ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ.
ಪರಿಕಲ್ಪನೆ: ಶ್ರೀದೇವಿ ಕಳಸದ
ಮುಂಬೈಯಲ್ಲಿ ವಾಸಿಸುತ್ತಿರುವ ಲೇಖಕಿ ಗಿರಿಜಾ ಶಾಸ್ತ್ರೀ ಅವರು, ‘ಗುಹೇಶ್ವರಾ ನೀನಿದ್ದೆಯಲ್ಲಾ ಇಲ್ಲದಂತೆ…’ ಎನ್ನುತ್ತಿದ್ದಾರೆ.
ಅಂದು ಶಿವರಾತ್ರಿ. ಮುಂಬೈನ ಕಲೀನ ಕ್ಯಾಂಪಸ್ಸಿನಿಂದ ಕುರ್ಲಾದ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಮಧ್ಯಾಹ್ನದ ಹೊತ್ತಾದ್ದರಿಂದ ಬಸ್ಸಿನಲ್ಲಿ ಹೆಚ್ಚು ಗದ್ದಲವೇನೂ ಇರಲಿಲ್ಲ. ನನ್ನ ಪಕ್ಕದ ಸೀಟು ಖಾಲಿಯಿತ್ತು. ಕುರ್ಲಾ ಡಿಪೋ ನಿಲ್ದಾಣದಲ್ಲಿ ಬಸ್ಸು ನಿಂತಿತು. ತಕ್ಷಣವೇ ಬೆಳ್ಳಗಿನ ಬೆಳಕೊಂದು ಬಸ್ಸಿನೊಳಗೆ ತೂರಿಬಂತು. ಬಸ್ಸಿನೊಳಗೆ ಹೀಗೆ ತೂರಿಬಂದದ್ದು ಒಬ್ಬ ಮುಸಲ್ಮಾನ ವೃದ್ಧ. ತಲೆಯಿಂದ ಕಾಲಿನವರೆಗೆ ಬಿಳಿ! ಶುಭ್ರವಾಗಿ ಒಗೆದು ನೀಲಿ ಹಾಕಿ ಇಸ್ತ್ರಿ ಮಾಡಿದ ಬಿಳಿಯ ಕುರ್ತಾ, ಪೈಜಾಮ. ತಲೆಯ ಮೇಲೊಂದು ಕ್ರೋಶಾದಲ್ಲಿ ಹೆಣೆದ ಬಿಳಿ ಟೊಪ್ಪಿಗೆ. ಇವನ್ನೆಲ್ಲಾ ಧರಿಸಿಕೊಂಡ ಅಚ್ಚ ಬಿಳಿಯ ಮೈ. ಅವನ ಪರೆಬಂದ ಕಣ್ಣೊಳಗಿಂದ ವೃದ್ಧಾಪ್ಯದ ಮಾಗುವಿಕೆ ಇಣಕುತ್ತಿತ್ತು. ಇಳಿಬಿಟ್ಟಿದ್ದ ಸೊಂಪಾದ ಬಿಳಿಯ ಟ್ಯಾಗೋರ್ ಗಡ್ಡ.
ನನ್ನ ಪಕ್ಕದಲ್ಲಿ ಸೀಟಿದ್ದರೂ ಸಂಕೋಚದಿಂದ, ಚಲಿಸುವ ಬಸ್ಸಿನೊಳಗೆ ಸಮತೋಲನ ಮಾಡುತ್ತಾ ಆ ವೃದ್ಧ ನಿಂತೇ ಇದ್ದ. ನಾನು ಪಕ್ಕಕ್ಕೆ ಸ್ವಲ್ಪ ಸರಿದು ‘ಬೈಠಿಯೇ’ ಎಂದೆ. ಪಕ್ಕದಲ್ಲಿ ಬಂದು (ಬಂಧು)ಕುಳಿತವನು ‘ಬಹುತ್ ಮೆಹರ್ ಬಾನ್’ ಎಂದು ಕೃತಜ್ಞತೆಯಿಂದ ಕುತ್ತಿಗೆ ತಗ್ಗಿಸಿ ಕುಳಿತ. ಬೆನ್ನು ಕೊಂಚ ಬಾಗಿತ್ತು, ವಾಕಿಂಗ್ ಸ್ಟಿಕ್‍ನ್ನು ಆ ಬಿಳಿಯ ಕೈಗಳು ಭದ್ರವಾಗಿ ಹಿಡಿದಿದ್ದವು. ಅವನ ಕಣ್ಣುಗಳಲ್ಲಿ ಏನೋ ವೇದನೆ ಇದ್ದಂತಿತ್ತು. ಸುಸ್ತಾಗಿರುವ ಹಾಗೆಯೂ ಕಂಡಿತು. ಬ್ಯಾಗಿನೊಳಗಿಂದ ನೀರಿನ ಬಾಟಲನ್ನು ತೆಗೆದು ‘ಲೀಜಿಯೇ’ ಎಂದೆ. ‘ಬಹುತ್ ಮೆಹರ್ ಬಾನ್, ಬೇಟಿ, ಬಹುತ್ ಮೆಹರ್ ಬಾನ್’ ಎಂದು ಅನೇಕ ಸಲ ಹೇಳಿದ. ಕುರ್ಲಾದ ಭಾಜಿ ಮಾರ್ಕೆಟ್ ನಿಲ್ದಾಣದಲ್ಲಿ ಅದೇ ಮಂತ್ರವನ್ನು ಮತ್ತೆ ಮತ್ತೆ ಉಚ್ಚರಿಸುತ್ತಾ ನನ್ನ ಕಡೆಗೆ ಸಲಾಂ ಎನ್ನುವ ಹಾಗೆ ಕೈ ಮಾಡಿ ಇಳಿದು ಹೋದ. ಬೆಳಕು ಇಳಿದು ಹೋಯಿತು. ಪಕ್ಕದ ಸೀಟು ಖಾಲಿಯಾಯಿತು. ಖಾಲಿ ಸೀಟನ್ನು ಸವರುತ್ತಾ ಕುಳಿತೆ. ಗಾಳಿಪಟದ ದಾರವನ್ನು ಯಾವುದೋ ಕಾಣದ ನೋವಿನ ಎಳೆಯೊಂದು ಎಳೆದುಕೊಂಡು ಹೋಗಿಬಿಟ್ಟಿತ್ತು.
ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರಾ, ನಿಮ್ಮ ಶರಣನುದಯಿಸಿದನಂದು
ಇದನ್ನೂ ಓದಿ : Maha Shivaratri; ಕಾಯುವನೇ ಶಿವ? : ಶಿವಾರಗುಡ್ಡದ ಶಿವನಿಗೆ ನನ್ನ ನಾಟಕ ಗೊತ್ತಾಗಿ ಹೋಯಿತೇ!
Published On - 6:20 pm, Thu, 11 March 21