HS Doreswamy Obituary : ದೊರೆಸ್ವಾಮಿ ಅಂತ್ಯಸಂಸ್ಕಾರದ ವೇಳೆ ಕಾಡಿದ ಹಲವು ಪ್ರಶ್ನೆಗಳು, ವೈಚಾರಿಕ ಪ್ರಜ್ಞೆಯ ಎಚ್ಚರದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ ಶಿಷ್ಯರು

|

Updated on: May 28, 2021 | 8:59 PM

ಚಿತಾಭಸ್ಮವನ್ನು ತೆಗೆದುಕೊಂಡು ಹೊರಟ ರಾಮಸ್ವಾಮಿಯವರಿಗೆ ದೊರೆಸ್ವಾಮಿಯವರು ಕೆಲವು ಸಂಪ್ರದಾಯ ಮತ್ತು ಮೂಢನಂಬಿಕೆಗಳ ವಿರುದ್ಧ ಇದ್ದ ನೆನಪಾಯಿತು. ಚಿತಾಭಸ್ಮವನ್ನು ಜಲಮೂಲಗಳಲ್ಲಿ ಹರಡುವ ವಿಚಾರದಲ್ಲಿ ದೊರೆಸ್ವಾಮಿಯವರಿಗೆ ಒಲವಿರಲಿಲ್ಲ ಎನ್ನುವ ವಿಚಾರ ತಿಳಿಯಿತು.

HS Doreswamy Obituary : ದೊರೆಸ್ವಾಮಿ ಅಂತ್ಯಸಂಸ್ಕಾರದ ವೇಳೆ ಕಾಡಿದ ಹಲವು ಪ್ರಶ್ನೆಗಳು, ವೈಚಾರಿಕ ಪ್ರಜ್ಞೆಯ ಎಚ್ಚರದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ ಶಿಷ್ಯರು
ರವಿ ಕೃಷ್ಣಾರೆಡ್ಡಿ ಮತ್ತು ಎಚ್.ಎಸ್.ದೊರೆಸ್ವಾಮಿ
Follow us on

ಇತ್ತೀಚಿಗಷ್ಟೇ ನಮ್ಮನ್ನಗಲಿದ ಕರ್ನಾಟಕದ ಸಾಕ್ಷಿಪ್ರಜ್ಞೆ ಎಚ್.ಎಸ್.ದೊರೆಸ್ವಾಮಿಯವರನ್ನು ನೆನೆಸಿಕೊಂಡಿದ್ದಾರೆ ಹೋರಾಟಗಾರ ರವಿ ಕೃಷ್ಣಾರೆಡ್ಡಿ. ತಮ್ಮ ಮರಣದ ನಂತರವೂ ಸಮಾಜಕ್ಕೆ ಉಪಕಾರಿಯಾಗಿಯೇ ಇರಲು ಬಯಸಿದ್ದ ಎಚ್.ಎಸ್.ದೊರೆಸ್ವಾಮಿಯವರ ಅಂತ್ಯಕ್ರಿಯೆಯ ನಂತರ ಪ್ರಕ್ರಿಯೆಗಳನ್ನು ಈ ಬರಹ ಹೃದಯಸ್ಪರ್ಶಿಯಾಗಿಸಿದೆ.

ಮರಣಾನಂತರ ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಬೇಕು ಎಂದು ಕೆಲವು ವರ್ಷಗಳ ಹಿಂದೆಯೇ ಎಚ್.ಎಸ್.ದೊರೆಸ್ವಾಮಿಯವರು ತೀರ್ಮಾನಿಸಿ ದೇಹದಾನ ಪತ್ರಕ್ಕೆ ಸಹಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಅವರ ಶ್ರೀಮತಿ ಲಲಿತಮ್ಮನವರು ನಿಧನರಾದಾಗ ಅವರ ದೇಹವನ್ನೂ ಸಹ ಯಾವುದೇ ಸಾಂಪ್ರದಾಯಿಕ ವಿಧಿವಿಧಾನಗಳಿಲ್ಲದೆ ಬೆಂಗಳೂರಿನ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದರು.

ಆದರೆ ದೊರೆಸ್ವಾಮಿಯವರ 104 ವರ್ಷಗಳ ಅದ್ಭುತ ಕಾಯ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಲಭ್ಯವಾಗಲಿಲ್ಲ. ಯಾವುದೇ ಅಂಗವನ್ನೂ ಪಡೆಯಲು ಆಗಲಿಲ್ಲ.

ದೊರೆಸ್ವಾಮಿಯವರು ಮರಣಿಸಿದಾಗ ಅವರಿಗೆ ಇನ್ನೂ ಕೋವಿಡ್-19 ಸೋಂಕು ಇತ್ತು ಎಂದು ಆಸ್ಪತ್ರೆಯವರು ದೃಢೀಕರಿಸಿದ ಕಾರಣ, ದೇಹದಾನ ಸಾಧ್ಯವಿಲ್ಲ ಎಂದಾಯಿತು. ದೇಹವನ್ನು ಚಿತೆಯ ಮೇಲೆ ಇಡುವ ತನಕವೂ ಆ ವಿಚಾರವಾಗಿ ಗೊಂದಲಗಳು ಮುಂದುವರೆದಿದ್ದವು.

ಚಿತೆಗೆ ಅಗ್ನಿಸ್ಪರ್ಶ ಆದ ಮೇಲೆ ಚಿತಾಭಸ್ಮವನ್ನು ಏನು ಮಾಡುವುದು ಎನ್ನುವ ಪ್ರಶ್ನೆ ಉದ್ಭವಿಸಿತು. ದೊರೆಸ್ವಾಮಿಯವರ ಕುಟುಂಬಸ್ಥರಿಗೆ ಅಪ್ಪನ ದೇಹದಾನದ ಅಪೇಕ್ಷೆಯ ಹಿನ್ನೆಲೆಯಲ್ಲಿ ಅದನ್ನು ಏನು ಮಾಡಬೇಕೆಂದು ತೋಚಲಿಲ್ಲ. ಹಾಗಾಗಿ ಬೇಡ ಎಂದರು. ಕೊನೆಗೆ ನಾನು ಅಲ್ಲಿಯೇ ಇದ್ದ ಶಾಸಕ ಎ.ಟಿ.ರಾಮಸ್ವಾಮಿಯವರ ಜೊತೆ ಚರ್ಚಿಸಿದೆ. ಅವರು ಅದನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಕಾವೇರಿ ನದಿಯಲ್ಲಿ ವಿಸರ್ಜಿಸುವುದಕ್ಕೆ ಬಹಳ ಅಭಿಮಾನದಿಂದ ಒಪ್ಪಿಕೊಂಡರು.

ರಾಮಸ್ವಾಮಿಯವರ ಬಗ್ಗೆ ದೊರೆಸ್ವಾಮಿಯವರಿಗೆ ಕೊನೆಯ ತನಕವೂ ಪ್ರೀತಿ, ವಾತ್ಸಲ್ಯ ಮತ್ತು ಅಭಿಮಾನಗಳಿದ್ದವು. ಅವರು ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಇದ್ದಾಗ ಹಲವರ ಜೊತೆ ಫೋನಿನಲ್ಲಿ ಮಾತನಾಡಿದ್ದರು. ಆದರೆ ತಾವು ಮಾತನಾಡಬಯಸಿ ನನಗೆ ಫೋನ್ ಮಾಡಿ ಕೊಡಲು ಹೇಳಿದ ಏಕೈಕ ಹೆಸರು ರಾಮಸ್ವಾಮಿಯವರದು. ರಾಮಸ್ವಾಮಿಯವರಿಗೂ ದೊರೆಸ್ವಾಮಿಯವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ.

ಚಿತಾಭಸ್ಮವನ್ನು ತೆಗೆದುಕೊಂಡು ಹೊರಟ ರಾಮಸ್ವಾಮಿಯವರಿಗೆ ದೊರೆಸ್ವಾಮಿಯವರು ಕೆಲವು ಸಂಪ್ರದಾಯ ಮತ್ತು ಮೂಢನಂಬಿಕೆಗಳ ವಿರುದ್ಧ ಇದ್ದ ನೆನಪಾಯಿತು. ಚಿತಾಭಸ್ಮವನ್ನು ಜಲಮೂಲಗಳಲ್ಲಿ ಹರಡುವ ವಿಚಾರದಲ್ಲಿ ದೊರೆಸ್ವಾಮಿಯವರಿಗೆ ಒಲವಿರಲಿಲ್ಲ ಎನ್ನುವ ವಿಚಾರ ತಿಳಿಯಿತು.

ಹಾಗಾಗಿ, ನೆನ್ನೆ ಮಧ್ಯಾಹ್ನ ಚಿತಾಭಸ್ಮವನ್ನು ಹಾಸನ ಜಿಲ್ಲೆಯ ರಾಮನಾಥಪುರದ ಕಾವೇರಿ ತೀರದಲ್ಲಿರುವ ರಾಮೇಶ್ವರ ದೇವಾಲಯದ ಬಳಿಯ ವಹ್ನಿ ಪುಷ್ಕರಿಣಿಯ ಮುಂದೆ ಇಟ್ಟು, ಪೂಜೆ ಮಾಡಿ, ಚಿತಾಭಸ್ಮಕ್ಕೆ ಕಾವೇರಿ ನೀರನ್ನು ಪ್ರೋಕ್ಷಿಸಿ, ನಂತರ ಒಂದಷ್ಟು ಚಿತಾಭಸ್ಮವನ್ನು ಅಲ್ಲಿದ್ದ ತೆಂಗಿನ ಮರವೊಂದರ ಬುಡದಲ್ಲಿ ಗುಂಡಿ ತೆಗೆದು ಅದರಲ್ಲಿ ಮುಚ್ಚಿ, ಮತ್ತೊಂದಷ್ಟನ್ನು ರಾಮಸ್ವಾಮಿಯವರು ತಮ್ಮ ತೋಟದ ಮರವೊಂದರ ಬುಡದ ಗುಂಡಿಯಲ್ಲಿ ವಿಸರ್ಜಿಸಿದ್ದಾರೆ.

ಕೋವಿಡ್-19 ಸಂಕಷ್ಟದ ಸಮಯದಲ್ಲಿ ನಿಧನರಾದ ದೊರೆಸ್ವಾಮಿಯವರಿಗೆ ಎಲ್ಲಾ ನಿರ್ಬಂಧಗಳ ನಡುವೆಯೂ ಸರ್ಕಾರ, ಜನತೆ ಮತ್ತು ಅವರ ಒಡನಾಡಿಗಳು ಸಾಕಷ್ಟು ಗೌರವಯುತವಾದ ಅಂತಿಮವಿದಾಯ ಹೇಳಿದರು ಎನ್ನುವ ತೃಪ್ತಿ ನನಗಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಮನಗಳು.

• ರವಿ ಕೃಷ್ಣಾರೆಡ್ಡಿ

ಇದನ್ನೂ ಓದಿ: HS Doreswamy Obituary : ನಾಗೇಶ ಹೆಗಡೆಯವರು ಬರೆದ ದೊರೆಸ್ವಾಮಿಯವರ ‘ನಿಂಬಿ’ ಹೋರಾಟ

TV9 Nanna Kathe: ವಿಡಿಯೋ -ಎಚ್.ಎಸ್. ದೊರೆಸ್ವಾಮಿ ಬಗ್ಗೆ ಟಿವಿ9 ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗಿದ್ದ ನನ್ನ ಕಥೆ ಕಾರ್ಯಕ್ರಮ