Menstrual Hygiene Day: ಮೌಢ್ಯ-ಮೈಲಿಗೆಗಳು ಮುಖ್ಯವಲ್ಲ, ಆರೋಗ್ಯ-ಸ್ವಚ್ಛತೆಯೇ ಮುಖ್ಯ; ಮುಟ್ಟಿನ ಗುಟ್ಟು ಹೇಳಿದ ಜ್ಯೋತಿ ಇ ಹಿಟ್ನಾಳ್

ಋತುಚಕ್ರವೆಂಬುದು ಒಂದು ವಿಜ್ಞಾನ. ಸಹಜವಾದ ಪ್ರಕ್ರಿಯೆ. ಮಕ್ಕಳಾಗಬೇಕೆಂದರೆ ಅದಾಗಬೇಕು, ಅದರ ಬಗ್ಗೆ ಯಾಕೆ ಅಷ್ಟು ತಲೆಕೆಡಿಸಿಕೊಳ್ಳಬೇಕು ಎಂದು ಹಲವರು ಕೇಳುತ್ತಾರೆ. ಆದರೆ ನನ್ನ ಪ್ರಕಾರ ಮುಟ್ಟು ನಿಸರ್ಗ ಸಹಜವಾದರೂ ಅದು ಆದಾಗ ನಮ್ಮ ದೈಹಿಕ, ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ.

Menstrual Hygiene Day: ಮೌಢ್ಯ-ಮೈಲಿಗೆಗಳು ಮುಖ್ಯವಲ್ಲ, ಆರೋಗ್ಯ-ಸ್ವಚ್ಛತೆಯೇ ಮುಖ್ಯ; ಮುಟ್ಟಿನ ಗುಟ್ಟು ಹೇಳಿದ ಜ್ಯೋತಿ ಇ ಹಿಟ್ನಾಳ್
ಜ್ಯೋತಿ ಇ ಹಿಟ್ನಾಳ್​ ಮತ್ತು ಅವರು ಬರೆದ ಪುಸ್ತಕ
Follow us
Lakshmi Hegde
|

Updated on:May 28, 2021 | 11:22 PM

‘ಮುಟ್ಟು ಬರೀ ವಿಜ್ಞಾನವಲ್ಲ..ನೀವು ಹೇಗಾದರೂ ಇರಿ.. ಆ ದಿನಗಳಲ್ಲಿ ನಿಮ್ಮ ಆಚರಣೆ ಏನೇ ಇರಲಿ ಆದರೆ ಆರೋಗ್ಯ, ಸ್ವಚ್ಛತೆ ಬಗ್ಗೆ ಗಮನಹರಿಸಿ’ ಹೀಗೆಂದು ಹೇಳುತ್ತಾರೆ ಅಂಗಳ ಟ್ರಸ್ಟ್​ನ ಸಂಪನ್ಮೂಲ ವ್ಯಕ್ತಿ ಜ್ಯೋತಿ ಇ.ಹಿಟ್ನಾಳ್​. ಮುಟ್ಟಿನ ಬಗ್ಗೆ ಹದಿಹರೆಯದವರಲ್ಲಿ, ತಾಯಂದಿರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಜ್ಯೋತಿ ಇ ಹಿಟ್ನಾಳ್ ಬೆಂಗಳೂರಿಗೆ ಬಂದು ಹತ್ತುವರ್ಷಗಳಾದವು. ‘ಮುಟ್ಟು..ಏನಿದರ ಒಳಗುಟ್ಟು’ ಎಂಬುದು ಇವರ ಸಂಪಾದನೀಯ ಕೃತಿ. ಈ ಕೃತಿಯ ವಿಶೇಷವೆಂದರೆ ಇದರಲ್ಲಿ ಹೆಣ್ಣುಮಕ್ಕಳಷ್ಟೇ ಅಲ್ಲ, 17 ಪುರುಷರು ಋತುಚಕ್ರದ ಬಗ್ಗೆ ಬರೆದಿದ್ದಾರೆ. ‘ಮೊದಲ ಬಾರಿಗೆ ಮುಟ್ಟು ಎಂಬ ಶಬ್ದವನ್ನು ಕೇಳಿದ್ದು ಯಾವಾಗ? ಯಾರಿಂದ ಕೇಳಿದ್ದೇವೆ? ಸಹೋದರಿಯಾಗಲಿ, ಅಮ್ಮ, ಪತ್ನಿ ಯಾರೇ ಆಗಲಿ ಅವರ ಮುಟ್ಟು ತಮ್ಮ ಮೇಲೆ ಬೀರಿದ ಪ್ರಭಾವಗಳ ಬಗ್ಗೆ ಚೆನ್ನಾಗಿ, ಮುಕ್ತವಾಗಿ ವಿವರಿಸಿದ್ದಾರೆ.

ಇಂದು ಋತುಚಕ್ರ ನೈರ್ಮಲ್ಯದ ದಿನದಂದು ಜ್ಯೋತಿ ಇ ಹಿಟ್ನಾಳ್​ ಅವರು ಟಿವಿ 9 ಕನ್ನಡ ಡಿಜಿಟಲ್​ ಜತೆ ಮಾತನಾಡಿ ಮುಟ್ಟಿನ ಬಗ್ಗೆ ತಮ್ಮ ದೃಷ್ಟಿಕೋನ ಏನು? ಇದರ ಬಗ್ಗೆ ಗೊಲ್ಲರಹಟ್ಟಿ, ಬುಡಕಟ್ಟು ಜನಾಂಗ, ಸ್ಲಮ್​ ಏರಿಯಾಗಳ ಮಹಿಳೆಯರು, ಪುರುಷರಲ್ಲಿ ತಾವು ಹೇಗೆ ಅರಿವು ಮೂಡಿಸುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಕೆಲಸ ಶುರು ಮಾಡಿದ್ದು ಕೊಪ್ಪಳದಲ್ಲಿ. ನಮ್ಮಲ್ಲಿ ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಿಬಿಡುತ್ತಿದ್ದರು. ಹೀಗಾಗಿ ಗರ್ಭಿಣಿಯರಲ್ಲಿ ರಕ್ತಹೀನತೆ, ಬಾಣಂತಿಯರ ಸಾವು, ಶಿಶು ಸಾವಿನ ಪ್ರಮಾಣವೆಲ್ಲ ಹೆಚ್ಚಾಗಿತ್ತು. ನಾವೆಲ್ಲ ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವು. ಚಿಕ್ಕವಯಸ್ಸಿನಲ್ಲೇ ಮದುವೆಯಾಗುವುದು ತಪ್ಪು, ಹೀಗೆ ಮಾಡುವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹದಿಹರೆಯದವರ ಜತೆ ಚರ್ಚಿಸುತ್ತಿದ್ದೆವು. ಹೀಗೊಂದು ಗುಂಪು ರಚಿತವಾಗಿತ್ತು. ಒಂದು ದಿನ ನಮ್ಮ ಗುಂಪಿನಲ್ಲಿ ಒಬ್ಬಳು ಯುವತಿ ಬಂದಿರಲಿಲ್ಲ. ವಿಚಾರಿಸಿದ್ದಕ್ಕೆ ಆಕೆ ಮುಟ್ಟಾಗಿದ್ದಾಳೆ..ಮನೆಯಿಂದ ಹೊರಗೆ ಬರುವಂತಿಲ್ಲ ಎಂಬ ಉತ್ತರ ಬಂತು. ಒಬ್ಬಳು ಯುವತಿ ಮೊದಲ ಸಲ ಮುಟ್ಟಾದಾಗ ಆಕೆಯನ್ನು 11 ದಿನ ಮನೆಯಿಂದ ಹೊರಗೆ ಕಳಿಸುವುದಿಲ್ಲ ಎಂದು ನನಗೆ ಗೊತ್ತಿತ್ತು. ಆದರೆ ಪ್ರತಿತಿಂಗಳೂ ಈ ಆಚರಣೆ ಪದ್ಧತಿಯಲ್ಲಿದೆ ಎಂಬುದು ಗೊತ್ತಿರಲಿಲ್ಲ. ಇನ್ನೊಂದು ಹೇಳಬೇಕು ಎಂದರೆ, ನಾನು ಋತುಮತಿಯಾದ ಕೆಲವೇ ವರ್ಷಗಳಲ್ಲಿ ಅಮ್ಮನನ್ನು ಕಳೆದುಕೊಂಡೆ.  ಅಮ್ಮ ಹೋದ ಮೇಲೆ, ನನಗೆ ಮುಟ್ಟಾದಾಗ ಅಪ್ಪನ ಬಳಿ ಹೇಳಿಕೊಳ್ಳಲು ಸಂಕೋಚ ಆಗುತ್ತಿತ್ತು.. ಹಾಗಾಗಿ ಆ ಸಮಯದಲ್ಲಿ ಏನೇ ಸಹಾಯ ಬೇಕಿದ್ದರೂ ಅಕ್ಕಪಕ್ಕದ ಮನೆಯವರ ಬಳಿ ಕೇಳಬೇಕಾಗುತ್ತಿತ್ತು. ಇದು ಕಿರಿಕಿರಿ ಉಂಟು ಮಾಡುತ್ತಿತ್ತು.. ಹೀಗೆ ಈ ವಿಚಾರಗಳೆಲ್ಲ ನನ್ನಲ್ಲಿ ಮುಟ್ಟಿನ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವ ಕೆಲಸ ಮಾಡಿಸುವಂತೆ ಪ್ರಚೋದಿಸಿದವು. ಅದರ ಬಗೆಗಿನ ಮುಜುಗರವನ್ನು ತೊಡೆದು ಹಾಕಲು ನನ್ನದೇ ಆದ ಪ್ರಯತ್ನದಲ್ಲಿ ತೊಡಗಿಕೊಂಡೆ ಎನ್ನುತ್ತಾರೆ ಜ್ಯೋತಿ ಹಿಟ್ನಾಳ್​.

ಹೀಗೆ ಲಿಂಗತಾರತಮ್ಯ ಹೋಗಲಾಡಿಸುವ ಸಂಬಂಧ ತರಬೇತಿ ಕೊಡಲೂ ಹೋಗುತ್ತಿದ್ದೆ. ಅಂಥ ಟ್ರೇನಿಂಗ್​​ಗಳಲ್ಲಿ ಹುಡುಗರು-ಹುಡುಗಿಯರು ಬೇರೆ ವಿಷಯಗಳ ಬಗ್ಗೆ ತುಂಬ ಓಪನ್​ ಆಗಿ ಮಾತನಾಡುತ್ತಿದ್ದರು. ಆದರೆ ಈ ಋತುಚಕ್ರ ಎಂಬ ವಿಷಯ ಬಂದಾಗ ಮಾತ್ರ ಎಲ್ಲರದ್ದೂ ಮೌನ. ಅದರಲ್ಲಿ ಗಂಡುಮಕ್ಕಳಂತೂ ಏನೇನೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆಗಲೇ ಗೊತ್ತಾಯಿತು.. ಮುಟ್ಟು ಎಂಬ ಶಬ್ದಕೇಳಿದರೆ ಸಾಕು ಅನೇಕರು ಮೌನವಾಗುತ್ತಾರೆ ಎಂಬುದು. ಅದಾದ ಬಳಿಕ ಅದೇ ವಿಷಯ ಇಟ್ಟುಕೊಂಡು ಮತ್ತಷ್ಟು ದೃಢವಾಗಿ ಚರ್ಚೆ ಮಾಡುತ್ತ ಹೋದೆವು. ಮುಟ್ಟು ಅಂದರೆ ಏನು? ಮುಟ್ಟಿನ ರಕ್ತ ಕೆಟ್ಟದ್ದೋ ಒಳ್ಳೆಯದೋ? ಮುಟ್ಟಿನ ರಕ್ತದ ಬಣ್ಣ ಯಾವುದು? ಎಂಬಿತ್ಯಾದಿ ವಿಚಾರಗಳ ಬಗ್ಗೆ ವಿಷಯ ನಿಷ್ಠ ಚರ್ಚೆ ಗುಂಪಲ್ಲಿ ನಡೆಸಲು ಪ್ರಾರಂಭಿಸಿದೆವು. ಈ ಬಗ್ಗೆ ಪುರುಷರನ್ನೊಳಗೊಂಡು ಇನ್ನಷ್ಟು ಜಾಸ್ತಿ ಚರ್ಚೆ ಬೇಕು. ಅವರ ಅಭಿಪ್ರಾಯ ಹೆಚ್ಚೆಚ್ಚು ಪ್ರಮಾಣದಲ್ಲಿ ವ್ಯಕ್ತವಾಗಬೇಕು ಎಂದು ನನಗೆ ಅನ್ನಿಸಿತು. ಇದೇ ಕಾರಣಕ್ಕೆ ಮುಟ್ಟು ಏನಿದರ ಒಳಗುಟ್ಟು ಎಂಬ ಪುಸ್ತಕ ಹೊರತರಲು ನಿರ್ಧರಿಸಿದೆ. ಅದರಲ್ಲಿ ಎಲ್ಲ ಜಾತಿ ಧರ್ಮದ ಮಹಿಳೆ, ಪುರುಷರನ್ನು ಒಳಗೊಳ್ಳಿಸಬೇಕು ಎಂಬುದು ನನ್ನ ಆಶಯವಾಗಿತ್ತು. ಮುಟ್ಟಿನ ಬಗ್ಗೆ ಬರೆಯಲು 50 ಪುರುಷರಿಗೆ ಕೇಳಿಕೊಂಡಿದ್ದೆ. ಆದರೆ ಬರೆದವರು 17 ಮಂದಿ. ಉಳಿದವರು ಬರೆಯಲಿಲ್ಲ. ನಮಗೆ ಬರೆಯಬೇಕು ಎಂಬ ಆಸೆ ಇದೆ. ಆದರೆ ಬರೆಯಲಾಗುತ್ತಿಲ್ಲ ಎಂದರು. ಅವರಲ್ಲಿನ ಮುಜುಗರ ಅದಕ್ಕೆ ಅಡ್ಡಿಯಾಯಿತು..

ಪುಸ್ತಕ ಬರೆಯುವ ಹೊತ್ತಿಗೆ ಎದುರಾದ ಸನ್ನಿವೇಶವನ್ನು ವಿವರಿಸಿದ ಜ್ಯೋತಿ ಹಿಟ್ನಾಳ್​, ಮುಟ್ಟೆಂದರೆ ಅದು ಕೇವಲ ಮಹಿಳೆಯರಿಗೆ ಸಂಬಂಧಪಟ್ಟ ವಿಚಾರವೆಂದು ತಿಳಿದುಕೊಳ್ಳಬಾರದು. ಆ ದಿನಗಳಲ್ಲಿ ದೈಹಿಕವಾಗಿ ಅವಳಿಗೇನು ಸಮಸ್ಯೆ ಉಂಟಾಗುತ್ತದೆ? ಮೂಡು ಹೇಗೆ ಸ್ವಿಂಗ್ ಆಗುತ್ತದೆ..ಮಾನಸಿಕವಾಗಿ ಅದೆಷ್ಟು ಕಿರಿಕಿರಿಯಲ್ಲಿರುತ್ತಾಳೆ ಎಂಬ ವಿಷಯಗಳ ಬಗ್ಗೆ ಪುರುಷರು, ಗಂಡುಮಕ್ಕಳು ಆಳವಾಗಿ ಯೋಚಿಸಬೇಕು. ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ನಮ್ಮ ತಾಯಿ-ಅಜ್ಜಿಯರಿಗೆ ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಪುರುಷರು ಸೃಷ್ಟಿಸಿಕೊಟ್ಟಿರಲಿಲ್ಲ. ಹಾಗಾಗಿ ಪ್ರತಿಯೊಂದನ್ನೂ ಅವರು ಮೌನವಾಗಿಯೇ ಸಹಿಸಿಕೊಂಡರು. ಈಗಲೂ ಅನೇಕ ಕಡೆಗಳಲ್ಲಿ ಆ ಪರಿಸ್ಥಿತಿಯೇ ಮುಂದುವರಿದಿದೆ. ಬೆಂಗಳೂರಂಥ ಮಹಾನಗರದಲ್ಲೂ ಇದೆ. ಮುಟ್ಟಾದಾಗ ಮನೆಯಿಂದ ಹೊರಹೋಗಬಾರದು, ಪ್ರತ್ಯೇಕವಾಗಿ ಇರಬೇಕು ಎಂಬಿತ್ಯಾದಿ ಪದ್ಧತಿಗಳು ಇವೆ. ಪತ್ನಿಯ ಮುಟ್ಟಿನ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಅದೆಷ್ಟೋ ಪತಿಯರು ಉಡಾಫೆ ಮಾಡುತ್ತಾರೆ. ಈ ಮನೋಭಾವ ಬದಲಾಗಬೇಕು. ನಾವಾದರೂ ಅದನ್ನೆಲ್ಲ ಸರಿಪಡಿಸಬೇಕು. ಒಮ್ಮೆಲೇ ಬದಲಿಸಲು ಸಾಧ್ಯವಾಗದೆ ಇದ್ದರೂ, ಹಂತಹಂತವಾಗಿ ಬದಲಾವಣೆ ಆಗುತ್ತದೆ ಎಂಬ ಸಕಾರಾತ್ಮಕ ಆಶಯ ನನ್ನದು ಎನ್ನುತ್ತಾರೆ ಜ್ಯೋತಿ.

ಮುಟ್ಟು ಬರೀ ವಿಜ್ಞಾನವಲ್ಲ ಇನ್ನೊಂದು ಪದ್ಧತಿಯಿದೆ..ಋತುಚಕ್ರವೆಂಬುದು ಒಂದು ವಿಜ್ಞಾನ. ಸಹಜವಾದ ಪ್ರಕ್ರಿಯೆ. ಮಕ್ಕಳಾಗಬೇಕೆಂದರೆ ಅದಾಗಬೇಕು, ಅದರ ಬಗ್ಗೆ ಯಾಕೆ ಅಷ್ಟು ತಲೆಕೆಡಿಸಿಕೊಳ್ಳಬೇಕು ಎಂದು ಹಲವರು ಕೇಳುತ್ತಾರೆ. ಆದರೆ ನನ್ನ ಪ್ರಕಾರ ಮುಟ್ಟು ನಿಸರ್ಗ ಸಹಜವಾದರೂ ಅದು ಆದಾಗ ನಮ್ಮ ದೈಹಿಕ, ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ. ಹೊಟ್ಟೆ ನೋವಿರುತ್ತದೆ, ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಆ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ, ಪೌಷ್ಟಿಕ ಆಹಾರ ಅಗತ್ಯವಿರುತ್ತದೆ. ಅದೆಲ್ಲವನ್ನೂ ಪೂರೈಸುವ ಪರಿಸರ ನಮ್ಮ ಸುತ್ತಲೂ ಇರಬೇಕು. ಪತಿಯೋ, ಸೋದರನೋ, ತಂದೆ ಯಾರೇ ಆಗಲಿ ಅದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಅಸ್ಪೃಶ್ಯರಂತೆ ನೋಡಬಾರದು. ಯಾರೇ ಆಗಲಿ ಮುಟ್ಟು ಬರೀ ವಿಜ್ಞಾನ ಎಂದು ಭಾವಿಸದೆ ಅದರ ಒಳಗುಟ್ಟು, ಆಳವನ್ನು ಅರಿಯಲಿ ಎನ್ನುತ್ತಾರೆ ಜ್ಯೋತಿ.

ಗೊಲ್ಲರಹಟ್ಟಿಗಳಲ್ಲಿ ಬದಲಾವಣೆ ನಾವು ಚಿತ್ರದುರ್ಗದ ಬಳಿಯ ಗೊಲ್ಲರಹಟ್ಟಿಯೊಂದಕ್ಕೆ ಹೋಗಿದ್ದಾಗ ನಿಜಕ್ಕೂ ಆಶ್ಚರ್ಯ ಕಾದಿತ್ತು. ಅಲ್ಲಿ ಮೊದಲು ಮುಟ್ಟಾದ ಮಹಿಳೆಯರು, ಯುವತಿಯರು ಊರ ಹೊರಗೆ ಇರಬೇಕಿತ್ತು. ಭಯದಲ್ಲೇ ಇರುತ್ತಿದ್ದರು.. ಸದಾ ಭಯ ಆಗುತ್ತದೆ ಮೇಡಂ, ಯಾರಾದರೂ ಬೇಕೆಂದಲೇ ಹೆದರಿಸುತ್ತಾರೆ. ನಾವು ಮುಟ್ಟಾದ ಕೂಡಲೇ ಇನ್ನೊಬ್ಬರು ಯಾರಾದರೂ ಮುಟ್ಟಾಗಲಿ ಎಂದು ಪ್ರಾರ್ಥಿಸುತ್ತಿದ್ದೆವು. ಅಂದರೆ ಒಬ್ಬರೇ ಊರ ಹೊರಗೆ ಇರಲು ಅಷ್ಟು ಹೆದರಿಕೆಯಾಗುತ್ತಿತ್ತು ಎಂದು ನೋವು ತೋಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹೋದಾಗ ಒಂದು ಹೊಸ ಬೆಳವಣಿಗೆಯಾಗಿತ್ತು. ಊರ ಮಹಿಳೆಯರಲ್ಲ ಸೇರಿ ಅಲ್ಲಿನ ದೇವಸ್ಥಾನದ ಹುಂಡಿಗೆ ಕಪ್ಪಕಾಣಿಕೆ ಹಾಕಿದ್ದಾರೆ. ನಾವೆಲ್ಲರೂ ಇನ್ನು ಮುಂದೆ ಮುಟ್ಟಾದಾಗ ಊರ ಒಳಗೇ ಇರುತ್ತೇವೆ ಎಂದು ದೇವರಿಗೆ ತಪ್ಪು ಕಾಣಿಕೆ ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಖುಷಿಯಾಯ್ತು. ಅವರವರ ಭಾವನೆ ಏನೇ ಇರಲಿ. ಮುಟ್ಟಿನ ಮೌಢ್ಯ ಮೀರಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎಂದು ಜ್ಯೋತಿಯವರು ತುಂಬ ಖುಷಿ ವ್ಯಕ್ತಪಡಿಸಿದರು.

ಮುಟ್ಟಿನ ರಕ್ತ ಕೆಟ್ಟದ್ದಲ್ಲ ಇನ್ನು ಮುಟ್ಟಾದಾಗ ಹೊರಬರುವ ರಕ್ತ ಕೆಟ್ಟದ್ದು ಎಂಬ ಭಾವನೆ ಅನೇಕ ಜನರಲ್ಲಿದೆ. ಆದರೆ ಅದು ನಿಜಕ್ಕೂ ಗಲೀಜಲ್ಲ. ಒಳ್ಳೆಯ ರಕ್ತವೇ ಎನ್ನುತ್ತಾರೆ ಜ್ಯೋತಿ ಹಿಟ್ನಾಳ್​. ಋತುಸ್ರಾವ ಎಂಬುದು ಗಲೀಜು. ಹಾಗಾಗಿ ಮುಟ್ಟಿಸಿಕೊಳ್ಳಬಾರದು ಎಂಬುದು ನಂಬಿಕೆ. ಹಾಗಾಗೇ ಮನೆ, ಊರಿನ ಹೊರಗೆ ಇರಿ. ಮುಟ್ಟಬೇಡಿ.. ತುಳಸಿಗಿಡ ಮುಟ್ಬೇಡಿ ಎಂದು ಹೇಳುತ್ತಾರೆ. ಆದರೆ ಅದು ನಿಜಕ್ಕೂ ತಪ್ಪಾದ ಕಲ್ಪನೆ. ಜನನಾಂಗದಿಂದ ಬಂದ ರಕ್ತ ಎಂಬ ಮಾತ್ರಕ್ಕೆ ಅದು ಖಂಡಿತ ಹೊಲಸು ರಕ್ತವಲ್ಲ. ಮುಟ್ಟಿಸಿಕೊಳ್ಳಬಾರದು ಎಂಬ ಭಾವನೆಯೇ ಮೌಢ್ಯ ಎಂಬುದು ಜ್ಯೋತಿಯವರ ಅಭಿಪ್ರಾಯ.

ನಾನು ಪೀರಿಯಡ್ಸ್ ತಪ್ಪಿಸಿಕೊಳ್ಳಲಾರೆ.. ಹೌದು ಹೆಣ್ಣು ಎಂದ ಮೇಲೆ ಯಾರೂ ಈ ತಿಂಗಳ ಮುಟ್ಟನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಉಳಿದಿದ್ದನ್ನು ಯೋಚಿಸಲು ಹೋಗುವುದಿಲ್ಲ. ಈ ಮೈಲಿಗೆ, ಗಲೀಜು ಇದರ ಬಗ್ಗೆ ತುಂಬ ಯೋಚನೆ ಮಾಡುವುದಿಲ್ಲ. ಅದೆಲ್ಲ ತಕ್ಷಣಕ್ಕೆ ಬದಲಾಗುವುದೂ ಇಲ್ಲ. ನಾನಂತೂ ಪೀರಿಯಡ್ಸ್​ನ್ನು ಎಂಜಾಯ್ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ನನಗೆ ಮುಟ್ಟಾದಾಗ ಯಾವ ಸ್ಯಾನಿಟಿ ಪ್ಯಾಡ್​ ಬಳಕೆ ಮಾಡಬಹುದು..ಹೇಗೆ ಸ್ವಚ್ಛವಾಗಿರಬಹುದು, ಎಷ್ಟು ತಾಸಿಗೊಮ್ಮೆ ಪ್ಯಾಡ್ ಚೇಂಜ್ ಮಾಡಿಕೊಳ್ಳಬೇಕು. ಏನೆಲ್ಲ ಪೌಷ್ಟಿಕ ಆಹಾರ ಸೇವಿಸಬಹುದು, ನನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ವಿಷಯಗಳ ಬಗ್ಗೆಯಷ್ಟೇ ಗಮನಹರಿಸುತ್ತೇನೆ. ಇದನ್ನು ಅಳವಡಿಸಿಕೊಳ್ಳುವುದು ತುಂಬ ಮುಖ್ಯ. ಮಹಿಳೆಯರು ಮಡಿ-ಮೈಲಿಗೆ ಗಳನ್ನೆಲ್ಲ ಬದಿಗಿಟ್ಟು ತಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಆ ಸಮಯದಲ್ಲಿ ಬರುವ ಸಿಟ್ಟು, ಕಿರಿಕಿರಿಯನ್ನು ನಿಯಂತ್ರಿಸಿಕೊಳ್ಳಲು ನಮ್ಮಷ್ಟಕ್ಕೇ ನಾವು ಪ್ರ್ಯಾಕ್ಟೀಸ್ ಮಾಡಬೇಕು..

ಇವಿಷ್ಟು ಜ್ಯೋತಿ ಇ. ಹಿಟ್ನಾಳ್​ ಅವರ ಮಾತುಗಳು. ಅವರು ಹೇಳೋದಿಷ್ಟೇ.. ‘ಮುಟ್ಟಿನ ಸಂದರ್ಭದ ಕಟ್ಟುಪಾಡುಗಳು-ಆಚರಣೆಗಳು ಏನೇ ಇರಲಿ. ಆರೋಗ್ಯ ಮಾತ್ರ ಗಮನದಲ್ಲಿ ಇರಲಿ. ಅದಕ್ಕೂ ಮೊದಲು ಮುಕ್ತವಾಗಿ ಮಾತನಾಡಿ. ನಿಮ್ಮ ಪರಿಸ್ಥಿತಿ ಏನೆಂಬುದನ್ನು ಸುತ್ತಲಿನವರಿಗೆ ಅರ್ಥ ಮಾಡಿಸಿ..’

ಇದನ್ನೂ ಓದಿ:  Menstrual Hygiene Day 2021: ಎಲ್ಲ ದೃಷ್ಟಿಯಿಂದಲೂ ಮುಟ್ಟಿನ ಕಪ್​​ಗಳು ತುಂಬ ಅನುಕೂಲ; ಕನ್ಯತ್ವಪೊರೆಗೆ ಖಂಡಿತ ಮಾರಕವಲ್ಲ

Published On - 8:15 pm, Fri, 28 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ