Menstrual Hygiene Day 2021: ಎಲ್ಲ ದೃಷ್ಟಿಯಿಂದಲೂ ಮುಟ್ಟಿನ ಕಪ್ಗಳು ತುಂಬ ಅನುಕೂಲ; ಕನ್ಯತ್ವಪೊರೆಗೆ ಖಂಡಿತ ಮಾರಕವಲ್ಲ
Menstrual Cups: ಸ್ಯಾನಿಟರಿ ಪ್ಯಾಡ್ಗಳು ಮತ್ತು ಟಾಂಪೂನ್ಗಳಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಲ್ಲಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಕೂಡ ಕಾಣಿಸಿಕೊಳ್ಳಬಹುದು. ಆದರೆ ಕಪ್ಗಳಿಂದ ಅದ್ಯಾವುದೇ ಸಮಸ್ಯೆ ಇರುವುದಿಲ್ಲ.
ಹಳೇ ಕಾಲದಲ್ಲಿ ಮಹಿಳೆಯರು ಮುಟ್ಟಾದಾಗ ಕಾಟನ್ ಬಟ್ಟೆಗಳನ್ನೇ ಬಳಸುತ್ತಿದ್ದರು. ಅದನ್ನು ಪದೇಪದೆ ತೊಳೆಯುವುದು, ಬದಲಿಸುವುದು, ಸ್ವಚ್ಛವಾಗಿಟ್ಟುಕೊಳ್ಳುವುದು ಸವಾಲಾಗಿತ್ತು. ಆದರೆ ಈಗೆಲ್ಲ ಸ್ಯಾನಿಟರಿ ನ್ಯಾಪ್ಕಿನ್ಗಳು ತುಂಬ ಬಳಕೆಯಲ್ಲಿವೆ. ಬರೀ ಪ್ಯಾಡ್ಗಳಷ್ಟೇ ಅಲ್ಲದೆ, ಟಾಂಪೂನ್ಗಳು, ಮುಟ್ಟಿನ ಕಪ್ (menstrual cup) ಗಳ ಬಳಕೆಯೂ ಹೆಚ್ಚುತ್ತಿದೆ. ಆದರೆ ಸ್ಯಾನಿಟರಿ ಪ್ಯಾಡ್ಗಳಷ್ಟು ಮುಟ್ಟಿನ ಕಪ್ಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಲ್ಲ. ಅದೇನು? ಅದರ ಬಳಕೆ ಹೇಗೆ ಎಂಬುದು ಸರಿಯಾಗಿ ಅರ್ಥವಾಗಿಲ್ಲ. ಆದರೆ ಸ್ಯಾನಿಟರಿ ಪ್ಯಾಡ್ಗಳಿಗಿಂತ ಈ ಮುಟ್ಟಿನ ಕಪ್ಗಳು ಎಲ್ಲ ದೃಷ್ಟಿಯಿಂದಲೂ ಉತ್ತಮ ಎಂಬುದು ಬಳಸುವವರ ಮತ್ತು ತಜ್ಞರ ಅಭಿಪ್ರಾಯ. ಯೋನಿಯ ಆರೋಗ್ಯದ ದೃಷ್ಟಿಯಿಂದ ಮೆನ್ಸ್ಟ್ರುವಲ್ ಕಪ್ಗಳನ್ನೇ ಬಳಸುವುದು ಒಳಿತು ಎನ್ನುತ್ತಾರೆ. ಹಾಗೇ ಪ್ಯಾಡ್ಗಳಿಗಿಂತ ಕಡಿಮೆ ಬೆಲೆಯಲ್ಲೂ ಸಿಗುತ್ತವೆ. ನಿಸರ್ಗಸ್ನೇಹಿಯೂ ಹೌದು. ದೀರ್ಘಾವಧಿಗೆ ಬಳಸಿ, ಸುಲಭವಾಗಿ ವಿಲೇವಾರಿ ಮಾಡಬಹುದು.
ಏನಿದು ಮುಟ್ಟಿನ ಕಪ್? ಈ ಕಪ್ಗಳು ಪ್ಲಾಸ್ಟಿಕ್ನಿಂದ ತಯಾರಾಗುವಂಥದ್ದಲ್ಲ. ರಬ್ಬರ್ ಅಥವಾ ಸಿಲಿಕಾನ್ನಿಂದ ತಯಾರು ಮಾಡಲಾಗುತ್ತದೆ. ಹಾಗೇ ಬೇರೆಬೇರೆ ಅಳತೆಯಲ್ಲಿ ಇದ್ದು, ಕಪ್ ಮಾದರಿಯಲ್ಲಿ ಇದ್ದು, ತುದಿಯಲ್ಲಿ ಸಣ್ಣದೊಂದು ಕೊಳವೆ ಇರುತ್ತದೆ. ಹಿಗ್ಗುವ ಗುಣ ಹೊಂದಿರುತ್ತದೆ. ಮುಟ್ಟಿನ ಸಂದರ್ಭದಲ್ಲಿ ಇದನ್ನು ಯೋನಿಗೆ ಅಳವಡಿಸಿಕೊಳ್ಳಬೇಕು. ಅದು ರಕ್ತವನ್ನು ಹೀರಿಕೊಳ್ಳುತ್ತದೆ. ಪ್ಯಾಡ್, ಟಾಂಪೂನ್ಗಳಿಗಿಂತಲೂ ಸುರಕ್ಷಿತವಾಗಿದ್ದು, ಹೆಚ್ಚಿನ ರಕ್ತ ಹೀರುತ್ತವೆ. ಸೋರಿಕೆಯ ಭಯ ಇರುವುದಿಲ್ಲ. ಹಾಗೇ ಕಪ್ಗಳನ್ನು ಸುಮಾರು 12 ತಾಸುಗಳವರೆಗೂ ಬಳಸಬಹುದಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕೀಪರ್ ಕಪ್, ಮೂನ್ ಕಪ್, ಲ್ಯುನೆಟ್ ಕಪ್, ದಿವಾ ಕಲ್ ಲೆನಾ, ಲಿಲ್ಲಿ ಕಪ್ ಸೇರಿ ವಿವಿಧ ಬ್ರ್ಯಾಂಡ್ಗಳ ಮುಟ್ಟಿನ ಕಪ್ಗಳು ಅಥವಾ ಮುಟ್ಟಿನ ಬಟ್ಟಲು ಲಭ್ಯವಿದ್ದು, ಆಯ್ಕೆಗೂ ಅವಕಾಶವಿದೆ. ಪ್ರಕೃತಿಗೂ ಮಾರಕವಲ್ಲ.. ಆರೋಗ್ಯಕ್ಕೂ ಹಾನಿಕರ ಅಲ್ಲ. ಸ್ಯಾನಿಟರಿ ಪ್ಯಾಡ್ಗಳಿಂದ ಉಂಟಾಗುವ ಟಾಕ್ಸಿಕ್ ಶಾಕ್ ಸಿಂಡ್ರೋಮ್ನ ಭಯ ಈ ಮುಟ್ಟಿನ ಕಪ್ ಬಳಸುವವರಲ್ಲಿ ಇರುವುದಿಲ್ಲ.
ಸ್ತ್ರೀರೋಗ ತಜ್ಞರ ಮಾರ್ಗದರ್ಶನ ಪಡೆಯಬಹುದು ಮುಟ್ಟಿನ ಕಪ್ಗಳ ಬಗ್ಗೆ ಅಸಂಖ್ಯಾತ ಮಹಿಳೆಯರಿಗೆ ಅರಿವು ಇಲ್ಲ. ಅದನ್ನು ಹೇಗೆ ಬಳಸಬೇಕು? ಅಳವಡಿಸಿಕೊಳ್ಳುವುದು ಹೇಗೆ? ಸ್ವಚ್ಛ ಮಾಡಿಕೊಳ್ಳುವ ವಿಧಾನ ಯಾವುದು..ಎಂಬಿತ್ಯಾದಿ ಪ್ರಶ್ನೆಗಳು ಸಾಲುಸಾಲಾಗಿ ಇವೆ. ನೀವು ಮೊದಲ ಬಾರಿಗೆ ಮುಟ್ಟಿನ ಕಪ್ ಬಳಸುವ ಮುನ್ನ ಯಾವುದಕ್ಕೂ ಒಮ್ಮೆ ಸ್ತ್ರೀರೋಗ ತಜ್ಞರೊಂದಿಗೆ ಮಾತನಾಡಿ, ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಮಾರ್ಗದರ್ಶನ ಪಡೆಯಬಹುದು. ಅದಿಲ್ಲದಿದ್ದರೂ ಧೈರ್ಯವಾಗಿ ಬಳಸಬಹುದು. ಮೊದಲು ನಿಮಗೆ ಯಾವ ಅಳತೆಯ ಕಪ್ ಬೇಕು ಎಂಬುದನ್ನು ಗುರುತಿಸಿಕೊಳ್ಳಬೇಕು. ಆನ್ಲೈನ್ನಲ್ಲೂ ಎಲ್ಲ ಬ್ರ್ಯಾಂಡ್ಗಳ ಕಪ್ಗಳೂ ಸಿಗುತ್ತವೆ. ನಿಮ್ಮ ವಯಸ್ಸು, ಗರ್ಭಕಂಠದ ಉದ್ದ, ನಿಮಗೆ ಎಷ್ಟು ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗುತ್ತದೆ ಎಂಬಿತ್ಯಾದಿ ವಿಷಯಗಳನ್ನು ಗಮನಿಸಿಕೊಂಡು ಕಪ್ ಆಯ್ಕೆ ಮಾಡಿಕೊಳ್ಳಬೇಕು. ಯುವತಿಯರಿಗೆ 30ವರ್ಷಕ್ಕಿಂತ ಚಿಕ್ಕವರಿಗೆ, ಇನ್ನು ಹೆರಿಗೆ ಆಗದವರಿಗೆ ಸಾಮಾನ್ಯವಾಗಿ ಸಣ್ಣ ಅಳತೆಯ ಕಪ್ ಸಾಕಾಗುತ್ತದೆ. ಹಾಗೇ, 30 ವರ್ಷ ಮೇಲ್ಪಟ್ಟ ಮಹಿಳೆಯರು, ಮಕ್ಕಳಿಗೆ ಜನ್ಮ ನೀಡಿದವರಿಗೆ, ಜಾಸ್ತಿ ಪ್ರಮಾಣದಲ್ಲಿ ರಕ್ತಸ್ರಾವ ಆಗುವವರಿಗೆ ದೊಡ್ಡ ಕಪ್ನ್ನು ತಜ್ಞರು ಶಿಫಾರಸ್ಸು ಮಾಡುತ್ತಾರೆ.
ನೀವು ಮೊದಲ ಬಾರಿಗೆ ಈ ಕಪ್ ಬಳಸಿದಾಗ ಸಹಜವಾಗಿಯೇ ಕಿರಿಕಿರಿ ಆಗಬಹುದು. ಆದರೆ ಒಂದು ಬಾರಿ ಅಭ್ಯಾಸವಾಗಿ ನಿಮಗೆ ಅದರ ಅಳತೆ, ಬಳಸುವ ವಿಧಾನವೆಲ್ಲ ಸರಿಯಾಗಿ ಅರ್ಥ ಆದ ಮೇಲೆ ಖಂಡಿತ ಆರಾಮದಾಯಕ ಎನ್ನಿಸುತ್ತದೆ. ರಾತ್ರಿಯೆಲ್ಲ ಎದ್ದು ಬದಲಿಸುವ ಅಗತ್ಯ ಇರುವುದಿಲ್ಲ. ಇದರಿಂದಾಗಿ ಸುಖವಾಗಿ ನಿದ್ದೆಯನ್ನೂ ಮಾಡಬಹುದು.
ಮುಟ್ಟಿನ ಕಪ್ ಅಳವಡಿಸಿಕೊಳ್ಳೋದು ಹೇಗೆ? ಟಾಂಪೂನ್ ಮಾದರಿಯಲ್ಲೇ ಈ ಮುಟ್ಟಿನ ಕಪ್ಗಳನ್ನೂ ಅಳವಡಿಸಿಕೊಳ್ಳಬೇಕಾಗುತ್ತದೆ. ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನಂತರ ಕಪ್ನ ರಿಮ್ ಅಂದರೆ ತಳದ ವೃತ್ತಕ್ಕೆ ನೀರು ಅಥವಾ ನೀರು ಆಧಾರಿತ ಲ್ಯೂಬ್ನ್ನು ಲೇಪಿಸಿಕೊಳ್ಳಬೇಕು. ನಂತರ ಕಪ್ನ್ನು ಗಟ್ಟಿಯಾಗಿ ಅರ್ಧ ಮಾತ್ರ ಮಡಿಚಬೇಕು. ಬಳಿಕ ಅದನ್ನು ಯೋನಿಯೊಳಗೆ ಸಿಕ್ಕಿಸಿ, ಸ್ವಲ್ಪ ತಿರುಗಿಸಿ ಸರಿಯಾಗಿ ಕುಳಿತುಕೊಳ್ಳವಂತೆ ನೋಡಿಕೊಳ್ಳಬೇಕು. ಇದನ್ನು ಟಾಂಪೂನ್ ಮಾದರಿಯಲ್ಲೇ ಅಳವಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಅಳವಡಿಸಿಕೊಳ್ಳುವ ವಿಧಾನವನ್ನು ತಜ್ಞರೊಂದಿಗೆ ಸೂಕ್ತವಾಗಿ ಚರ್ಚಿಸಿಕೊಳ್ಳುವುದು ಒಳಿತು.
ಕಪ್ನ್ನು ಯಾವಾಗ ಹೊರಗೆ ತೆಗೆಯಬೇಕು? ಮುಟ್ಟಿನ ಕಪ್ಗಳನ್ನು ಪದೇಪದೆ ಬದಲಿಸುವ ಅಗತ್ಯ ಇರುವುದಿಲ್ಲ. ಒಮ್ಮೆ ಧರಿಸಿದರೆ 6-12 ತಾಸುಗಳವರೆಗೆ ಆರಾಮಾಗಿ ಇರಬಹುದು. ಹೆಚ್ಚಿನ ರಕ್ತಸ್ರಾವ ಆಗುವವರು ಬೇಗ ತೆಗೆಯಬಹುದು. ತೆಗೆದರೆ ಆ ಕ್ಷಣಕ್ಕೆ ಸ್ವಚ್ಛಗೊಳಿಸಿ ಮತ್ತೆ ಅಳವಡಿಸಿಕೊಳ್ಳಬಹುದು. ಇಲ್ಲದಿದ್ದರೆ 12 ತಾಸುಗಳವರೆಗೂ ಇಟ್ಟುಕೊಳ್ಳಬಹುದು. ಇದರಿಂದ ಅಲರ್ಜಿ, ತುರಿಕೆಯಾಗುತ್ತದೆ ಎಂಬ ಭಯ ಇರುವುದಿಲ್ಲ. ವಾಸನೆಯೂ ಬರುವುದಿಲ್ಲ. ಅದು ತುಂಬಲಿ ಬಿಡಲಿ 12 ತಾಸುಗಳಾದ ಮೇಲೆ ತೆಗೆದು ಸ್ವಚ್ಛ ಮಾಡಿಕೊಳ್ಳಲೇಬೇಕು.
ಯೋನಿಯಿಂದ ಮುಟ್ಟಿನ ಕಪ್ ತೆಗೆಯುವುದಕ್ಕೂ ಮೊದಲು ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು. ನಿಮ್ಮ ತೋರು ಬೆರಳು ಮತ್ತು ಹೆಬ್ಬೆರಳನ್ನು ನಿಮ್ಮ ಯೋನಿಯಲ್ಲಿ ಹಾಕಿ, ಕಪ್ ತುದಿಯನ್ನು ಹಿಡಿದು ನಿಧಾನವಾಗಿ ಎಳೆದರೆ ಅದು ಹೊರಬರುತ್ತದೆ. ಇನ್ನು ಮುಟ್ಟಿನ ಕಪ್ಗಳು ಮರುಬಳಕೆ ಮಾಡುವಂಥದ್ದೂ ಇದೆ.. ಬಳಸಿ ಬಿಸಾಡುವಂಥವೂ ಸಿಗುತ್ತವೆ. ಹೀಗೆ ಮರುಬಳಕೆ ಮಾಡುವ ಕಪ್ಗಳನ್ನು ಒಂದು ಬಾರಿ ನಿಮ್ಮ ಯೋನಿಯಿಂದ ತೆಗೆದ ಬಳಿಕ ಸ್ವಚ್ಛವಾಗಿ ತೊಳೆದು, ಒರೆಸಿಕೊಳ್ಳಬೇಕು.
ಖರ್ಚು ಕಡಿಮೆ, ಹಣ ಉಳಿತಾಯ ಸ್ಯಾನಿಟರಿ ಪ್ಯಾಡ್ಗಳಾಗಲಿ, ಟಾಂಪೂನ್ಗಳಾಗಲಿ ಅದನ್ನು ಮರು ಬಳಕೆ ಮಾಡಲಾಗದು. ಕೆಲವು ಬಟ್ಟೆಯ ಪ್ಯಾಡ್ಗಳನ್ನು ಈಗೀಗ ತಯಾರು ಮಾಡಲಾಗುತ್ತಿದೆಯಾದರೂ ಅವುಗಳನ್ನು ವರ್ಷಗಳ ಅವಧಿಗೆಲ್ಲ ಬಳಸಲು ಸಾಧ್ಯವಿಲ್ಲ. ಪ್ರತಿಬಾರಿಯೂ ಹೀಗೆ ಪ್ಯಾಡ್ಗಳನ್ನು, ಟಾಂಪೂನ್ಗಳಿಂದ ಖರೀದಿ ಮಾಡುವುದರಿಂದ ಖರ್ಚು ಜಾಸ್ತಿಯಾಗುತ್ತದೆ. ಎಲ್ಲ ಮಹಿಳೆಯರಿಗೂ ಕೈಗೆಟುಕುವುದೂ ಇಲ್ಲ. ಪ್ರತಿತಿಂಗಳೂ ಮುಟ್ಟಿನ ಸ್ವಚ್ಛತಾ ಸಲಕರಣೆಗಳ ಮೇಲೆ ಹೂಡಿಕೆ ಮಾಡುವಷ್ಟು ಆರ್ಥಿಕ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಆದರೆ ಮುಟ್ಟಿನ ಕಪ್ಗಳು ವಿಭಿನ್ನ. ಪ್ಯಾಡ್ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಕೆಲವು ಬ್ರ್ಯಾಂಡ್ಗಳಿಗೆ ದುಬಾರಿ ಬೆಲೆಯಿದ್ದರೂ ಒಮ್ಮೆ ತೆಗೆದುಕೊಂಡರೆ ಒಂದು ವರ್ಷದವರೆಗೆ ಬಳಸಬಹುದು. ಸಹಜವಾಗಿಯೇ ಖರ್ಚು ಕಡಿಮೆ ಆಗುತ್ತದೆ.
ಸೋರಿಕೆ, ತುರಿಕೆಯ ಭಯ ಇರುವುದಿಲ್ಲ ಸ್ಯಾನಿಟರಿ ಪ್ಯಾಡ್ಗಳು ಮತ್ತು ಟಾಂಪೂನ್ಗಳಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಲ್ಲಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಕೂಡ ಕಾಣಿಸಿಕೊಳ್ಳಬಹುದು. ಆದರೆ ಕಪ್ಗಳಿಂದ ಅದ್ಯಾವುದೇ ಸಮಸ್ಯೆ ಇರುವುದಿಲ್ಲ. ಹಾಗೇ ಕಪ್ಗಳಿಗೆ ರಕ್ತವನ್ನು ಹೀರುವ ಸಾಮರ್ಥ್ಯ ಹೆಚ್ಚಿದ್ದು, ಸೋರಿಕೆಯನ್ನು ತಡೆಯುತ್ತವೆ. ಅದಕ್ಕಿಂತ ಹೆಚ್ಚಾಗಿ ಇವು ಪರಿಸರ ಸ್ನೇಹಿ. ಪೂರ್ತಿ ಪ್ರಮಾಣದಲ್ಲಿ ಅಲ್ಲದಿದ್ದರೂ ಪ್ಲಾಸ್ಟಿಕ್ ಯುಕ್ತ ಪ್ಯಾಡ್ಗಳಿಗೆ ಹೋಲಿಸಿದರೆ ಪ್ರಕೃತಿ ಸ್ನೇಹಿ ಹೌದು.
ಸೆಕ್ಸ್ ಕೂಡ ಮಾಡಬಹುದು ! ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಒಳ್ಳೆಯದಲ್ಲ. ಆದರೆ ಅನೇಕರು ಅದನ್ನು ಮಾಡುತ್ತಾರೆ. ಮುಟ್ಟಿನ ಕಪ್ ಧರಿಸಿಯೇ ಸೆಕ್ಸ್ ಕೂಡ ಮಾಡಬಹುದು. ಇದರಲ್ಲಿ ಮರುಬಳಕೆ ಮಾಡುವಂಥ ಕಪ್ಗಳನ್ನು ಧರಿಸುವವರು ಸಂಭೋಗ ಮಾಡುವಾಗ ಅದನ್ನು ಹೊರತೆಗೆಯಬೇಕಾಗುತ್ತದೆ. ಆದರೆ ಮೃದುವಾದ, ಬಳಕೆ ಮಾಡಿ ಎಸೆಯುವಂಥ ಕಪ್ ಧರಿಸುವವರು ಅದನ್ನು ಹಾಕಿಟ್ಟುಕೊಂಡೇ ಸೆಕ್ಸ್ ಮಾಡಬಹುದು.
ಕನ್ಯತ್ವಕ್ಕೆ ಮಾರಕವೇ? ಖಂಡಿತ ಇಲ್ಲ ಎನ್ನುತ್ತಾರೆ ಖ್ಯಾತ ವೈದ್ಯೆ ವಸುಂಧರಾ ಭೂಪತಿ
ಮುಟ್ಟಿನ ಕಪ್ನೊಟ್ಟಿಗೆ ಇಂಥದ್ದೊಂದು ಮಿಥ್ಯೆ ಹುಟ್ಟಿಕೊಂಡಿದೆ. ಕಪ್ನ್ನು ಯೋನಿಯೊಳಗೆ ಸಿಕ್ಕಿಸುವಾಗ ಕನ್ಯತ್ವದ ಪೊರೆ ಹರಿದುಹೋಗುತ್ತದೆಯಾ ಎಂಬ ಪ್ರಶ್ನೆಯನ್ನು ಅನೇಕರು ತಜ್ಞರ ಬಳಿ ಮುಂದಿಟ್ಟಿದ್ದಾರೆ. ಆದರೆ ಖಂಡಿತವಾಗಿಯೂ ಇಲ್ಲ, ಕಪ್ನ್ನು ಯಾವುದೇ ವಯಸ್ಸಿನವರೂ ಹೆದರಿಕೆಯಿಲ್ಲದೆ ಧರಿಸಬಹುದು. ಕನ್ಯತ್ವದ ಪೊರೆಗೆಲ್ಲ ಯಾವುದೇ ಸಮಸ್ಯೆಯೂ ಇಲ್ಲ ಎಂಬುದು ಡಾ. ವಸುಂಧರಾ ಭೂಪತಿಯವರ ಸ್ಪಷ್ಟ ಉತ್ತರ.
ನನ್ನ ಪ್ರಕಾರ ಕನ್ಯತ್ವ ಪೊರೆ ಎಂಬುದೇ ಒಂದು ದೊಡ್ಡ ಮಿಥ್ಯೆ. ಮುಟ್ಟಿನ ಕಪ್ಗಳು ತೀರ ತೆಳುವಾಗಿರುತ್ತದೆ. ಅದರಿಂದ ಕನ್ಯತ್ವ ಪೊರೆಗೆ ಯಾವುದೇ ಹಾನಿಯೂ ಇಲ್ಲ. ಇನ್ನು ಹುಡುಗಿಯರಂತೂ ಈಗ ಈಜುವುದು, ಸೈಕ್ಲಿಂಗ್ ಸೇರಿ ಇನ್ನಿತರ ಎಲ್ಲ ರೀತಿಯ ಸಾಹಸ ಕಾರ್ಯದಲ್ಲೂ ತೊಡಗಿಕೊಂಡಿರುತ್ತಾರೆ. ಯಾವುದೋ ಒಂದು ಕಾರಣಕ್ಕೆ ಆ ಪೊರೆ ಹರಿಯಬಹುದು. ಅಷ್ಟಕ್ಕೂ ಕನ್ಯತ್ವ ಪೊರೆ ಯಾಕೆ ಬೇಕು ನಮಗೆ? ಅವೆಲ್ಲ ನಮ್ಮ ಸಮಾಜದ ಒಂದಷ್ಟು ನಂಬಿಕೆಗಳಷ್ಟೇ. ಹಾಗಾಗಿ ಧೈರ್ಯದಿಂದ ಮುಟ್ಟಿನ ಕಪ್ಪನ್ನು ಬಳಕೆ ಮಾಡಬಹುದು. ನಿಜ ಹೇಳಬೇಕೆಂದರೆ ಮುಟ್ಟಿನ ಕಪ್ಗಳು ಶಾಲೆ, ಕಾಲೇಜಿಗೆ ಹೋಗುವ ಯುವತಿಯರಿಗೆ ಇನ್ನೂ ಅನುಕೂಲ. ಪ್ಯಾಡ್ಗಳ ತರ ಬದಲಿಸಬೇಕು..ಎಸೆಯಬೇಕು, ಸೋರಿಕೆಯಾಗುತ್ತದೆ ಎಂಬ ರಗಳೆ ಇರುವುದಿಲ್ಲ ಎನ್ನುತ್ತಾರೆ ವೈದ್ಯೆ ವಸುಂಧರಾ ಭೂಪತಿ.
Published On - 2:21 pm, Fri, 28 May 21