Padmashri Award: ಇತಿಹಾಸದ ಒಲವು ಬೆಳೆಸುವ ಅಪರೂಪದ ಸಾಧಕನಿಗೆ ಪದ್ಮಶ್ರೀ: ಡಾ ಸುಬ್ಬರಾಮನ್ ಹಿರಿಮೆಗೆ ಮತ್ತೊಂದು ಗರಿ
ವಿವಿಧ ದೇಶಗಳಲ್ಲಿ ಪುರಾತನ ಪರಂಪರೆಯ ತಾಣಗಳನ್ನು ಸಂರಕ್ಷಿಸಿರುವ ಮೈಸೂರಿನ ಹಿರಿಯ ಚೇತನ ಡಾ ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಗೌರವ ಸಂದಾಯವಾಗಿರುವುದು ಸಹಜವಾಗಿಯೇ ಕನ್ನಡಿಗರಿಗೆ ಹೆಮ್ಮೆ ಎನಿಸಿದೆ.
ಮೈಸೂರಿನ ಪುರಾತತ್ವಶಾಸ್ತ್ರಜ್ಞ ಡಾ ಸುಬ್ಬರಾಮನ್ ಅವರಿಗೆ ಈ ಬಾರಿ ಪದ್ಮಶ್ರೀ ಗೌರವ ಸಂದಿದೆ. ವಿವಿಧ ದೇಶಗಳಲ್ಲಿ ಪುರಾತನ ಪರಂಪರೆಯ ತಾಣಗಳನ್ನು ಸಂರಕ್ಷಿಸಿರುವ ಹಿರಿಯ ಚೇತನಕ್ಕೆ ಈ ಗೌರವ ಸಂದಾಯವಾಗಿರುವುದು ಸಹಜವಾಗಿಯೇ ಕನ್ನಡಿಗರಿಗೆ ಹೆಮ್ಮೆ ಎನಿಸಿದೆ. ಪದ್ಮಶ್ರೀ ಪ್ರಶಸ್ತಿಯನ್ನೇ ನೆಪವಾಗಿಸಿಕೊಂಡು ಡಾ ಸುಬ್ಬರಾಮನ್ ಅವರಿಗೆ ಅಕ್ಷರ ಗೌರವ ಸಲ್ಲಿಸಿದ್ದಾರೆ ಮುಖ್ಯಮಂತ್ರಿಗಳ ಐಟಿ ‘ಇ-ಆಡಳಿತ’ ಸಲಹೆಗಾರ, ಸಾಹಿತಿ ಬೇಳೂರು ಸುದರ್ಶನ.
***
ಅನಿರ್ವಚನೀಯ ಆನಂದ ಎಂದರೆ ಪ್ರಪಂಚದ ಹಿರಿಯ ಪುರಾತತ್ವಶಾಸ್ತ್ರಜ್ಞ, 90 ದಾಟಿದ ಮೈಸೂರಿನ ಡಾ ಸುಬ್ಬರಾಮನ್ ಅವರಿಗೆ ಈ ಸಲದ ಪದ್ಮಶ್ರೀ ಪ್ರಶಸ್ತಿ ಬಂದಿದ್ದು! ಇವರು ವಿಶ್ವದ ವಿವಿಧೆಡೆಯ ಪುರಾತನ ಪರಂಪರೆಯ ತಾಣಗಳನ್ನು ರಕ್ಷಿಸಿದ ಮಹಾನ್ ವ್ಯಕ್ತಿ. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ತಾಳೆಗರಿಗಳ ಸಂರಕ್ಷಣಾ ಯೋಜನೆಯನ್ನು ಒಂದು ವರ್ಷದಿಂದ ಬೆಂಗಳೂರಿನ ಮಿಥಿಕ್ ಸೊಸೈಟಿ ನೆರವಿನಲ್ಲಿ ನಡೆಸುತ್ತಿರುವುದು ನಿಮಗೆಲ್ಲ ನನ್ನ ಪೋಸ್ಟ್‌ಗಳ ಮೂಲಕ ತಿಳಿದಿರಬಹುದು. ಈ ಯೋಜನೆ ಆರಂಭವಾಗುವ ಮುಂಚಿನಿಂದಲೂ ನಮಗೆಲ್ಲ ಮಾರ್ಗದರ್ಶನ ನೀಡುತ್ತ, ಸದಾ ನಮ್ಮ ಯೋಜನೆಯ ಬಗ್ಗೆ ವಿಚಾರಿಸುತ್ತ, ಸಲಹೆ, ಮಾರ್ಗದರ್ಶನ ನೀಡುತ್ತಾ ಬಂದವರು ಡಾ ಸುಬ್ಬರಾಮನ್. 92ರ ಈ ಹರೆಯದಲ್ಲೂ ಮೂರ್‍ನಾಲ್ಕು ಸಲ ಯೋಜನಾ ಸ್ಥಳಕ್ಕೆ ಬಂದು ನೆಲಮಾಳಿಗೆಯಲ್ಲೂ ಓಡಾಡಿ ಚರ್ಚಿಸಿ ಸಲಹೆ ನೀಡುತ್ತ ಬಂದವರು ಈ ಮಹನೀಯರು. ಮೈಸೂರಿಗೆ ಹೋದ ಹಲವು ಸಂದರ್ಭಗಳಲ್ಲಿ ಅವರ ಮನೆಗೆ ಹೋಗಿ ಅವರ ಸಲಹೆಗಳನ್ನು ಪಡೆದು ಬಂದಿದ್ದೂ ಇದೆ.
ನಮ್ಮ ಯೋಜನೆಗಿಂತ ಮುಂಚೆಯೇ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಪ್ರಾಧ್ಯಾಪಕ ಡಾ ರೋಹಿತ್ ಈಶ್ವರ್ ಅವರಿಗೆ ಪ್ರೊ ಸುಬ್ಬರಾಮನ್ ಪೂರ್ಣ ಪ್ರಮಾಣದ ಮಾರ್ಗದರ್ಶನ ನೀಡುತ್ತ ಬಂದಿದ್ದರು. ಡಾ ರೋಹಿತ್ ಅವರಿಂದಲೇ ನನಗೆ ಈ ಮಹನೀಯರ ಪರಿಚಯದ ಭಾಗ್ಯ ಒದಗಿದ್ದು. ತಾಳೆಗರಿ ಸಂರಕ್ಷಣೆ ಕುರಿತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಜ 24ರಂದು ನಡೆದ ಒಂದು ದಿನದ ಸಂಕಿರಣದಲ್ಲಿ ಸಹ ಅವರು ಇಡೀ ದಿನ ಒಂದಿಷ್ಟೂ ಆಚೀಚೆ ಹೋಗದೆ ಭಾಗವಹಿಸಿದ್ದರು. ಅಲ್ಲಿ ತನ್ನನ್ನು ಭೇಟಿಯಾದ ವಿದ್ಯಾರ್ಥಿಗಳೊಂದಿಗೆ ಸಹ ಉತ್ಸಾಹದಿಂದ ಮಾತನಾಡಿದರು. ಅದಾದ ಮಾರನೇ ದಿನ ಅಂದರೆ ಜ 25ರಂದು ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಆಗಿದೆ.
ನಾನು ಈ ಯೋಜನೆಯಲ್ಲಿ ಸಕ್ರಿಯನಾದಾಗ ಮೈಸೂರಿನಲ್ಲಿ ನನಗೆ ಈ ಯೋಜನೆಗೆ ಎಷ್ಟು ಬೆಂಬಲ ಸಿಗುತ್ತೋ ಅನ್ನೋ ಆತಂಕ ಇತ್ತು. ಆದ್ರೆ ಡಾ ಸುಬ್ಬರಾಮನ್ ನನ್ನ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬಿ ಯೋಜನೆಗೆ ದಾರಿದೀಪವಾಗಿದ್ದಾರೆ. ಈ ವಾರವಷ್ಟೇ ನಾವು ಯೋಜನೆಯ ಸಿಬ್ಬಂದಿ ಪ್ರಮಾಣವನ್ನು ಹಿಗ್ಗಿಸಿ ಡಿಜಿಟಲೀಕರಣಕ್ಕೂ ಚಾಲನೆ ನೀಡಿದ್ದೇವೆ. ಈಗ ಈ ಪ್ರಶಸ್ತಿಯು ನಮ್ಮ ಯೋಜನೆಗೇ ಬಂದ ಹಾಗಿದೆ. ನಮ್ಮ ದೇಶದಲ್ಲಿ ಇಂತಹ 80-90 ದಾಟಿದ ಹಲವು ಮಹನೀಯರು ಇದ್ದಾರೆ. ಪದ್ಮಶ್ರೀ ಪ್ರಶಸ್ತಿಯು ಅವರನ್ನು ಗುರುತಿಸಿದ ಒಂದು ನಿಮಿತ್ತ ಮಾತ್ರ. ಇದರಿಂದ ಈಗಾಗಲೇ ಘನತೆ ಪಡೆದಿದ್ದ ಪ್ರಶಸ್ತಿಯ ಗೌರವ ಮತ್ತೂ ಹೆಚ್ಚಾಯ್ತು. ಪ್ರೊ ಸುಬ್ಬರಾಮನ್ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ನನ್ನಂತಹ ಪಾಮರನಿಗೂ ತಾಳೆಗರಿ ಸಂರಕ್ಷಣೆಯ ಬಗ್ಗೆ ತಿಳಿಹೇಳಿದ ಅವರ ವರ್ತನೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ಇದನ್ನೂ ಓದಿ: Padma Award 2023 Winners List: ಎಸ್‌ಎಂ ಕೃಷ್ಣ, ಎಸ್‌ಎಲ್ ಭೈರಪ್ಪ, ಸುಧಾಮೂರ್ತಿ ಸೇರಿದಂತೆ 8 ಕನ್ನಡಿಗರಿಗೆ ಪದ್ಮ ಪುರಸ್ಕಾರ
ಪದ್ಮ ಪುರಸ್ಕಾರಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Thu, 26 January 23