ಓದು ಮಗು ಓದು: ನಾನೀಗ ಶಕುಂತಲಾ ಲಕ್ಷ್ಮೀ ಬ್ರಹ್ಮ ಸರಸ್ವತಿ ವಿಷ್ಣು ಬುದ್ಧನನ್ನು ಗುರುತಿಸುತ್ತೇನೆ!

‘ಓದಿದ ಮೇಲೆ ನಾನು ಕೇಳುವ ಪ್ರಶ್ನೆಗಳಿಗೆ ಹಲವು ಬಾರಿ ಅಪ್ಪ, ಅಮ್ಮನಿಗೂ ಉತ್ತರ ಗೊತ್ತಿಲ್ಲವೆನ್ನುವುದು ಕಂಡಾಗ ಗೊಂದಲವಾಗುತ್ತದೆ.‘ ದೋಹಾನಲ್ಲಿ ವಾಸಿಸುತ್ತಿರುವ ಸಿದ್ಧಾರ್ಥ್ ವಿಜಿತ್ ಅರ್ಜುನಪುರಿ ಈ ಸರಣಿಯಿಂದ ಸ್ಪೂರ್ತಿಗೊಂಡು, ತನ್ನ ಆಯ್ಕೆಯನ್ನೂ ಕನ್ನಡದಲ್ಲಿ ಬರೆದು ಕಳಿಸುವಂತೆ ತನ್ನ ಅಮ್ಮನಿಗೆ ದುಂಬಾಲು ಬಿದ್ದಾಗ...

ಓದು ಮಗು ಓದು: ನಾನೀಗ ಶಕುಂತಲಾ ಲಕ್ಷ್ಮೀ ಬ್ರಹ್ಮ ಸರಸ್ವತಿ ವಿಷ್ಣು ಬುದ್ಧನನ್ನು ಗುರುತಿಸುತ್ತೇನೆ!
ತನ್ನ ನೆಚ್ಚಿನ ಪುಸ್ತಕದೊಂದಿಗೆ ಸಿದ್ಧಾರ್ಥ
Follow us
|

Updated on:Jan 17, 2021 | 10:20 AM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com

ದೋಹಾದ ಪರ್ಲ್​ ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿರುವ ಸಿದ್ಧಾರ್ಥ್ ಅರ್ಜುನಪುರಿ ವಿಜಿತ್ ಆಯ್ಕೆಗಳು ಹೀಗಿವೆ.

ಪು: ದಿ ಕಂಪ್ಲೀಟ್ ಅಡ್ವೆಂಚರ್ಸ್ ಆಫ್ ಪೀಟರ್ ರಾಬಿಟ್ (ಮಕ್ಕಳ ಕ್ಲಾಸಿಕ್ ಕಥೆಗಳು) ಲೇ: ಬಿಯಾಟ್ರಿಕ್ಸ್ ಪಾಟರ್ ಪ್ರ: ಫ್ರೆಡೆರಿಕ್ ವಾರ್ನ್ ಅಂಡ್ ಕಂಪನಿ 1893ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಬಿಯಾಟ್ರಿಕ್ಸ್ ಪಾಟರ್ ಬರೆದಿರುವ ‘ದಿ ಕಂಪ್ಲೀಟ್ ಅಡ್ವೆಂಚರ್ಸ್ ಆಫ್ ಪೀಟರ್ ರಾಬಿಟ್’ ಕಥೆಗಳ ಸಂಗ್ರಹದಲ್ಲಿ ದಿ ಟೇಲ್ ಆಫ್ ಪೀಟರ್ ರಾಬಿಟ್, ದಿ ಟೇಲ್ ಆಫ್ ಬೆಂಜಮಿನ್ ಬನ್ನಿ, ದಿ ಟೇಲ್ ಆಫ್ ದಿ ಫ್ಲಾಪ್ಸಿ ಬನ್ನೀಸ್ ಮತ್ತು ದಿ ಟೇಲ್ ಆಫ್ ಮಿಸ್ಟರ್ ಟಾಡ್ ಕಥೆಗಳಿವೆ. ಈ ಕಥೆಗಳಲ್ಲಿ ಬರುವ ಪೀಟರ್ ರಾಬಿಟ್ ಮತ್ತು ಅವನ ಮುದ್ದಾದ ತಂಗಿ ಕಾಟನ್ ಟೇಲ್ ನನಗೆ ಬಹಳ ಅಚ್ಚುಮೆಚ್ಚು.

ಕಥೆಯಲ್ಲಿ ಬರುವ ಚಿತ್ರಗಳು ಬಹಳ ಸುಂದರವಾಗಿದ್ದು, ಮೊಲಗಳು ದಿನವೆಲ್ಲಾ ಏನು ಮಾಡುತ್ತವೆ ಎನ್ನುವುದನ್ನು ತಿಳಿಸುತ್ತವೆ. ಮೊಲಗಳೂ ನಮ್ಮ ಹಾಗೆ ಮಾತನಾಡುತ್ತವೆ, ತುಂಟಾಟ ಮಾಡುತ್ತವೆ ಎನ್ನುವುದನ್ನು ಕಂಡಾಗ ಖುಷಿಯಾಗುತ್ತದೆ. ತಪ್ಪು ಮಾಡಿದಾಗ ಮೊಲಗಳ ಅಪ್ಪ-ಅಮ್ಮ ಸಹ ನಮ್ಮ ಅಪ್ಪ-ಅಮ್ಮನ ಹಾಗೆಯೇ ರೇಗುತ್ತಾರೆ, ಹೊಡೆಯುತ್ತಾರೆ.

ನಾವು ಸ್ಕೂಲಿಗೆ ಹೋಗಿ ಪಾಠ ಕಲಿಯುವ ಹಾಗೆಯೇ, ಮೊಲಗಳೂ ಸಹ ಅವುಗಳ ಶಾಲೆಗೆ ಹೋಗಿ ದುಷ್ಟ ಪ್ರಾಣಿಗಳಾದ ನರಿ,  ಹೆಗ್ಗಣ, ತಾರಾ ಕರಡಿ (ಬ್ಯಾಜರ್), ಮತ್ತು ಗೂಬೆ, ಹದ್ದುಗಳಂತಹ ಪಕ್ಷಿಗಳಿಂದ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳಬೇಕು, ಹೇಗೆ ಬಿಲ ತೋಡಬೇಕು, ಹೇಗೆ ರೈತ ಮೆಕ್ ಗ್ರೆಗರ್ ಮತ್ತವನ ಹೆಂಡತಿಯ ಕಣ್ಣಿಗೆ ಬೀಳದಂತೆ ತರಕಾರಿ ಮತ್ತು ಹಣ್ಣುಗಳನ್ನು ಅವರ ತೋಟದಿಂದ ಕಿತ್ತು ತಿನ್ನಬೇಕು ಇತ್ಯಾದಿ ಪಾಠಗಳನ್ನು ಕಲಿಯುತ್ತವೆ.

ಇದರಲ್ಲಿ ಬರುವ ಮಾನವರೂಪಿ ಪ್ರಾಣಿಗಳು, ಬ್ರಿಟಿಷ್ ಉದ್ಯಾನಗಳ ಸುಂದರವಾದ ಚಿತ್ರಗಳು ಮತ್ತು ನೈಸರ್ಗಿಕ ಭೂದೃಶ್ಯಗಳನ್ನು ನೋಡುತ್ತಾ, ಕಥೆಗಳನ್ನು ಓದುತ್ತಿದ್ದರೆ ಬಹಳ ಖುಷಿಯಾಗುತ್ತದೆ. ಮುಂದೊಂದು ದಿನ ದೊಡ್ಡವನಾದ ಮೇಲೆ ಬ್ರಿಟನ್ ಗೆ ಹೋಗಿ ಪೀಟರ್ ರಾಬಿಟ್ ವಾಸ ಮಾಡುತ್ತಿದ್ದ ಸುಂದರ ಉದ್ಯಾನಗಳನ್ನು ಮತ್ತು ಸುತ್ತಮುತ್ತಲಿನ ಕಾಡುಮೇಡುಗಳನ್ನು ನೋಡಬೇಕೆಂದುಕೊಂಡಿದ್ದೇನೆ. ಈ ಪುಸ್ತಕದಲ್ಲಿರುವ ಭಾಷೆ ಸರಳ ಹಾಗೂ ಸುಂದರವಾಗಿದ್ದು, ಇವುಗಳನ್ನು ಓದಿದ ಮೇಲೆ ಕೆಲವು ಹೊಸ ಪದಗಳನ್ನು ಕಲಿತಿದ್ದೇನೆ.

ಪು: ಬಿಗ್ಗೆಟಿ ಬ್ಯಾಟ್: ಹಾಟ್ ಡಿಗ್ಗೆಟಿ, ಇಟ್ಸ್ ಬಿಗ್ಗೆಟಿ! (ಮಕ್ಕಳ ಕಥನ ಕಾವ್ಯ) ಲೇ: ಆನ್ ಇಂಗಾಲ್ಸ್ ಪ್ರ: ಸ್ಕೊಲಾಸ್ಟಿಕ್ ಇಂಕ್ 

ಆನ್ ಇಂಗಾಲ್ಸ್ ಬರೆದಿರುವ ‘ಬಿಗ್ಗೆಟಿ ಬ್ಯಾಟ್: ಹಾಟ್ ಡಿಗ್ಗೆಟಿ, ಇಟ್ಸ್ ಬಿಗ್ಗೆಟಿ!’ ಎನ್ನುವ ಇಡೀ ಪುಸ್ತಕ ಬಾಯಿಪಾಠವಾದಾಗ ನನಗೆ ಮೂರೂವರೆ ವರ್ಷ. ಇದರಲ್ಲಿ ಬರುವ ಬಿಗ್ಗೆಟಿ ಬ್ಯಾಟ್ ಎನ್ನುವ ಪುಟ್ಟ ಬಾವಲಿ ನೋಡಲು ಬಹಳ ಮುದ್ದಾಗಿದೆ. ಪದ್ಯ ರೂಪದಲ್ಲಿರುವ ಈ ಕಥೆಯನ್ನು ನಾನು ಎಲ್.ಕೆ.ಜಿ.ಯಲ್ಲಿದ್ದಾಗ ನಮ್ಮ ಶಾಲೆಯ ಕಥಾ ಸ್ಪರ್ಧೆಯಲ್ಲಿ ವಾಚಿಸಿ, ಬಹುಮಾನ ಪಡೆದುಕೊಂಡಿದ್ದೆ.

ಒಂದು ದಿನ ಸೂರ್ಯ ಮುಳುಗುತ್ತಿದ್ದಂತೆಯೇ ಬಿಗ್ಗೆಟಿ ಬ್ಯಾಟ್ ಸ್ನೇಹಿತರನ್ನು ಹುಡುಕಿಕೊಂಡು ತನ್ನ ಗೂಡು ಬಿಡುತ್ತಾನೆ. ತನ್ನ ಪ್ರಯಾಣದ ಉದ್ದಕ್ಕೂ, ಅವನು ಹಿಮ ಬೆಳ್ಳಕ್ಕಿಗಳು (ಸ್ನೋ ಇಗ್ರೆಟ್ಸ್), ಆಮೆ, ಜೀರುಂಡೆಗಳು, ಮೋಕಿಂಗ್ ಬರ್ಡ್ಸ್, ಪೊಸಮ್ ಗಳು ಮತ್ತು ಕೊನೆಯದಾಗಿ ರಕೂನ್ ಮರಿಗಳನ್ನು ಭೇಟಿಯಾಗುತ್ತಾನೆ. ತಾನು ಭೇಟಿ ಮಾಡುವ ಎಲ್ಲಾ ಪ್ರಾಣಿಗಳಿಗೂ ಸ್ನೇಹಿತರಿರುವುದನ್ನು ಕಂಡು ಪ್ರತಿ ಬಾರಿಯೂ ಒಂಟಿತನ ಅನುಭವಿಸುತ್ತಾನೆ. ಕೊನೆಗೆ ತನ್ನ ಸೇತುವೆಯ ಬಳಿಯೇ ಇರುವ ರಕೂನ್ ಮರಿಗಳನ್ನು ಬಿಗ್ಗೆಟಿ ಭೇಟಿ ಮಾಡುತ್ತಾನೆ. ಅವು ಅವನನ್ನು ಆಟವಾಡಲು ಕರೆಯುತ್ತವೆ, ಬಿಗ್ಗೆಟಿಗೆ ಅಂತಿಮವಾಗಿ ಗೆಳೆಯರು ಸಿಗುತ್ತಾರೆ, ಅವನ ಒಂಟಿತನ ದೂರವಾಗುತ್ತದೆ.

ಪ್ರತಿಯೊಂದು ಪುಟದಲ್ಲೂ ಬಿಗ್ಗೆಟಿಯ ಭಾವನೆಗಳನ್ನು ಚಿತ್ರಗಳು ತೋರಿಸುತ್ತವೆ. ಪದ್ಯದ ರೂಪದಲ್ಲಿರುವ ಈ ಕಥೆ ಬಹಳ ಸರಳವಾಗಿದೆ. ಕೆಲವು ಪದಗಳು ಪುನರಾವರ್ತಿತವಾಗಿ, ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಬಾಯಿಪಾಠ ಮಾಡಲು ಅನುಕೂಲ ಮಾಡಿಕೊಡುತ್ತವೆ. ಬಿಗ್ಗೆಟಿ ಭೇಟಿ ಮಾಡುವ ಪ್ರತಿಯೊಂದು ಹೊಸ ಪ್ರಾಣಿಗಳನ್ನು ನಾನು ಮೊದಲ ಬಾರಿಗೆ ಸುಲಭವಾಗಿ ಪರಿಚಯ ಮಾಡಿಕೊಂಡೆ. ನಿಜ ಜೀವನದಲ್ಲೂ ಈ ಪುಟ್ಟ ಮೆಕ್ಸಿಕನ್ ಬಾವಲಿಗಳು ಟೆಕ್ಸಾಸ್‌ನ ಆಸ್ಟಿನ್ ನಲ್ಲಿ ಸೇತುವೆಗಳ ಕೆಳಗೆ ವಾಸಿಸುವುದನ್ನು ಅಮೇರಿಕಾದಲ್ಲಿರುವವರು ನೋಡಬಹುದು.

ಪು:ಬಿಸ್ಕೆಟ್ಸ್ ಕ್ರಿಸ್‌ಮಸ್ ಸ್ಟೋರಿಬುಕ್ ಕಲೆಕ್ಷನ್ (ಮಕ್ಕಳ ಕತೆಗಳು) ಲೇ: ಅಲೈಸಾ ಸ್ಯಾಟಿನ್ ಕ್ಯಾಪುಸಿಲ್ಲಿ ಪ್ರ: ಹಾರ್ಪರ್ ಫೆಸ್ಟಿವಲ್ ನಾನು ಓದಲು ಪ್ರಾರಂಭಿಸಿದ ಮೊದಲ ಕಥೆ ಪುಸ್ತಕಗಳಲ್ಲಿ ಅಲೈಸಾ ಸ್ಯಾಟಿನ್ ಕ್ಯಾಪುಸಿಲ್ಲಿ ಬರೆದಿರುವ ಬಿಸ್ಕೆಟ್ ನ ಕಥೆಗಳೂ ಸೇರಿವೆ. ತುಂಟ ನಾಯಿ ಮರಿ ಬಿಸ್ಕೆಟ್ ನ ಕಥೆಗಳು ನನಗೆ ಬಹಳ ಪ್ರಿಯ, ಅದರಲ್ಲೂ ‘ಬಿಸ್ಕೆಟ್ಸ್ ಕ್ರಿಸ್‌ಮಸ್ ಸ್ಟೋರಿಬುಕ್ ಕಲೆಕ್ಷನ್’ ಪುಸ್ತಕದಲ್ಲಿರುವ ಒಂಬತ್ತು ಕಥೆಗಳನ್ನು ಹತ್ತಾರು ಸಲ ಓದಿದ್ದೇನೆ. ಬೇರೆ ಕಥೆಗಳಲ್ಲಿ ಬರುವ ಹಾಗೆ ಬಿಸ್ಕೆಟ್ ಮನುಷ್ಯರ ಹಾಗೆ ಮಾತನಾಡುವುದಿಲ್ಲ. ಅವನ ‘ವುಫ್ ವುಫ್’ ನಲ್ಲೇ ಅವನ ಭಾವನೆಗಳು ನಮಗೆ ಅರ್ಥವಾಗುತ್ತವೆ.

ಹಿಮದಲ್ಲಿ ಆಟವಾಡುವ, ಹುಡುಗಿಯ ಬ್ಯಾಗಿನಲ್ಲಿ ಬಚ್ಚಿಟ್ಟುಕೊಂಡು ಅವಳ ಸ್ಕೂಲಿಗೆ ಹೋಗುವ, ಸ್ನಾನ ಮಾಡಲು ರಂಪ ಮಾಡುವ, ಪಾರ್ಕಿನಲ್ಲಿ ಮಕ್ಕಳ ಜೊತೆ ಆಟವಾಡಲು ಇಷ್ಟ ಪಡುವ, ತನ್ನ ಟೆಡ್ಡಿ ಬೇರ್ ಹುಡುಕುವ, ಕ್ರಿಸ್ಮಸ್ ನಲ್ಲಿ ಎಲ್ಲವನ್ನೂ ಕುತೂಹಲದಲ್ಲಿ ನೋಡುವ, ಮೂಸಿ ನೋಡುವ ಬಿಸ್ಕೆಟ್ ತನ್ನ ತುಂಟಾಟಗಳಿಂದ ಮನಸ್ಸಿಗೆ ಮುದ ನೀಡುತ್ತಾನೆ. ಬಿಸ್ಕೆಟ್ ನ ಕಥೆಗಳು ತುಂಬಾ ಚಿಕ್ಕವಾಗಿದ್ದು, ಒಂದೆರಡು ಸಲ ಓದಿದರೆ ಬಾಯಿಪಾಠವಾಗಿಬಿಡುತ್ತವೆ. ಆಗಾಗ್ಗೆ ಬರುವ ಪುನರಾವರ್ತಿತ ಸರಳ ಪದಗಳು ಹಿರಿಯರ ನೆರವಿಲ್ಲದೆ ನಾವೇ ಕಥೆಗಳನ್ನು ಓದುವ ಹಾಗೆ ಸಹಾಯ ಮಾಡುತ್ತವೆ.

ಪು: 365 ಪಂಚತಂತ್ರ ಸ್ಟೋರೀಸ್ ಪ್ರಕಾಶಕರು: ಓಂ ಬುಕ್ ಸರ್ವೀಸ್ ನಾನು ಹುಟ್ಟಿದಾಗ ಅಮ್ಮ ನನಗೆಂದೇ ಖರೀದಿಸಿದ ಈ ಪುಸ್ತಕದಲ್ಲಿರುವ ನೀತಿ ಕಥೆಗಳು ಬಹಳ ಆಕರ್ಷಕವಾಗಿವೆ. ಪ್ರತಿ ದಿನ ಓದಬಹುದಾದ ಈ ಪುಸ್ತಕದಲ್ಲಿ ದಿನಕ್ಕೊಂದರಂತೆ 365 ಕಥೆಗಳಿವೆ. ಇಲ್ಲಿನ ಹಲವು ಕಥೆಗಳ ಕೇಂದ್ರ ಪಾತ್ರಗಳು ಪ್ರಾಣಿಗಳು ಮತ್ತು ಪಕ್ಷಿಗಳು. ಮನುಷ್ಯರ ಹಾಗೆಯೇ ಮಾತನಾಡುವ ಇವು ತಮ್ಮ ಜೀವನದ ಮೂಲಕ ನಮಗೆ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ.

ಬುದ್ಧಿವಂತ ಮೊಲಗಳು, ಮೋಸಗಾರ ನರಿ, ಕಪಟಿ ರಣ ಹದ್ದು, ಖಿಲಾಡಿ ಬೆಕ್ಕು, ಮಂದಮತಿಗಳಾದ ಒಂಟೆ, ಆನೆ, ಆಮೆ, ಮತ್ತು ಕತ್ತೆ, ಆಸೆಬುರುಕ ನಾಯಿ, ಮಂಗ, ಕಾಗೆ, ಮತ್ತು ನರಿ, ಜಾಣ ಇಲಿಗಳು, ಕಪ್ಪೆಗಳು ತಮ್ಮ ಜೀವನದ ಮೂಲಕ ನಮಗೆ ನೀತಿ ಪಾಠಗಳನ್ನು ಹೇಳಿಕೊಡುತ್ತವೆ.  ಇಲ್ಲಿರುವ ರಾಜ-ರಾಣಿಯರ ಕಥೆಗಳು, ರಾಜಕುಮಾರರ ಕಥೆಗಳೂ ಸರಳವಾಗಿದ್ದು ಕೆಲವು ನಗು ಬರಿಸುತ್ತವೆ.

ಪು: 365 ಟೇಲ್ಸ್ ಆಫ್ ಇಂಡಿಯನ್ ಮೈಥಾಲಜಿ ಪ್ರ : ಓಂ ಬುಕ್ ಸರ್ವೀಸ್ 

ನಾನು ಹುಟ್ಟಿದಾಗ ನಾನಗಾಗಿ ಅಮ್ಮ ಖರೀದಿಸಿದ ಕಥೆ ಪುಸ್ತಕಗಳಲ್ಲಿ ಇದೂ ಒಂದು. ದಿನಕ್ಕೊಂದು ಕಥೆಯಂತೆ ಪ್ರತಿ ರಾತ್ರಿ ಮಲಗುವ ಮುನ್ನ ಓದುವ ಈ ಪುಸ್ತಕದಲ್ಲಿ ಹಲವಾರು ರಾಜ-ರಾಣಿಯರ, ಋಷಿಗಳ, ದೇವ-ದೇವತೆಗಳ ಕಥೆಗಳಿವೆ. ನಮ್ಮ ಭಾರತ ದೇಶದ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಈ ಕಥೆಗಳು ತಿಳಿಸುತ್ತವೆ.

ಪ್ರತಿಯೊಂದು ಪುಟದಲ್ಲಿರುವ ಚಿತ್ರಗಳು ಆ ಕಥೆಯ ಬಗ್ಗೆ ಕುತೂಹಲ ಮೂಡಿಸಿ ಪುಸ್ತಕ ಓದುವಂತೆ ಮಾಡುತ್ತವೆ. ಇದರಲ್ಲಿರುವ ಕೃಷ್ಣನ ಬಾಲ್ಯದ ಕಥೆಗಳು ನನಗೆ ಬಹಳ ಇಷ್ಟ. ಈ ಪುಸ್ತಕ ಓದಿದ ಮೇಲೆ ಚಿತ್ರಗಳನ್ನು ನೋಡಿಯೇ ಶಕುಂತಲ, ಗಣೇಶ, ರಾವಣ, ರಾಮ, ಸೀತೆ, ಹನುಮಾನ್, ಶಿವ, ಪಾರ್ವತಿ, ಪ್ರಹ್ಲಾದ, ಕೃಷ್ಣ, ಲಕ್ಷ್ಮೀ, ಬ್ರಹ್ಮ, ಸರಸ್ವತಿ,  ವಿಷ್ಣು, ಬುದ್ಧ ಇತರರನ್ನು ಗುರುತಿಸುತ್ತೇನೆ, ಕೆಲವರ ಕಥೆಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇನೆ.

ಇಲ್ಲಿನ ಕೆಲವು ಕಥೆಗಳು ಅರ್ಥವಾಗದಿದ್ದರೂ ಚಿತ್ರಗಳನ್ನು ನೋಡಿಕೊಂಡೇ ಓದುತ್ತೇನೆ, ಕೆಲವು ಸಲ ಅಮ್ಮನಿಂದಲೋ ಅಪ್ಪನಿಂದಲೋ ಓದಿಸಿಕೊಳ್ಳುತ್ತೇನೆ. ಇವುಗಳನ್ನು ಓದಿದ ಮೇಲೆ ನಾನು ಕೇಳುವ ಪ್ರಶ್ನೆಗಳಿಗೆ ಹಲವು ಬಾರಿ ಅಪ್ಪ, ಅಮ್ಮನಿಗೂ ಉತ್ತರ ಗೊತ್ತಿಲ್ಲವೆನ್ನುವುದು ಕಂಡಾಗ ಗೊಂದಲವಾಗುತ್ತದೆ. ಆದರೂ ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ನನಗೆ ಬಹಳ ಇಷ್ಟವಾಗಿವೆ.

ಓದು ಮಗು ಓದು : ಕನ್ನಡದ ಪ್ರಕಾಶಕರೇ ಇತ್ತ ಒಮ್ಮೆ ಗಮನಿಸಿ…

Published On - 3:53 pm, Sat, 16 January 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್