ಪ್ರೇಮಿಗಳ ನಡುವೆ ಅತ್ಯಂತ ಮುಖ್ಯವಾದ ಸಂಗತಿ ನಂಬಿಕೆ. ಈ ಸಲುವಾಗಿಯೇ ಆಚರಿಸುವ ಪ್ರಾಮಿಸ್ ಡೇ (Promise Day) ಪ್ರೇಮಿಗಳ ವಾರದಲ್ಲಿ (Valentine’s Week) ವಿಶೇಷ ಪ್ರಾಮುಖ್ಯತೆ ಹೊಂದಿದೆ. ರೋಸ್ ಡೇ, ಗಿಫ್ಟ್ ಡೇ, ಚಾಕಲೇಟ್ ಡೇ ಇದ್ದಂತೆಯೇ ನಾಲ್ಕನೇ ದಿನದಂದು ಪ್ರಾಮಿಸ್ ಡೇ ಆಚರಿಸುತ್ತೇವೆ. ಪ್ರೀತಿ ಹಂಚಿಕೊಳ್ಳುವುದರ ಜೊತೆಗೆ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ ಎಂಬುದರ ಸಂಕೇತದ ದಿನವಿದು. ಈ ಪ್ರಾಮಿಸ್ ಡೇ ನೆಪದಲ್ಲಿ ಇಬ್ಬರು ಪ್ರೇಮಿಗಳ ನಡುವಿನ ಒಂದು ನವಿರಾದ ಕತೆ ನಿಮ್ಮ ಓದಿಗಾಗಿ.
ಪ್ರೀತಿ ಎಂಬುದು ನಂಬಿಕೆ, ವಿಶ್ವಾಸದೊಂದಿಗೆ ಸಾಗಬೇಕು. ಭರವಸೆ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಪಾಡುತ್ತದೆ. ಒಬ್ಬರಿಗೊಬ್ಬರು ಪರಸ್ಪರ ಬೆರೆತು ಜೀವನದುದ್ದಕ್ಕೂ ನನಗೆ ನೀನು, ನಿನಗೆ ನಾನು ಎಂಬ ಸಾರವನ್ನು ತಿಳಿಹೇಳಲು ಸಾಕ್ಷಿಯಾಗುತ್ತದೆ. ಇಂತಹ ಗಟ್ಟಿಯಾದ ಭರವಸೆ ಹೊತ್ತು ಎಲ್ಲೋ ದೂರದಲ್ಲಿದ್ದವನಿಗಾಗಿ ಪ್ರತಿ ದಿನ ಕಾಯುತ್ತ ಕುಳಿತಿದ್ದ ಅವಳೇ ಅವನಿ. ಅವಳ ಪ್ರೀತಿಗೆ ಭರವಸೆಯೇ ಮೆಟ್ಟಿಲು.
ಅಂದು ಅವನಿ ಸಿಕ್ಕಾಗ ಅವನ ಕಣ್ಣಲ್ಲಿ ಪ್ರೀತಿ ತುಂಬಿತ್ತು. ಕೈಯ್ಯಲ್ಲಿದ್ದ ಚಾಕಲೇಟುಗಳು ಸಿಹಿ ಹಂಚುವ ಮುನ್ಸೂಚನೆ ತೋರುತ್ತಿದ್ದರೂ ಕೂಡಾ ಜೀವನದುದ್ದಕ್ಕೂ ನನ್ನ ಕೈ ಹಿಡಿದು ಕಾಪಾಡು ಎಂಬ ಸಂದೇಶ ಅವನ ತುಟಿಯಂಚಿನ ಮಾತಾಗಿರಬಹುದೆಂಬ ಊಹೆಯೂ ಅವಳಿಗಿರಲಿಲ್ಲ. ಪ್ರೀತಿ ಒಪ್ಪಿಕೊಳ್ಳದೇ, ಅವನು ತಂದಿದ್ದ ಚಾಕಲೇಟನ್ನು ಅವನ ಕೈಯ್ಯಾರೆ ತಿನ್ನದೇ ಇರಲು ಅವಳ ಮನಸ್ಸು ಒಪ್ಪಲಿಲ್ಲ. ಅದಾಗಲೇ ಅವನಿ ಅವನ ಪ್ರೀತಿಗೆ ಸೋತಿದ್ದಳು.
ಅವರಿಬ್ಬರೂ ಚಿಕ್ಕ ವಯಸ್ಸಿನಿಂದಲೂ ಆತ್ಮೀಯ ಗೆಳೆಯರು. ಕಾಲೇಜು ಮುಗಿಸಿ ಮುಂದಿನ ಉದ್ಯೋಗಕ್ಕೆಂದು ಆತ ಹೊರ ದೇಶಕ್ಕೆ ಹೋಗಿದ್ದ. ಇವಳು ಊರಿನಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಪ್ರತಿ ದಿನವೂ ಕರೆ ಮಾಡಿ ಮಾತನಾಡುತ್ತಿದ್ದರೂ ಒಬ್ಬರಿಗೊಬ್ಬರು ಪ್ರೀತಿ ಹಂಚಿಕೊಳ್ಳುವಾಗ ಮಾಡಿಕೊಂಡ ಪರಸ್ಪರ ನಂಬಿಕೆಯ ಮಾತು ಅವರ ಪ್ರೀತಿಯನ್ನು ಗಟ್ಟಿಗೊಳಿಸಿತ್ತು.
ಅಂದು ಅವನು ಉಡುಗೊರೆಯಾಗಿ ತಂದುಕೊಟ್ಟದ್ದು, ಸುಂದರ ಕೆಂಪು ಬಣ್ಣದ ಬಾಕ್ಸ್. ಪೆಟ್ಟಿಗೆಯ ಮುಚ್ಚಳ ತೆಗೆದರೆ ರಂಗು ರಂಗಿನ ಕಾಗದ. ಒಂದಾದ ಮೇಲೊಂದು ಗ್ರೀಟಿಂಗ್ ಕಾರ್ಡ್ಗಳು ಜೊತೆಗೆ ಬರೆದ ಪದದ ಸಾಲುಗಳು. ಇಂದು ನಮ್ಮ ಸ್ನೇಹದ ತೀರವಾದ ಕಡಲ ತೀರಕ್ಕೆ ಬಾ.. ಎಂಬ ಮಾತಿಗೆ ನಿಟ್ಟುಸಿರು ಬಿಡುತ್ತಾ ಅಂದು ಅವನಿ ಓಡಿದ್ದಳು. ತಂಪಾದ ಕಡಲ ತೀರದಲ್ಲಿ ನಿಂತಿದ್ದ ಅವನನ್ನು ಕಂಡ ಅವಳಿಗೆ ಎಲ್ಲಿಲ್ಲದ ಆನಂದ. ಹೇಗಿದ್ದೀಯ ಸಖಿ? ಎಂದು ಕೇಳಿದಾಗ ಅವನ ಮಾತಿಗೆ ಪ್ರತ್ಯುತ್ತರವಿರಲಿಲ್ಲ. ಬದಲಾಗಿ ಸುಮ್ಮನೆ ಅವನ ಮುಂದೆ ನಿಂತಿದ್ದಳು. ಎಷ್ಟೇ ದೂರವಿದ್ದರೂ ಕೂಡ ಅವರ ನಡುವಿದ್ದ ಭರವಸೆ ಆ ಪ್ರೀತಿಯನ್ನು ಕಾಪಾಡಿತ್ತು. ನಂಬಿಕೆಯೊಂದೇ ಸಾಕು ಪ್ರೀತಿಯನ್ನು ಉಳಿಸಿಕೊಂಡು ಸಾಗಲು ಎನ್ನುವುದು ಅವರ ಕಣ್ಣ ಹೊಳಪಿನಲ್ಲಿ ಪದೇ ಪದೇ ವ್ಯಕ್ತವಾಗುತ್ತಲೇ ಇತ್ತು.
ಎಲ್ಲೇ ಇದ್ದರೂ ಖುಷಿಯಾಗಿರು. ನನ್ನ ಪ್ರೀತಿ ನಿನ್ನ ಜೊತೆಗೆ ಇದೆ ಎಂಬ ಭರವಸೆಯ ಮಾತು ಅವನಿಯಂತಹ ಎಲ್ಲಾ ಹುಡುಗಿಯರನ್ನೂ, ಅವನಂತಹ ಎಲ್ಲಾ ಹುಡುಗರನ್ನೂ ಖುಷಿಯಾಗಿಡುವುದು. ಎಂದೆಂದೂ ಖುಷಿಯಾಗಿರೋಣ, ಕೊನೆವರೆಗೂ ಜೊತೆಗಿದ್ದು ಒಬ್ಬರನ್ನೊಬ್ಬರು ಕಾಯೋಣ ಎಂಬ ನಂಬಿಕೆಯ ಮಾತುಗಳೇ ಪ್ರೇಮವನ್ನು ಗಟ್ಟಿಗೊಳಿಸುವುದು. ನಂಬಿಗೆ ಗಾಢವಾಗಿದ್ದರೆ ಆ ಪ್ರೀತಿಗೆ ಬೇರೆ ಸಾಕ್ಷಿ ಬೇಕಿಲ್ಲ. ಈ ಸೂಕ್ಷ್ಮವೊಂದನ್ನು ಅರಿತು ನಂಬಿಕೆಯೊಂದಿಗೆ ಸಾಗಿದರೆ ಈ ಜಗದ ಎಲ್ಲಾ ಪ್ರೇಮಕತೆಗಳೂ ಸುಖಾಂತ್ಯವನ್ನೇ ಕಾಣುವುದರಲ್ಲಿ ಸಂದೇಹವಿಲ್ಲ. ನಾಳಿನ ಪ್ರಾಮಿಸ್ ಡೇ ಆಚರಿಸುವ ಮುನ್ನ ಈ ಮಾತನ್ನು ಮನದಲ್ಲಿಟ್ಟುಕೊಳ್ಳಿ. ನಂಬಿಕೆಯೊಂದಿಗೆ ಇಡುವ ಹೆಜ್ಜೆ ನಿಮ್ಮನ್ನು ಎಂದೆಂದಿಗೂ ಸರಿದಾರಿಗೆ ಕರೆದೊಯ್ಯಲಿದೆ.
Published On - 2:22 pm, Wed, 10 February 21