ಕೊರೊನಾ ಸೋಂಕು ಎಂಬುದು ಕೊನೆಯಿಲ್ಲದ ಬಳ್ಳಿಯಂತಾಗಿದೆ. ಲೆಕ್ಕ ಹಾಕಿ ಮುಗಿಸಲು ಸಾಧ್ಯವಿಲ್ಲದಷ್ಟು ಆರೋಗ್ಯ, ಆರ್ಥಿಕ, ಸಾಮಾಜಿಕ ಕಷ್ಟ ನಷ್ಟಗಳನ್ನು ಕೊರೊನಾ ಸೃಷ್ಟಿಸಿದೆ ಮತ್ತು ಸೃಷ್ಟಿಸುತ್ತಿದೆ. ಆದರೆ ಕೊರೊನಾ ಮತ್ತು ಅದರಿಂದ ಉಂಟಾದ ಲಾಕ್ಡೌನ್ ಎಂಬುದು ಮನಸ್ಸಿನ ಮೇಲೆ ಬೀರಿದ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲೂ ಚಿಕ್ಕ ಮಕ್ಕಳ ಮಾನಸಿಕತೆಯ ಮೇಲೆ ಕೊರೊನಾ ಬೇರೆ ಬೇರೆ ಆಯಾಮಗಳಲ್ಲಿ ಒತ್ತಡ ಸೃಷ್ಟಿಸಿದೆ.ಲಾಕ್ಡೌನ್ನಲ್ಲಿ ಇಡೀ ದಿನ ಮನೆಯಲ್ಲೇ ಇದ್ದ ಮಕ್ಕಳು ಪಾಲಕ- ಪೋಷಕರ ಸಮಸ್ಯೆಗಳನ್ನು ಮುಖಾಮುಖಿ ಎದುರಿಸಿದ್ದಾರೆ. ಅಪ್ಪ ಅಮ್ಮನ ಜಗಳಕ್ಕೆ ಸಾಕ್ಷಿಯಾಗಿದ್ದಾರೆ. ಕೆಲಸ ಕಳೆದುಕೊಂಡು ಮುಂದಿನ ಬದುಕು ಹೇಗೋ ಎಂಬ ತೊಳಲಾಟಕ್ಕೆ ಸಿಲುಕಿದ ಅಪ್ಪನ ಮನಸ್ಥಿತಿಯನ್ನು ಮಕ್ಕಳು ಕಣ್ಣಾರೆ ಕಂಡಿದ್ದಾರೆ. ಇವೆಲ್ಲವುಗಳ ನಡುವೆ ಅತ್ಯಂತ ಮುಖ್ಯವಾಗಿ ತನ್ನ ಶಾಲೆ, ಗೆಳೆಯರು, ಪಾಟೀಚೀಲ, ಆಟದ ಮೈದಾನ ಎಲ್ಲವನ್ನೂ ತೊರೆದು ಬಹುಕಾಲ ಮನೆಯಲ್ಲೇ ಉಳಿದಿದೆ. ಯಾವಾಗ ಮರಳಿ ಶಾಲೆಗೆ ಹೋಗುವೆನೋ ಎಂಬ ಭಾವದಲ್ಲಿ ಶಬರಿಗಿಂತ ಮಿಗಿಲಾದ ಕಾಯುವಿಕೆಯ ಭಾರವನ್ನು ಮನಸ್ಸಲ್ಲಿ ಮೂಟೆ ಕಟ್ಟಿಕೊಂಡಿದ್ದಾರೆ.
ನಾವು ಯಾವಾಗಲೂ ನಷ್ಟದ ಲೆಕ್ಕ ಹಾಕುವಾಗ ಹಣವನ್ನು ಮೊದಲು ನೆನಪು ಮಾಡಿಕೊಳ್ಳುತ್ತೇವೆ. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ನಮ್ಮ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಎಂದಾದರೂ ಯೋಚಿಸಿದ್ದೀವೆಯೇ? ಶಾಲೆ ಕಾಲೇಜು ಎಂದು ಓದಿಕೊಂಡು ಒಂದೊಳ್ಳೆಯ ಕೆಲಸ ಮಾಡುವ ನಮಗೇ ಪಕ್ಕದ ಬೀದಿಯ ತಾತ ಕೊವಿಡ್ನಿಂದ ತೀರಿಕೊಂಡರಂತೆ ಎಂಬ ಸುದ್ದಿ ಕಿವಿಗೆ ಬಿದ್ದರೆ ಎದೆ ಒಮ್ಮೆಲೆ ಧಸಕ್ ಎನ್ನುತ್ತದೆ. ಕೊವಿಡ್ ಬಗ್ಗೆ ನಮಗೇ ಇಷ್ಟೊಂದು ಭಯವಿರುವಾಗ ನಮ್ಮ ಮನೆಯ ಪುಟ್ಟ ಮಕ್ಕಳ ಮನಸ್ಸಲ್ಲಿ ಕೊವಿಡ್ ಎಂಬುದು ಎಷ್ಟು ಬೃಹದಾಕಾರದ ಭೂತವಾಗಿ ಬೆಳೆದು ನಿಂತಿರಲಾರದು? ಒಮ್ಮೆ ಯೋಚಿಸಿ.
ಅದರಲ್ಲೂ ಮಕ್ಕಳು ತಮ್ಮ ನೆಚ್ಚಿನ ಗೆಳೆಯರ ಗುಂಪನ್ನು ತೊರೆದು ವರ್ಷವೇ ಮಿರಿ ಹೋಗಿದೆ. ಶಾಲೆ ಎಂಬುದು ಯಾವಾಗ ತನ್ನನ್ನು ಕರೆಸಿಕೊಳ್ಳುತ್ತದೆಯೋ ಎಂಬ ಮೂಕ ಅಭಿಲಾಶೆಯೊಂದು ನಮ್ಮ ಮಕ್ಕಳಲ್ಲಿ ಜಾಗೃತವಾಗಿದೆ. ಮೊದಲಿನಂತೆ ಹೊರಗೆ ಹೋಗಿ ಆಡುವಂತಿಲ್ಲ, ಪಕ್ಕದ ಮೈದಾನಕ್ಕೆ ಹೊಗಿ ಗೆಳೆಯರ ಜತೆ ಕೂಡಿ ಆಡುವಂತಿಲ್ಲ. ಮೊಬೈಲ್ನಲ್ಲಿ ಪಾಠ, ಮೊಬೈಲ್ನಲ್ಲೇ ಪಾಠ. ನಾಲ್ಕು ದಿನ ಮಜ ಅನಿಸಿದರು ಐದನೆ ದಿನ ಮಕ್ಕಳ ಮುಗ್ಧ ಮನಸ್ಸು ಬಾಗಿಲಿನಿಂದಾಚೆ ನೊಡುವುದು ಸಹಜ. ಆದರೆ ಅಲ್ಲಿ ಕೊವಿಡ್, ಪೊಲಿಸ್ ಬ್ಯಾರಿಕೇಡ್. ಮಕ್ಕಳ ಮನಸು ಮಂಕಾಗಲು ಇಷ್ಟು ಸಾಕು.
ನಮ್ಮ ಮನೆಯ ಮಕ್ಕಳ ಮನಸ್ಸನ್ನು ಚೇತೋಹಾರಿಯಾಗಿರಿಸಲು ಏನು ಮಾಡಬಹುದು?
ಇಂತಹ ಪ್ಯಾಂಡಮಿಕ್ನಲ್ಲಿಯೂ ಮಕ್ಕಳು ನಗುತ್ತ ಕುಣಿಯುತ್ತ ಜಿಗಿಯುವ ಕರುವಿನಂತಿರಲು? ಎಲ್ಲಕ್ಕೂ ನಮ್ಮ ಹಿತ್ತಲಲ್ಲೇ ಮದ್ದಿದೆ, ಕಾಣುವ ಕಣ್ಣುಗಳು ನಮ್ಮಲ್ಲಿ ಜಾಗೃತವಾಗಿರಬೇಕಷ್ಟೇ.
ಮಕ್ಕಳ ಮನಸ್ಸನ್ನು ಅರಿತುಕೊಳ್ಳಿ, ಅವರು ಯಾವುದೇ ವಿಷಯ ಅವರ ಮನಸ್ಸಲ್ಲಿ ಚಿಂತೆಯ ರೂಪ ಪಡೆದಿದೆಯೇ ಎಂದು ತಿಳಿದುಕೊಳ್ಳಿ. ಮುಕ್ತವಾಗಿ ಮಕ್ಕಳ ಜತೆ ಮಾತನಾಡಿ. ಮಾತಿನಲ್ಲಿ ನಿಮ್ಮ ಚಿಂತನೆ/ ಯೋಚನೆಗಳಿಗಿಂತ ಮಕ್ಕಳ ಯೋಚನೆಗಳು ಮುಖ್ಯವಾಗಿರಲಿ.
ಮಕ್ಕಳನ್ನು ಅವರ ಅಜ್ಜ ಅಜ್ಜಿಯ ಜತೆ ಬಿಡಿ. ಇದು ಎಂದಿಗೂ ಮಕ್ಕಳ ಪಾಲಿಗೆ ಟಾನಿಕ್ ಇದ್ದಹಾಗೆ. ಅಜ್ಜ ಅಜ್ಜಿಯಂದಿರ ಕಥೆಗಳಲ್ಲಿ ಮಕ್ಕಳು ಜಗದ ಚಿಂತೆ ಮರೆಯುತ್ತಾರೆ.
ಮಕ್ಕಳ ಜತೆ ಮನೆಯ ಒಳಗೇ ಬೇರೆ ಬೇರೆ ಆಟವಾಡಿ. ಹೊಸ ಹೊಸ ಆಟಗಳನ್ನು ನೀವೇ ರೂಪಿಸಿ, ಮಕ್ಕಳ ಬಳಿ ಹೊಸ ಆಟಗಳನ್ನು ಕಂಡುಹಿಡಿಯಲು ಹೇಳಿ. ಮಕ್ಕಳ ಜತೆ ನೀವೂ ಮಕ್ಕಳೇ ಆಗಿ.
ಮಕ್ಕಳು ದಿನವಿಡೀ ಸುಮ್ಮನೆ ಖಾಲಿ ಕೂರಲು ಹೆಚ್ಚು ಅವಕಾಶ ನೀಡಬೇಡಿ, ಶಿಸ್ತಿನ ಒಂದು ದಿನಚರಿಯನ್ನು ರೂಢಿಸಿ. ಆಗ ಖಾಲಿ ಮನಸ್ಸಿನಲ್ಲಿ ಇಲ್ಲಸಲ್ಲದ ವಿಚಾರಗಳು ಮೂಡುವುದಿಲ್ಲ. ಕೆಲಸದಲ್ಲಿ ಕಳೆದುಹೋದರೆ ಮನಸೂ ಹಗುರವಾಗುತ್ತದೆ.
ಮಕ್ಕಳ ಶಾಲಾ ಗೆಳೆಯರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ. ವರ್ಚುವಲ್ ಮಾತುಕತೆ ಒಂದಿಷ್ಟು ಸಂತೋಷ ತಂದುಕೊಡುತ್ತದೆ. ಹೊಸ ಹೊಸ ವಿಷಯಗಳನ್ನು ಗೆಳೆಯರ ಬಳಿ ಚರ್ಚಿಸಲು ಹೇಳಿ, ಯಾವ ಹೊಸ ವಿಷಯಗಳನ್ನು ಕಲಿತಿದ್ದೀರಿ ಎಂದು ಗೆಳೆಯರು ಅವರ ಪಾಡಿಗೆ ಅವರು ಮಾತನಾಡಿಕೊಳ್ಳಲಿ. ಹಂಚಿಕೊಳ್ಳಲಿ, ಪರಸ್ಪರ ಕಲಿಸಿಕೊಳ್ಳಲಿ.
ಸೃಜನಶೀಲ ಚಟುವಟಿಕೆಗಳನ್ನು ಕಲಿಸಿ, ಚಿತ್ರಕಲೆ, ಸಂಗೀತ, ಬರವಣಿಗೆ, ಭಾಷಣ ಕಲೆ.. ಹೀಗೆ. ಮನೆಯಲ್ಲಿಯೂ ನೂರಾರು ವಿಷಯಗಳನ್ನು ಕಲಿಯಬಹುದು, ಮನೆಯೇ ಶಾಲೆ ಎಂದು ಮನವರಿಕೆ ಮಾಡಿ.
ಇವಿಷ್ಟೇ ಅಲ್ಲ, ಇಂತಹ ಹತ್ತು ಹಲವು ವಿದಾನಗಳನ್ನು ನೀವೇ ಕಂಡುಕೊಳ್ಳಬಹುದು. ಮನೆಯಲ್ಲೇ ಇರುವ ಮಕ್ಕಳ ಮನಸ್ಸು ನಮಗೆ ಎಲ್ಲದಕ್ಕಿಂತ ಮುಖ್ಯವಾಗಲಿ. ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಮನಸು ಕಳೆದುಹೋಗದಂತೆ ನಾವೇ ಕಾಪಾಡಬೇಕು ಅಲ್ಲವೆ?
ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
Explainer: ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯದಿದ್ದರೆ ಏನಾಗುತ್ತದೆ?
(Help your children to cope up with covid 19 mental health stress here is the details)