Corona Warriors: ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ; ಪಾಸಿಟಿವ್ ಎಂದಾಕ್ಷಣ ಅವನ ಹೆಂಡತಿ ಸಾರಾಸಗಟಾಗಿ ಮನೆಯಿಂದ ಹೊರ ಹಾಕಿಬಿಟ್ಟಳು

| Updated By: Digi Tech Desk

Updated on: May 14, 2021 | 1:23 PM

‘ನೀನೇನಮ್ಮ ಸ್ಯಾನಿಟೈಸರ್ ಫ್ಯಾಕ್ಟರಿ ಎನ್ನುತ್ತಿದ್ದಳು ಮಗಳು. ಇಷ್ಟೆಲ್ಲ ಸರ್ಕಸ್ಸು ಮಾಡಿದ ನಂತರವೂ ಅದು ನನ್ನ ಬಿಡಲಿಲ್ಲ. ಸಣ್ಣಗೆ ಶುರುವಾದ ಜ್ವರ ರಪ್ ಎಂದು ಬೆನ್ನಿಗಂಟಿಯೇ ಬಿಟ್ಟಿತು. ಹದಿನೈದು ದಿನಗಳಲ್ಲಿ ಬರೋಬ್ಬರಿ ಐದು ಕೆಜಿ ಕಳೆದುಕೊಂಡಿದ್ದೆ. ದಶಕಗಳಿಗೆ ಆಗುವಷ್ಟು ಸುಸ್ತು. ಈ ನಡುವೆ ನನ್ನ ಅನೇಕ ಸಹೋದ್ಯೋಗಿಗಳು ಆಗಲೇ ಒಬ್ಬೊಬ್ಬರಾಗಿ ಪಾಸಿಟಿವ್ ಆಗಿ ಮನೆ ಸೇರುತ್ತಿದ್ದರು. ಪ್ರತಿನಿತ್ಯ ನಮ್ಮ ವಾಟ್ಯಾಪ್ ಗುಂಪುಗಳಲ್ಲಿ ಅವರಗಳ ಉದ್ದ ಪಟ್ಟಿ ಇರುತ್ತಿತ್ತು. ಆದರಲ್ಲಿಯೂ ನಾವು ನಾಲ್ಕು ಜನ ಆಸ್ಪತ್ರೆಗೆ ಒಟ್ಟಿಗೆ ಹೋಗಿ ಸೇರಿಕೊಂಡುಬಿಡೋಣ ಮನೆಮಂದಿಗಾದರೂ ನೆಮ್ಮದಿ ಇದ್ದೀತು ಎಂದು ಯೋಚಿಸಿದ್ದೆವು. ಆದರೆ ನಾವು ಹಾಗೆ ಮಾಡಿದರೆ ಬಹಳ ಅಗತ್ಯ ಇರುವವರಿಗೆ ತೊಂದರೆಯಾದೀತು ಎನ್ನುವ ಆ ಆಲೋಚನೆ ಕೈಬಿಟ್ಟೆವು.’ ದೀಪ್ತಿ ಭದ್ರಾವತಿ

Corona Warriors: ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ; ಪಾಸಿಟಿವ್ ಎಂದಾಕ್ಷಣ ಅವನ ಹೆಂಡತಿ ಸಾರಾಸಗಟಾಗಿ ಮನೆಯಿಂದ ಹೊರ ಹಾಕಿಬಿಟ್ಟಳು
ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ದೀಪ್ತಿ ಭದ್ರಾವತಿ
Follow us on

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com 

ಭದ್ರಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಮತ್ತು ಕವಿ, ಕಥೆಗಾರರೂ ಆಗಿರುವ ದೀಪ್ತಿ ಭದ್ರಾವತಿ ಅವರ ಬರಹ ನಿಮ್ಮ ಓದಿಗೆ.

ಕಳೆದ ವರ್ಷದ ಮಾತಿದು. ಮಗಳು ಎಸ್‍ಎಸ್‍ಎಲ್‍ಸಿ ಎನ್ನುವ ಕಾರಣಕ್ಕೆ ಜನವರಿಯಿಂದಲೇ ರಜೆಗಾಗಿ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆದಿದ್ದೆ. ಕಾರಣ ಇಷ್ಟೆ ಆಕೆ ಐದು ತಿಂಗಳಿರುವಾಗಿನಿಂದ ಅವಳನ್ನು ಬಿಟ್ಟು ಆಸ್ಪತ್ರೆಯ ಡ್ಯೂಟಿಗೆ ಹೋದವಳು ನಾನು. ಆಸ್ಪತ್ರೆಯ ಕೆಲಸವೇ ಅಂಥದ್ದು ಅದು ಇಷ್ಟೇ ಹೊತ್ತಿಗೆ ಮುಗಿಯುತ್ತದೆ. ಇದೇ ಹೊತ್ತಿಗೆ ಆರಂಭವಾಗುತ್ತದೆ ಎಂತೇನು ಇರುವುದಿಲ್ಲ. ನಿಗದಿತ ಪಾಳಿಯ ನಂತರವೂ ಅದೆಷ್ಟೋ ಬಾರಿ ತಡವಾಗುತ್ತದೆ. ಕಾಯಿಲೆಗೆ ರಜೆ ದಿನಗಳ ಅರಿವಿರುವುದಿಲ್ಲ ಹೀಗಾಗಿ ಆ ದಿನದಲ್ಲಿಯೂ ಒಬ್ಬರಲ್ಲ ಒಬ್ಬರು ಕಾರ್ಯ ನಿರ್ವಹಿಸುವುದು ಅನಿವಾರ್ಯ. ಬೇಕಾದ ಹಾಗೆ ರಜೆಗಳು ಅಲಭ್ಯ. ಹೀಗಾಗಿ ಅವಳ ಅದೆಷ್ಟೋ ಕೆಲಸಗಳನ್ನು ಬೇಡಿಕೆಗಳನ್ನು ನಾನು ಈವರೆಗೂ ಈಡೇರಿಸಿಲ್ಲ. ಭಾನುವಾರವೂ ನಾನು ಹೊರಟು ನಿಂತಾಗ ಇವತ್ತೊಂದಿನ ಮನೆಯಲ್ಲಿರು ಎನ್ನುವ ಅವಳ ಆಸೆಯನ್ನು ನಾನು ಪೂರೈಸಿಲ್ಲ. ಅದೇ ಕಾರಣಕ್ಕೆ ಅವಳ ಬದುಕು ಮತ್ತೊಂದು ತಿರುವಿನಲ್ಲಿ ನಿಂತಿರುವಾಗ ನಾನು ಅವಳ ಜೊತೆ ಇರುವುದು ಅನಿವಾರ್ಯ ಎನ್ನಿಸಿ ಮಾರ್ಚ್ ಮತ್ತು ಏಪ್ರಿಲ್ ಎರಡು ತಿಂಗಳು ಅವಳ ಜೊತೆಗಿರುವ ಮಾತು ಕೊಟ್ಟಿದ್ದೆ. ಅದರಂತೆ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಒಂದು ತಿಂಗಳ ಮೊದಲು ರಜೆ ಅನುಮತಿ ಪಡೆದಿದ್ದೆ. ಆದರೆ ಎಣಿಸಿದ್ದು ಬೇರೆ ಆದದ್ದು ಮತ್ತೇನೊ ರಜೆ ಪಡೆದು ಹತ್ತೋ ಹನ್ನೆರಡೋ ದಿನವಾಗಿತ್ತಷ್ಟೆ ದೇಶದಲ್ಲಿ ಕೋವಿಡ್ ಸಂಕಷ್ಟಗಳು ಶುರುವಾಗಿಯೇ ಬಿಟ್ಟವು. ನಮ್ಮವರೆಲ್ಲ ಯುದ್ಧಕ್ಕೆ ಸನ್ನದ್ಧರಾದವರಂತೆ ಕಾರ್ಯ ಪ್ರವೃತ್ತರಾದರು.

ಮನಸಲ್ಲಿ ಏನೋ ಚಡಪಡಿಕೆ ಒಂದೆಡೆ ಮಗಳು ಮತ್ತೊಂದೆಡೆ ಇಂತಹ ಸಮಯದಲ್ಲಿ ಮನೆಯಲ್ಲಿ ಕೂರುವುದೆಂದರೆ? ನಾನು ಪದೇಪದೆ ಮೇಲಿನ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದೆ. ಅವರು “ಮಗಳ ಪರೀಕ್ಷೆ ಇದೆಯಲ್ವಾ ಇರಿ ನೋಡುವ” ಎನ್ನುತ್ತಿದ್ದರು. ಆದರೆ ನನ್ನ ಹೊಯ್ದಾಟಗಳಿಗೆ ತೆರೆ ನೀಡುವ ತೆರದಿ ಇಲಾಖೆ ಎಲ್ಲ ಸಿಬ್ಬಂದಿಗಳ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿತು. ಮಗಳದ್ದು ಒಂದೇ ರಗಳೆ “ಹೋಗಲೇಬೇಕಾ?” ಅನಿವಾರ್ಯ ಎಂದೆ, ಆಕೆ ಏನೂ ನುಡಿಯಲಿಲ್ಲ. ಹೋಗು ಹುಷಾರು ಎಂದಳು. ಆಕೆಯ ಮಾತುಗಳ ಹಿಂದೆ ಅದು ಯಾವ ಹೆದರಿಕೆ ಇತ್ತೋ ನಾನು ಗಮನಿಸಲಿಲ್ಲ. ಆದರೆ ನನಗೆ ಒಳಗೊಳಗೆ ಸಣ್ಣಗೆ ಆತಂಕವಿತ್ತು. ಒಂದು ವೇಳೆ ಕಾಯಿಲೆಯನ್ನು ನಾನು ಹೊತ್ತು ಮನೆಗೆ ತಂದರೆ? ನನ್ನ ಕಾರಣಕ್ಕೆ ಇವರೆಲ್ಲ..? ಮುಂದೆ ಯೋಚಿಸುವುದು ಸಾಧ್ಯವಾಗಿರಲಿಲ್ಲ. ಇದು ನನ್ನೊಬ್ಬಳ ಭಾವವೇನು ಅಲ್ಲ. ಕೋವಿಡ್​ನ ಕೆಲಸಕ್ಕೆ ತೊಡಗಿಕೊಂಡ ಅಷ್ಟೂ ಜನರ ಮನಸ್ಥಿತಿ ಇದೇ ಆಗಿತ್ತು. ಅದೇ ಕಾರಣಕ್ಕೆ ಸಣ್ಣಪುಟ್ಟ ಮಕ್ಕಳ ಅಪ್ಪಂದಿರು ತಿಂಗಳುಗಟ್ಟಲೆ ಮನೆ ಬಿಟ್ಟರು. ಇನ್ನು ಸಣ್ಣ ಮಕ್ಕಳ ಅಮ್ಮಂದಿರು ಮಕ್ಕಳ ಹತ್ತಿರ ಹೋಗಲಾಗದೆ ದೂರವೂ ಇರಲಾರದೆ ಒದ್ದಾಡಿದರು. ಎದುರಿಗೆ ಸಾವೊಂದು ಕಾಯುತ್ತಿದೆ ಎನ್ನುವಾಗ ಅದಕ್ಕೆ ಎದೆಯೊಡ್ಡುವುದಿದೆಯಲ್ಲ ಅದು ಅಷ್ಟು ಸುಲಭದ್ದೇನಲ್ಲ. ನನಗೆ ಇಂತಹ ಸಮಯದಲ್ಲೆಲ್ಲ ಅಲ್ಲೆಲ್ಲೋ ನಮಗಾಗಿ ಕಾಯುವ ಸೈನಿಕರು ನೆನಪಾಗುತ್ತಾರೆ. ಹೊಸ ವೈರಸ್ಸು. ಅದಕ್ಕೆ ತಕ್ಕ ಹಾಗೆ ಅಬ್ಬರಿಸುತ್ತಿದ್ದ ಮಾಧ್ಯಮಗಳು. ಅತೀ ವೇಗದ ಅದರ ಪ್ರಸರಣ ಒಂದಲ್ಲ ಎರಡಲ್ಲ. ಏನೇನೋ ತಳಮಳ.

ಆಗಷ್ಟೇ ನಮ್ಮ ದೇಶಕ್ಕೆ ಕೊರೋನಾ ಕಾಲಿಟ್ಟ ಸಂದರ್ಭದಲ್ಲಿ ಭದ್ರಾವತಿ ತಾಲೂಕಿನ ಕೋವಿಡ್ ಯೋಧರು

ಇನ್ನು ಈ ಸಮಯದಲ್ಲಿ ಅನುಭವಿಸಿದ ಮತ್ತೊಂದು ಸಂಕಷ್ಟವೆಂದರೆ ಅಪ್ಪ ಅಮ್ಮ ಇಬ್ಬರೂ ಆರೋಗ್ಯ ಇಲಾಖೆಯಲ್ಲಿದ್ದ ಕಾರಣಕ್ಕೆ ಅವರುಗಳ ಮಕ್ಕಳು ಅನುಭವಿಸಿದ ಏಕಾಂಗಿತನ. ಬಹುಶಃ ಅದು ಪದಗಳಲ್ಲಿ ಹಿಡಿದಿಡುವಂಥದ್ದಲ್ಲ. ಲಾಕ್‍ಡೌನ್‍ನ ಕಾರಣಕ್ಕೆ ಪ್ರಪಂಚವೆಲ್ಲ ಒಟ್ಟಾಗಿ ಕೂತು ಟಿವಿ ನೋಡುತ್ತಲೋ ಕೇರಂ ಆಡುತ್ತಲೋ ಕಾಲ ತಳ್ಳುತ್ತಿದ್ದರೆ ನಮ್ಮಗಳ ಮಕ್ಕಳು ಬಾಗಿಲ ಬುಡದಲ್ಲೋ, ಕಿಟಕಿಯಲ್ಲೋ ನಿಂತು ದಾರಿ ಕಾಯುತ್ತಿದ್ದರು. ಆಗೆಲ್ಲ ಈ ಕೆಲಸಕ್ಕೆ ನಾವು ಬರಬಾರದಿತ್ತು ಎಂದು ಅವಲತ್ತುಕೊಂಡು ಕಣ್ಣಂಚ ನೀರನ್ನು ಒರೆಸಿಕೊಂಡವರೇ ಹೆಚ್ಚು. ಇಷ್ಟರ ನಡುವೆಯೂ ಈ ಖಾಯಿಲೆಯನ್ನು ತೊಲಗಿಸಲೇ ಬೇಕು ಎನ್ನುವ ಅಮಿತ ಉತ್ಸಾಹ.

ಮೊಟ್ಟ ಮೊದಲ ದಿನ ಪಿಪಿಇ ಧರಿಸಿದಾಗ ಅದೇನೋ ಖುಷಿ, ಏನನ್ನೋ ಸಾಧಿಸಲಿಕ್ಕೆ ಹೊರಟಿದ್ದೇವೆ ಎನ್ನುವ ಭಾವ. ಬಹುಶ: ನಂಬುತ್ತೀರೋ ಇಲ್ಲವೋ ಆ ದಿನ ನಾವೆಲ್ಲ ಸ್ನೇಹಿತೆಯರು ಸೆಲ್ಪಿ ತೆಗೆದುಕೊಂಡಿದ್ದೆವು. ಅದರಲ್ಲಿ ಯಾರು ಏನು ಒಂದು ತಿಳಿಯದೇ ಬಿದ್ದು ಬಿದ್ದು ನಕ್ಕಿದ್ದೆವು. ನಮ್ಮ ಮುಖ್ಯ ಕೆಲಸ ಸ್ವಾಬ್ ಕಲೆಕ್ಷನ್. ಕಾಲೇಜಿನ ದಿನಗಳಿದ್ದಾಗಲೇ ತರಬೇತಿ ಇರುತ್ತದೆಯಾದರೂ ಮೊದಲ ದಿನ ಕೆಲಸ ಶುರುವಿಟ್ಟಾಗ ಕೈ ನಡುಗಿತ್ತು. ಮೊದಲ ಕೇಸು ದಾಖಲಾದಾಗ ನಾವೆಲ್ಲರೂ ಹೌಹಾರಿದ್ದೆವು. ಆ ದಿನ ಕಾರ್ಯ ನಿರ್ವಹಿಸಿದ ಅಷ್ಟೂ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿಜ ಮಾತ್ರ ಜೀವ ಭಯ ಅಂದರೆ ಏನು ಅಂತ ಅರಿವಾಗಿದ್ದೇ ಆಗ. ರಿಪೋರ್ಟು ಬರುವವರೆಗೆ ಜೀವದಲ್ಲಿ ಜೀವವಿಲ್ಲ. ಪೇಶಂಟುಗಳಿಗೆ ಸುಲಭವಾಗಿ ನಿಮಗೆ ಈ ಕಾಯಿಲೆ ಇದೆ. ಇದು ಇಲ್ಲ ಅಂತೆಲ್ಲ ಸಲೀಸು ಹೇಳುವ ನಾವು ಅದೇ ಪರಿಸ್ಥಿತಿಯಲ್ಲಿ ನಿಲ್ಲುವುದಿದೆಯಲ್ಲ? ಅದಾದ ನಂತರ ಕೇಸುಗಳು ಹೆಚ್ಚುತ್ತ ಹೋಗಿ ಬಿಡುವಿಲ್ಲದ ದುಡಿಮೆ.

ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸೀಲ್ಡೌನ್ ಆದ ಕಡೆಯಲ್ಲಿ ಪ್ರೈಮರಿ ಕಾಂಟ್ಯಾಕ್ಟ್, ಸೆಕೆಂಡರಿ ಕಾಂಟ್ಯಾಕ್ಟ್. ಈ ಎಲ್ಲವೂ ಸೇವೆಗೆ ಸೇರಿದಾಗಿನಿಂದ ಹೊಸ ಪದಗಳು. ಅದರ ಜೊತೆಯಲ್ಲಿ ಸರಿಯಾದ ಸಮಯಕ್ಕೆ ಊಟವಿಲ್ಲದೆ ಪಿಪಿಇ ಬಿಚ್ಚುವರೆಗೆ ನೀರು ಕುಡಿಯದೆ ಆರೋಗ್ಯ ಕೈಕೊಡತೊಡಗಿತ್ತು. ಎರಡು ತಿಂಗಳ ಅವಧಿಯಲ್ಲಿ ನಾನು ನಾಲ್ಕಕ್ಕೂ ಹೆಚ್ಚು ಬಾರಿ ಜ್ವರಕ್ಕೆ ತುತ್ತಾಗಿದ್ದೆ. ಹಾಗೆ ಅನುಮಾನ ಶುರುವಾದಾಗಲೆಲ್ಲ ಪರೀಕ್ಷೆ. ಅದು ನೆಗೆಟಿವ್ ಬಂದರೆ ಮತ್ತೆ ಕೆಲಸ ಮುಂದುವರಿಕೆ. ನಿರಂತರ ಮಾಸ್ಕಿನ, ಫೇಸ್ ಶೀಲ್ಡಿನ ಬಳಕೆಯಿಂದಾಗಿ ಸತತ ತಲೆ ನೋವು. ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ. ಎಷ್ಟೋ ಬಾರಿ ಮಾಸ್ಕು ತೆಗೆದು ಬಿಸಾಡಬೇಕು ಎನ್ನುವಷ್ಟು ಕಿರಿಕಿರಿ. ಒಮ್ಮೆ ಹೀಗೇ ಆಯಿತು; ಉಸಿರು ತೆಗೆದುಕೊಳ್ಳುವುದು ಸಾಧ್ಯವೇ ಆಗುತ್ತಿಲ್ಲವೆಂದು ಎಣಿಸಿ. ಮಾಸ್ಕು ಜಾರಿಸಿ ಫೇಸ್ ಶೀಲ್ಡ್ ಒಂದನ್ನೇ ಹಾಕಿ ಸ್ಯಾಂಪಲ್‍ಗಳ ಹ್ಯಾಂಡಲ್ ಮಾಡಿದೆ. ಅವುಗಳಲ್ಲಿದ್ದ ಕೆಲವು ಸ್ಯಾಂಪಲ್ ಪಾಸಿಟಿವ್ ಎಂದು ಬಂತು ನೋಡಿ ತಲೆ ಹನ್ನೆರಡಾಣೆ. ಅದಾದ ನಂತರ ಅಂತಹ ದುಸ್ಸಾಹಸಕ್ಕೆ ಧೈರ್ಯ ಮಾಡಲಿಲ್ಲ. ದಿನಕ್ಕೆ ಎರಡು ಮೂರು ಬಾರಿ ಸ್ನಾನ. ಬಹುಶ: ಮುಂದಿನ ಜನ್ಮಕ್ಕಾಗುವಷ್ಟು ಸ್ನಾನವನ್ನು ಆರು ತಿಂಗಳ ಅವಧಿಯಲ್ಲಿ ಮಾಡಿದ್ದೇನೆ. ರಾಶಿ ರಾಶಿ ಬಟ್ಟೆಗಳ ಒಗೆತ ಸ್ಯಾನಿಟೈಸರ್, ಡೆಟಾಲ್ ವಾಸನೆ. ನಾನು ಹತ್ತಿರ ಹೋದರೆ ಸಾಕು ನೀನೇನಮ್ಮ ಸ್ಯಾನಿಟೈಸರ್ ಫ್ಯಾಕ್ಟರಿ ಎನ್ನುತ್ತಿದ್ದಳು ಮಗಳು. ಇಷ್ಟೆಲ್ಲ ಸರ್ಕಸ್ಸು ಮಾಡಿದ ನಂತರವೂ ಅದು ನನ್ನ ಬಿಡಲಿಲ್ಲ. ಸಣ್ಣಗೆ ಶುರುವಾದ ಜ್ವರ ರಪ್ ಎಂದು ಬೆನ್ನಿಗಂಟಿಯೇ ಬಿಟ್ಟಿತು. ಹದಿನೈದು ದಿನಗಳಲ್ಲಿ ಬರೋಬ್ಬರಿ ಐದು ಕೆಜಿ ಕಳೆದುಕೊಂಡಿದ್ದೆ. ದಶಕಗಳಿಗೆ ಆಗುವಷ್ಟು ಸುಸ್ತು. ಈ ನಡುವೆ ನನ್ನ ಅನೇಕ ಸಹೋದ್ಯೋಗಿಗಳು ಆಗಲೇ ಒಬ್ಬೊಬ್ಬರಾಗಿ ಪಾಸಿಟಿವ್ ಆಗಿ ಮನೆ ಸೇರುತ್ತಿದ್ದರು. ಪ್ರತಿ ನಿತ್ಯ ನಮ್ಮ ವ್ಯಾಟ್ಯಾಪ್ ಗುಂಪುಗಳಲ್ಲಿ ಅವರಗಳ ಉದ್ದ ಪಟ್ಟಿ ಇರುತ್ತಿತ್ತು. ಆದರಲ್ಲಿಯೂ ನಾವು ನಾಲ್ಕು ಜನ ಆಸ್ಪತ್ರೆಗೆ ಒಟ್ಟಿಗೆ ಹೋಗಿ ಸೇರಿಕೊಂಡುಬಿಡೋಣ ಮನೆಮಂದಿಗಾದರೂ ನೆಮ್ಮದಿ ಇದ್ದೀತು ಎಂದು ಯೋಚಿಸಿದ್ದೆವು. ಆದರೆ ನಾವು ಹಾಗೆ ಮಾಡಿದರೆ ಬಹಳ ಅಗತ್ಯ ಇರುವವರಿಗೆ ತೊಂದರೆಯಾದೀತು ಎನ್ನುವ ಆ ಆಲೋಚನೆ ಕೈಬಿಟ್ಟೆವು. ಆದರೆ ಒಂದಿಬ್ಬರು ಬಹಳ ಸೀರಿಯಸ್ ಆಗಿಯೇ ಬಿಟ್ಟರು. ಆಗ ಕಣ್ಣೀರು ಉಕ್ಕಿದ್ದು ಸುಳ್ಳಲ್ಲ. ಈಗಲೂ ಅದನ್ನು ನೆನೆಸಿಕೊಂಡರೆ ಮನಸ್ಸು ಹಿಂಡುತ್ತದೆ ಯಾರೂ ಯಾರಿಗೂ ಸಾಂತ್ವನ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅದೂ ಅಲ್ಲದೆ ಪಾಸಿಟಿವ್ ಎಂದಾಕ್ಷಣಕ್ಕೆ ಜೊತೆಯಲ್ಲಿದ್ದವರಿಂದ ಹಿಡಿದು ಆಚೀಚೆ ಮನೆಯವರ ನಡುವೆ ಬದುಕುವುದಿತ್ತಲ್ಲ ಅದು ಕಾಯಿಲೆ ಬಂದದ್ದಕ್ಕಿಂತ ಘೋರ (ಪುಣ್ಯಕ್ಕೆ ಈ ಬಾರಿ ಅಂತಹ ಪರಿಸ್ಥಿತಿಗಳಿಲ್ಲ).

ಒಮ್ಮೆ ಕೋವಿಡ್ ಬಂದು ಐಸಿಯುವರೆಗೆ ಹೋಗಿ ಬಂದ ಸ್ನೇಹಿತೆಯೊಬ್ಬಳು ಕರೆ ಮಾಡಿ “ನೋಡು ಏಳನೇ ದಿನಕ್ಕೆ ಸಮಸ್ಯೆ ಆಗತ್ತೆ” ಎಂದುಬಿಟ್ಟಳು. ತಗೊಳ್ಳಿ “ಏಳನೇ ದಿನ ಎಣಿಸೋದೇ ದಿನಾ” ಆದರೆ ಏನೂ ಆಗಲಿಲ್ಲ. ಆದರೆ ಆ ದಿನ ಕಳೆಯುವ ತನಕ ಇದ್ದದ್ದು ಮಗಳ ಚಿಂತೆ ಮಾತ್ರವೇ. ಒಂದು ವೇಳೆ ನಾನು ಹೋಗಿಬಿಟ್ಟರೆ? ಸರಿಯಾಗಿ ಹದಿನಾಲ್ಕು ದಿನಗಳ ರಜೆ. ಮತ್ತೆ ರಜೆ ಮುಂದುವರೆಸುವುದಕ್ಕೆ ಅನುಮತಿಯಿಲ್ಲ. ಬಹುಶಃ ಎಲ್ಲರ ಪರಿಸ್ಥಿತಿಯೂ ಒಂದೇ ಆಗಿದ್ದರಿಂದ ರೋಗಿಗಳನ್ನು ನೋಡುವುದಕ್ಕೆ ಮೊದಲ ಆದ್ಯತೆ. ಮತ್ತೆ ಅದೇ ಕೆಲಸ. ಈಗ ಹಿಂದಿನ ಭಯವಿರಲಿಲ್ಲ. ಕಾರಣ ಇಷ್ಟೇ ನಮ್ಮ ವೈದ್ಯರೊಬ್ಬರು ಇನ್ನು ಎರಡು ತಿಂಗಳ ಕಾಲ ಇದು ಮತ್ತೆ ಅಟ್ಯಾಕ್ ಆಗಲ್ಲ ಚಿಂತೆ ಬಿಡಿ ಎಂದ ಮೇಲೆ ಆನೆಬಲ ಬಂದು ಹದಿನೈದನೇ ದಿನಕ್ಕೆ ಡ್ಯೂಟಿಗೆ ವಾಪಾಸ್ಸಾಗಿದ್ದೆ. ವಿಪರೀತ ಸುಸ್ತು. ಕಾಲು ಎತ್ತಿಡುವುದಕ್ಕೂ ಶಕ್ತಿ ಇಲ್ಲ. ನನ್ನಿಂದಾಗಿ ನನ್ನ 88 ವರ್ಷದ ಮಾವ ಕೋವಿಡ್ ಪಾಸಿಟಿವ್ ಆದರು. ಈ ಮಧ್ಯೆ ನಾನು ಕಂಡುಕೊಂಡ ಒಂದು ಸಣ್ಣ ಸತ್ಯವೆಂದರೆ ಈ ಕಾಯಿಲೆಗೆ ಮದ್ದು ಎಷ್ಟು ಮುಖ್ಯವೋ ಅದಕ್ಕೂ ಮುಖ್ಯ ಆತ್ಮಸ್ಥೈರ್ಯ. ಹೆದರಿ ನಡುಗಿದ ನನ್ನದೇ ಸ್ನೇಹಿತೆಯರು ತುಂಬ ಸೀರಿಯಸ್ ಆಗಿ ಬಂದದ್ದನ್ನು ಮತ್ತು ತಲೆ ಕೆಡಿಸಿಕೊಳ್ಳದವರಿಗೆ ಸಣ್ಣಪುಟ್ಟಕ್ಕೆ ವೈರಸ್ ತಗುಲಿ ಹೋಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇದೇ ಈ ಹೊತ್ತು ನನ್ನನ್ನು ಗಟ್ಟಿಯಾಗಿಸಿದೆ. ಮತ್ತೊಂದು ಯುದ್ಧಕ್ಕೆ ಸನ್ನದ್ಧವಾಗಿಸಿದೆ.

ದೀಪ್ತಿ ಅವರ ಸಹೋದ್ಯೋಗಿಗಳು

ಈ ನಡುವೆ ನಾನು ಕಂಡದ್ದು ಮಾನವೀಯತೆ ಮರೆತು ಹೋದ ಅನೇಕ ಮುಖಗಳನ್ನು. ಒಂದು ದಿನ ಹೀಗೆ ಆಯಿತು; ವ್ಯಕ್ತಿಯೊಬ್ಬನಿಗೆ ಪಾಸಿಟಿವ್ ಎನ್ನುವ ರಿಪೋರ್ಟು ಬಂದಿತು. ಅದನ್ನು ನಾವು ತಿಳಿಸಿದ್ದೇ ತಡ. ಅವನ ಹೆಂಡತಿ ಅವನನ್ನು ಸಾರಾಸಗಟು ಮನೆಯಿಂದ ಹೊರ ಹಾಕಿದಳು. ಕೊನೆಗೆ ಆ್ಯಂಬ್ಯುಲೆನ್ಸ್ ಬಂದು ಅವನನ್ನು ಕರೆದೊಯ್ಯುವವರೆಗೂ ಅವ ಬಸ್‍ಸ್ಟಾಂಡಿನಲ್ಲಿ ಮಲಗಿದ್ದ ಎಂದು ಆ ನಂತರ ಗೊತ್ತಾಯಿತು. ಮತ್ತೊಂದು ದಿನ ಹುಡುಗನೊಬ್ಬ ತನ್ನ ಅಣ್ಣನೊಂದಿಗೆ ಬಂದಿದ್ದ. ಅವ ಪಾಸಿಟಿವ್ ಎಂದು ತಿಳಿದದ್ದೇ ತಡ ಅವನ ಅಣ್ಣ ಏನು ಎಂತಲೂ ಯೋಚಿಸದೆ ಅವನನ್ನು ಅಲ್ಲಿಯೇ ಬಿಟ್ಟು ಹೋಗಿಯೇಬಿಟ್ಟ. ಆ ಹುಡುಗ ಅದೆಷ್ಟು ದೀನತೆಯಲ್ಲಿ ನನ್ನ ನೋಡಿದನೆಂದರೆ ಅವನ ಕಣ್ಣುಗಳು ನನ್ನ ಈಗಲೂ ಇರಿಯುತ್ತವೆ. ಇನ್ನು ಬೈದವರು. ಕೈ ಮುಗಿದು ಹೋದವರು ಲೆಕ್ಕವಿಲ್ಲ. ಆದರೆ ಸಮಾಧಾನವೆಂದರೆ ನಾವು ಕಳಿಸಿದ ಬಹುತೇಕ ಮಂದಿ ಹೋದ ರೀತಿಯಲ್ಲಿಯೇ ಮರಳಿ ಬಂದದ್ದು.

ಎಲ್ಲ ಒಂದು ಹಂತಕ್ಕೆ ಬರುತ್ತಿದೆ ಎನ್ನುವಾಗಲೇ ಮತ್ತೆ ಈ ಕದನ ಆರಂಭವಾಗಿದೆ. ಸಣ್ಣ ನಿರ್ಲಿಪ್ತತೆಯೊಂದು ಆವರಿಸತೊಡಗಿದೆ. ಕಳೆದ ಬಾರಿಯಿದ್ದ ಹೆದರಿಕೆ ಈ ಬಾರಿ ಇಲ್ಲ. ವ್ಯಾಕ್ಸಿನ್ ಆಗಿದೆ ಎನ್ನುವ ಧೈರ್ಯ ಎದೆಯಲ್ಲಿದೆ. ಆದರೆ ಬೇಸರದ ಸಂಗತಿ ಎಂದರೆ ಮತ್ತದೇ ಮಗಳಿಗೆ ಶಾಲೆ ರಜೆ ಇಡೀ ದಿನ ಆಕೆಯೊಬ್ಬಳೇ ಮನೆಯಲ್ಲಿ “ಅಮ್ಮಾ ಒಂದಿನವಾದರೂ ರಜೆ ಹಾಕು” ಅವಳ ಎಂದಿನ ಮತ್ತದೇ ಮಾತು ರಿಂಗಣಿಸುತ್ತಿದೆ. ಸ್ವಲ್ಪ ಕಡಿಮೆಯಾಗಲಿ ಪುಟ್ಟ ಎನ್ನುತ್ತೇನೆ. ಈ ಸಂಕಷ್ಟವೆಲ್ಲ  ಒಂದು ದಿನ ಅಂತ್ಯ ಕಾಣುತ್ತದೆ ಎನ್ನುವ ನಂಬಿಕೆಯೊಂದೇ ನನ್ನನ್ನು ಕೈಹಿಡಿದು ನಡೆಸುತ್ತಿದೆ. ಗೊತ್ತಿಲ್ಲ ಎಲ್ಲಿಯವರೆಗೆ ಎಂದು. ಪ್ರತಿ ದಿನವೂ ವೈರಸ್ಸಿನ ಎದುರು ನಿಲ್ಲುವ ನಮ್ಮನ್ನು ಅದು ಅಪ್ಪಿಕೊಳ್ಳುತ್ತದೆಯೋ ಬಿಟ್ಟು ನಡೆಯುತ್ತದೆಯೋ ಗೊತ್ತಿಲ್ಲ. ಆದರೆ ಕಳೆದ ವರ್ಷದಿಂದ ಆವರಿಸಿದ ದುಗುಡ ಈಗಲೂ ಮುಂದುವರೆದಿದೆ. ಒಬ್ಬರೇ ಒಬ್ಬರು ನೆಂಟರಿಷ್ಟರನ್ನು ಭೇಟಿಯಾಗಿಲ್ಲ. ಯಾವುದೇ ಖಾಸಗಿ ಸಮಾರಂಭಗಳಿಗೆ ಹೋಗಿಲ್ಲ. ಎಲ್ಲಿಗೆ ಹೊರಟರೂ “ಯಾಕೆ ನಮ್ಮಿಂದ ಮತ್ತೊಬ್ಬರಿಗೆ ತೊಂದರೆ” ಎನ್ನಿಸಿ ಈ ವೈರಸ್ಸು ನಮ್ಮ ಮೂಲಕ ಮತ್ತೊಬ್ಬರಿಗೆ ದಾಟದಿದ್ದರೆ ಸಾಕಪ್ಪ ಎನ್ನಿಸುತ್ತದೆ. ಈ ಲೇಖನ ಬರೆಯುವಾಗಲೂ ಯಾಕೋ ಏನೋ ಹೇಳುವುದನ್ನೆಲ್ಲ ಹೇಳಲಾಗುತ್ತಿಲ್ಲ ಎನ್ನಿಸುತ್ತಿದೆ. ಶೂನ್ಯತೆಯೊಂದು ಇನ್ನಿಲ್ಲದಂತೆ ಕಾಡತೊಡಗಿದೆ. ಇದು ಬದುಕಿನ ಕುರಿತಾದ ನಿರಾಶೆಯಾ ಗೊತ್ತಿಲ್ಲ. ಹತಾಶೆಯಾ ಅದೂ ಗೊತ್ತಿಲ್ಲ. ಆದರೆ ಸದ್ಯಕ್ಕಿರುವ ಪ್ರಶ್ನೆಯೆಂದರೆ ಇದೆಲ್ಲ ಮುಗಿಯುವುದು ಯಾವಾಗ? ನೀವುಗಳೆಲ್ಲ ಮನಸ್ಸು ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು, ರೋಗಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಂಡು ನಮಗೆ, ನಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಲು ಸಹಾಯ ಮಾಡಬಹುದೆ?

*

ಪರಿಚಯ : ದೀಪ್ತಿ ಭದ್ರಾವತಿಯವರು ದಕ್ಷಿಣ ಕನ್ನಡದ ಮರವಂತೆಯವರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಕನ್ನಡ ಸ್ನಾತಕೋತ್ತರ ಪದವಿ, ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಕಾಗದದ ಕುದುರೆ, ಗ್ರೀನ್ ರೂಮಿನಲ್ಲಿ, ಆ ಬದಿಯ ಹೂವು, ಗೀರು ಇವರ ಕೃತಿಗಳು. ‘ಆ ಬದಿಯ ಹೂವು’ ಕೃತಿಗೆ ಮಾಸ್ತಿ ಕಥಾ ಪ್ರಶಸ್ತಿ ಸಂದಿದೆ. ಅಲ್ಲದೆ ವಿಭಾ ಸಾಹಿತ್ಯ ಪ್ರಶಸ್ತಿ, ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಮುಂಬೈಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಶಾರದಾ ವಿ ರಾವ್ ದತ್ತಿ ನಿಧಿ ಪ್ರಶಸ್ತಿ, ಧಾರವಾಡದ ಹರಪನಹಳ್ಳಿ ಭೀಮವ್ವ ಪ್ರಶಸ್ತಿ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಸ್ಪರ್ಧೆ ಬಹುಮಾನ, ಚೇತನಧಾರ ಟ್ರಸ್ಟ್ ಕಾವ್ಯ ಪ್ರಶಸ್ತಿ, ಗುರುಸಿದ್ಧ ಬಸವಶ್ರೀ ಪ್ರಶಸ್ತಿ ಮತ್ತು ವಿವಿಧ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳು, ‘ಗೀರು’ ಕಥಾಸಂಕಲನಕ್ಕೆ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿಯೂ ಲಭಿಸಿದೆ.

ಇದನ್ನೂ ಓದಿ : ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಆರೋಗ್ಯ ಸೇವಾಕ್ಷೇತ್ರದವರ ಅಂತರಂಗದ ತುಣುಕುಗಳು ನಾಳೆಯಿಂದ ನಿಮ್ಮ ಓದಿಗೆ

Published On - 11:15 am, Fri, 7 May 21