AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಟ್ಟಿಗೆ ಅಂಟಿದ ಕಳಂಕ ತೊಡೆದುಹಾಕಲು ನಾವೆಲ್ಲ ಒಟ್ಟಾಗೋಣ..’ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್ ಆದ ಋತುಚಕ್ರ ನೈರ್ಮಲ್ಯ ದಿನ

Menstrual Hygiene Day: ಇನ್ನು ಅನೇಕಾನೇಕ ನೆಟ್ಟಿಗರು ಟ್ವೀಟ್​ ಮಾಡಿ ಮುಟ್ಟಿನ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಋತುಚಕ್ರವೆಂಬುದು ತುಂಬ ಸಹಜವಾದ ಪ್ರಕ್ರಿಯೆ. ಮುಟ್ಟಾದ ಮಹಿಳೆಯರಿಗೆ ನಿಷೇಧ ಹೇರಬೇಡಿ ಎಂದಿದ್ದಾರೆ.

‘ಮುಟ್ಟಿಗೆ ಅಂಟಿದ ಕಳಂಕ ತೊಡೆದುಹಾಕಲು ನಾವೆಲ್ಲ ಒಟ್ಟಾಗೋಣ..’ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್ ಆದ ಋತುಚಕ್ರ ನೈರ್ಮಲ್ಯ ದಿನ
ಪ್ರಾತಿನಿಧಿಕ ಚಿತ್ರ (ಕೃಪೆ-ಯುನಿಸೆಫ್​)
Lakshmi Hegde
|

Updated on:May 28, 2021 | 5:24 PM

Share

ಇಂದು ಋತುಚಕ್ರ ನೈರ್ಮಲ್ಯ ದಿನ (Menstrual Hygiene Day). ಮುಟ್ಟಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2014ರಿಂದ ಪ್ರತಿವರ್ಷವೂ ಮೇ 28ರಂದು ಈ ಋತುಚಕ್ರ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಇಂದು ಸೋಷಿಯಲ್​ ಮೀಡಿಯಾಗಳಲ್ಲಿ Menstrual Hygiene Day ಮತ್ತು menstruation ಎಂಬ ಹ್ಯಾಷ್​ಟ್ಯಾಗ್​ಗಳು ಟ್ರೆಂಡ್ ಆಗಿವೆ. ಈ ಹ್ಯಾಷ್​ಟ್ಯಾಗ್​​ನ್ನು ಬಳಸಿ ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಮುಟ್ಟು ಮುಜುಗರ, ಅವಮಾನ ತರುವ ವಿಚಾರವಲ್ಲ..ಎಂಬುದನ್ನೇ ಹಲವರು ಒತ್ತಿ ಹೇಳಿದ್ದಾರೆ. ಹಾಗೇ, ಋತುಚಕ್ರದ ದಿನಗಳಲ್ಲಿ ಇರಬೇಕಾದ ಆಹಾರ ಕ್ರಮ, ಸ್ವಚ್ಛತೆ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಚರ್ಚೆ ನಡೆದಿದೆ.

ಇಂದು ಬೆಳಗ್ಗೆ ಕಾಂಗ್ರೆಸ್ ಕೂಡ ಮುಟ್ಟು ನೈರ್ಮಲ್ಯದ ದಿನದ ಬಗ್ಗೆ ಟ್ವೀಟ್ ಮಾಡಿದೆ. ಋತುಚಕ್ರದ ಬಗ್ಗೆ ಸರಿಯಾದ ಅರಿವಿನ ಕೊರತೆ, ನಿರಂತರವಾಗಿ ಹೇರಲಾಗುತ್ತಿರುವ ನಿಷೇಧಗಳು, ಮುಟ್ಟಾದಾಗ ಬಳಸಲು ಅಗತ್ಯ ಇರುವ ಆರೋಗ್ಯಕರ ಉತ್ಪನ್ನಗಳು ಸೀಮಿತ ಪ್ರಮಾಣದಲ್ಲಿ ಸಿಗುತ್ತಿರುವುದು, ಸ್ವಚ್ಛತೆ ಸರಿಯಾಗಿ ಇಲ್ಲದೆ ಇರುವುದರಿಂದ ಭಾರತಾದ್ಯಂತ ಹಲವು ಸಹೋದರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮುಟ್ಟಿನ ಬಗ್ಗೆ ಇರುವ ಕಳಂಕ, ಮೌಢ್ಯಗಳನ್ನು ಮೀರುತ್ತೇವೆ ಎಂಬ ಪ್ರತಿಜ್ಞೆಯನ್ನು ಈ ಬಾರಿಯ ಋತುಚಕ್ರ ನೈರ್ಮಲ್ಯದ ದಿನದಂದು ಪ್ರತಿಯೊಬ್ಬರೂ ಮಾಡಬೇಕು. ಋತುಚಕ್ರದಲ್ಲಿ ಅಗತ್ಯ ಇರುವ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದೆ.

ಇನ್ನು ಅನೇಕಾನೇಕ ನೆಟ್ಟಿಗರು ಟ್ವೀಟ್​ ಮಾಡಿ ಮುಟ್ಟಿನ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಋತುಚಕ್ರವೆಂಬುದು ತುಂಬ ಸಹಜವಾದ ಪ್ರಕ್ರಿಯೆ. ಮುಟ್ಟಾದ ಮಹಿಳೆಯರಿಗೆ ನಿಷೇಧ ಹೇರಬೇಡಿ. ಇದು ಮಹಿಳೆಯರ ಆರೋಗ್ಯದ ವಿಷಯ ಎಂದು ಡಾ. ನೇತ್ರಿಕಾ ಹೇಳಿದ್ದಾರೆ. ಹಾಗೇ, ಮುಟ್ಟಾದಾಗ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಪ್ರತಿ ಮಹಿಳೆ, ಹುಡುಗಿಗೂ ಅರಿವು ಬೆಳೆಯಬೇಕು. ಆ ನಿಟ್ಟಿನಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಬೇಕು ಎಂಬುದು ಡಾ. ನಂದಿನಿಯವರ ಅಭಿಪ್ರಾಯ. ಋತುಚಕ್ರವೆಂಬುದು ವರ..ನಾವದನ್ನು ಎಂಜಾಯ್​ ಮಾಡಬೇಕು..ಸಂಭ್ರಮಿಸಬೇಕು ಎಂಬುದು ಅದೆಷ್ಟೋ ಹೆಣ್ಣುಮಕ್ಕಳ ಅನಿಸಿಕೆ. ಮುಟ್ಟೆಂಬುದು ಕಳಂಕ ಎಂಬುದನ್ನು ಅನೇಕರು ಇವತ್ತಿಗೂ ನಂಬಿದ್ದಾರೆ. ಆ ಭಾವನೆಯನ್ನು ಹೋಗಲಾಡಿಸಲು ಜಾತಿ, ಧರ್ಮ ಮೀರಿ ಹೆಣ್ಣುಮಕ್ಕಳೆಲ್ಲ ಒಟ್ಟಾಗಬೇಕು. ಪುರುಷರೂ ಕೈಜೋಡಿಸಬೇಕು ಎಂದು ರೀಟಾ ಎಂಬುವರು ಕರೆಕೊಟ್ಟಿದ್ದಾರೆ. ಒಟ್ಟಿನಲ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಟ್ವೀಟ್​ಗಳ ಸಾರಾಂಶವೆಲ್ಲ ಒಂದೇ ಆಗಿದ್ದು, ಅದು ಮುಟ್ಟು ತೀರ ಸಹಜ. ಅದನ್ನು ಅವಮಾನಿಸಬಾರದು. ಮೌಢ್ಯಗಳು ನಂಬಬಾರದು. ಆ ದಿನಗಳಲ್ಲಿ ಕೇವಲ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆಯೇ ಗಮನಹರಿಸಬೇಕು ಎಂಬುದೇ ಆಗಿದೆ.

ಇನ್ನು ಇಂದು ಹಲವು ಸಾಮಾಜಿಕ ಕಾರ್ಯಕರ್ತರು, ಸಂಘ-ಸಂಸ್ಥೆಗಳು, ಎನ್​ಜಿಒಗಳು, ಬಡ ಹೆಣ್ಣುಮಕ್ಕಳಿಗೆ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್​, ಮುಟ್ಟಿನ ಕಪ್​ಗಳನ್ನು ವಿತರಿಸಿದ್ದಾರೆ. ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಮುಟ್ಟಾದಾಗ ಆಹಾರ ಕ್ರಮ ಹೇಗಿರಬೇಕು ಎಂಬ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: World Menstrual Hygiene Day 2021: ಮುಟ್ಟಿನ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಅರ್ಥ ಮಾಡಿಸಿ..

Published On - 5:23 pm, Fri, 28 May 21