ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ದೇವೇಗೌಡ ಸೇರಿ ಗಣ್ಯರಿಂದ ಸಂತಾಪ

Oscar Fernandes Death | ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ದೇವೇಗೌಡ ಸೇರಿ ಗಣ್ಯರಿಂದ ಸಂತಾಪ
ಆಸ್ಕರ್ ಫರ್ನಾಂಡಿಸ್
Follow us
| Updated By: ಸುಷ್ಮಾ ಚಕ್ರೆ

Updated on:Sep 13, 2021 | 5:26 PM

ಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಸರ್ಕಾರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜು. 18ರಂದು ಉಡುಪಿಯ ಮನೆಯಲ್ಲಿ ಯೋಗಾಸನ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದ 80 ವರ್ಷದ ಆಸ್ಕರ್ ಫರ್ನಾಂಡಿಸ್ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದರೂ ಆಸ್ಕರ್ ಫರ್ನಾಂಡಿಸ್ ಗುಣಮುಖರಾಗಿರಲಿಲ್ಲ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದರು. ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಬೇಸರ ವ್ಯಕ್ತಪಡಿಸಿದ್ದು, ಆಸ್ಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ಆಸ್ಕರ್ ಫರ್ನಾಂಡಿಸ್ ನನಗೆ ಗುರು, ಮಾರ್ಗದರ್ಶಕರಾಗಿದ್ದರು. ನಮ್ಮ ಪಕ್ಷದ ಅನೇಕ ನಾಯಕರಿಗೆ ಅವರು ಮಾರ್ಗದರ್ಶಕರಾಗಿದ್ದರು. ಅವರನ್ನು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರು ನೀಡಿದ ಸೇವೆಯನ್ನು ನಾವು ಸದಾ ಸ್ಮರಿಸುತ್ತೇವೆ ಎಂದಿದ್ದಾರೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಮಾಜಿ ಪ್ರಧಾನಮಂತ್ರಿ ಹೆಚ್​ಡಿ ದೇವೇಗೌಡ, ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ ಹಿರಿಯ ಮುಖಂಡರಾದ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ಬೇಸರವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರು ಹಾಗೂ ನಾಡಿನಾದ್ಯಂತ ಇರುವ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಂತಾಪ ಸೂಚಿಸಿದ್ದು, ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್ ರವರು ಇಂದು ನಮ್ಮನ್ನೆಲ್ಲ ಅಗಲಿರುವುದು ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಕೋರುತ್ತೇನೆ. ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಆಸ್ಕರ್ ಫರ್ನಾಂಡಿಸ್ ನಿಧನದ ಹಿನ್ನೆಲೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ನಮ್ಮ ನಾಡಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ನನ್ನ ಆಪ್ತರೂ ಆಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವ ಹೊತ್ತಿನಲ್ಲಿ ಈ ಆಘಾತದ ಸುದ್ದಿ ಬಂದಿದೆ. ಅವರು ಐದು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಕೇಂದ್ರ ಸರಕಾರ ಮತ್ತು ರಾಜ್ಯದ ಕೊಂಡಿಯಾಗಿದ್ದರು. ರಾಜ್ಯಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದರಲ್ಲದೆ, ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದರು ಎಂದಿದ್ದಾರೆ.

ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಆಸ್ಕರ್ ಫರ್ನಾಂಡೀಸ್ ಅವರು, ದೇಶ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ರಾಜಕೀಯವನ್ನು ಮೀರಿ ಎಲ್ಲರನ್ನೂ ಆದರಿಸುತ್ತಿದ್ದರು. ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ ಅವರದ್ದು. ಕಾಂಗ್ರೆಸ್ ಕಟ್ಟಾಳುವಾಗಿದ್ದ ಅವರು ಪಕ್ಷವನ್ನು ಮಾತೃಸ್ವರೂಪದಂತೆ ಕಂಡವರು. ನಿಷ್ಠೆ, ನಂಬಿಕೆಯ ಪ್ರತೀಕವಾಗಿದ್ದರು. ಕಾಂಗ್ರೆಸ್ ಸಂಸ್ಕೃತಿಗೆ ಎಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡರು. ಅವರಿಗೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದು, ಆಸ್ಕರ್ ಫರ್ನಾಂಡಿಸ್ ಒಬ್ಬ ಧೀಮಂತ ನಾಯಕನಾಗಿದ್ದರು. ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದ್ದಾಗ 2 ಬಾರಿ ಅಧ್ಯಕ್ಷರಾಗಿದ್ದರು. ಗಾಂಧಿ ತತ್ವಕ್ಕೆ ಆಸ್ಕರ್ ಫರ್ನಾಂಡಿಸ್ ಹೇಳಿ ಮಾಡಿಸಿದ ವ್ಯಕ್ತಿತ್ವ ಎಂದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ ಹಿನ್ನೆಲೆ ಆಸ್ಕರ್‌ ಫರ್ನಾಂಡಿಸ್‌ ಪತ್ನಿಗೆ ಸೋನಿಯಾ ಗಾಂಧಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕೂಡ ಸಂತಾಪ ಸೂಚಿಸಿದ್ದು, ಕರಾವಳಿ ಭಾಗಕ್ಕೆ ಆಸ್ಕರ್ ಫರ್ನಾಂಡಿಸ್ ಕೊಡುಗೆ ಅಪಾರ. ಆಸ್ಕರ್ ಫರ್ನಾಂಡಿಸ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ‌ ಮತ್ತು ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.‌ ಸರಳ,‌ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಕಾರ್ಯಕರ್ತರ ನಾಯಕರಾಗಿದ್ದರು. ಆಸ್ಕರ್ ಕುಟುಂಬದ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ‌ಕೋರುವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದ ಅವರು, ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಯುಪಿಎ ಮೊದಲ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿದ್ದ ಆಸ್ಕರ್ ಫರ್ನಾಂಡಿಸ್ ಬಳಿಕ ಕೇಂದ್ರ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಲೋಕಸಭೆಗೆ ಉಡುಪಿ ಕ್ಷೇತ್ರದಿಂದ ಮೊದಲಬಾರಿ ಸಂಸತ್ ಗೆ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ 1984, 1989, 1991, 1996ರಲ್ಲಿ ಸತತವಾಗಿ ಇದೇಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1998ರಲ್ಲಿ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು, 2004ರಲ್ಲಿ ಮರು ಆಯ್ಕೆಯಾದರು. ಕೂಚಿಪುಡಿ ನೃತ್ಯಗಾರರೂ ಆಗಿದ್ದ ಆಸ್ಕರ್ ಫರ್ನಾಂಡಿಸ್ ಯೋಗದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಮತ್ತು ಅದರಲ್ಲಿ ಪರಿಣಿತರಾಗಿದ್ದರು.

ಇದನ್ನೂ ಓದಿ: Obitury: ಕಾಂಗ್ರೆಸ್​ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್

Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

(PM Narendra Modi, Sonia Gandhi, HD Deve Gowda, BS Yediyurappa and Other Leader Expressed Condolence to Oscar Fernandes Death)

Published On - 4:38 pm, Mon, 13 September 21

ತಾಜಾ ಸುದ್ದಿ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ