ಪೋತು ಬಲೆ ಆಸ್ಕರಣ್ಣ, ಕಾಲನ ಗರ್ಭ ಸೇರಿದ ಆಸ್ಕರ್‌ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 13, 2021 | 5:13 PM

Oscar Fernandes: ಆಸ್ಕರ್ ಫರ್ನಾಂಡಿಸ್ ನಿಧನದ ಹಿನ್ನೆಲೆಯಲ್ಲಿ ಅವರೊಂದಿಗಿನ ಯಕ್ಷಗಾನ ಪ್ರಸಂಗ ನೆನಪಿಸಿಕೊಂಡಿರುವ ಪ್ರೊ.ಪುರುಷೋತ್ತಮ ಬಿಳಿಮಲೆ, ಕರಾವಳಿ ಕರ್ನಾಟಕದಲ್ಲಿ ಆಸ್ಕರ್ ಅವರ ರಾಜಕಾರಣದ ವೈಖರಿಯನ್ನೂ ಈ ಬರಹದಲ್ಲಿ ಮೆಲುಕು ಹಾಕಿದ್ದಾರೆ.

ಪೋತು ಬಲೆ ಆಸ್ಕರಣ್ಣ, ಕಾಲನ ಗರ್ಭ ಸೇರಿದ ಆಸ್ಕರ್‌ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ
ದೆಹಲಿಯಲ್ಲಿ ನಡೆದಿದ್ದ ಯಕ್ಷಗಾನದಲ್ಲಿ ಎಡಬದಿಗೆ ಕರ್ಣನಾಗಿ ವೀರಪ್ಪ ಮೊಯಿಲಿ, ಮಧ್ಯೆ ಭೀಷ್ಮನಾಗಿ ಆಸ್ಕರ್‌ ಮತ್ತು ಬಲಬದಿಯಲ್ಲಿ ವಿದುರನಾಗಿ ಪುರುಷೋತ್ತಮ ಬಿಳಿಮಲೆ. (ಚಿತ್ರ: ದಿನೇಶ್‌ ಶೆಣೈ)
Follow us on

ದೆಹಲಿಯ ಜವಾಹರ್​ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಒಮ್ಮೆ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಯಕ್ಷಗಾನದ ವೇಷ ಹಾಕಿದ್ದರು. ಆಸ್ಕರ್ ನಿಧನದ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರಸಂಗ ನೆನಪಿಸಿಕೊಂಡಿರುವ ಬಿಳಿಮಲೆ, ಕರಾವಳಿ ಕರ್ನಾಟಕದಲ್ಲಿ ಆಸ್ಕರ್ ಅವರ ರಾಜಕಾರಣದ ವೈಖರಿಯನ್ನೂ ಈ ಬರಹದಲ್ಲಿ ಮೆಲುಕು ಹಾಕಿದ್ದಾರೆ.

80 ವರ್ಷದ ಆಸ್ಕರ್‌ ಫರ್ನಾಂಡಿಸ್‌ (ಜನನ: ಮಾರ್ಚ್‌ 27, 1941) ಇನ್ನಿಲ್ಲವೆಂಬ ಸುದ್ದಿ ತಲುಪಿದಾಗ ಕಾಲನ ಚಕ್ರಗಳು ಹಿಂದಕ್ಕೆ ಸರಿಯತೊಡಗಿದುವು. ದೇವರಾಜ ಅರಸು ಕಾಲದಲ್ಲಿ ಕರಾವಳಿಯ ಹಿಂದುಳಿದ ವರ್ಗದಿಂದ ಮೇಲೆದ್ದು ಬಂದ ಶ್ರೀಗಳಾದ ಜನಾರ್ದನ ಪೂಜಾರಿ, ಆಸ್ಕರ್‌ ಫರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿ ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಕೊನೆಯವರೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿಯೇ ಉಳಿದರು.

ಈ ತ್ರಿಮೂರ್ತಿಗಳಲ್ಲಿ ಆಸ್ಕರ್‌ ಫರ್ನಾಂಡಿಸ್‌ ಅವರು ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧಿ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ. ಜೊತೆಗೆ ಆಸ್ಕರ್‌ ಎಂದೂ ಮಹತ್ವಾಕಾಂಕ್ಷಿಯೂ ಆಗಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸುತ್ತಿದ್ದ ಅವರು ಕೇಂದ್ರದಲ್ಲಿ ರಸ್ತೆ ಸಾರಿಗೆ, ಹೆದ್ದಾರಿ, ಕಾರ್ಮಿಕ ಮತ್ತು ಉದ್ಯೋಗ, ಯೋಜನಾ ಅನುಷ್ಠಾನ, ಯುವಜನ ಹಾಗೂ ಕ್ರೀಡಾ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಮಂತ್ರಿಯಾದಾಗ ಹಿಗ್ಗಿದವರಲ್ಲ, ಆಗದಿದ್ದಾಗ ಕುಗ್ಗಿದವರಲ್ಲ. ಆಸ್ಕರ್‌, ಆಸ್ಕರಣ್ಣನಾಗಿಯೇ ಉಳಿದಿದ್ದರು.

1975-76ರ ಅವಧಿಯಲ್ಲಿ ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು 1980ರಲ್ಲಿ ಮೊದಲ ಬಾರಿಗೆ ವಿ.ಎಸ್‌.ಆಚಾರ್ಯರನ್ನು ಸೋಲಿಸಿ, ಉಡುಪಿ ಕ್ಷೇತ್ರದಿಂದ 7ನೇ ಲೋಕಸಭೆ ಪ್ರವೇಶಿಸಿದ ಅವರು ಮುಂದೆ, 1984ರಲ್ಲಿ ಕೆ.ಎಸ್‌.ಹೆಗ್ಡೆ, 1989ರಲ್ಲಿ ಎಂ.ಸಂಜೀವ, 1991ರಲ್ಲಿ ರುಕ್ಮಯ್ಯ ಪೂಜಾರಿ ಮತ್ತು 1996ರಲ್ಲಿ ಜಯರಾಮ ಶೆಟ್ಟರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾದರು.

1985ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾಂಗ್ರೆಸ್ ನಾಯಕರಾದ ಅರ್ಜುನ್ ಸಿಂಗ್, ಆಸ್ಕರ್ ಫರ್ನಾಂಡಿಸ್ ಮತ್ತು ಅಹ್ಮದ್ ಪಟೇಲ್

ಕಾಲ ಕೆಳಗಿನ ನೆಲ ಕುಸಿಯುವುದು ಗೊತ್ತಾಗಲೇ ಇಲ್ಲ
1980ರಲ್ಲಿ ಮೊದಲ ಸಲ ಆಸ್ಕರ್‌ ಗೆದ್ದಾಗ ಅವರ ಗೆಲುವಿನ ಅಂತರ ಒಂದೂವರೆ ಲಕ್ಷವಾಗಿದ್ದರೆ, 1996ರಲ್ಲಿ ಅವರ ಗೆಲುವಿನ ಅಂತರ ಕೇವಲ ಎರಡು ಸಾವಿರವಾಗಿತ್ತು. ಆ ಹೊತ್ತಿಗೆ ದೆಹಲಿ ಕೇಂದ್ರಿತ ರಾಜಕಾರಣದಲ್ಲಿ ಮುಳುಗಿದ್ದ ಆಸ್ಕರ್‌ ಅವರಿಗೆ ತನ್ನ ಕಾಲ ಕೆಳಗಿನ ನೆಲ ಕುಸಿಯುವುದು ಗೊತ್ತಾಗಲೇ ಇಲ್ಲ. ಅವರು ತನಗೆ ಮತ ಹಾಕಿದವರಿಗಿಂತ ಹೆಚ್ಚಗಿ ದೆಹಲಿ ಜನಗಳಿಗೇ ಹತ್ತಿರವಾಗುತ್ತಾ ಹೋದರು. ಕಾಂಗ್ರೆಸ್​ನ ಕೇಂದ್ರ ಕಚೇರಿಯಲ್ಲಿಯೇ 24 ಗಂಟೆಗಳ ಕಾಲ ದುಡಿಯತೊಡಗಿದರು. ಪರಿಣಾಮವಾಗಿ, 1998ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 47 ಸಾವಿರ ಮತಗಳಿಂದ ಸೋತರು. ಸೋತರೂ ಮತ್ತೆ ರಾಜ್ಯಸಭೆಗೆ ಪ್ರವೇಶ ಪಡೆದರು.

80-90ರ ದಶಕದಲ್ಲಿ ಆಗಿನ್ನೂ ಯುವಕರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿಯವರು ತಮಗೊದಗಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಉಡುಪಿ-ಮಂಗಳೂರುಗಳಲ್ಲಿ ಹೆಚ್ಚು ಕೆಲಸ ಮಾಡಿದ್ದರೆ, ಕರಾವಳಿ ಇವತ್ತು ಈ ಮಟ್ಟಿನ ಕೋಮುವಾದಕ್ಕೆ ಬಲಿಯಾಗುತ್ತಿರಲಿಲ್ಲ. ಭೂ ಸುಧಾರಣೆಯ ಆನಂತರ ಹುಟ್ಟಿಕೊಂಡ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ನಾಯಕರು ವಿಫಲರಾಗಿದ್ದರು. ಕಾರಣ ತಮ್ಮದೇ ಜನಗಳಿಂದ ದೂರವಾಗುತ್ತಲೇ ಹೋದರು. ಪೂಜಾರಿಯವರು ಮತ್ತು ಮೊಯಿಲಿಯವರು ಸೋತರು, ಆಸ್ಕರ್‌ ಇದೀಗ ಕೊನೆಯುಸಿರು ಎಳೆದರು.

ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಸೇರಿ ಗಣ್ಯರಿಂದ ಸಂತಾಪ

ವಿರಾಮ ಸಂಭಾಷಣೆಯಲ್ಲಿ ವೀರಪ್ಪ ಮೊಯಿಲಿ ಮತ್ತು ಆಸ್ಕರ್ ಫರ್ನಾಂಡಿಸ್

ಆಸ್ಕರ್ ಅಂದ್ರೆ ದೆಹಲಿಯಲ್ಲಿ ಎಲ್ಲರಿಗೂ ಇಷ್ಟ
ಮೃದು ಮಾತಿನ ಆಸ್ಕರ್‌ ಅಂದರೆ ದೆಹಲಿಯಲ್ಲಿ ಎಲ್ಲರಿಗೂ ಇಷ್ಟ. ಯೋಗ ಮತ್ತು ಕಥಕ್‌ ಅವರ ಪ್ರೀತಿಯ ಹವ್ಯಾಸಗಳು. ಹೆಂಡತಿ ಬ್ಲೋಸಮ್​ರನ್ನು ಹತ್ತಿರ ಕುಳಿತುಕೊಳ್ಳಿಸದೇ ಇದ್ದರೆ ಅವರು ಭಾಷಣ ಮಾಡುತ್ತಲೇ ಇರಲಿಲ್ಲ. ಕಚೇರಿಗೆ ಯಾರು ಹೋದರೂ ಕರೆದು ಮಾತಾಡಿಸುವ ಸೌಜನ್ಯ, ನಮ್ಮಂಥ ರಾಜಕೀಯೇತರ ಜನರು ಹೋದರೆ ಹತ್ತಿರ ಕುಳ್ಳಿರಿಸಿಕೊಂಡು ಹೆಗಲ ಮೇಲೆ ಕೈ ಹಾಕಿ ಹರಟುವ ಪ್ರೀತಿ ಮೊದಲಾದ ಗುಣಗಳಿಂದಾಗಿ ಆಸ್ಕರ್‌ ಅಜಾತಶತ್ರುವಾಗಿಯೇ ಉಳಿದರು.

2004-2008ರ ಅವಧಿಯಲ್ಲಿ ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸಂಘಕ್ಕೊಂದು ಸಾಂಸ್ಕೃತಿಕ ಸಮುಚ್ಚಯ ಕಟ್ಟುತ್ತಿದ್ದಾಗ, ಆಸ್ಕರ್‌, ಮೊಯಿಲಿ ಮತ್ತು ಅನಂತ ಕುಮಾರ್‌ ನಮ್ಮ ಸಹಾಯಕ್ಕೆ ನಿಂತಿದ್ದರು. ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಗೆಳೆಯ ವಸಂತ ಶೆಟ್ಟಿ ಬೆಳ್ಳಾರೆಯವರು ಆಸ್ಕರ್‌ ಮತ್ತು ಮೊಯಿಲಿಯವರನ್ನು ಸೇರಿಸಿ ಯಕ್ಷಗಾನವನ್ನು ಮಾಡುವ ಯೋಜನೆ ರೂಪಿಸಿದರು. ಮಂಗಳೂರಿನಿಂದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರು ಸಹಾಯ ಹಸ್ತ ಚಾಚಿದರು. ವಿದ್ಯಾ ಕೋಳ್ಯೂರು ತರಬೇತಿ ನೀಡಿದರು. ಕೃಷ್ಣ ಭಟ್ಟರು ಎಲ್ಲ ವ್ಯವಸ್ಥೆ ಮಾಡಿದರು.

ಆಸ್ಕರ್‌ ಅವರದು ಅತ್ಯುನ್ನತಿಯೊಳ್‌ ಅಮರಸಿಂಧೂದ್ಭವನಾದ ಭೀಷ್ಮಾಚಾರ್ಯ, ಮೊಯಿಲಿಯವರದು ಸೂತ ಪುತ್ರ ಕರ್ಣ, ನಂದು ನೀತಿವಂತ ವಿದುರ ಇತ್ಯಾದಿ. ಒಂದು ಹಂತದಲ್ಲಿ ಭೀಷ್ಮಚಾರ್ಯ ಅವರು ಇದಿರಾದಾಗ ನಾನು (ವಿದುರ) ಹೇಳಿದೆ-

ಅಚಾರ್ಯರೇ, ‘ನಿಮಗೆ ಹಸ್ತಿನಾಪುರದ ಪಟ್ಟವನ್ನು ಕಾಯುವುದೇ ಕೆಲಸವಾಯಿತಲ್ಲ? ನೀವು ಪಟ್ಟವೇರುವುದು ಯಾವಾಗ?’ ತುಂಬಿದ ಸಭೆ ಚಪ್ಪಳೆ ತಟ್ಟಿತು, ಭೀಷ್ಮರು ಮುಗುಳ್ನಕ್ಕರು. ಮರುದಿನ ದೇಶದಾದ್ಯಂತ ‘ನೇತಾ ಬನ್‌ ಗಯಾ ಅಭಿನೇತಾ’ ಅಂತ ಸುದ್ದಿಯಾಯಿತು.

ರಾಜಕೀಯದ ಪಟ್ಟುಗಳು ಕ್ಷಿಪ್ರವಾಗಿ ಬದಲಾಗುತ್ತಿರುವಾಗ ಆಸ್ಕರ್‌ ಮರೆಯಾದದ್ದು ಸಾಂಕೇತಿಕವೂ ಹೌದು.

ಪೋತು ಬಲೆ ಆಸ್ಕರಣ್ಣ!

(Oscar Fernandes Obituary Kannada Writer Purushottama Bilimale Remembers Yakshagana Incident)

ಆಸ್ಕರ್ ತುಳು ಪ್ರೀತಿಗೆ ವಿಡಿಯೊ ಸಾಕ್ಷಿ
ತುಳು ಭಾಷೆಯ ಬಗ್ಗೆ ಪ್ರೀತಿ ಹೊಂದಿದ್ದ ಆಸ್ಕರ್ ಫರ್ನಾಂಡಿಸ್ ಅವರು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯ ಸೇರ್ಪಡೆಗೆ ಹಕ್ಕೊತ್ತಾಯ ಮಂಡಿಸಿ, ರಾಜ್ಯಸಭೆಯಲ್ಲಿ ತುಳು ಹಾಡೊಂದನ್ನು ಹಾಡಿದ್ದರು. ಚಂದ್ರಶೇಖರ್ ಮಂಡೆಕೋಲು ಅವರು ಈ ತುಣುಕನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Obitury: ಕಾಂಗ್ರೆಸ್​ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್

ಇದನ್ನೂ ಓದಿ: Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

Published On - 4:49 pm, Mon, 13 September 21