IPL 2025: CSK ಮುಂದೆ RCB ಜುಜುಬಿ ತಂಡ: ಅಂಬಾಟಿ ರಾಯುಡು
IPL 2025 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ಗಳಿಂದ ಸೋಲಿಸಿತ್ತು. ಇದೀಗ ಉಭಯ ತಂಡಗಳ 2ನೇ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಇದಕ್ಕೂ ಮುನ್ನ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಯು ವೈರಲ್ ಆಗಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಯು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಆರ್‌ಸಿಬಿ ಮತ್ತು ಸಿಎಸ್ಕೆ ನಡುವೆ ಯಾವುದೇ ಪೈಪೋಟಿಯಿಲ್ಲ. ಉಭಯ ತಂಡಗಳಿಂದ ಜಿದ್ದಾಜಿದ್ದಿನ ಕದನ ನಿರೀಕ್ಷೆಯನ್ನು ಸಹ ಮಾಡುವಂತಿಲ್ಲ. ಇಲ್ಲಿ ಆರ್‌ಸಿಬಿ ತಂಡವನ್ನು ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿಯಾಗಿ ಬಿಂಬಿಸಲಾಗಿದೆ. ಆದರೆ ಅಂತಹದ್ದೇನು ಇಲ್ಲ. ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿಯೇ ಇಲ್ಲ.
ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಲವು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಗ್ಗು ಬಡಿದಿದೆ. ಅಲ್ಲದೆ ಆರ್‌ಸಿಬಿ ವಿರುದ್ಧ ಸಿಎಸ್ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಹೀಗಾಗಿ ಆರ್‌ಸಿಬಿ, ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿ ಎಂದು ನಾನಂತು ಭಾವಿಸುವುದಿಲ್ಲ.
ನೀವು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದರಲ್ಲಿ ಅರ್ಥವಿದೆ. ಏಕೆಂದರೆ ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿ ಇದೆ. ಆದರೆ ಸಿಎಸ್ಕೆ ಮುಂದೆ ಆರ್‌ಸಿಬಿ ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಅಂದಹಾಗೆ ಅಂಬಾಟಿ ರಾಯುಡು ಆರ್‌ಸಿಬಿ ತಂಡವನ್ನು ಹೀಯಾಳಿಸಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಆರ್‌ಸಿಬಿ ಹಾಗೂ ಅಭಿಮಾನಿಗಳನ್ನು ಗುರಿಯಾಗಿಸಿ ಹೇಳಿಕೆಗಳನ್ನು ನೀಡಿದ್ದರು.
ಆರ್‌ಸಿಬಿ ಕಪ್ ಗೆಲ್ಲಬಾರದು ಎಂದಿದ್ದ ರಾಯುಡು:
ಅಂಬಾಟಿ ರಾಯುಡು ಇದಕ್ಕೂ ಮುನ್ನ ಆರ್‌ಸಿಬಿ ತಂಡ ಕಪ್ ಗೆಲ್ಲಬಾರದು ಎಂದಿದ್ದರು. ಎಸ್ ಬ್ರದಿನಾಥ್ ನಡೆಸಿದ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡಿದ್ದ ರಾಯುಡುಗೆ ಈ ಬಾರಿಯಾದರೂ ಆರ್‌ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್‌ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್ಸಿಬಿಯಂತಹ ತಂಡ ಐಪಿಎಲ್ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ.
ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದರು.
ಇದಕ್ಕೂ ಮುನ್ನ ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ್ದ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಆದರೆ ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ 10 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಆರ್‌ಸಿಬಿ ಪ್ಲೇಆಫ್ ಹಂತಕ್ಕೇರುವ ಸನಿಹದಲ್ಲಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಆರ್‌ಸಿಬಿ ಪ್ಲೇಆಫ್ಗೇರಲಿದೆಯಾ ಕಾದು ನೋಡಬೇಕಿದೆ.
Published On - 9:05 am, Sat, 3 May 25




