‘ಅಂಗವಿಕಲರಿಗೆ ಬೇಕಿರುವುದು ಅವಕಾಶ, ದಯೆಯಲ್ಲ’ ಎಂಬ ಮಾತನ್ನು ಅಲ್ಲಲ್ಲಿ ಓದಿರುತ್ತೇವೆ, ಅವರಿವರಿಂದ ಕೇಳಿರುತ್ತೇವೆ. ಈ ಮಾತಿಗೆ ನಮ್ಮ ಸುಪ್ರೀಂಕೋರ್ಟ್ ಹೆಮ್ಮೆಯ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದೆ. ವೃತ್ತಿಗಳಲ್ಲಿ ಅತ್ಯಂತ ಸವಾಲಿನದ್ದು ಎಂದೇ ಹೇಳಲಾಗುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಹಾಯಕರ ಕೆಲಸವನ್ನು ಓರ್ವ ದೃಷ್ಟಿದೋಷ ಇರುವ ವ್ಯಕ್ತಿಗೆ ನೀಡಲಾಗಿದೆ. ಕೆಲಸ ಕೊಡುವುದು ಮಾತ್ರವಲ್ಲ, ಅವರು ಕಾರ್ಯನಿರ್ವಹಿಸಲು ಬೇಕಿರುವ ಪೂರಕ ವಾತಾವರಣವನ್ನೂ ರೂಪಿಸಲು ನ್ಯಾಯಮೂರ್ತಿಗಳ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಸಹಾಯಕರಿಗೆ ಕೆಲಸ ಮಾಡುವುದೆಂದರೆ ಬಹುದೊಡ್ಡ ಸವಾಲನ್ನು ಮೈಮೇಲೆ ಎಳೆದುಕೊಂಡಂತೆ. ಅವರು ವಿಚಾರಣೆ ನಡೆಸುವ ಪ್ರಕರಣಗಳ ಬಗ್ಗೆ ಸಂಶೋಧನೆ ನಡೆಸುವುದೂ ಸೇರಿದಂತೆ ನ್ಯಾಯಾಲಯ ಕಲಾಪದ ಹಲವು ಜವಾಬ್ದಾರಿಗಳನ್ನು ತೆರೆಮರೆಯಲ್ಲಿ ನಿಂತು ನಿರ್ವಹಿಸಬೇಕಾಗುತ್ತದೆ. ಇಂಥ ಮಹತ್ವದ ಜವಾಬ್ದಾರಿಯಿರಲಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ನಿರ್ವಹಿಸಲು ಅಂಧರಿಗೆ ಅಸಾಧ್ಯ ಎಂಬ ರೂಢಿಗತ ನಂಬಿಕೆಯನ್ನು ನಾಜೂಕಾಗಿ ಮೀರಿದ್ದಾರೆ ಖ್ಯಾತ ಕಾನೂನು ತಜ್ಞ ರಾಹುಲ್ ಬಜಾಜ್. ಲೈವ್ ಲಾ ಜಾಲತಾಣದಲ್ಲಿ ಪ್ರಕಟವಾಗಿರುವ ಅವರ ಅಪರೂಪದ ಬರಹದ ಕನ್ನಡಾನುವಾದ ಇದು. ನೀವೂ ಓದಿ, ನಿಮ್ಮ ಆಪ್ತರಿಂದಲೂ ಓದಿಸಿ. ಸೂಕ್ತರೀತಿಯಲ್ಲಿ ಸಮಾಜದ ಬೆಂಬಲ ಸಿಕ್ಕರೆ ಅಂಗವೈಕಲ್ಯ ಒಂದು ಸಮಸ್ಯೆಯೇ ಅಲ್ಲ ಎನ್ನುವ ಮಾತಿಗೆ ಸಾಕ್ಷಿಯೆಂಬಂತೆ ನಡೆದುಕೊಳ್ಳುತ್ತಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಬಗ್ಗೆಯೂ ಗೌರವ ಮೂಡಲು ಈ ಬರಹವೂ ಒಂದು ನೆಪವಾಗುತ್ತದೆ.
ರಾಹುಲ್ ಬಜಾಜ್ ಬರಹದ ಕನ್ನಡಾನುವಾದ ಇಲ್ಲಿದೆ…
ಕೆಲಸ ಮಾಡುವ ಸ್ಥಳದಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ನನ್ನಂತೆಯೇ ಅಂಧನಾಗಿದ್ದ ಗೆಳೆಯರೊಬ್ಬರು ನನ್ನ ಬಳಿಗೆ ಬಂದು ಸಹಾಯ ಕೋರಿದರು. ನಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸಗಳು ದೊರೆಯುತ್ತಿಲ್ಲ. ನಮಗೆ ಕೆಲಸ ಕೊಟ್ಟವರಿಗೆ ನಮಗೆ ಎಂಥ ವ್ಯವಸ್ಥೆ ಅಗತ್ಯವಿದೆ ನಾವು ಅನುಭವಿಸುತ್ತಿರುವ ಹತಾಶೆ ಎಂಥದ್ದು ಎಂಬ ಬಗ್ಗೆ ಮಾಹಿತಿಯಿಲ್ಲ. ಹೀಗಾಗಿಯೇ ಕಣ್ಣು ಕಾಣುವ ಸಹೋದ್ಯೋಗಿಗಳಿಗಿಂತಲೂ ನಮ್ಮ ಕೆಲಸಗಳು, ಕಾರ್ಯಕ್ಷಮತೆ ಸುಧಾರಿಸುತ್ತಿಲ್ಲ ಎನ್ನುವುದು ಅವರ ಅನಿಸಿಕೆಯಾಗಿತ್ತು.
ಅವರು ಕೇಳಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹೇಳುವ ಬದಲಿಗೆ ನಾನು ಹೀಗೆ ನುಡಿದೆ. ‘ನಮ್ಮನ್ನು ಇಷ್ಟು ದಿನ ಯಾವ ಕ್ಷೇತ್ರಗಳಿಂದ ಹೊರಗೆ ಇರಿಸಲಾಗಿತ್ತೋ ಅಂಥ ಸ್ಥಳಗಳಲ್ಲಿ ನಾವು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಕೆಲಸ ಮಾಡಬಲ್ಲೆವು ಎಂದು ನಿರೂಪಿಸಬೇಕು. ಹೀಗೆ ಮಾಡುವ ಮೂಲಕ ಮಾತ್ರ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯ’.
2021ರಲ್ಲಿಯೂ ಈ ಪರಿಸ್ಥಿತಿ ಬದಲಾಗಿದೆ ಎಂದಲ್ಲ. ಸೌಲಭ್ಯಗಳ ಕೊರತೆಯಿಂದಾಗಿ ಅಂಗವಿಕಲರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬೆಳಕಿಗೆ ತರಲು ಅವಕಾಶ ಸಿಗುತ್ತಿಲ್ಲ. ಗುರುತಿಸಲು ಆಗದಂಥ ಪೂರ್ವಗ್ರಹಗಳು, ಸಮಾಜದಲ್ಲಿ ನಿರೀಕ್ಷೆಗಳೇ ಕಡಿಮೆಯಿರುವುದು, (ಅಂಗವಿಕಲರಲ್ಲಿ) ಅಂತರ್ಗತವಾಗಿರುವ ಕೀಳರಿಮೆ ಮತ್ತು ಕಟ್ಟಡ ರಚನೆಯಲ್ಲಿ ಇರುವ ದೋಷಗಳು ಅಂಗವಿಕಲರನ್ನು ಬಹುವಾಗಿ ಕಾಡುತ್ತವೆ.
ಒಬ್ಬ ಅಂಗವಿಕಲ ವ್ಯಕ್ತಿಯು ವೈಯಕ್ತಿಕವಾಗಿ, ಶೈಕ್ಷಣಿಕವಾಗಿ ಅಥವಾ ವೃತ್ತಿಯಲ್ಲಿ ಯಶಸ್ಸು ಸಾಧಿಸುವುದು ದೊಡ್ಡ ಸಂಗತಿ ಎನಿಸಬಾರದು ಎನ್ನುವುದು ಆದರ್ಶದ ಹಂತ. ಆದರೆ ಆದರೆ ಸಮಾಜದಲ್ಲಿ ಮನೆಮಾಡಿರುವ ವಾಸ್ತವ ಸಂಗತಿಗಳ ಹಿನ್ನೆಲೆಯಿಂದ ಯೋಚಿಸಿದರೆ ಯಾವುದೇ ಅಂಗವಿಕಲ ವ್ಯಕ್ತಿಯು ಇಂಥ ಅಡೆತಡೆಗಳನ್ನು ನಿವಾರಿಸಿಕೊಂಡರೆ, ಗಾಜಿನ ಗೋಡೆಗಳನ್ನು ಒಡೆದರೆ (ಕಣ್ಣಿಗೆ ಕಾಣದ ತಡೆಗಳನ್ನು ಮೀರಿದರೆ) ಅಂಥ ಸಾಧನೆಯನ್ನು ಜನರ ಎದುರು ತೆರೆದಿಡಲೇಬೇಕು. ಇದು ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಇತರ ಅಂಗವಿಕಲರಲ್ಲಿ ಇನ್ನಷ್ಟುಮತ್ತಷ್ಟು ಸಾಧಿಸಲು ಪ್ರೇರಣೆ ನೀಡುತ್ತದೆ. ಅಂಗವಿಕಲರ ಅಗತ್ಯಗಳು ಮತ್ತು ಅವರ ಆಕಾಂಕ್ಷೆಗಳು ಸಹಜ ಎಂಬ ಭಾವನೆ ಸಮಾಜದಲ್ಲಿ ಮೂಡುವಂತೆ ಆಗುತ್ತದೆ.
ನಾನು ಭಾರತಕ್ಕೆ ಹಿಂದಿರುಗಿದ್ದ 2020ರ ಜುಲೈನಲ್ಲಿ. ಈ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದು ನನಗೆ ಅನುಕೂಲಕರ ಎನ್ನಿಸಿತ್ತು.
ಇದೇ ಕಾರಣಕ್ಕೆ ನಾನು ನ್ಯಾಯಮೂರ್ತಿ ಚಂದ್ರಚೂಡ್ ಅವರ ಬಳಿ ಕೆಲಸ ಮಾಡಲು ಅವಕಾಶ ಕೋರಿದೆ. ಭಾರತದ ಸುಪ್ರೀಂಕೋರ್ಟ್ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನಾನು ಚಂದ್ರಚೂಡ್ ಅವರು ಸುಪ್ರೀಂಕೋರ್ಟ್ನಲ್ಲಿ ಹೇಗೆ ಮೇಲೇರಿದರು ಎಂಬುದನ್ನು ಗಮನಿಸಿದ್ದೆ. ತಮ್ಮ ಮನಸ್ಸಿನ ಮಾತು ಆಡಲು ಎಂದಿಗೂ ಅವರು ಹಿಂಜರಿದವರಲ್ಲ, ತಮ್ಮಿಂದ ಸರಿಪಡಿಸಲು ಸಾಧ್ಯವಾಗಿರುವ ಯಾವುದೇ ಅನ್ಯಾಯವನ್ನು ಆಗಕೊಟ್ಟವರಲ್ಲ. ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಘನತೆ ಹೆಚ್ಚಿಸಿಕೊಂಡವರು. ಎಲ್ಲಕ್ಕಿಂತ ಮುಖ್ಯವಾಗಿ ನುಡಿದಂತೆ ನಡೆಯಲು ಸದಾ ಯತ್ನಿಸುವ ಅವರ ಸ್ವಭಾವ ನನಗೆ ಇಷ್ಟವಾಯಿತು.
ಇದನ್ನೂ ಓದಿ: ಸ್ವರ್ಣ ಸಾಧಕಿಯರಿವರು: ಬಸ್ಸೇ ಬಾರದ ಊರಿಂದ ಬಂದಾಕೆಗೆ 20, ಗಡಿ ಜಿಲ್ಲೆಯ ಅನ್ನದಾತನ ಮಗಳಿಗೆ 10 ಚಿನ್ನದ ಪದಕ
ನ್ಯಾಯಾಲಯದಲ್ಲಿ ಕೆಲಸ ಮಾಡುವ ಆಸೆಯಿತ್ತು
ನಾನು ಕಾನೂನು ಅಭ್ಯಾಸ ಮಾಡಲು ಆರಂಭಿಸಿದ ಕೆಲವೇ ವರ್ಷಗಳಲ್ಲಿ ನನಗೆ ನ್ಯಾಯಾಲಯ ಪ್ರವೇಶಿಸಬೇಕು, ಅಲ್ಲಿ ಕೆಲಸ ಮಾಡಬೇಕು ಎಂದು ಆಸೆ ಮೂಡಿತು. ವಕೀಲಿಕೆ ಎನ್ನುವುದು ಬುದ್ಧಿವಂತಿಕೆಯ ಯುದ್ಧ. ನನಗೆ ಮಧ್ಯಸ್ಥಿಕೆಯಲ್ಲಿ ಹೆಚ್ಚು ಆಸಕ್ತಿಯಿತ್ತು. ವಿವಾದವನ್ನು ಹೊತ್ತುತಂದ ವಿವಿಧ ಮನಃಸ್ಥಿತಿಯವರಿಗೆ ಒಪ್ಪಿಗೆಯಾಗುವಂತೆ ಸಮಸ್ಯೆ ಇತ್ಯರ್ಥಪಡಿಸುವ ಕೆಲಸ ಇಷ್ಟವಾಗುತ್ತಿತ್ತು.
2020ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನನ್ನ ಸ್ನಾತಕೋತ್ತರ ಅಭ್ಯಾಸ ಮುಕ್ತಾಯವಾಯಿತು. ನಾನು ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಮುಂದುವರಿಯುತ್ತೇನೆ ಎಂದು ಹಲವರು ಭಾವಿಸಿದ್ದರು. ಡಾಕ್ಟರೇಟ್ ಅಧ್ಯಯನ ಮಾಡಿ ಪಾಠ ಮಾಡಲು ಆರಂಭಿಸುತ್ತೇನೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ನಾನು ಯಾವಾಗಲೂ ನನ್ನ ಸ್ನಾತಕೋತ್ತರ ಶಿಕ್ಷಣವನ್ನು ನನ್ನ ಕಾನೂನು ಕೌಶಲಗಳನ್ನು ಹರಿತ ಮಾಡಿಕೊಳ್ಳಲು ಸಿಕ್ಕ ಅವಕಾಶ ಎಂದೇ ಭಾವಿಸಿದ್ದೆ. ಸಮಗ್ರ ಸಂಶೋಧನೆ ನಡೆಸಲು, ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಆಲೋಚನಾ ವಿಧಾನ ಮತ್ತು ಜಗತ್ತು ನೋಡುವ ಕ್ರಮದಲ್ಲಿ ಆಳವಾದ ಒಳನೋಟ ಮೂಡಿತು. ಕಾನೂನು ವ್ಯವಹಾರಗಳಿಗೆ ಬೇಕಿರುವ ಕೌಶಲಗಳು ಮತ್ತು ಅನುಭವಗಳನ್ನು ಪ್ರಾಯೋಗಿಕವಾಗಿ ಒಗ್ಗೂಡಿಸಿಕೊಳ್ಳಲು ನೆರವಾಯಿತು.
ನಾನು ಅವರಿಗಾಗಿ (ಚಂದ್ರಚೂಡ್) ಕೆಲಸ ಮಾಡಲು ಶುರು ಮಾಡುವ ಮೊದಲು ಅವರು ಅಂಗವಿಕಲರ ಹಕ್ಕುಗಳ ಬಗ್ಗೆ ಅವರು ಹೆಚ್ಚು ಮಾತನಾಡಿದ್ದು ಕೇಳಿರಲಿಲ್ಲ. ಆದರೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲಿಂಗತ್ವ ನ್ಯಾಯದ ವಿಚಾರಗಳಲ್ಲಿ ಅವರ ಮಾತಿನ ವೈಖರಿ ನನಗೆ ಇಷ್ಟವಾಗುತ್ತಿತ್ತು. ನನ್ನ ವೃತ್ತಿಯಲ್ಲಿ ಮೇಲೇರಲು ಮತ್ತು ನನ್ನಂತೆ ಕಾನೂನು ವಿಭಾಗದಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಂಗವಿಕಲ ವೃತ್ತಿಪರರಿಗೆ ಅಗತ್ಯ ಸೌಲಭ್ಯ ಒದಗುವಂತೆ ಮಾಡುವ ನನ್ನ ಆಸಕ್ತಿಗೆ ನೆರವಾಗಲು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಯಾರಾದರೂ ಒಬ್ಬ ವ್ಯಕ್ತಿ ನನಗೆ ಬೇಕಾದ ಹೆಚ್ಚುವರಿ ಬೆಂಬಲ ನೀಡಬಹುದು ಎಂದಾದರೆ ಅದು ಚಂದ್ರಚೂಡ್ ಅವರು ಮಾತ್ರವೇ ಆಗಿದ್ದರು.
ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾದಾಗಲೇ ಅವರು ನನ್ನಲ್ಲಿ ಭರವಸೆ ಮೂಡಿಸಿದರು. ನಾನು ಯಾವುದೇ ವಿಚಾರ ಅರಿಯಲು ನನಗೆ ವಿಶೇಷ ವ್ಯವಸ್ಥೆ ಬೇಕಿತ್ತು. ಅಂಥ ಅಗತ್ಯಗಳನ್ನು ಈಡೇರಿಸಲು ಅವರು ಉತ್ಸಾಹ ತೋರಿದರು. ಕೆಲಸ ಮಾಡುವ ಸ್ಥಳದಲ್ಲಿ ನನ್ನ ಅಗತ್ಯಗಳ ಬಗ್ಗೆ ವಿವರಿಸಿದೆ. ಆಗ ಅವರು ಆಡಿದ ಮಾತು ಇಂದಿಗೂ ನನಗೆ ನೆನಪಿದೆ. ‘ನಿನಗೆ ಬೇಕಿರುವ ಎಲ್ಲ ವಿಧದ ಕಡತಗಳನ್ನು ನೋಡಲು ಅವಕಾಶವಿರಬೇಕು. ಇತರ ಸಹಾಯಕರಂತೆ ನೀನೂ ನಿನ್ನ ಅಗತ್ಯವಿರುವ ಕಡತಗಳ ಮೇಲೆ ಕೆಲಸ ಮಾಡುವಂತಿರಬೇಕು’ ಎಂದು ಹೇಳಿದ್ದರು.
ಇದೊಂದು ಸಾಮಾನ್ಯ ಸಂಗತಿ ಎಂದು ಹಲವರಿಗೆ ಅನ್ನಿಸಬಹುದು. ಆದರೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಂಥ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಯಾರೇ ಆದರೂ ಅಂಗವಿಕಲ ವ್ಯಕ್ತಿಯೊಬ್ಬ ಅತಿಕೌಶಲ ಬೇಡುವ ಉನ್ನತ ಮಟ್ಟದ ಕಾನೂನು ಸಂಬಂಧಿ ಕೆಲಸಗಳನ್ನು ನಿರ್ವಹಿಸಬಲ್ಲ ಎಂಬ ಭರವಸೆ ಹೊಂದುವುದೇ ಅಪರೂಪ. ಕಣ್ಣು ಕಾಣಿಸುವ ಇತರ ಸಹೋದ್ಯೋಗಿಗಳಂತೆ ನನಗೂ ನನ್ನಿಷ್ಟದ ಪ್ರಕರಣಗಳ ಮೇಲೆ ಕೆಲಸ ಮಾಡಲು, ಸಂಶೋಧನೆ ನಡೆಸಲು ಅವರು ಅವಕಾಶ ಮಾಡಿಕೊಟ್ಟದ್ದು ಅಚ್ಚರಿ ಮೂಡಿಸಿತ್ತು.
ಕೆಲಸದಲ್ಲಿ ಹಲವು ಸವಾಲು
ನನಗೆ ದೃಷ್ಟಿದೋಷವಿದ್ದ ಕಾರಣ ಸಾಫ್ಟ್ ಕಾಪಿ ರೂಪದಲ್ಲಿದ್ದ ಮತ್ತು ನನ್ನ ಸ್ಕ್ರೀನ್ ರೀಡರ್ಗೆ ಓದಿ ಹೇಳಲು ಸಾಧ್ಯವಿರುವ ದಾಖಲೆಗಳನ್ನು ಮಾತ್ರವೇ ನಾನು ಪರಾಮರ್ಶಿಸಲು ಸಾಧ್ಯವಾಗುತ್ತಿತ್ತು. ದೃಷ್ಟಿದೋಷವಿರುವವರು ಬಳಸುವ ಸ್ಕ್ರೀನ್ರೀಡರ್ ಕಂಪ್ಯೂಟರ್ನಲ್ಲಿರುವ ದಾಖಲೆಗಳನ್ನು ಕೃತಕ ಧ್ವನಿಯಲ್ಲಿ ಓದಿ ಹೇಳುತ್ತದೆ.
2017ರಲ್ಲಿ ಕಾನೂನು ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ಬಳಿ ಒಂದು ತಿಂಗಳು ಇಂಟರ್ನ್ಶಿಪ್ ಮಾಡಿದ್ದೆ. ಲಲಿತ್ ಅವರ ವೈಯಕ್ತಿಕ ಆಸಕ್ತಿಯಿಂದ ನನಗೆ ‘ಪೇಪರ್ಬುಕ್’ಗಳು ಸಿಗುವಂತೆ ಮಾಡಿದರು. ವಕೀಲರು ಸಲ್ಲಿಸುವ ಕಾಗದಗಳ ಗುಚ್ಛಕ್ಕೆ ಪೇಪರ್ಬುಕ್ ಎಂದು ನ್ಯಾಯಾಲಯದ ಪರಿಭಾಷೆಯಲ್ಲಿ ಹೇಳುತ್ತಾರೆ. ಇಂಟರ್ನ್ಶಿಪ್ ವೇಳೆ ನಾನು ಎದುರಿಸಿದ್ದ ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು. ಮುಂದೆ ನಾನು ಸುಪ್ರೀಂಕೋರ್ಟ್ಗೆ ಕೆಲಸಕ್ಕೆ ಸೇರಿದಾಗ ದೊರೆತ ಎಲ್ಲ ದಾಖಲೆಗಳನ್ನು ಪರಾಮರ್ಶಿಸುವ ಅವಕಾಶ ಅಷ್ಟು ಸುಲಭದಲ್ಲಿ ಈಡೇರುವಂಥದ್ದಲ್ಲ ಎಂಬ ಅರಿವು ನನಗಿತ್ತು.
ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ಸಹಾಯಕನಾಗಿರುವುದು ತುಂಬಾ ಜವಾಬ್ದಾರಿಯ ಕೆಲಸ. ಪ್ರಕರಣದ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತರಬೇಕಾದ ವಿಷಯಗಳ ಕುರಿತು ಆಗಾಗ ಜ್ಞಾಪನಾಪತ್ರ ಸಿದ್ಧಪಡಿಸಬೇಕಾಗುತ್ತದೆ. ಅವರ ತೀರ್ಪಿಗೆ ಪೂರಕವಾಗಿ ಸಂಶೋಧನೆಯಲ್ಲಿ ನೆರವಾಗಬೇಕಾಗುತ್ತದೆ. ನ್ಯಾಯಾಲಯದ ಹೊರಗೆ ನ್ಯಾಯಾಧೀಶರು ನಿರ್ವಹಿಸಬೇಕಾದ ಕೆಲಸಗಳಿಗೆ ನೆರವಾಗಬೇಕಾಗುತ್ತದೆ.
ನಾನು ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿದಾಗ ದೇಶದಲ್ಲಿ (ಕೊರೊನಾ) ಪಿಡುಗು ವ್ಯಾಪಿಸಿತ್ತು. ನ್ಯಾಯಮೂರ್ತಿ ಚಂದ್ರಚೂಡ ಅವರಿಗೆ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಅರಿವಿದೆ. ಹೀಗಾಗಿಯೇ ವಿಚಾರಣೆಗೆ ಸಂಬಂಧಿಸಿದ ಪೇಪರ್ಬುಕ್ಗಳ ಸಾಫ್ಟ್ಕಾಪಿಗಳು ನನಗೆ ಸುಲಭವಾಗಿ ಸಿಗುವಂತೆ ಆಯಿತು. ಯಾವುದೇ ಕಡತ ಸಾಫ್ಟ್ಕಾಪಿ ರೂಪದಲ್ಲಿ ಲಭ್ಯವಿದೆ ಎಂದ ಮಾತ್ರಕ್ಕೆ ಅವನ್ನು ಪರಾಮರ್ಶಿಸಲು ಸಾಧ್ಯವಿದೆ ಎಂದು ಅರ್ಥವಲ್ಲ. ಕೆಲ ಕಡತಗಳನ್ನು ಸರಿಯಾಗಿ ಸ್ಕ್ಯಾನ್ ಮಾಡುತ್ತಿರಲಿಲ್ಲ, ಇಂಥ ಕಡತಗಳನ್ನು ಸ್ಕ್ರೀನ್ರೀಡರ್ಗೆ ಓದಿ ಹೇಳಲು ಆಗುತ್ತಿರಲಿಲ್ಲ.
ಯಾವುದೇ ದಾಖಲೆಯನ್ನು ಎಂಎಸ್ ವರ್ಡ್ನಲ್ಲಿ ಟೈಪ್ ಮಾಡಿ, ಅದನ್ನು ಪಿಡಿಎಫ್ ರೂಪಕ್ಕೆ ತರುವುದು ಸರಳ ಕ್ರಮ. ಹೀಗೆ ಮಾಡಿದರೆ ನನಗೂ ಅಂಥವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಕೆಲ ವಕೀಲರು ದಾಖಲೆಗಳ ಪ್ರಿಂಟ್ ತೆಗೆದು ಸ್ಕ್ಯಾನ್ ಮಾಡುತ್ತಾರೆ. ನನಗೆ ಅಂಥವನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಈ ಪ್ರವೃತ್ತಿಯ ಬಗ್ಗೆ ನನ್ನ ಗೆಳೆಯನೊಬ್ಬ ಹೀಗೆ ಹೇಳಿದ್ದ. ‘ತಮ್ಮ ದಾಖಲೆಗಳು ಸುಲಭವಾಗಿ ಸಿಗಬಾರದೆಂದೇ ವಕೀಲರು ಇಷ್ಟು ಕಷ್ಟಪಡುತ್ತಾರೆ’ ಎಂಬುದು ಅವನ ಅಭಿಪ್ರಾಯವಾಗಿತ್ತು.
ನ್ಯಾಯಾಲಯಕ್ಕೆ ಸಲ್ಲಿಸುವ ಎಲ್ಲ ದಾಖಲೆಗಳು ಓಸಿಆರ್ ಓದಿ ಹೇಳುವಂತೆ ಇರಬೇಕು ಎಂದು ಸುಪ್ರೀಂಕೋರ್ಟ್ ಹಿಂದೆಯೇ ಹೇಳಿತ್ತು. ಕಂಪ್ಯೂಟರ್ ಸ್ಕ್ರೀನ್ ಮೇಲಿನ ದಾಖಲೆಯನ್ನು ಓದಿ ಹೇಳುವ ಒಸಿಆರ್ (Optical Character Recognition – OCR) ತಂತ್ರಜ್ಞಾನವು ದಾಖಲೆಗಳು ಮತ್ತು ಚಿತ್ರಗಳನ್ನು ಪರಿಷ್ಕರಿಸಲು ಮತ್ತು ಹುಡುಕಾಡಲು ಸಾಧ್ಯವಾಗುವ ದತ್ತಾಂಶವಾಗಿ ಪರಿವರ್ತಿಸಬಲ್ಲದು. ಆದರೆ ಸುಪ್ರೀಂಕೋರ್ಟ್ನ ಈ ನಿರ್ದೇಶನವು ಎಲ್ಲ ಸಂದರ್ಭದಲ್ಲಿಯೂ ಪಾಲನೆಯಾಗುತ್ತಿಲ್ಲ.
ಹಲವು ವಕೀಲರು ಇಂದಿಗೂ ದಾಖಲೆಗಳನ್ನು ಇಮೇಜ್ ಆಧರಿತ ಪಿಡಿಎಫ್ ರೂಪದಲ್ಲಿಯೇ ಸಲ್ಲಿಸುತ್ತಿದ್ದಾರೆ. ಇಂಥ ದಾಖಲೆಗಳನ್ನು ಸ್ಕ್ರೀನ್ ರೀಡರ್ಗೆ ಓದಿ ಹೇಳಲು ಸಾಧ್ಯವಿಲ್ಲ. ಕೆಲ ಮುಖ್ಯ ಅಂಶಗಳನ್ನು ಹಲವು ಬಾರಿ ಕೈಲಿ ಬರೆದು ಸಲ್ಲಿಸುತ್ತಾರೆ. ಇಂಥ ದಾಖಲೆಗಳನ್ನಂತೂ ಸ್ಕ್ರೀನ್ ರೀಡರ್ ಓದಿ ಹೇಳಲು ಸಾಧ್ಯವೇ ಇಲ್ಲ.
ವೆಬ್ಸೈಟ್ ಬಳಕೆಯಲ್ಲಿ ಸಮಸ್ಯೆಗಳು
ನಾನು ಕೆಲಸ ಆರಂಭಿಸಿದಾಗ ಸುಪ್ರೀಂಕೋರ್ಟ್ ವೆಬ್ಸೈಟ್ ಬಳಸುವ ವಿಚಾರದಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ವೆಬ್ಸೈಟ್ಗೆ ಬರುವವರು ಕಡ್ಡಾಯವಾಗಿ ಕಣ್ಣಿಗೆ ಕಾಣುವ ಸಂಕೇತ (captcha) ನಮೂದಿಸುವುದು ಕಡ್ಡಾಯವಾಗಿತ್ತು. ಹೀಗೆ ಮಾಡಿದರೆ ಮಾತ್ರ ಕಲಾಪದ ವಿವರ, ತೀರ್ಪುಗಳು ಮತ್ತು ಪ್ರತಿದಿನದ ಕಾರ್ಯವಿವರಗಳು ತಿಳಿಯುತ್ತಿದ್ದವು. ಈ ಸಂಕೇತಗಳನ್ನು ಸ್ಕ್ರೀನ್ ರೀಡರ್ ಮೂಲಕ ಕೇಳಿಸಿಕೊಂಡು ನಮೂದಿಸುವ ಅವಕಾಶ ಸಿಗುತ್ತಿರಲಿಲ್ಲ.
ಇಂಥ ಮಿತಿಗಳನ್ನು ಮೀರಿಕೊಳ್ಳಲು ಹತ್ತಾರು ಸವಾಲುಗಳನ್ನು ಎದುರಿಸಬೇಕಾಗಿತ್ತು. ಇದು ಸಣ್ಣ ಸಮಸ್ಯೆ ಅಂದುಕೊಳ್ಳಬೇಡಿ. ಇಂಥ ಅಡೆತಡೆಗಳ ಕಾರಣದಿಂದಲೇ ನನ್ನ ಗೆಳೆಯರು ಕಾನೂನು ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದೆ ಬರಲಿಲ್ಲ. ನ್ಯಾಯಾಂಗದಲ್ಲಿ ಸಕ್ರಿಯನಾಗಿರುವ ಒಬ್ಬ ಗುಮಾಸ್ತನಿಂದ ಇಂಥ ತಡೆಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಗೊತ್ತು. ಆದರೆ ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗಳನ್ನು ತರಲು ಸಿಕ್ಕಿರುವ ಅತ್ಯುತ್ತಮ ಅವಕಾಶ. ಇದರಿಂದ ದೊಡ್ಡ ಸುಧಾರಣೆ ಸಾಧ್ಯವಾಗಬಹುದು ಅಥವಾ ಕನಿಷ್ಠ ಪಕ್ಷ ಪರಿಸ್ಥಿತಿ ತುಸುವಾದರೂ ಸುಧಾರಿಸಬಹುದು.
ನ್ಯಾಯಮೂರ್ತಿ ಚಂದ್ರಚೂಡ್ ಅವರ ವೈಯಕ್ತಿಕ ಆಸಕ್ತಿಗೆ ನಾನು ಅಭಾರಿ. ಇದೀಗ ಸುಪ್ರೀಂಕೋರ್ಟ್ ವೆಬ್ಸೈಟ್ನ ಎಲ್ಲ ವಿಭಾಗಗಳಲ್ಲಿಯೂ ಅಕ್ಷರ ರೂಪ ಮತ್ತು ಧ್ವನಿರೂಪದ ಸಂಕೇತ ನಮೂದಿಸಲು ಅವಕಾಶವಿದೆ. ನ್ಯಾಯಾಲಯದ ಮುಚ್ಚಿದ್ದ ಬಾಗಿಲುಗಳು ನನಗಾಗಿ ತೆರೆದುಕೊಂಡ ಸಾರ್ಥಕ ಭಾವ ಇದರಿಂದ ನನಗೆ ಮೂಡಿದೆ. ಸರಿಯಾಗಿ ಸ್ಕ್ಯಾನ್ ಮಾಡದ ದಾಖಲೆಗಳ ಬಗ್ಗೆ ಗಮನ ಕೊಡುವಂತೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ಎಲ್ಲ ವಕೀಲರಿಗೂ ಸೂಚಿಸಿದ್ದಾರೆ. ಇದರಿಂದ ನನಗೆ ಅನುಕೂಲವಾಗಿದೆ.
(Rahul Bajaj Writes on Challenges He faced in Supreme Court Clerking For Supreme Court Justice Chandrachud)
ಇದನ್ನೂ ಓದಿ: ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
Published On - 10:25 pm, Tue, 14 September 21