ರಂಜಾನ್ ಉಪವಾಸ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಕೇವಲ 10 ಉಪವಾಸ ದಿನಗಳು ಮಾತ್ರ ಬಾಕಿ ಇದೆ. ಅದರಲ್ಲೂ ಇಂದಿನಿಂದ ರಂಜಾನ್ನ ಮೊದಲ ತಾಹಿರಾತ್ ಶುರುವಾಗಿದೆ. ಮುಂದಿನ 10 ದಿನದ ಉಪವಾಸದಲ್ಲಿ ಒಂದು ದಿನ ಬಿಟ್ಟು ಒಂದು ದಿನ ರಾತ್ರಿ ಜಾಗರಣೆಗಳನ್ನು ಆಚರಿಸಲಾಗುತ್ತೆ. ಈ ವೇಳೆ ಸಂಬಂಧಿಕರೆಲ್ಲರೂ ಒಟ್ಟುಗೂಡಿ ಜಾಗರಣೆ ಆಚರಿಸಿದ್ರೆ ಅವರ ಆತಿಥ್ಯಕ್ಕೆ ಚೆಂದದಾದ ಸಿಹಿಯ ಔತಣ ಇರಲೇ ಬೇಕು. ಹಾಗೂ ಸಾಮಾನ್ಯವಾಗಿ ಇಫ್ತಾರ್ ಕೂಡಕ್ಕೆ ಶೀರ್ ಕುರ್ಮಾ ಮಾಡಲಾಗುತ್ತೆ. ರಂಜಾನ್ ಹಬ್ಬದ ಸಮಯದಲ್ಲಿ ಬಾಯಿಯಲ್ಲಿ ನೀರು ತರಿಸುವ, ತಿನ್ನಲೂ ರುಚಿಕರವಾಗಿರುವ ಶೀರ್ ಕುರ್ಮಾ ತುಂಬಾ ಫೇಮಸ್. ಮುಸ್ಲಿಮರು ಈ ಹಬ್ಬಕ್ಕೆ ಈ ವಿಶೇಷ ಸಿಹಿಯನ್ನು ಮಾಡುತ್ತಾರೆ. ಈ ಸಿಹಿ ಮಾಡುವುದು ಸುಲಭವೂ ಹಾಗೂ ರುಚಿಕರವೂ ಆಗಿದೆ. ನೀವು ಮಾಡಿ ಸಿಹಿ ತಿಂದು ಆನಂದಿಸಿ.
ಡ್ರೈ ಫ್ರೂಟ್ಸ್, ಹಾಲು, ಸಕ್ಕರೆ, ಏಲಕ್ಕಿ ಸೇರಿದಂತೆ ಪಾಯಸದ ರುಚಿ ಹೆಚ್ಚಿಸುವ ಅನೇಕ ಪದಾರ್ಥಗಳನ್ನು ಹಾಕಿ ಸಿಹಿ ಖಾದ್ಯ ಶೀರ್ ಕುರ್ಮಾ ಮಾಡಲಾಗುತ್ತೇ. ಅಲ್ಲದೆ ಶೀರ್ ಕುರ್ಮಾವನ್ನು ಮಾಡಲು ಅನೇಕ ವಿಧಾನಗಳಿವೆ. ಅದರಲ್ಲಿ ರುಚಿಕರ ಹಾಗೂ ಸುಲಭವಾದ ಒಂದು ವಿಧಾನವನ್ನು ನಿಮಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸಿಹಿ ತಯಾರಿಸಲು ಬೇಕಾಗುವ ಸಾಮಾನುಗಳು
-2 ಕಪ್ ಶಾವಿಗೆ
-1/2 ಕಪ್ ಕೋಯಾ (ಕುದಿಸಿ ಗಟ್ಟಿಗೊಳಿಸಿದ ಹಾಲು)
-5 1/2 ಕಪ್ ಹಾಲು
-ಏಲಕ್ಕಿ ಪುಡಿ
-1/4 ಕಪ್ ಒಣ ದ್ರಾಕ್ಷಿ, ಬಾದಾಮಿ ಮತ್ತು ಗೋಡಂಬಿ
-1 ½ ಕಪ್ ಸಕ್ಕರೆ
-2 ಕಪ್ ತುಪ್ಪ
ಶೀರ್ ಕುರ್ಮಾ ತಯಾರಿಸುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಶಾವಿಗೆಯನ್ನು ಸ್ವಲ್ಪ ಕೆಂಪಾಗುವ ತನಕ ಹುರಿದಿಟ್ಟುಕೊಳ್ಳಬೇಕು. ಬಳಿಕ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದಕ್ಕೆ ಕೋಯಾ ಬೆರೆಸಿ ಸಣ್ಣ ಉರಿಯಲ್ಲಿ ಕಾಯಿಸಿ ಚೆನ್ನಾಗಿ ತಿರುಗಿಸುತ್ತಾ ಇರಬೇಕು. ನಂತರ ಸಕ್ಕರೆ ಬೆರೆಸಿ 3-4 ನಿಮಿಷ ತಿರುಗಿಸಬೇಕು. ಅದಕ್ಕೆ ಹುರಿದಿಟ್ಟುಕೊಂಡಿದ್ದ ಶಾವಿಗೆ ಬೆರೆಸಿ ಚೆನ್ನಾಗಿ ಬೇಯಿಸಬೇಕು. ಇನ್ನೂ ಸ್ವಲ್ಪ ಹೆಚ್ಚು ಹಾಲು ಬೆರೆಸಿದರೆ ರುಚ್ಚಿ ಹೆಚ್ಚುತ್ತದೆ.
ಕೊನೆಗೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ ಒಣದ್ರಾಕ್ಷಿ, ಗೋಡಂಬಿಯನ್ನು ಹುರಿದುಕೊಂಡು ಶಾವಿಗೆಗೆ ಹಾಕಬೇಕು. ನಂತರ ಏಲಕ್ಕಿ ಪುಡಿ ಬೆರೆಸಿ ಚಿನ್ನಾಗಿ ಕದಡಬೇಕು. ಈಗ ಶೀರ್ ಕುರ್ಮಾ ರೆಡಿ. ಹಬ್ಬ ಹರಿದಿನಗಳಿಗೆ ಹೇಳಿ ಮಾಡಿಸಿದ ಖಾದ್ಯ. ಆರೋಗ್ಯದ ಜೊತೆಗೆ ನಾಲಿಗೆಗೆ ರುಚಿ ನೀಡುವ ಸಿಹಿ.
ಇದನ್ನೂ ಓದಿ: ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು
Published On - 2:59 pm, Mon, 3 May 21