಬರಿಗಳಲ್ಲಿ ದೊರಕಬಲ್ಲದು.

‘ಕೃಷಿ ಸಮಸ್ಯೆ’ ಕುರಿತು ಕನ್ನಡದ ಪ್ರಮುಖ ಲೇಖಕರಾದ ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳಲ್ಲಿನ ಅಂಶಗಳನ್ನು ಗಮನಿಸಿದರೆ ಇಂತಹ ಸೃಜನರೂಪವನ್ನು ಮುಂದೆ ಬಂದ ಸೃಜನಶೀಲ ಕೃತಿಗಳು ಏಕೆ ಹೊಂದಲಿಲ್ಲ ಎನ್ನುವ ನಿರಾಸೆ ಉಂಟಾಗುವುದು ಖಚಿತ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಸುಮಾ ಸುಧಾಕಿರಣ

Published On - 3:02 pm, Sun, 10 January 21

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ