ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com
ಪರಿಕಲ್ಪನೆ : ಶ್ರೀದೇವಿ ಕಳಸದ
ಮೈಸೂರಿನಲ್ಲಿ ನೆಲೆಸಿರುವ ಭರವಸೆಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಶ್ರೀಮತಿದೇವಿ ಅವರು ಗ್ವಾಲಿಯರ್ ಘರಾಣೆಯನ್ನು ನೆಚ್ಚಿಕೊಂಡವರು. ಈತನಕದ ತಮ್ಮ ಹಾದಿಯ ಹೊರಳುನೋಟದೊಂದಿಗೆ ಸಂಗೀತ ಕ್ಷೇತ್ರದ ಹಲವಾರು ವಿಚಾರಗಳನ್ನೂ ಬಿಚ್ಚುಮನಸ್ಸಿನಿಂದ ಇಲ್ಲಿ ಹಂಚಿಕೊಂಡಿದ್ದಾರೆ. ನೀವಿಲ್ಲಿ ಅವರ ಗಾಯನ ಕೇಳುತ್ತ ಓದಬಹುದು.
ಈಚಿನ ಹಲವು ವರ್ಷಗಳಲ್ಲಿ ಸಮಾಜದಲ್ಲಿ ಅದೆಷ್ಟು ಬದಲಾವಣೆಗಳು ಆಗಿದ್ದರೂ, ಬದಲಾವಣೆಗೆ-ಮುಕ್ತತೆಗೆ ಹೆಚ್ಚು ತೆರೆದುಕೊಳ್ಳದ ಹಾಗೂ ಹೊರಗಿನವರಿಗೆ ಇನ್ನೂ ಅಗಮ್ಯ ಪ್ರದೇಶವಾಗಿಯೇ ಉಳಿದ ಕ್ಷೇತ್ರವೆಂದರೆ ಶಾಸ್ತ್ರೀಯ ಸಂಗೀತ. ಒಳಗಿನಿಂದ ಸತ್ವಯುತವಾಗಿ, ದೃಢವಾಗಿ ಬೆಳೆಯುತ್ತಿರುವ ಸಂಗೀತ ಲೋಕವು ಹೊರಗಿನವರಿಗೆ ಇನ್ನೂ ಪ್ರತ್ಯೇಕವಾದ, ಗಹನವಾದ ಲೋಕವಾಗಿ ಉಳಿದಿದೆ. ಇದರೊಳಗಿನ ಆಗುಹೋಗುಗಳು ಹೊರಗಿನವರಿಗೆ ತಿಳಿಯುವುದಿಲ್ಲ. ಬಯಸಿದವರಿಗೆಲ್ಲಾ ಇದರೊಳಗೆ ಪ್ರವೇಶ ದೊರಕುವುದೂ ಇಲ್ಲ. ‘ಮನೋರಂಜನೆ, ಆತ್ಮಾನಂದ, ಪರಮಾರ್ಥ’ ಎಂಬೆಲ್ಲಾ ಹಣೆಪಟ್ಟಿ ಹೊತ್ತುಕೊಂಡ ಶಾಸ್ತ್ರೀಯ ಸಂಗೀತವನ್ನು ಹಾಡುವವರು ನಿತ್ಯ ‘ಆನಂದದಲ್ಲಿ ತೇಲಾಡುತ್ತಾ, ಸುಖಿಯಾಗಿರುವ, ಉದಾತ್ತರಾದ ಗಂಧರ್ವ’ರಂತೆ ಉಳಿದವರಿಗೆ ಕಾಣಬಹುದೇನೋ. ಯಾಕೆಂದರೆ ಇಂಥ ಅಭಿಪ್ರಾಯವನ್ನೇ ನಮ್ಮ ಸಂಗೀತಗಾರರೂ ನೀಡುತ್ತಾ ಬಂದಿರುತ್ತಾರೆ. ಸಾಹಿತ್ಯ, ನಾಟಕ, ಕ್ರೀಡೆ ಮುಂತಾದ ಕ್ಷೇತ್ರಗಳ ಬಗ್ಗೆ ಹೊರಗಿರುವ ಸಾಮಾನ್ಯರು ತಿಳಿಯಲು ಸಾಧ್ಯವಿದೆ. ಇದರಲ್ಲಿ ತೊಡಗಿಕೊಂಡ ವ್ಯಕ್ತಿಗಳೊಡನೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವಿರುತ್ತದೆ. ಆದರೆ, ಸಂಗೀತದೊಳಗಿನ ಜೀವನ ಎಂಬುದನ್ನು ಒಳಹೊಕ್ಕು ಅನುಭವದಿಂದಲೇ ಅರಿಯಬೇಕಾಗುತ್ತದೆ. ಇದಕ್ಕೆ ದೊಡ್ಡ ಕಾರಣ ಸಂಗೀತದವರು ಯಾರೂ ಹೆಚ್ಚು ಈ ಬಗ್ಗೆ ಮಾತನಾಡದಿರುವುದು ಎಂದು ನನಗನಿಸುತ್ತದೆ. ಸಂಗೀತಗಾರರು ತಾವು ಸಂಗೀತ ಪಡೆಯಲು, ಈ ಕ್ಷೇತ್ರದಲ್ಲಿ ನಿಲ್ಲಲು, ಜೀವನ ಸಾಗಿಸಲು ಪಟ್ಟ ಕಷ್ಟ, ತನ್ನ ಹಿಂದಿನವರು, ಜೊತೆಗಾರರು, ಮುಂದಿನ ತಲೆಮಾರಿನವರ ಎದುರಿರುವ ಸವಾಲುಗಳ ಬಗ್ಗೆ, ಇಲ್ಲಿರುವ ಓರೆ ಕೋರೆಗಳ ಬಗ್ಗೆ ಸತ್ಯವಾದದ್ದನ್ನು, ಮುಕ್ತವಾಗಿ ಮಾತನಾಡುವ ಅವಶ್ಯಕತೆ ಇದೆ.
ಸಂಗೀತ ಕ್ಷೇತ್ರದಲ್ಲಿ ಹಾಡದೆ ಉಳಿದಿರುವುದು ತುಂಬಾ ಕಡಿಮೆಯಾದರೂ ಆಡದೆ ಉಳಿದದ್ದು ಬೇಕಾದಷ್ಟಿದೆ. ಯಾಕೋ ಏನೋ ಸಂಗೀತದಲ್ಲಿ ಬರುವ ಬರವಣಿಗೆಗೆಗಳಲ್ಲೂ ಹೆಚ್ಚಿನವು ವ್ಯಾಕರಣ, ಶಾಸ್ತ್ರಕ್ಕೆ ಸಂಬಂಧಿಸಿದವುಗಳಾದರೆ ಇನ್ನು ಕೆಲವು ಸಂಗೀತಗಾರರನ್ನು ದೇವರೆಂಬಂತೆ ಹೊಗಳಿ ಬರೆದ ವ್ಯಕ್ತಿಚಿತ್ರಗಳು. ಸಂಗೀತಗಾರರನ್ನು ಬಾಯಿತೆರೆಸುವ ಕೆಲವು ಪ್ರಯತ್ನಗಳು ಅಲ್ಲಿ ಇಲ್ಲಿ ನಡೆದಿವೆಯಾದರೂ ತಮ್ಮ ಕಲಿಕೆ, ಗುರು, ಅಭ್ಯಾಸ, ಸಾಧನೆ ಇತ್ಯಾದಿಗಳ ಸುತ್ತಮುತ್ತ ಮಾತು ಸಾಗುತ್ತದೆ ಹೊರತು ಅಂತರಂಗದ ಧ್ವನಿ ಹೊರಬರುವುದಿಲ್ಲ. ಪಂ. ಅರವಿಂದ ಪಾರೀಕ್ ಅವರು ನಡೆಸಿದ ಬೈಠಕ್ ಮಾತುಕತೆಗಳಲ್ಲಿ ಶುಜಾತ್ ಖಾನ್, ಅನಿಂದೊ ಚಟರ್ಜಿ ಮುಂತಾದ ಕೆಲವರು ಮನಬಿಚ್ಚಿ ಮಾತನಾಡಿದ್ದು ಕಾಣಿಸುತ್ತದೆ. ಸಂಗೀತ ತುಂಬಾ ಕಷ್ಟದ ದಾರಿ ಎಂಬುದಂತೂ ನಿಜ. ಇದಕ್ಕಿರುವ ಕಾರಣಗಳಲ್ಲಿ, ವಿದ್ಯೆ ಇರುವವರು ಕೊಡಲು ಹಿಂಜರಿಯುವುದು, ಕಂಠ ತಯಾರಿ, ರಾಗಗಳ ಅಭ್ಯಾಸಕ್ಕೆ ಅವಿರತ ಪ್ರಯತ್ನ, ಕಲಿತದ್ದನ್ನು ಉಳಿಸಿಕೊಳ್ಳಲು ಪ್ರತಿದಿನವೂ ಮಾಡಬೇಕಾದ ಅಭ್ಯಾಸ, ಸಾಧಿಸಿದ ಮೇಲೂ ಜೀವನ ನಡೆಸಲು ಇರುವ ತೊಂದರೆಗಳು ಇವೆಲ್ಲದರ ಜೊತೆ ಮುಂದೆ ಹೋಗುತ್ತಿರುವವರ ಕಾಲನ್ನು ಎಳೆಯುವವರು, ತನಗಾಗದವರ ಬಗ್ಗೆ ಏನೋ ಮಾತುಗಳನ್ನು ಹರಡಿಸುವವರು, ಮಾನಸಿಕ-ದೈಹಿಕ ಕಿರುಕುಳಗಳು, ವೇದಿಕೆಗಾಗಿ-ಪ್ರಶಸ್ತಿಗಾಗಿ ರಾಜಕೀಯ, ಸಂಭಾವನೆ ತಾರತಮ್ಯ ಇವೆಲ್ಲವೂ ಎಲ್ಲಾ ಕಡೆ ಇರುವಂತೆ ಇಲ್ಲಿಯೂ ಇದೆ. ಆದರೆ ದೊಡ್ಡವರಾದವರೂ ಇದು ಯಾವುದರ ಬಗ್ಗೆಯೂ ಮಾತಾಡದೆ ‘ಗುರುಭಕ್ತಿ, ಸಾಧನೆ, ಇದೊಂದು ದೈವಿಕ ಕಲೆ, ಅಧ್ಯಾತ್ಮ, ತಪಸ್ಸು’ ಎಂದೆಲ್ಲಾ ಮಾತನಾಡುವುದು ನೋಡಿ ಆಶ್ಚರ್ಯವಾಗುತ್ತದೆ. ಒಂದು ವೇಳೆ ಯಾರಾದರು ಮಾತನಾಡಿದರೂ ಅದು ಅವರ ವೈಯಕ್ತಿಕ ಸಮಸ್ಯೆ ಎಂಬಂತೆ ನೋಡಲಾಗುತ್ತದೆ. ಇಲ್ಲಿ ಸಹಜತೆ ಎಂಬುದೇ ಬಹುಮಟ್ಟಿಗೆ ಕಡಿಮೆ ಇದೆ ಎಂದಾಗ ಇನ್ನು ಸೂಕ್ಷತೆ ಎನ್ನುವುದು ತುಂಬಾ ದುಬಾರಿಯೇ ಹೌದು.
ಎಷ್ಟೆಲ್ಲಾ ಸೂಕ್ಷತೆಯನ್ನು ಹೊರಹೊಮ್ಮಿಸಿ ಕೇಳುಗರನ್ನು ನಗಿಸಲೂ ಅಳಿಸಲೂ ಬಲ್ಲ ಕಲಾವಿದರು ತಾವು ಮಾತ್ರ ಯಾಕೆ ಹೀಗಿರುತ್ತಾರೆ ಎಂಬುದು ನನ್ನನ್ನು ಯಾವತ್ತೂ ಕಾಡಿದ ಪ್ರಶ್ನೆ.
ಹಾಗೆ ನಾನೇನೂ ದೊಡ್ದ ಕಲಾವಿದೆಯಾಗಬೇಕೆಂದು ಸಂಗೀತ ಕಲಿಯಲು ಹೊರಟವಳಲ್ಲ. ಐದನೇ ತರಗತಿಯಲ್ಲಿದ್ದಾಗ ನನ್ನ ಅಕ್ಕನ ಜೊತೆಗೆ ನನಗೂ ಕಲಿಯಲು ನಮ್ಮ ಅಪ್ಪ ಏರ್ಪಾಟು ಮಾಡಿದಾಗ, ಒಬ್ಬರೇ ಒಬ್ಬರು ಸಂಗೀತಗಾರರ ಹೆಸರೂ ನನಗೆ ಗೊತ್ತಿರಲಿಲ್ಲ. ಆದರೆ ಸಂಗೀತವೆಂದರೆ ಇಷ್ಟ. ಹಾಡುಗಳನ್ನು ಸಂಗ್ರಹಿಸುವ ಹುಚ್ಚು. ರೇಡಿಯೋದಲ್ಲಿ ಬರುವ ಹಾಡುಗಳನ್ನು ಬರೆದುಕೊಂಡು ಕಲಿಯುತ್ತಿದ್ದೆವು. ನಮಗೆ ಗೊತ್ತಿಲ್ಲದ ಹಾಡು ಎಲ್ಲಿ ಕೇಳಿದರೂ ಕಲಿಯುವವರೆಗೆ ಬಿಡುತ್ತಿರಲಿಲ್ಲ. ನನ್ನ ಅಮ್ಮ ಗಟ್ಟಿಗಿತ್ತಿ, ಯಕ್ಷಗಾನ, ಭಜನೆ ಇವುಗಳ ಹಿನ್ನೆಲೆ ಅವರಿಗಿತ್ತು. ಆದರೆ ಅಪ್ಪ- ಅಮ್ಮ ಇಬ್ಬರಿಗೂ ಕಾಡಿದ ಬಡತನದಿಂದಾಗಿ ಕಲೆಗಳನ್ನು ಬೆಳೆಸಿಕೊಳ್ಳಲು ಆಗಿರಲಿಲ್ಲ. ಅಪ್ಪ ಹರಿದಾಸರು. ಒಳ್ಳೆಯ ಕಂಠ, ಸುಲಲಿತ ಭಾಷೆಯ, ಕುಶಾಗ್ರತೆ ಎಲ್ಲವೂ ಅವರಲ್ಲಿದೆ. ಆದರೆ ಆದಾಯದ ಅನಿಶ್ಚಿತತೆ ಮನೆಯಲ್ಲಿತ್ತು. ಅಮ್ಮನಿಗೆ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರಿದ ಮೇಲೆ ಅವರು ನನ್ನ ಮಕ್ಕಳಿಗಾದರೂ ಬೇಕಾದದ್ದನ್ನು ಕಲಿಸಬೇಕು ಎಂದು ನಿರ್ಧರಿಸಿದ್ದರು. ಮುಂದೆ ನಾವಿದ್ದ ಹಳ್ಳಿಯಿಂದ ನಡೆದು, ಬಸ್ ಹತ್ತಿ ಬೇರೆ ಕಡೆ ಹೋಗಿ, ಶನಿವಾರ-ಭಾನುವಾರ ನೆಂಟರ ಮನೆಗಳಲ್ಲಿ ಉಳಿದು ಅಲ್ಲಿಂದಲೇ ಸೋಮವಾರ ಶಾಲೆಗೆ ಬಂದು ಈ ರೀತಿ ಏನೇನೋ ಮಾಡುತ್ತಾ ನನ್ನ ಹಿಂದುಸ್ತಾನಿ ಸಂಗೀತ ಕಲಿಕೆ ಆರಂಭವಾಯ್ತು. ಸ್ಪರ್ಧೆಗಳಲ್ಲಿ ಹಾಡಿ ಬಹುಮಾನ ಪಡೆಯುವುದು, ಕಾವ್ಯವಾಚನ ಪರೀಕ್ಷೆ, ಭಾಷಣ, ಪ್ರಬಂಧ ಸ್ಪರ್ಧೆಗಳು ಹೀಗೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ.
ನನ್ನ ಬಾಲ್ಯದ ದಿವಸಗಳನ್ನು ನನ್ನ ಅಕ್ಕನಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವಾಗಲಾರದು. ಅವಳೇ ನನಗೆ ರೋಲ್ ಮಾಡೆಲ್. ಒಳ್ಳೆಯ ಹಾಡು ಕಲಿತು ಕಲಿಸುವವಳು, ಒಳ್ಳೆ ಪುಸ್ತಕ ತಂದು ಕೊಡುವವಳು ಅವಳೇ ಆಗಿದ್ದಳು. ಆಶ್ಚರ್ಯವೆಂದರೆ ಇದೆಲ್ಲಾ ನಮಗೆ ವಿದ್ಯಾರ್ಥಿ ಜೀವನದ ಸಂತೋಷ ಕೊಡುವ ಭಾಗವಾಗಿತ್ತೇ ಹೊರತು ಏನೋ ಸಾಧನೆ ಮಾಡುತ್ತಿದ್ದೇವೆ ಎನಿಸಿರಲಿಲ್ಲ. ಈ ಕ್ಷೇತ್ರದಲ್ಲಿ ತುಂಬಾ ಸಾಧನೆ ಮಾಡಬೇಕಾಗುತ್ತದೆ, ನಾವು ಒಂದು ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಶ್ರಮಿಸಬೇಕು, ಸರಿಯಾದ ಮಾರ್ಗದರ್ಶನ ಪಡೆಯಬೇಕು ಎಂಬುದೇನೂ ತಿಳಿದಿರಲಿಲ್ಲ. ಪ್ರಪಂಚ ಎಷ್ಟು ದೊಡ್ಡದಿದೆ, ಏನೆಲ್ಲಾ ಅವಕಾಶಗಳಿವೆ ಇವು ಯಾವುದರ ಗೊಡವೆ ಇಲ್ಲದೆ ಆ ಕ್ಷಣದ ಖುಷಿಯನ್ನು ಪಡೆಯುತ್ತಿದ್ದೆವು. ಪಿಯುಸಿ ಓದುವ ವೇಳೆಗೆ ನನ್ನ ಬಳಿ ಕಾಲೇಜಿನ ಗ್ರಂಥಾಲಯದ ಜೊತೆಗೆ ಕಾರ್ಕಳ ಸಿಟಿ ಲೈಬ್ರರಿಯ ಮೇಂಬರ್ಶಿಪ್ ಕೂಡಾ ಇತ್ತು. ನಡೆದು ಹೋಗಿ, ಬಸ್‍ನಲ್ಲಿ ನೇತಾಡಿ, ಇಳಿದ ಮೇಲೆ ಮತ್ತೆ ನಡೆದು ಕಾಲೇಜು ಸೇರಿ, ಕಾಲೇಜು ಮುಗಿಸಿ ಊರಿನ ಇನ್ನೊಂದು ತುದಿಯಲ್ಲಿದ್ದ ಸಿಟಿ ಲೈಬ್ರರಿಗೆ ಬಂದು ಅಲ್ಲಿಂದ ಮತ್ತೆ ನಡೆದು, ಬಸ್ ಹಿಡಿದು ಮನೆ ಸೇರುತ್ತಿದ್ದೆ. ಶಾಲೆ, ಕಾಲೇಜಿನ ವಾರ್ಷಿಕ ಸಮಾರಂಭದಲ್ಲಿ ನನಗೆ 10-12 ಬಹುಮಾನಗಳಿರುತ್ತಿದ್ದವು. ಇವೆಲ್ಲದ್ದಕ್ಕೆ ಕಾರಣ ನಮಗೆ ಯಾರೂ ಮನೆಯಲ್ಲಿ ‘ಒಬ್ಬಳೇ ಹೊಗ್ತಿ, ಜಾಗೃತೆ’ ಎಂದಾಗಲಿ ‘ನೀನು ಹುಡುಗಿ’ ಅಂತಾಗಲಿ ಹೇಳದೆ ಇದ್ದದ್ದು. ಸುಮಾರು ದೊಡ್ಡವರಾಗುವವರೆಗೂ ನನಗೆ ‘ನಾನು ಹುಡುಗಿ, ಆದ್ದರಿಂದ ಸ್ವಲ್ಪ ಬೇರೆ’ ಅಂತ ಅನಿಸಿರಲೇ ಇಲ್ಲ. ನನಗೆ ಮೊದಲಿನಿಂದಲೂ ಸ್ನೇಹಿತರು ಕಡಿಮೆ. ಇದ್ದರೂ ಯಾರನ್ನೂ ಕಾಯುವ, ಜೊತೆಗೇ ಹೋಗುವ ಜಂಜಡದಲ್ಲಿ ನಾನಿರುತ್ತಿರಲಿಲ್ಲ. ಯಾವಾಗಲೂ ಹಾಡು ಗುನುಗುತ್ತಾ, ಮನಸ್ಸಲ್ಲೇ ಸಂವಹನ ನಡೆಸುತ್ತಾ ಖುಷಿಯಿಂದಿರುತ್ತಿದ್ದೆ.
ಪಿಯುಸಿ ನಂತರ ಡಿಗ್ರಿ ಓದಲು ಧಾರವಾಡಕ್ಕೆ ಹೋಗುವ ಆಸೆ ಮಾಡಿದೆ, ಸಂಗೀತಕ್ಕಾಗಿ. ಆಗಲೇ ಓದಲು ದೂರದ ಚೆನ್ನೈಗೆ ಹೋಗಿದ್ದ ಅಕ್ಕನಿಂದ ಪ್ರೋತ್ಸಾಹ ದೊರಕಿತ್ತು. ಅಮ್ಮನ ಒತ್ತಾಸೆಯಿಂದ ಇದೂ ಸಾಧ್ಯವಾಯಿತು. ರಿಸರ್ವೇಷನ್ ಇಲ್ಲದೆ ಸರಕಾರಿ ಬಸ್‍ನಲ್ಲಿ ನನ್ನ ಪ್ರಯಾಣ. ಹಿರಿಯ ಗುರುಗಳಾಗಿದ್ದ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಬಗ್ಗೆ ಹೇಗೋ ತಿಳಿದುಕೊಂಡು, ಓಡಾಡಿ ಅಂತೂ ಸೇರಿದೆ. ಹಾಸ್ಟೆಲ್‍ನಲ್ಲಿ ಸಂಗೀತಾಭ್ಯಾಸ ಆಗುವುದಿಲ್ಲವೆಂದು ರೂಮ್ ಹುಡುಕಿ ಕೆಲವು ತಿಂಗಳೇ ಬಿಟ್ಟು ಅಪ್ಪನಿಗೆ ತಿಳಿಸಿದ್ದಾಯ್ತು. ನನಗೆ ಶ್ರುತಿಬಾಕ್ಸ್ ತೆಗೆದುಕೊಳ್ಳಲು ಅಮ್ಮ ಮದುವೆಯಲ್ಲಿ ತಮಗೆ ಹಾಕಿದ್ದ ಏಕೈಕ ಒಡವೆಯಾದ ಝುಮಕಿಯನ್ನು ಮಾರಿದರು. ಆಗ ಧಾರವಾಡವೆಂದರೆ ಕಲಿಯುವ ವಿದ್ಯಾರ್ಥಿಗಳಿಗೆ ಸ್ವರ್ಗ. ವರ್ಷವಿಡಿ ಒಂದಲ್ಲಾ ಒಂದು ಸಂಗೀತ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತಿದ್ದವು. ಜೊತೆಗೆ ವರ್ಷದಲ್ಲಿ 4-5 ಬಾರಿ ರಾತ್ರೆ ಇಡೀ ನಡೆಯುವ ರೆಹಮತ್ ಖಾನ್ ಪುಣ್ಯತಿಥಿ, ಮನ್ಸೂರ್ ಪುಣ್ಯತಿಥಿ, ಹುಬ್ಬಳ್ಳಿಯಲ್ಲಿ ಸವಾಯಿ ಗಂಧರ್ವ ಪುಣ್ಯತಿಥಿ ಮುಂತಾದ ಕಾರ್ಯಕ್ರಮಗಳಿಗೆ ದೇಶದ ಎಲ್ಲಾ ಕಡೆಯಿಂದ ಸಂಗೀತಗಾರರು ಬರುತ್ತಿದ್ದರು. ನಾನು, ಗ್ರೀನ್ ರೂಮಿನಲ್ಲಿ ಅವರನ್ನೆಲ್ಲಾ ಬೆರಗಿನಿಂದ ನೋಡುವುದು, ತಂಬೂರಿಗೆ, ಕೂರುವುದು, ಬೆಳಗಿನವರೆಗೆ ಬೇರೆ ಬೇರೆ ರಾಗ-ತಾಳ-ಖ್ಯಾಲ್-ಬಂದಿಶ್ಗಳನ್ನು ಪುಸ್ತಕದಲ್ಲಿ ಬರೆದುಕೊಳ್ಳುವುದು ಇವನ್ನೆಲ್ಲಾ ಮಾಡುತ್ತಿದ್ದೆ.
ವಾಕ್‍ಮನ್ ಒಂದನ್ನು ಕೊಳ್ಳಲು ಸಾಧ್ಯವಾದ ಮೇಲೆ ಕ್ಯಾಸೆಟ್‍ನಲ್ಲಿ ಬೇಕಾದ್ದನ್ನಷ್ಟೇ ಮುದ್ರಿಸಿಕೊಳ್ಳುವುದು, ಮತ್ತೆ ಮತ್ತೆ ಕೇಳುವುದು ಮಾಡುತ್ತಿದ್ದೆ. ನಾನೇ ಅಡಿಗೆ ಮಾಡಿಕೊಂಡು, ಬೆಳಿಗ್ಗೆ ಐದಕ್ಕೇ ಎದ್ದು ಅಭ್ಯಾಸ ನಂತರ ಕಾಲೇಜು, ಮಧ್ಯಾಹ್ನ ಗುರುಗಳ ಮನೆ, ಸಂಜೆ ಕಾರ್ಯಕ್ರಮ ಹೀಗೆ ತಿರುಗುತ್ತಾ ಬಿಎ ಇಂಗ್ಲೀಷ್‍ನಲ್ಲಿ ಎರಡು ಚಿನ್ನದ ಪದಕ, ಎಂಎ ಇಂಗ್ಲಿಷ್‍ನಲ್ಲಿ ಮೂರನೇ ರ್ಯಾಕ್ ಪಡೆದೆ. ಆಕಾಶವಾಣಿ ಸ್ಪರ್ಧೆಯಲ್ಲಿ ವಿಜೇತಳಾಗಿ, ದೆಹಲಿಗೆ ಹೋಗಿ ಬಹುಮಾನ ಪಡೆದು ಗ್ರೇಡೆಡ್ ಆರ್ಟಿಸ್ಟ್ ಆದೆ. ಭೋಪಾಲ್‍ನಲ್ಲಿ ನಡೆಯುತ್ತಿದ್ದ ಎಚ್. ಆರ್. ಡಿ ವಿದ್ಯಾರ್ಥಿವೇತನದ ಸಂದರ್ಶನಕ್ಕೆ ಹೋಗಿ ಆಯ್ಕೆಯಾಗಿದ್ದೆ. ಆ ಪ್ರಯಾಣದಲ್ಲಿ ನನ್ನ ಟಿಕೆಟ್ ಕನ್ಫರ್ಮ್ ಆಗದ ಕಾರಣ ಎಗ್ಗಿಲ್ಲದೆ ನುಗ್ಗುವ ಜನರ ರಾಶಿ ಮಧ್ಯೆ ಆರ್ಎಸಿಯಲ್ಲಿ ಕುಳಿತು, ಒಬ್ಬಳೇ ಭೋಪಾಲ್‍ನಲ್ಲಿ ಇಳಿದು ಅಲ್ಲಿಂದ ಕರ್ನಾಟಕ ಭವನ ಹುಡುಕಿ ಹೋಗಿದ್ದು ಆಗಿನ ದಿನದಲ್ಲಿ ಸಾಹಸವೇ ಆಗಿತ್ತು. ಸಂಗೀತದಲ್ಲಿ ಸೀನಿಯರ್, ವಿದ್ವತ್, ಮಧ್ಯಮ, ವಿಶಾರದಾ, ಅಲಂಕಾರ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್ ನಲ್ಲಿ ಮುಗಿಸಿದ್ದೆ. ಒಂದೊಂದು ರೂಪಾಯಿ ಉಳಿಸಲೂ ಕಷ್ಟ ಪಟ್ಟಿದ್ದೆ.
ಕಲಿಕೆ ಬಿಟ್ಟು ಬೇರೆ ಯಾವುದರೆಡೆಗೂ ಮನಸ್ಸು ಹೋಗದ ಕಾರಣ, ನನ್ನ ಬಳಿ ಇದ್ದದ್ದು ನಾಲ್ಕೈದು ಜೊತೆ ಬಟ್ಟೆ ಎಂಬುದು ಆಗ ನನಗೆ ಗೊತ್ತೇ ಇರಲಿಲ್ಲ. ಪ್ರೋಗ್ರಾಮ್ ಸಿಗಬೇಕಾದರೆ ಚೆನ್ನಾಗಿ ಬಟ್ಟೆ ತೊಟ್ಟು ಅಲಂಕರಿಸಿಕೊಳ್ಳಬೇಕು ಎಂಬುದೂ ಗೊತ್ತಿರಲಿಲ್ಲ. ಅಲ್ಲದೇ ನನ್ನ ಸುತ್ತ ಇದ್ದ ಸಂಗೀತದ ವಿದ್ಯಾರ್ಥಿಗಳು ನನಗಿಂತಲೂ ಕಷ್ಟದಲ್ಲಿದ್ದ ಕಾರಣ, ನನಗೆ ಏನಾದರೂ ಕೊರತೆ ಇದೆ ಎಂದು ನನಗೆ ಅನಿಸಿರಲೂ ಇಲ್ಲ. ತಿಂಗಳಿಗೆ 200ರೂ ಫೀಸ್ ಪಡೆಯುವ ಗುರುಗಳು ಪ್ರತೀ ಬಾರಿಯೂ ಅದನ್ನು ಕೊಡುವಾಗ ‘ಅಮ್ಮ ರೊಕ್ಕ ಕಳ್ಸ್ಯಾಳ ಏನು’ ಅಂತ ಕೇಳದೆ ಇರುತ್ತಲೂ ಇರಲಿಲ್ಲ. ಅಲ್ಲದೆ ಧಾರವಾಡ ಕಡೆಯ ಒಂದು ಒಳ್ಳೆಯ ಕ್ರಮ ಎಂದರೆ ಯಾವುದೇ ಸ್ಪರ್ಧೆಗಳಿರಲಿ, ಬಹುಮಾನ ಹೆಚ್ಚಾಗಿ ಹಣದ ರೂಪದಲ್ಲಿರುತ್ತದೆ. ಇದರಿಂದಾಗಿ 100, 200ರೂ ಅಂತ ಒಂದು ವರ್ಷದಲ್ಲಿ ನನ್ನದೇ ಸುಮಾರು ಹಣ ಒಟ್ಟಾಗಿರುತ್ತಿತ್ತು. ಹಾಗೇ ಗಂಗೂಬಾಯಿಯವರು ಹುಬ್ಬಳ್ಳಿಯ ಆರ್ಟ್ ಸರ್ಕಲ್ ಮೂಲಕ ನಡೆಸುವ ಸ್ಪರ್ಧೆಯೊಂದರಲ್ಲಿ ಗೆದ್ದು ‘ತಾಮಣ್‍ಕರ್ ಪ್ರಶಸ್ತಿ’ ಮತ್ತು 3,500ರೂ ಸಿಕ್ಕಿದಾಗ, ಪುರಾಣಿಕಮಠ ಸರ್ ನಿನ್ನ ಹಣದಲ್ಲೇ ತಂಬೂರಿ ತುಗೋ ಅಂತ ಮಿರಜ್‍ನಿಂದ ತರಿಸಿ ಕೊಡಿಸಿದ್ದರು.
ಮಧ್ಯದಲ್ಲಿ ನಮ್ಮ ಕ್ಲಾಸ್‍ನ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಸೋದಾಹರಣ ಉಪನ್ಯಾಸವನ್ನು ಕೇಳಿ ಪಂ.ನಾರಾಯಣ ಪಂಡಿತರ ಬಳಿ ಕಲಿಯುವ ಇಚ್ಛೆಯಾಗಿ ಆಗಾಗ ಹೊನ್ನಾವರಕ್ಕೆ ಹೋಗಿ ಅವರ ಬಳಿ ಉಳಿದು ಕಲಿಯತೊಡಗಿದೆ. ಅಭ್ಯಾಸ ಮುಂದುವರಿದಂತೆ ಯಾರಾದರೂ ಗಾಯಕಿಯರ ಬಳಿ ಕಲಿತರೆ ಜಾಸ್ತಿ ಒಳ್ಳೆಯದು ಎಂದು ಅರಿತು ಪುಣೆಯ ವಿ.ಪದ್ಮಾ ತಲ್ವಾಲ್ಕರ್ ಅವರನ್ನು ಸಂಪರ್ಕಿಸಿದೆ. ಅವರು ಬಂದು ಹಾಡಿ ತೋರಿಸಲು ಹೇಳಿದರು. ಮತ್ತೆ ಗೊತ್ತು ಗುರಿಯಿಲ್ಲದೆ, ಒಬ್ಬಳೇ, ಭಾಷೆ ಅರಿಯದ ಊರಿಗೆ ಹೋದೆ. ಉಳಿಯಲು ಅವರೇ ವ್ಯವಸ್ಥೆ ಮಾಡಿಕೊಟ್ಟರು. ಒಂದು ವರ್ಷ ಪುಣೆಯಲ್ಲಿದ್ದೆ. ಅಪ್ಪನ ಅನಾರೋಗ್ಯ, ಆರ್ಥಿಕ ಕಾರ್ಣಗಳಿಂದ ವಾಪಾಸಾಗಬೇಕಾಯಿತು. ಮತ್ತೆ ಒಂದು ವರ್ಷದಲ್ಲಿ ಮದುವೆಯಾಗಿ ಬೆಂಗಳೂರು ಸೇರಿದ್ದೆ. ಸಂಗೀತದವರೇ ಆಗಿದ್ದ ಮನೆಯಾದರೂ ಹೊಸ ಮನೆಯ ರೀತಿ ರಿವಾಜು, ಅಡಿಗೆ, ಆಲೋಚನೆ ಇವುಗಳಿಗೆಲ್ಲಾ ಹೊಂದಿಕೊಳ್ಳುವಲ್ಲಿ ಮಗ ಹುಟ್ಟಿದ್ದ.
ಇದರ ಮಧ್ಯೆ ಬೆಂಗಳೂರಿನಲ್ಲಿ ಪಂ.ವ್ಯಾಸಮೂರ್ತಿ ಕಟ್ಟಿ ಅವರ ಬಳಿ ಕಲಿಯಲು ಸೇರಿದ್ದೆ. ನನ್ನ ಗಂಡನ ಪ್ರೋತ್ಸಾಹ ಇದ್ದೇ ಇತ್ತು. ಆದರೂ ಅತ್ಯಂತ ಚಟುವಟಿಕೆಯಿಂದ ಓಡಾಡುತ್ತಿದ್ದವಳು ಮನೆ ಸೇರಿ ಮಂಕಾಗಿದ್ದೆ. ಮೊದಲ ಬಾರಿಗೆ ನನ್ನಲ್ಲಿ ಇಲ್ಲದ ಕುಶಲತೆ, ವಾಕ್ಚಾತುರ್ಯ, ಶೃಂಗರಿಸಿಕೊಳ್ಳುವುದು ಇವೆಲ್ಲದರ ಬಗ್ಗೆ ಚಿಂತಿಸುವ ಪ್ರಸಂಗ ಬಂದಿತ್ತು. ಸರಳತೆ, ಸತ್ಯವನ್ನು ನೇರವಾಗಿ ಮಾತನಾಡುವುದು ಇವುಗಳಿಂದೆಲ್ಲಾ ಎದುರಾಗುವ ತೊಂದರೆಗಳ ಬಗ್ಗೆ ಗಮನ ಹರಿದಿತ್ತು. ಮಗಳು ಹುಟ್ಟಿದ ನಂತರ ನನ್ನ ಕಂಠ ಸ್ವಲ್ಪ ಅಸಹಕಾರ ಕೊಡಲಾರಂಭಿಸಿತು. ಈ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ನನ್ನ ಗುರುಬಂಧು ರವಿಕಿರಣ ಮಣಿಪಾಲ. ನನ್ನೊಳಗಿನ ಶಕ್ತಿಯನ್ನು ಮೊದಲಿನಿಂದ ಇವರು ಕಂಡವರಾದ್ದರಿಂದ ಮತ್ತೆ ನನ್ನನ್ನು ಚುರುಕುಗೊಳಿಸುವ ಕೆಲಸ ಇವರು ಮಾಡಿದರು. ಆತ್ಮಸ್ಥೈರ್ಯ ತುಂಬಿ, ಬೇರೆ ಬೇರೆ ಗುರುಗಳಿಂದ ನಾನು ಕಲಿತು ಅಳವಡಿಸಿಕೊಂಡಿದ್ದ ಉತ್ತಮಾಂಶಗಳನ್ನೆಲ್ಲಾ ಎತ್ತಿ ತೋರಿಸಿ ಹೊಸ ಹುರುಪಿನಿಂದ ಹಾಡುವಂತೆ ಮಾಡಿದರು. ಗಂಡ, ಅತ್ತೆ, ಅಮ್ಮ ಇವರುಗಳ ಸಹಕಾರ ಪಡೆದು ಸಂಗೀತದಲ್ಲಿ ಎಂಎ ಮಾಡಲು ಕಾಲೇಜು ಸೇರಿದೆ. 6 ತಿಂಗಳ ಮಗುವನ್ನು ಬಿಟ್ಟು, ಅಲ್ಲಿ ಹೋಗಿ ಸಂಗೀತ ಮಾಡುವುದಕ್ಕಿಂತ ಹೆಚ್ಚಾಗಿ ಅತಿಥಿ ಉಪನ್ಯಾಸಕರನ್ನು ಓಲೈಸಬೇಕಿತ್ತು. ಗುಣಮಟ್ಟದ ಬಗ್ಗೆ ಕಾಳಜಿ ಇಲ್ಲದ ಅಲ್ಲಿ ಮೂರನೇ ಸೆಮಿಸ್ಟರ್ನಲ್ಲಿ ಶೇ. 7 ಹಾಜರಾತಿ ಕಡಿಮೆ ಎದೆ ಎಂಬ ಕಾರಣಕ್ಕೆ ಪರೀಕ್ಷೆ ಕಟ್ಟಲು ಕೊಡಲಿಲ್ಲ. ಅದರ ಗೋಜನ್ನೇ ಬಿಟ್ಟು, ಈಗ ರವಿಕಿರಣ ಸರ್ ಹಾಗೂ ಮುಂಬೈಯ ಅಪೂರ್ವ ಗೋಖಲೆ ಅವರ ಬಳಿ ಮೊದಲಿನಿಂದ ಕಲಿತ ಗ್ವಾಲಿಯರ್ ಶೈಲಿಯಲ್ಲೇ ಅಭ್ಯಾಸ ಮುಂದುವರಿಸಿದ್ದೇನೆ, ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ.
ಸಂಗೀತ, ನೃತ್ಯದಂಥ ಕ್ಷೇತ್ರದಲ್ಲಿ ಪೋಷಕರು, ಮಾರ್ಗದರ್ಶಕರು ಇದ್ದರೆ ಮುಂದುವರಿಯುವುದು ಸುಲಭವಾಗುತ್ತದೆ. ಆದರೆ ನಾನು ಎಷ್ಟೋ ಬಾರಿ ತಪ್ಪೋ ಒಪ್ಪೋ ದಾರಿ ಕಂಡಂತೆ ನಡೆಯುತ್ತಾ ಹೋದೆ. ಇದರಿಂದ ತುಂಬಾ ಸಮಯ-ಶ್ರಮ-ಶಕ್ತಿ ಕಳೆದುಕೊಂಡಿದ್ದೇನೆ. ಏನೇನೋ ಮಾತುಗಳನ್ನು ಕೇಳಿದ್ದೇನೆ. ಆದರೆ ನನ್ನ ದಾರಿಯನ್ನು ನಾನು ಕಂಡುಕೊಂಡ ಸಂತೋಷವಿದೆ. ಬಿಜಾಪುರ, ಗದಗ ಕಡೆಯಿಂದ ಧರ್ಮಸ್ಥಳಕ್ಕೆ ಹೋಗುವ ಬಸ್‍ನಲ್ಲಿ ಪ್ರಯಾಣ ಮಾಡುವಾಗ ಬೇಕಾದಷ್ಟು ಕೆಟ್ಟ ಅನುಭವಗಳಾಗಿವೆ. ಅದಕ್ಕೆ ಎಲ್ಲಕ್ಕಿಂತ ಸುರಕ್ಷಿತ ಅಂತ ಕಂಡಕ್ಟರ್ ಪಕ್ಕವೇ ಕೂತುಬಿಡುತ್ತಿದ್ದೆ. ಧಾರವಾಡ ಬಸ್‍ಸ್ಟಾಂಡ್‍ನಲ್ಲಿ ಬೆನ್ನಿನಲ್ಲಿದ್ದ ಬ್ಯಾಗ್ ತೆಗೆದು ಒಬ್ಬನಿಗೆ ಬಾರಿಸಬೇಕಾಯ್ತು. ಆದರೆ ಅದ್ಯಾವುದೂ ನನ್ನ ಅಭ್ಯಾಸವನ್ನು ಹೆಮ್ಮೆಟ್ಟಿಸಲಿಲ್ಲ. ಇಂದಿಗೂ ನನಗೆ ನನ್ನ ಬದುಕಿಗೆ ವಿಶಾಲತೆ ಕೊಟ್ಟ, ಸಂಗೀತದ ಮೂಲಕವೇ ಪ್ರತಿಯೊಂದನ್ನೂ ನೋಡುವಂತೆ ಮಾಡಿ, ಬದುಕಿಗೆ ರಂಗು ಬಳಿದ ಧಾರವಾಡ ಅಂದರೆ ಅಚ್ಚುಮೆಚ್ಚು.
ಸಂಗೀತವೊಂದನ್ನೇ ನಂಬಿ ಸಾಧನೆ ಮಾಡುತ್ತಾ ಕುಳಿತರೂ ಅದರಿಂದ ಜೀವನ ನಡೆಯಬಹುದು ಎನ್ನುವ ನಿಶ್ಚಿತತೆ ಇನ್ನೂ ನಮ್ಮಲ್ಲಿ ಬಂದಿಲ್ಲ. ಪ್ರತಿಭೆಯೊಂದನ್ನೇ ನೋಡಿ ಅವಕಾಶ ದೊರೆಯುವ ಪರಿಸ್ಥಿತಿಯಂತೂ ಇಲ್ಲವೇ ಇಲ್ಲ. ಹಲವಾರು ವರ್ಷಗಳ ಕಾಲ ಧರ್ಮಾರ್ಥವಾಗಿಯೋ, ಸಿಕ್ಕಿದಷ್ಟು ಹಣಕ್ಕೋ ಕಾರ್ಯಕ್ರಮ ನೀಡಲು ಸಿದ್ಧರಿರಬೇಕು. ಇಲ್ಲವಾದಲ್ಲಿ ಯಾರದ್ದೋ ಪ್ರಭಾವ ಬಳಸಿಯೋ, ಓಲೈಸಿಯೋ-ಗೋಗರೆದೋ ಕಾರ್ಯಕ್ರಮ ದೊರಕಿಸಿಕೊಳ್ಳಬೇಕು. ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಾ, ಮಕ್ಕಳ ವ್ಯಕ್ತಿತ್ವ ರೂಪಿಸುವ ಸ್ತ್ರೀಯರಿಗೆ ಇರುವ ಅಡ್ಡಿ ಆತಂಕಗಳು ಹಲವಾರು. ಆದರೆ ವೇದಿಕೆ ದೊರೆತಾಗ, ಅದನ್ನು ಏರಿ ಕುಳಿತ ಮೇಲೆ ಅದರ ಹಿಂದಿನ ಹೋರಾಟ ಯಾರಿಗೂ ಅರ್ಥವಾಗಲಾರದು, ಯಾರಿಗೂ ಅದು ಬೇಕಾಗಿಯೂ ಇಲ್ಲ. ‘ನಿನ್ನ ಹಡಗು ದಡಕ್ಕೆ ಬಂತೇ ಇಲ್ಲವೇ ಎಂಬುದನ್ನಷ್ಟೇ ಅವರು ಕೇಳುತ್ತಾರೆ. ದಾರಿಯಲ್ಲಿ ಅದೆಷ್ಟು ಸುಂಟರಗಾಳಿಯನ್ನು, ತೊಂದರೆಯನ್ನು ಎದುರಿಸಬೇಕಾಯ್ತು ಎಂಬುವುದನ್ನು ಕೇಳಲಾರರು’ ಇದು ಟ್ಯಾಗೋರರು ಹೇಳಿದ, ಬಾಲ್ಯದಿಂದಲೂ ನಾನು ಆಗಾಗ ನೆನಪಿಸಿಕೊಳುವ ಮಾತು. ಬದುಕುವುದರ ಜೊತೆಗೆ ಜೀವನಕ್ಕೆ ಬೇರೆಯದೂ ಒಂದು ಅರ್ಥವಿದೆ ಎಂಬ ಭಾವಿಸುವ ಸ್ತ್ರೀಯರೆಲ್ಲಾ ಇದನ್ನು ಅರಿತೇ ಮುನ್ನುಗ್ಗುತ್ತಿರಬಹುದು.
ಪರಿಚಯ : ಶ್ರೀಮತಿದೇವಿಯವರು ಮೈಸೂರಿನಲ್ಲಿ ನೆಲೆಸಿದ್ದು ಆಕಾಶವಾಣಿಯ ಶಾಸ್ತ್ರೀಯ ಮತ್ತು ಸುಗಮ ಸಂಗೀತ ವಿಭಾಗದಲ್ಲಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದಾರೆ. ಮಿರಜಿನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ಅಲಂಕಾರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಉಡುಪಿಯ ನಾದರಂಜಿನಿ ಮೆಮೊರಿಯಲ್ ಟ್ರಸ್ಟ್ನಡಿ ‘ನಾದಪ್ರಿಯ ಪಂಡಿತ್ ನಾರಾಯಣ ಪಂಡಿತ್ ಬಂದಿಶ್ ಪ್ರಾಜೆಕ್ಟ್’ಗಾಗಿ ಗುರು ನಾರಾಯಣ ಅವರು ರಚಿಸಿದ 100 ಬಂದಿಶ್ಗಳಲ್ಲಿ 92 ಬಂದಿಶ್ಗಳನ್ನು ಹಾಡಿ ಅಂತರ್ಜಾಲದಲ್ಲಿ ದಾಖಲಿಸಿದ್ದಾರೆ. ದೇಶವಿದೇಶಗಳಲ್ಲಿ ನೂರಾರು ಕಛೇರಿಗಳನ್ನು ನೀಡಿದ ಇವರಿಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಆಗಾಗ ಸಂಗೀತದ ಬಗ್ಗೆ ಲೇಖನಗಳನ್ನೂ ಬರೆಯುತ್ತಿರುತ್ತಾರೆ.
ಇದನ್ನೂ ಓದಿ :Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ
Naanemba Parimaladha Haadhiyali Series by Hindustani Vocalist Shrimathidevi
Published On - 2:35 pm, Tue, 6 April 21