NCC RDC: ರೈಫಲ್ ನನ್ನ ಬೆಸ್ಟ್​ ಫ್ರೆಂಡ್, ನಿದ್ದೆಗಿಲ್ಲ ಸಮಯ; ಇದು ಆರ್​ಡಿಸಿ ಸಾಧಕನ ಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 10:02 PM

Republic Day Camp (RDC): ಆರ್​ಡಿಸಿ ಎನ್ನುವುದು ನನ್ನ ಪಾಲಿಗೆ ನನಸಾದ ಕನಸು. ಇದೇ ಕನಸು ಕಂಡಿರುವ ಮತ್ತಷ್ಟು ಕೆಡೆಟ್​ಗಳ ಬಾಳಿನಲ್ಲೂ ಇದು ನನಸಾಗಲಿ ಎನ್ನುವುದು ನನ್ನ ಮನದ ಆಶಯ, ಶುಭ ಹಾರೈಕೆ.

NCC RDC: ರೈಫಲ್ ನನ್ನ ಬೆಸ್ಟ್​ ಫ್ರೆಂಡ್, ನಿದ್ದೆಗಿಲ್ಲ ಸಮಯ; ಇದು ಆರ್​ಡಿಸಿ ಸಾಧಕನ ಮಾತು
ಗೆಳೆಯರ ಬರೇಟ್ ಸರಿಪಡಿಸುತ್ತಿರುವ ಕೆಡೆಟ್ ಎನ್​ಸಿಸಿ ಕೆಡೆಟ್ ದಿಲೀಪ್
Follow us on

ಎನ್​ಸಿಸಿಗೆ (National Cadet Corps – NCC) ಸೇರಿಕೊಂಡ ಲಕ್ಷಾಂತರ ಯುವಕ-ಯುವತಿಯರಿಗೆ ಆರ್​ಡಿ ಪರೇಡ್​ನಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿರುತ್ತದೆ. ಅಪ್ಪನೋ ಅಮ್ಮನೋ ಎನ್​ಸಿಸಿ ಕೆಡೆಟ್ ಆಗಿದ್ದರೆ, ಅಂಥವರು ತಮ್ಮ ಆಸೆಯನ್ನು ಮಕ್ಕಳಿಗೂ ವರ್ಗಾಯಿಸಿರುತ್ತಾರೆ. ಎನ್​ಸಿಸಿ ಕೆಡೆಟ್​ಗಳು ಇರುವ ಮನೆಯಲ್ಲಿ ಆರ್​ಡಿಸಿ (Annual Republic Day Camp – RDC), ತಲ್ ಸೈನಿಕ್ ಕ್ಯಾಂಪ್, ಆರ್ಮಿ ಅಟ್ಯಾಚ್​ಮೆಂಟ್ ಕ್ಯಾಂಪ್ ಎನ್ನುವ ಕನಸುಗಳು ಪದೇಪದೇ ಪ್ರಸ್ತಾಪವಾಗುತ್ತಲೇ ಇರುತ್ತವೆ. ತಮ್ಮ ಬದುಕಿನ ಭಾಗವಷ್ಟೇ ಅಲ್ಲ, ಭಾವವಾಗಿಯೂ ಉಳಿದುಬಿಡುವ ಈ ಕನಸುಗಳನ್ನು ಸಾಕಾರಗೊಳಿಸುವುದು ಹುಡುಗಾಟದ ಮಾತಲ್ಲ. ಅದಕ್ಕಾಗಿ ಶಿಸ್ತು, ಬದ್ಧತೆ ಮತ್ತು ಸಾಕಷ್ಟು ತ್ಯಾಗ ಬೇಕು. ಈ ವರ್ಷದ  ಆರ್​ಡಿಸಿ ಸಾಧನೆ ಮಾಡಿರುವ ಕೆಡೆಟ್ ಆರ್.ದಿಲೀಪ್ ಅವರ ಅನುಭವ ಕಥನ ಇಲ್ಲಿದೆ. ಇದು ಮತ್ತಷ್ಟು ಯುವಜನರಿಗೆ ಅವರ ಸಿದ್ಧತೆ ಪೂರ್ಣಗೊಳ್ಳಲು ಇದು ನೆರವಾಗಬಹುದು ಎಂಬ ಆಶಯ ನಮ್ಮದು.

ಅಲ್ಪ ನಿದ್ದೆ, ದೃಢಸಂಕಲ್ಪ, ಆತ್ಮಸ್ಥೈರ್ಯ, ಎನ್​ಸಿಸಿ ಕೆಡೆಟ್ ಎಂಬ ಹೆಮ್ಮೆ, ದೇಶಸೇವೆ ಮಾಡಬೇಕೆಂಬ ಛಲ.. ನನ್ನನ್ನು ಸಾಧನೆಯ ಹಾದಿಯಲ್ಲಿ ಮುಂದೆ ಸಾಗುವಂತೆ ಮಾಡಿದವು. RDC ಕೇವಲ ನನ್ನ ಕನಸಾಗಿರಲಿಲ್ಲ ಅದು ನನ್ನ ಗುರಿಯಾಗಿತ್ತು. ಎನ್​ಸಿಸಿಯಲ್ಲಿದ್ದಾಗ ನಮಗೆ ನಾವೂ ಸಹ ಯೋಧರೇ ಎಂಬ ಭಾವ ಮೂಡಿರುತ್ತದೆ. ಖಾಕಿ ಬಟ್ಟೆ ತೊಟ್ಟಾಗ ನಾನು ಸೈನಿಕ ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದೆ. ಮುಂದಿನ ದಿನಗಳನ್ನು ಸೇನೆಗೆ ಸೇರಬೇಕೆಂಬ ಆಸೆಯೂ ನನಗಿದೆ.

ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ಗೆ ನಾನು ಆಯ್ಕೆಯಾಗಿದ್ದೆ. ನಮ್ಮ ಊರು ದೊಡ್ಡಬಳ್ಳಾಪುರದ ಜನರು ದೊಡ್ಡ ಫ್ಲೆಕ್ಸ್​ನಲ್ಲಿ ನನ್ನ ಫೋಟೊ ಹಾಕಿಸಿ ಅಭಿನಂದಿಸಿದ್ದರು. ಎನ್​ಸಿಸಿಯಲ್ಲಿ ಆರ್​ಡಿಸಿ ತಲುಪುವುದೇ ಕಷ್ಟ, ಅಲ್ಲಿಂದ ರಾಜ್​ಪಥ್ ಕಂಟೀಜೆಂಟ್​ನ (Rajpath contingent) ಅಂದರೆ ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಮಾಡುವ ಅವಕಾಶ ಪಡೆದುಕೊಳ್ಳುವುದು ಇನ್ನೂ ಕಷ್ಟ.

ಇಡೀ NCC ವ್ಯವಸ್ಥೆಯಲ್ಲಿಯೇ RDC ಎನ್ನುವುದು ಉನ್ನತ ಗರಿ. ಅದನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಲಕ್ಷಾಂತರ ಕೆಡೆಟ್​ಗಳ ಪೈಕಿ ಕೆಲವರಿಗೆ ಮಾತ್ರ ಈ ಹಂತ ತಲುಪಲು ಅವಕಾಶ ಸಿಗುತ್ತೆ. ರಾಜ್​ಪಥ್ ರ‍್ಯಾಲಿಯಲ್ಲಿ ಭಾಗಿಯಾಗುವುದು ದೊಡ್ಡ ಗೌರವ. ರಾಜ್​ಪಥ್​ನಲ್ಲಿ ಡ್ರಿಲ್ ಮಾಡಬೇಕೆಂದರೆ ಕಠಿಣವಾದ ಅಭ್ಯಾಸ, ಪರಿಶ್ರಮ ಮಾಡಿರಬೇಕು. ಈ ತುಕಡಿಯಲ್ಲಿ ಸ್ಥಾನಪಡೆಯಬೇಕು ಎನ್ನುವುದು ಎಲ್ಲಾ ಕೆಡೆಟ್​ಗಳ ಕನಸಾಗಿರುತ್ತೆ. ರಾಜ್​ಪಥ್ ಪರೇಡ್​ಗೆ ಸೆಲೆಕ್ಟ್ ಆಗಬೇಕು ಎಂಬ ಆಸೆ ಹೊತ್ತಿರುವವರು ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ಲಕ್ಷ್ಯ ಕೊಡಬೇಕು. ಕಠಿಣ ಪರಿಶ್ರಮ ಹಾಗೂ ಡ್ರಿಲ್​ನಲ್ಲಿ ಉತ್ತಮ ತಯಾರಿ ನಡೆಸಿರುತ್ತಾರೆ. ಅನ್ಯ ಕೆಡೆಟ್​ಗಳಿಗಿಂತ ಇವರು ವಿಭಿನ್ನರಾಗಿರುತ್ತಾರೆ. ಕೊರೊನಾ ಹಿನ್ನೆಲೆ ಈ ಬಾರಿ ನಮ್ಮ ಸೆಲೆಕ್ಷನ್ ವಿಭಿನ್ನವಾಗಿತ್ತು. ನಾವು ಸಿಎಟಿಸಿ ಕ್ಯಾಂಪ್​ಗಳನ್ನು (Combined Annual Training Camp –  CATC) ಮಾಡದೇ ನೇರವಾಗಿ ಆರ್​ಡಿಸಿ ಪೂರ್ವಭಾವಿ (Pre-RDC) ಕ್ಯಾಂಪ್​ಗಳಿಗೆ ಬಂದೆವು. ನಮ್ಮ ಹಿಂದಿನ ಕ್ಷಮತೆಯನ್ನು ಪರಿಗಣಿಸಿ ಈ ಹಂತಕ್ಕೆ ನೇರವಾಗಿ ಕಳಿಸಿದ್ದರು.

ಇದನ್ನೂ ಓದಿ: Explainer | ಗಣರಾಜ್ಯೋತ್ಸವ ಪರೇಡ್; ಎಲ್ಲ ಎನ್​ಸಿಸಿ ಕೆಡೆಟ್​ಗಳ ಅತಿದೊಡ್ಡ ಕನಸು, ಆರ್​ಡಿ ಪರೇಡ್​ಗೆ ಆಯ್ಕೆಯಾಗುವುದು ಹೇಗೆ?

ಕರ್ನಾಟಕ ಅಂಡ್ ಗೋವಾ ಡೈರೆಕ್ಟೊರೇಟ್ RDC ಕಂಟಿಜೆಂಟ್

ರಾಷ್ಟ್ರಪತಿಗಳಿಗೆ ಸಲ್ಯೂಟ್ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ
ಆರ್​ಡಿಸಿಗೆ ದೇಶದ ವಿವಿಧೆಡೆಯಿಂದ ಕೆಡೆಟ್​ಗಳು ಬಂದಿರುತ್ತಾರೆ. ರಾಜ್​ಪಥ್ ಕೆಡೆಟ್​ಗಳು ಅಭ್ಯಾಸದ ಸಮಯವನ್ನು ಮುಗಿಸಿ ಬ್ಯಾರಕ್​ಗಳಿಗೆ ಹಿಂದಿರುಗಿದರೂ ನಾವು ಅಭ್ಯಾಸವನ್ನು ಮುಂದುವರೆಸುತ್ತಿದ್ದೆವು. ನಮ್ಮ ಡ್ರಿಲ್ ಸುಧಾರಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದೆವು. ಈ ವೇಳೆ ನಮಗೆ ನೋವು, ಸುಖ ಯಾವುದರ ಚಿಂತೆಯೂ ಇರುತ್ತಿರಲಿಲ್ಲ. ದೈನಂದಿನ ಚಟುವಟಿಕೆಗಳ ನಡುವೆ ತುಸುವೇ ವಿಶ್ರಾಂತಿ ಸಿಕ್ಕರೂ ಅಭ್ಯಾಸ ಆರಂಭಿಸಿಬಿಡುತ್ತಿದ್ದೆವು. ಗಣರಾಜ್ಯೋತ್ಸವದ ದಿನ ಇಡೀ ದೇಶ ನಮ್ಮನ್ನು ನೋಡುತ್ತಿರುತ್ತದೆ ಎಂಬುದು ಒಂದು ರೀತಿಯ ಹೆಮ್ಮೆ, ಮತ್ತೊಂದು ರೀತಿ ಜವಾಬ್ದಾರಿಯೂ ಹೌದು.

ರಾಷ್ಟ್ರಪತಿಗಳಿಗೆ ಸಲ್ಯೂಟ್ ಹೊಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೆಹಲಿ ಕ್ಯಾಂಪ್​ಗೆ ಬಂದ ಮೇಲೆ ನಮ್ಮ ತಂಡದ ಅತ್ಯುತ್ತಮ ಕೆಡೆಟ್ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇತರೆಲ್ಲರಿಗಿಂತಲೂ ನಾವು ಉತ್ತಮ ಎಂದು ಸಾಧಿಸುವುದು ಎಲ್ಲ ಕೆಡೆಟ್​ಗಳ ಆಸೆ. ಇದಕ್ಕಾಗಿ ಹಗಲಿರುಳು ಶ್ರಮ ಹಾಕ್ತೀವಿ. ಇದು ಕೇವಲ ಡ್ರಿಲ್ ಒಂದನ್ನೇ ಆಧರಿಸಿರುವುದಿಲ್ಲ. ದೇಶ, ವಿದೇಶಗಳಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ  ದಲ್ಲಾಗುತ್ತಿರುವ ಎಲ್ಲಾ ಪ್ರಚಲಿತ ಮಾಹಿತಿಗಳ ಬಗ್ಗೆ ನಮಗೆ ತಿಳುವಳಿಕೆ ಇರಬೇಕು.

ಇದನ್ನೂ ಓದಿ: ಭದ್ರತೆ ವಿಚಾರದಲ್ಲಿ NCC ಪಾತ್ರ ಹೆಚ್ಚಿಸಲು ಭಾರತ ಸರ್ಕಾರ ಶ್ರಮಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ಕರ್ನಾಟಕ ಅಂಡ್ ಗೋವಾ ಡೈರೆಕ್ಟೊರೇಟ್ RDC ಕಂಟಿಜೆಂಟ್

ಕಷ್ಟದ ಮಾತೇ ಇಲ್ಲ, ಪರಿಶ್ರಮವೇ ಅಲ್ಲಿನ ಸುಖ
ಮನೆಯಲ್ಲಿದ್ದಾಗ ಬೆಳಿಗ್ಗೆ ಎಷ್ಟೊತ್ತಿಗೆ ಇದ್ದರೂ ಪರವಾಗಿರಲ್ಲ. ಆದರೆ ಆರ್​ಡಿಸಿ ಕ್ಯಾಂಪ್​ಗಳಲ್ಲಿ ಹಾಗಲ್ಲ. ಬೆಳಿಗ್ಗೆ 4 ಗಂಟೆಗೇ ನಮ್ಮ ಡ್ರಿಲ್ ಶುರುವಾಗಿರುತ್ತೆ. ಕಣ್ಣಿಗೆ ಸರಿಯಾದ ವಿಶ್ರಾಂತಿ ಸಹ ಸಿಗಲ್ಲ. ಒಂದಿಷ್ಟು ಬಿಡುವು ಬೇಕು ಎಂದು ಮನಸ್ಸು ಹಾತೊರೆಯುತ್ತೆ. ತಣ್ಣನೆ ಗಾಳಿ ಮೈಸೋಕಿ ಸಂತೈಸಲಿ ಎಂಬಂತೆ ಆಗುತ್ತೆ. ಮನೆಗೆ ಹೋಗೋಣ. ಸಾಕು ಇದರ ಸಹವಾಸ ಎಂದು ಮನಸ್ಸು ಹೇಳುತ್ತೆ. ಆದ್ರೆ ನಾವು ನಮ್ಮ ಹಾದಿಯಲ್ಲಿ ಬರುವ ಎಲ್ಲವನ್ನೂ ಎದುರಿಸಲು ಸಿದ್ಧರಾಗಿರಬೇಕು.

ರಾಜ್​ಪಥ್​ ಪರೇಡ್​ನಲ್ಲಿ ಭಾಗವಹಿಸುವ ಒಂದು ದಿನದ ಸಂಭ್ರಮಕ್ಕಾಗಿ ಹಲವು ದಿನಗಳ ಕಠಿಣ ಪರಿಶ್ರಮವನ್ನು ಅನುಭವಿಸಲೇಬೇಕು. ನಮಗೆ ಸ್ಫೂರ್ತಿ ಹೆಚ್ಚಿಸಲು ನಮ್ಮ PI (Primer Instructor) ಸ್ಟಾಫ್​ಗಳು ಕೆಲವು ಜೋಶ್ ತುಂಬುವ ಸ್ಲೋಗನ್​ಗಳನ್ನು ಹೇಳಿ ನಮ್ಮ ಧ್ವನಿ, ಹುಮ್ಮಸ್ಸು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಇದರ ಜೊತೆಗೆ ನಾವು ನಮ್ಮ ಮನಸ್ಸನ್ನು ಸ್ಥಿರವಾಗಿಡಬೇಕು. PI  ಸ್ಟಾಫ್​ಗಳು ನಮ್ಮ ಜೊತೆ ಬೆರೆತು ನಮ್ಮವರಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಆಗ ನಮಗೆ ಹೆಮ್ಮೆ ಎಂದೆನಿಸುತ್ತದೆ. ಪಿಐ ಸ್ಟಾಫ್​ಗಳು ಸೇನೆಯಿಂದಲೇ ಬಂದಿರುತ್ತಾರೆ.

RDC ಕೆಡೆಟ್ಸ್

ಏಕತೆ ಮತ್ತು ಶಿಸ್ತು ಅತಿ ಮುಖ್ಯ
ಇನ್ನು RDC ಕ್ಯಾಂಪ್​ಗಳಲ್ಲಿ ಭಾಗಿಯಾಗಲು ಅನೇಕರು ಹಲವು ಬಾರಿ ಪ್ರಯತ್ನಪಟ್ಟಿರುತ್ತಾರೆ. ಅಷ್ಟೊಂದು ಕಷ್ಟವಾಗಿರುತ್ತೆ ಇದರ ಹಾದಿ. ಏಕತೆ ಮತ್ತು ಶಿಸ್ತು NCCಯ ಧ್ಯೇಯವಾಕ್ಯ. ಅದರಂತೆ ಡ್ರಿಲ್ ಮಾಡುವಾಗ ಕಂಟಿಜೆಂಟ್​ನಲ್ಲಿರುವ ಪ್ರತಿಯೊಬ್ಬರೂ ಏಕತೆ ಹಾಗೂ ಶಿಸ್ತನ್ನು ಪಾಲಿಸಬೇಕು. ಎಲ್ಲರೂ ಬಂದೇ ರೀತಿ ಕಾಣುವಂತೆ ಸಮವಸ್ತ್ರ ಧರಿಸುತ್ತೇವೆ. ನಮ್ಮ ಹೆಜ್ಜೆಗಳು ಏಕತೆಯನ್ನು ಸೂಚಿಸುವಂತೆ ಇರುತ್ತವೆ. ಎಲ್ಲರೂ ಒಟ್ಟಾಗಿ ಡ್ರಿಲ್ ಮಾಡುತ್ತೇವೆ. ಇದು ದೂರದಿಂದ ನೋಡಲು ಸುಂದರವಾಗಿ ಕಾಣಿಸುತ್ತದೆ. ಇದರಲ್ಲೇ ಗೊತ್ತಾಗುತ್ತೆ ನಮ್ಮಲ್ಲಿ ಎಷ್ಟು ಏಕತೆ ಬೆಳೆದಿದೆ ಎಂದು.

ರಿಪಬ್ಲಿಕ್ ಡೇ ಪರೇಡ್​ಗಾಗಿ ತಾಲೀಮು

ಮಧ್ಯರಾತ್ರಿ 2 ಗಂಟೆಗೆ ಮಾರ್ಚ್​ಫಾಸ್ಟ್​
ಗಣರಾಜ್ಯೋತ್ಸವ ಸಮೀಪವಾಗುತ್ತಿದ್ದಂತೆ ನಮ್ಮ ಅಭ್ಯಾಸದ ಕಾಠಿಣ್ಯ ಸಹ ಹೆಚ್ಚಾಗುತ್ತೆ. ನಾವು ಬೆಳಿಗ್ಗೆಯಿಂದ ಸತತ ಅಭ್ಯಾಸ ಮಾಡುತ್ತಿದ್ದೇವೆ. ರಾತ್ರಿ 2 ಗಂಟೆಗೆ ಸೊಗಸಾದ ಸರ್ಮೋನಿಯಲ್ಸ್ ಧರಿಸಿ ಜೆಂಟಲ್​ಮನ್ ರೀತಿ ಚಳಿಯಲ್ಲೇ ಇಂಡಿಯಾ ಗೇಟ್ ಅಂದ್ರೆ ರಾಜ್​ಪಥ್ ಬೀದಿಯಲ್ಲಿ ಡ್ರಿಲ್ ಮಾಡುತ್ತಿದ್ದೆವು. ನಮ್ಮ ಅಧಿಕಾರಿಗಳು ನಮ್ಮ ತರಬೇತಿಯಲ್ಲಿ ಯಾವುದೂ ಕಡಿಮೆ ಆಗದಂತೆ ನಮ್ಮನ್ನು ಸಿದ್ಧಗೊಳಿಸುತ್ತಿದ್ದರು. ದೆಹಲಿಯಲ್ಲಿ ಆಗ ಉಷ್ಣಾಂಶ ಮೈನಸ್ 1ಕ್ಕಿಂತಲೂ ಕೆಳಗಿಳಿಯುತ್ತಿತ್ತು. ತೀವ್ರ ಚಳಿಯಲ್ಲೂ ನಾಲ್ಕೈದು ಕೆಜಿಯ ರೈಫಲ್ ಹಿಡಿದು ಡ್ರಿಲ್ ಮಾಡುತ್ತಿದ್ದೆವು. ಮಲಗಲು ತುಂಬ ಕಡಿಮೆ ಸಮಯ ಸಿಗುತ್ತಿತ್ತು. ಆದ್ರೆ ಕೊನೆಗೆ ಕ್ಯಾಂಪ್ ಮುಗಿಸಿ ನಾವು ಮರಳಿ ಮನೆಗೆ ಹೋದಾಗ ನಮಗೆ ಸಿಗುವ ಗೌರವದಿಂದ ನಮ್ಮ ಎಲ್ಲಾ ನೋವು ಮರೆತು ಹೋಗುತ್ತಿತ್ತು.

RDC ಕ್ಯಾಂಪ್​ನಲ್ಲಿ ಮಾರ್ಚ್​ ವೇಳೆ ಬಳಸುತ್ತಿದ್ದ ರೈಫಲ್​ಗಳು

ಸದಾ ಜೊತೆಗಿರುವ ನಮ್ಮ ಸಂಗಾತಿ ರೈಫಲ್
RDC ಕ್ಯಾಂಪ್​ನಲ್ಲಿ ಕೆಡೆಟ್​ಗಳಿಗೆ ರೈಫಲ್ ಅಂದ್ರೆ ಒಂದು ರೀತಿಯ ಬಾಳ ಸಂಗಾತಿಯಿದ್ದಂತೆ. Pre RDC ಕ್ಯಾಂಪ್​ಗೆ ಸೆಲೆಕ್ಟ್ ಆಗುತ್ತಿದ್ದಂತೆ ಕೆಡೆಟ್​ಗಳಿಗೆ ತಮ್ಮ ಜೊತೆಗೆ ಇರಿಸಿಕೊಳ್ಳಲು ಒಂದು ರೈಫಲ್ ಕೊಡುತ್ತಾರೆ. ಅದರ ಬಟ್ ನಂಬರ್ ಮೂಲಕ ರೈಫಲ್ ಯಾರದು ಎಂದು ಗುರುತಿಸಲಾಗುತ್ತೆ. ಬಹುತೇಕ ಬಾರಿ ಪರೇಡ್​ ನಡೆದ ಬಳಿಕವೂ ರೈಫಲ್ ನಮ್ಮ ಬಳಿಯೇ ಇರುತ್ತೇ. ಅದಕ್ಕೆ ಎಣ್ಣೆ ಹಾಕುವುದು, ಶುದ್ಧ ಮಾಡುವುದೆಲ್ಲವನ್ನೂ ನಾವೇ ಮಾಡಬೇಕು. ಅದನ್ನು ಫಳಫಳ ಹೊಳೆಯುವಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಗಣ್ಯರು, ಸೈನಿಕರು ಬಳಸಿದ ರೈಫಲ್ ನಾವು ಬಳಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮ ಎದೆ ಉಬ್ಬಿಸುತ್ತಿತ್ತು.

ರೈಫಲ್ ಸ್ವಲ್ಪ ಗಲೀಜಾಗಿದ್ದರೆ ನಮ್ಮ PI ಸ್ಟಾಫ್​ಗಳು ಪನಿಷ್ಮೆಂಟ್ ನೀಡುತ್ತಿದ್ದರು. ನಮಗೆ ಖುಷಿಯಾದಾಗ, ದುಃಖವಾದಾಗಲೆಲ್ಲ ನಮ್ಮ ಜೊತೆ ರೈಫಲ್ ಇರುತ್ತಿತ್ತು. ಹೀಗಾಗಿ ಅದು ನಮ್ಮ ಸಂಗಾತಿಯಂತಾಗಿರುತ್ತದೆ. ನಾನಂತೂ ಮಲಗುವಾಗಲೂ ರೈಫಲ್ ಜೊತೆಗೇ ಇರಿಸಿಕೊಳ್ಳುತ್ತಿದ್ದೆ. ಇನ್ನು PI ಸ್ಟಾಫ್​ಗಳು ಕೊಡುವ ಪನಿಷ್ಮೆಂಟ್ ಬಗ್ಗೆ ವಿವರಿಸಲು ಆಗದು. ಏಕೆಂದರೆ ಅವರು ಕೊಡುವ ‘ರಗಡಾ’ (ಶಿಕ್ಷೆ) ನಮಗೆ ನಮ್ಮ ತಪ್ಪು ತಿದ್ದಿಕೊಳ್ಳಲು ದಾರಿ ತೋರಿಸುತ್ತಿತ್ತು.

ಶಿಕ್ಷೆಯ ವಿಚಾರ ಸದ್ಯಕ್ಕೆ ಬದಿಗಿಡೋಣ. ಆರ್​ಡಿಸಿ ಎನ್ನುವುದು ನನ್ನ ಪಾಲಿಗೆ ನನಸಾದ ಕನಸು. ಇದೇ ಕನಸು ಕಂಡಿರುವ ಮತ್ತಷ್ಟು ಕೆಡೆಟ್​ಗಳ ಬಾಳಿನಲ್ಲೂ ಇದು ನನಸಾಗಲಿ ಎನ್ನುವುದು ನನ್ನ ಮನದ ಆಶಯ, ಶುಭ ಹಾರೈಕೆ.

ಅಂದ ಹಾಗೆ ಹೇಳೋದು ಮರೆತಿದ್ದೆ. ನನ್ನದು ದೊಡ್ಡಬಳ್ಳಾಪುರ. ಅಪ್ಪ ಪಿ.ಗೋಪಾಲಯ್ಯ ಮತ್ತು ಅಮ್ಮ ಜಿ.ಭಾಗ್ಯಮ್ಮ ಅವರ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಯ್ತು. ಈಗ ಯಲಹಂದ ಜಿಎಫ್​ಜಿಸಿ ಕಾಲೇಜಿನಲ್ಲಿ ಬಿಎ ಓದ್ತಾ ಇದ್ದೀನಿ. ಸೇನೆಗೆ ಆಯ್ಕೆಯಾಗಬೇಕು ಎನ್ನುವುದು ನನ್ನ ಕನಸು.

PI ಸ್ಟಾಫ್ ಜೊತೆ ಕೆಡೆಟ್ಸ್

ದೊಡ್ಡಬಳ್ಳಾಪುರದಲ್ಲಿ ಹಾಕಿದ್ದ ಫ್ಲೆಕ್ಸ್

 

ಅಮ್ಮ ಭಾಗ್ಯಮ್ಮ ಅವರೊಂದಿಗೆ ಕೆಡೆಟ್ ದಿಲೀಪ್

Published On - 4:57 pm, Mon, 22 February 21