Obitury: ಕಾಂಗ್ರೆಸ್ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್
ಪೂರ್ಣಾಧಿಕ ಅಧ್ಯಕ್ಷರಿಲ್ಲದೆ ಸಂಕಷ್ಟ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷದ ಪಾಲಿಗೆ ಅಹ್ಮದ್ ಪಟೇಲ್ ನಿಧನದ ನಂತರ ಆಗಿರುವ ಮತ್ತೊಂದು ಆಘಾತವಿದು.
ಮಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ (80) ಸೋಮವಾರ ಮಂಗಳೂರಿನಲ್ಲಿ ನಿಧನರಾದರು. ಪೂರ್ಣಾಧಿಕ ಅಧ್ಯಕ್ಷರಿಲ್ಲದೆ ಸಂಕಷ್ಟ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷದ ಪಾಲಿಗೆ ಅಹ್ಮದ್ ಪಟೇಲ್ ನಿಧನದ ನಂತರ ಆಗಿರುವ ಮತ್ತೊಂದು ಆಘಾತವಿದು. ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಪಕ್ಷನಿಷ್ಠೆಗೆ ಮಾದರಿಯಾಗಿದ್ದರು.
ಉಡುಪಿ ಜಿಲ್ಲೆ ಉದ್ಯಾವರದ ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ 27ನೇ ಮಾರ್ಚ್ 1941ರಂದು ಆಸ್ಕರ್ ಜನಿಸಿದರು. ತಂದೆ ರೂಕ್ ಫರ್ನಾಂಡಿಸ್ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದರು. ಆಸ್ಕರ್ ಅವರ ತಾಯಿ ಭಾರತದ ಮೊದಲ ಮ್ಯಾಜಿಸ್ಟ್ರೇಟ್ ಶ್ರೇಯಕ್ಕೆ ಪಾತ್ರರಾದ ಲಿಯೊನಿಸ್ಸಾ ಎಂ.ಫರ್ನಾಂಡಿಸ್. ಬಾಲ್ಯದಿಂದಲೂ ಚರ್ಚ್ನ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು. ವಿವಿಧ ಜನವರ್ಗದೊಡನೆ ಒಡನಾಟ ಬೆಳೆಯಲು ಈ ಚಟುವಟಿಕೆಗಳು ನೆರವಿಗೆ ಬಂದವು.
ಉಡುಪಿ ಲೋಕಸಭಾ ಕ್ಷೇತ್ರದಿಂದ 1980ರಲ್ಲಿ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾದರು. 1984, 1989, 1991 ಹಾಗೂ 1996ರಲ್ಲಿ ಮರು ಆಯ್ಕೆಯಾಗಿದ್ದರು. 1998ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾದರು. 2004ರಲ್ಲಿ ಮರು ಆಯ್ಕೆ ಮಾಡಲಾಯಿತು. ಕೇಂದ್ರ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದರು. ಸಾರಿಗೆ, ಅಂಕಿಅಂಶ, ಯುವಜನ ಮತ್ತು ಕ್ರೀಡೆ, ಕಾರ್ಮಿಕ ಇಲಾಖೆ, ಅನಿವಾಸಿ ಭಾರತೀಯರ ಸಚಿವಾಲಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಉತ್ತಮ ಆಡಳಿತದಿಂದ ತಮ್ಮ ಛಾಪು ಮೂಡಿಸಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಆಸ್ಕರ್, ಹಲವು ಮಹತ್ವದ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜೀವ್ ಗಾಂಧಿ ಅವರಿಗೆ ಮಹತ್ವದ ಸಲಹೆಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷರಾಗಿ ಕೆಲ ಸಮಯ ಕಾರ್ಯನಿರ್ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೇಶದಲ್ಲಿ ಪಕ್ಷದ ಸಂಘಟನೆಗೆ ತಮ್ಮದೇ ಅದ ಕೊಡುಗೆ ನೀಡಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಯ ಸದಸ್ಯರಾಗಿ ಎರಡು ಅವಧಿ ಕಾರ್ಯನಿರ್ವಹಿಸುವ ಮೂಲಕ ವಿಜ್ಞಾನ ಕ್ಷೇತ್ರದ ಸಂಶೋಧನೆಗೂ ಕೊಡುಗೆ ನೀಡಿದ್ದರು.
ಇವರ ಬಾಳಸಂಗಾತಿ ಬ್ಲಾಸಮ್ ಮಥಾಯಿಸ್ ಪ್ರಭು. ಮಗ ಓಶನ್, ಮಗಳು ಓಶಾನಿ.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ ದೇಶದಲ್ಲಿ ಪ್ರಬಲ ವಿರೋಧ ಪಕ್ಷವೇ ಇಲ್ಲ ಎಂಬಷ್ಟು ಪ್ರಬಲವಾಗಿ ಬಿಜೆಪಿ ಬೆಳೆದಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಹೊಂದಾಣಿಕೆ ಕೊರತೆಯಿಂದ ಕಳಾಹೀನವಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ವೈಫಲ್ಯದ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಸೋನಿಯಾ ಗಾಂಧಿ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕಾಯಿತು. ಆದರೆ ಈವರೆಗೆ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ತಲೆಮಾರಿನ ಅಂತರದ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ವಿವಿಧ ವಯೋಮಾನದರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಲ್ಲ ನಾಯಕತ್ವದ ಕೊರತೆ ಕಾಡುತ್ತಿದೆ. ಅಹ್ಮದ್ ಪಟೇಲ್ ನಿಧನದ ನಂತರ ಈ ಸಮಸ್ಯೆ ಸ್ಪಷ್ಟವಾಗಿ ಗೋಚರಿಸಿತ್ತು. ಪಕ್ಷ ನಿಷ್ಠೆ ಮತ್ತು ಸಂಘಟನೆಯ ಚಾಕಚಕ್ಯತೆಯಲ್ಲಿ ಅಹ್ಮದ್ ಪಟೇಲ್ರಷ್ಟೇ ಹೆಸರು ಮಾಡಿದ್ದ ಆಸ್ಕರ್ ಫರ್ನಾಂಡಿಸ್ ಅವರ ನಿಧನ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ತಂದೊಡ್ಡಿದೆ.
(Oscar Fernandes Senior Congress Leader Obitury Passes Away in Mangaluru)
ಇದನ್ನೂ ಓದಿ: Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ
ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಗಂಭೀರ; ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದ ರಾಹುಲ್, ಸೋನಿಯಾ ಗಾಂಧಿ