ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.
ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com
ಪರಿಕಲ್ಪನೆ : ಶ್ರೀದೇವಿ ಕಳಸದ
ಬೆಂಗಳೂರಿನಲ್ಲಿ ವಾಸಿಸಿರುವ ಕಿರುಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಅವರ ಬರಹ ನಿಮ್ಮ ಓದಿಗೆ
ಈ ಬರಹಕ್ಕಾಗಿ ಅಂತರ್ಜಾಲವನ್ನು ಜಾಲಾಡಿದಾಗ ಸಿಕ್ಕ ಸಾಕ್ಷ್ಯಚಿತ್ರಗಳಲ್ಲಿ ನೂರಕ್ಕೆ ತೊಂಬತ್ತೊಂಬತ್ತಕ್ಕಿಂತ ಹೆಚ್ಚು ಹೆಣ್ಣುಮಕ್ಕಳಿಗೆ ಸಂಬಂಧಿಸಿದಂತೆ ಇದ್ದವು. ಗಂಡುಮಕ್ಕಳಿಗೆ ಸಂಬಂಧಿಸಿದಂತೆ ಒಂದು ಭಾಗಕ್ಕಿಂತ ಕಡಿಮೆ ಇದ್ದವು. ‘ತಡಿಯಪ್ಪ ನೋಡೇಬಿಡೋಣ’ ಎಂದು Male Body Shaming ಅಂತ ಹುಡುಕಿದರೆ, Body Dissatisfaction ಎಂಬ ತಲೆಬರಹದೊಂದಿಗೆ ಬೆರಳೆಣಿಕೆಗಿಂತ ಕಡಿಮೆ ದೊರೆತವು. ಇದು, ಅಪೇಕ್ಷಿತ(ಮಾದರಿ) ದೇಹದ ಸ್ವರೂಪ ಕುರಿತಂತೆ ಇರುವ ತಥಾಕಥಿತ ಕಲ್ಪನೆಗಳಲ್ಲಿರುವ ಲಿಂಗ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನ ದೇಹಕ್ಕೆ ಶೇಮಿಂಗ್, ಗಂಡಿನ ದೇಹಕ್ಕೆ ಡಿಸ್ಸ್ಯಾಟಿಸ್ಫ್ಯಾಕ್ಷನ್! ಸಾಕ್ಷ್ಯಚಿತ್ರಗಳಲ್ಲಿ ಕಂಡ ಅನುಭವಗಳನ್ನು ಹೋಲಿಸಿದರೆ ಹೆಣ್ಣುಮಕ್ಕಳು ಬಾಡಿ ಶೇಮಿಂಗ್ನಿಂದಾಗಿ ಅನುಭವಿಸುವ ಕೀಳರಿಮೆ, ನೋವು, ಆತ್ಮವಿಶ್ವಾಸದ ಕುಸಿತ, ಮತ್ತಿತರ ನೆಗೆಟೀವ್ ಪರಿಣಾಮಗಳ ಮುಂದೆ ಗಂಡುಮಕ್ಕಳ ಮೇಲೆ ಬಹಳ ಕಡಿಮೆ ದುಷ್ಪರಿಣಾಮ ಬೀರುತ್ತದೆ ಅನಿಸುತ್ತದೆ.
ಕಾಲಾನುಕಾಲದಿಂದಲೂ ಸಾಹಿತ್ಯ, ಚಿತ್ರ, ಶಿಲ್ಪ ಇತ್ಯಾದಿ ಕಲಾಭಿವ್ಯಕ್ತಿಗಳಲ್ಲಿ ಪುರುಷ ದೇಹದ ವರ್ಣನೆಗಳು ಮೆಚ್ಚುಗೆಯನ್ನು ಸೂಚಿಸಿದರೆ, ಹೆಣ್ಣಿನ ದೇಹದ ವರ್ಣನೆಗಳು ಮೆಚ್ಚುಗೆಗಿಂತ ಮಿಗಿಲಾಗಿ ಪುರುಷಕಾಮನೆಯ, ಪುರುಷಬಯಕೆಯ, ಪುರುಷನ ಭೋಗದ ಸಾಧನವಾಗಿ ವರ್ಣಿತವಾಗಿವೆ. ಪುರುಷರ ವಿಶಾಲ ಬಾಹು, ವಿಸ್ತಾರವಾದ ಎದೆ, ಧೃಢ ನಿಲುವುಗಳಿಗೆ ವಿರುದ್ಧವಾಗಿ ಬಳಕುವ ಶರೀರ, ಶೂನ್ಯ ಕಟಿ, ಕುಚೋನ್ನತೆ, ತೋರ ನಿತಂಬ, ಬಾಳೆ ದಿಂಡಿನಂಥ ತೊಡೆ ಇತ್ಯಾದಿ ವರ್ಣನೆಗಳು ಹೆಣ್ಣಿನ ದೇಹಕ್ಕೆ ಮೀಸಲು. ಈ ಗ್ರಾಹಕಧೋರಣೆಯ ಮುಂದುವರೆದ ಮತ್ತು ಹೆಚ್ಚು ಒತ್ತಿನಿಂದ ಜಾರಿಗೊಳಿಸುವ ಪ್ರಕ್ರಿಯೆಯು ಪತ್ರಿಕೆಗಳ ನಿಯತಕಾಲಿಕೆಗಳ ಮತ್ತು ಟಿವಿ ಜಾಹೀರಾತುಗಳಲ್ಲಿ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಇದು ಅತಿರೇಕಕ್ಕೆ ತಲುಪಿದೆ.
ಇನ್ಸ್ಟಾಗ್ರಾಂನಲ್ಲಿರುವ ಸುಂದರಿಯರಂತೆ ನಾನೂ ತೆಳ್ಳಗಿರಬೇಕು ಅಂದುಕೊಂಡು ಊಟ ಕಡಿಮೆ ಮಾಡಿದೆ, ವ್ಯಾಯಾಮ ಮಾಡಿದೆ. ಕ್ಯಾಲೊರಿ ಪ್ರಜ್ಞೆ ಹೆಚ್ಚಿಸಿಕೊಂಡೆ. ಇದು ಎಷ್ಟು ಅತಿಯಾಯಿತೆಂದರೆ ಒಂದು ದಿನ ಸುಸ್ತಿನಿಂದ ಸ್ನಾನದ ಕೋಣೆಯಲ್ಲಿ ಬಿದ್ದುಬಿಟ್ಟವಳು ಏಳಲು ಸಾಧ‍್ಯವಾಗಿರಲಿಲ್ಲ. ಬೇರೆಯವರ ಸಹಾಯದಿಂದ ಚೇತರಿಸಿಕೊಳ್ಳಬೇಕಾಯಿತು’ ಎನ್ನುತ್ತಾಳೆ ಒಬ್ಬ ಯುವತಿ. ಮುಂದುವರೆದು, ‘ಆಗ ತೀರ್ಮಾನಿಸಿದೆ, ಎಷ್ಟು ಪ್ರಯತ್ನ ಪಟ್ಟರೂ ಅಷ್ಟೇ. ನಿಖರವಾದ ಪರಿಪೂರ್ಣವಾದ ದೇಹ ಎಂಬುದು ನಿಜವಾಗಿಯೂ ಇಲ್ಲ. ಅದಿರುವುದು ನನ್ನ ತಲೆ (ಕಲ್ಪನೆ)ಯಲ್ಲಿ ಮಾತ್ರ. ನಿಜ ಏನೆಂದರೆ, ನನ್ನ ದೇಹ ನನ್ನದು. ನನ್ನ ದೇಹದಲ್ಲಿ ನಾನಿರಬೇಕೇ ಹೊರತು ನನ್ನ ಕುರಿತ ಇತರರ ಅನಿಸಿಕೆಗಳಲ್ಲ.’
ಕೆಲವು ಜನ, ‘ನಿನ್ನ ಮುಖ ಇಷ್ಟೊಂದು ಸುಂದರವಾಗಿದೆ. ಸ್ವಲ್ಪ ತೂಕ ಕಡಿಮೆ ಮಾಡಿಕೊಂಡರೆ ಚೆನ್ನಾಗಿರುತ್ತದೆ’ ಎನ್ನುತ್ತಿದ್ದರಂತೆ ಬಾಲಿವುಡ್ಡಿನ ಖ್ಯಾತ ನಟಿ ವಿದ್ಯಾ ಬಾಲನ್ ಅವರಿಗೆ. ಅದಕ್ಕವರು, ‘ಸಣ್ಣ ಎಂದರೆ ಎಷ್ಟು ಸಣ್ಣ ಆಗಬೇಕು? ಮೊದಲು ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೆ ಚೆನ್ನಾಗಿರುತ್ತದೆ’ ಅನ್ನುತ್ತಿದ್ದರಂತೆ. ‘ಶಾಲಾ ಕಾಲೇಜುಗಳಲ್ಲಿ ನನ್ನ ಸಣಕಲು ಎತ್ತರದ ಗೆಳತಿಯೊಂದಿಗೆ ದಪ್ಪನೆಯ ನಾನು ಜೊತೆಯಾಗಿ ಹೋಗುತ್ತಿದ್ದರೆ, ‘ಲಾರಲ್ ಅಂಡ್ ಹಾರ್ಡಿ’ ಎಂದು ಚುಡಾಯಿಸುತ್ತಿದ್ದರು. ಇದಕ್ಕೆಲ್ಲ ನಮ್ಮನ್ನು ಹೇಗಿದ್ದೀವೋ ಹಾಗೇ ನಾವು ಒಪ್ಪಿಕೊಳ್ಳುವುದೇ ಪರಿಹಾರ’ ಎನ್ನುತ್ತಾರೆ.
ಸಾಮಾನ್ಯವಾಗಿ ಮನೆಯಲ್ಲಿ ತಾಯಂದಿರು, ‘ಬಹಳ ದಪ್ಪ ಇದ್ದೀಯ. ನಿನ್ನನ್ನು ಯಾರು ಮದುವೆ ಆಗುತ್ತಾರೆ? ಆರೋಗ್ಯ ಕೆಡುತ್ತದೆ. ಸಣ್ಣ ಆಗು’ ಎಂದು ತಮ್ಮ ಕಾಳಜಿಯನ್ನು ತೋರಿಸುವ ಮೂಲಕ ಬಾಡಿ ಶೇಮಿಂಗ್ ಒಂದು ಹುಡುಗಿಗೆ ಶುರುವಾಗುತ್ತದೆ. ನಂತರ ಅಕ್ಕ ತಂಗಿಯರು, ಗೆಳತಿಯರು, ಸುತ್ತಲಿನ ಜನ ಮುಂದುವರೆಸುತ್ತಾರೆ.
ಒಂದು ಹುಡುಗಿ, ‘ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಬಹಳ ದಪ್ಪವಿದ್ದೆ. ಒಂದು ಸಾರಿ ನಮಗೆಲ್ಲಾ ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದರು. ಒಬ್ಬ ಟೀಚರ್ ನಮ್ಮ ಎತ್ತರ, ತೂಕ ನೋಡಿ ಜೋರಾಗಿ ಹೇಳುತ್ತಿದ್ದರು. ಇನ್ನೊಬ್ಬ ಟೀಚರ್ ಒಂದು ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ನನಗೆ ಜೀವ ಡವಡವ ಹೊಡೆದುಕೊಳ್ಳುತ್ತಿತ್ತು. ಯಾಕೆಂದರೆ, ಆ ದಿನ ನನ್ನ ತೂಕ ತರಗತಿಯಲ್ಲಿ ಎಲ್ಲರಿಗೂ ಗೊತ್ತಾಗಿಬಿಡುತ್ತದೆ ಎಂದು. ಅದೃಷ್ಟಕ್ಕೆ ನನ್ನ ಸರದಿ ಬರುವ ಮೊದಲೇ ಆ ದಿನದ ತರಗತಿ ಮುಗಿಯಿತು. ಮಾರನೆಯ ದಿನ ನಾನು ಶಾಲೆಗೇ ಹೋಗಲಿಲ್ಲ.’ ಎಂದು ತಾನು ಆ ದಿನಗಳಲ್ಲಿ ಅನುಭವಿಸುತ್ತಿದ್ದ ಕೀಳರಿಮೆ ಮತ್ತು ಅಪಮಾನಗಳನ್ನು ನೆನಸಿಕೊಳ್ಳುತ್ತಾಳೆ.
ಮತ್ತೊಬ್ಬ ಹುಡುಗಿ ಹೇಳುತ್ತಾಳೆ, ‘ನಾನು ನನ್ನ ತಂಗಿ ಚಿಕ್ಕಂದಿನಲ್ಲಿ ಪೀಚುಪೀಚಾಗಿದ್ದೆವು. ನಮ್ಮ ತಮ್ಮ ಮೈಕೈ ತುಂಬಿಕೊಂಡಿದ್ದ. ಮನೆಗೆ ಬಂದ ನೆಂಟರಿಷ್ಟರು, ‘ಏನು, ಹೆಣ್ಣು ಮಕ್ಕಳ ಊಟವನ್ನೆಲ್ಲ ನಿಮ್ಮ ಮಗನಿಗೇ ತಿನ್ನಿಸಿಬಿಡುತ್ತಿದ್ದೀರಾ?’ ಎಂದು ತಮಾಷೆ ಮಾಡುತ್ತಿದ್ದರು. ಯಾರಾದರೂ ಮನೆಗೆ ಬರುತ್ತಾರೆಂದರೆ, ನಾನು ನನ್ನ ತಂಗಿ ಅಡಗಿಕೊಳ್ಳುತ್ತಿದ್ದೆವು’ ಎಂದು ಹೇಳಿ, ‘ಹಾಗೆ ತಮಾಷೆ ಮಾಡುವುದರ ಮೂಲಕ ಅವರು ನಾನು, ನನ್ನ ತಂಗಿ ಮತ್ತು ತಮ್ಮನನ್ನು ಅವಮಾನ ಮಾಡುವುದಲ್ಲದೆ ನಮ್ಮ ತಂದೆ ತಾಯಿಯನ್ನು ದೂಷಿಸುತ್ತಿದ್ದರು. ನಮಗೆ ಬಹಳ ಬೇಸರವಾಗುತ್ತಿತ್ತು’ ಅಂತ ಸೇರಿಸುತ್ತಾಳೆ.
‘ನನ್ನ ಆಪ್ತ ಗೆಳತಿಯ ಹುಟ್ಟು ಹಬ್ಬಕ್ಕೆ ನಾನು ಮತ್ತು ಅವಳು ಒಂದೇ ರೀತಿಯ ವಿನ್ಯಾಸದ ಬಟ್ಟೆಗಳನ್ನು ಕೊಂಡಿದ್ದೆವು. ಆ ದಿನ ನಾನು ಆ ಬಟ್ಟೆಯನ್ನು ಧರಿಸಿ ಅವಳ ಮನೆಗೆ ಹೊರಟಾಗ, ನಮ್ಮಮ್ಮ ನಾನು ಉಟ್ಟಿರುವ ಬಟ್ಟೆ ಕೆಟ್ಟದಾಗಿದೆ ಎಂದು ಬೈದರು. ಇಬ್ಬರೂ ಒಂದೇ ರೀತಿಯ ಬಟ್ಟೆ ತೆಗೆದುಕೊಂಡಿದ್ದೇವೆ ಎಂದು ನಾನು ಹೇಳಿದ್ದಕ್ಕೆ, ನಮ್ಮಮ್ಮ, ‘ಅವಳ ಅಳತೆ ಎರಡು. ನಿನ್ನದು ಎಂಟು ತಿಳಕೊ’ ಎಂದರು. ನನಗೆ ಬಹಳ ನೋವಾಗಿತ್ತು’ ಎನ್ನುತ್ತಾಳೆ ಮತ್ತೊಬ್ಬ ಹುಡುಗಿ. ಕಾಳಜಿಯಿಂದಲೇ ಹೇಳಿದ್ದರೂ ಬಾಡಿ ಶೇಮಿಂಗ್ ಮಾತುಗಳು ಮಕ್ಕಳು ಕೀಳರಿಮೆಗೆ ಈಡಾಗುವಂತೆ ಮಾಡುತ್ತವೆ. ನಾನು ಚೆನ್ನಾಗಿಲ್ಲ. ಸುಂದರವಾಗಿಲ್ಲ ಅನಿಸಿ ಕ್ರಮೇಣ ಖಿನ್ನತೆಗೂ ದಾರಿ ಮಾಡಿಕೊಡಬಹುದು.
ಮತ್ತೊಬ್ಬ ಯುವತಿ, ತನ್ನನ್ನು ತಾನು ಹೀನೈಸಿಕೊಳ್ಳಲು ಕಾರಣವನ್ನು ಹೀಗೆ ತಿಳಿಸುತ್ತಾಳೆ, ‘ಸಹಪಾಠಿಗಳು ಒಣಕಲಿ ಎಂದೇ ನನ್ನನ್ನು ಚುಡಾಯಿಸುತ್ತಿದ್ದರು. ನನ್ನ ಗೆಳೆಯ ಆಗಾಗ್ಗೆ ನನ್ನ ಸಣ್ಣ ಮೊಲೆಗಳ ಕುರಿತು ತಮಾಷೆ ಮಾಡುತ್ತಿದ್ದ. ಇದರಿಂದ ನನ್ನನ್ನು ನಾನು ಹೀನೈಸಿಕೊಳ್ಳತೊಡಗಿದೆ. ಇತರರ ಜೊತೆಗೆ ಬೆರೆಯುವುದು ಕಡಿಮೆಯಾಯಿತು. ಆ ಹುಡುಗನ ಸ್ನೇಹವನ್ನೂ ತೊರೆದೆ.’
ಹೀಗೆ ಬಾಡಿ ಶೇಮ್ ಮಾಡುವ ತಂದೆತಾಯಿಯರು, ಸಂಬಂಧಿಕರು, ಸಹಪಾಠಿಗಳು, ಗೆಳೆಯ ಗೆಳತಿಯರು ಮತ್ತು ಇತರ ಜನ ತಿಳಿಯಬೇಕಾದ್ದೇನೆಂದರೆ, ಬಾಡಿ ಶೇಮಿಂಗ್ ಗೆ ಈಡಾದ ಬಲಿಪಶುಗಳು ಅನಗತ್ಯವಾದ ವ್ಯಾಕುಲತೆಗೆ ಮತ್ತು ಖಿನ್ನತೆಗೆ ಜಾರುವಂತೆ ಮಾಡುತ್ತದೆ. ವ್ಯಕ್ತಿಯೊಬ್ಬರು ಸ‍್ಥೂಲಕಾಯ ಹೊಂದಿದ್ದು ಆರೋಗ್ಯವಂತರೂ ಆಗಿರುವ ಸಾಧ್ಯತೆ ಇದೆ ಎಂಬುದನ್ನು ಮನಗಾಣಬೇಕು. ಶಾರೀರಿಕ ಸ್ವರೂಪವನ್ನು ಹೀಯಾಳಿಸುವಂಥ ಅವಹೇಳನ ಮಾಡುವಂಥ ಅಡ್ಡ ಹೆಸರುಗಳನ್ನಿಡುವುದು ಸಹ ತಪ್ಪು ಎಂಬುದನ್ನೂ ಅರಿಯಬೇಕು. ಆಡುವವರಿಗೆ ಅವು ಕೇವಲ ಶಬ್ದಗಳಿರಬಹುದು ಆದರೆ ಅನ್ನಿಸಿಕೊಳ್ಳುವವರಿಗೆ ಅದೊಂದು ಅವರ ಅಸ್ತಿತ್ವದ ಕೆಟ್ಟ ಗುರುತಾಗಿಬಿಡುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ದೇಹವನ್ನೇ ದ್ವೇಷಿಸಲಾರಂಭಿಸುತ್ತಾರೆ.
ಬಹಳಷ್ಟು ಜನ ಮಾದರಿ ದೇಹ ರೂಪಿಸಿಕೊಳ್ಳುವ ಸಲುವಾಗಿ ಪಡಬಾರದ ಪಡಿಪಾಟಲು ಪಡುತ್ತಾರೆ.
‘ಫ್ಯಾಶನ್ ಮಳಿಗೆಗಳ, ಬಟ್ಟೆ ಅಂಗಡಿಗಳ ಪ್ರದರ್ಶನ ಕಿಟಕಿಗಳಲ್ಲಿ ಕಾಣಿಸುವ ಬಳಕುವ ಮೈಯಿನ ‘ಆದರ್ಶ’ ಮೈಕಟ್ಟಿನ ಹೆಣ್ಣುಗೊಂಬೆಗಳ ಹಾಗೆಯೇ ನಿಜ ಜೀವನದಲ್ಲಿ ಯಾವ ಹೆಣ್ಣೂ ಇರಲು ಸಾಧ್ಯವಿಲ್ಲ. ಹಾಗೇನಾದರೂ ಇದ್ದರೆ ಅವರು ಅಪೌಷ್ಟಿಕತೆಯಿಂದ ಬಳಲುತ್ತಿರುತ್ತಾರೆ’ ಅನ್ನುತ್ತಾರೆ ಬಾಡಿ ಶೇಮಿಂಗ್ ಗೆ ಈಡಾದವರಿಗೆ ಆಪ್ತಸಮಾಲೋಚನೆ ನೀಡುವ ಒಬ್ಬ ತಜ್ಞರು ಮಂದುವರೆದು, ‘ಆ ಗೊಂಬೆಗಳ ರೀತಿ ಇರಬೇಕಾದರೆ ಅಪಾರ ಶ್ರಮ ಪಡಬೇಕು ಮತ್ತು ದೀರ್ಘ ಕಾಲದ ತಯಾರಿ ಬೇಕು’ ಎನ್ನುತ್ತಾರೆ. ಇಂಥ ಮಾರುಕಟ್ಟೆ ಆಕರ್ಷಕ ಮಾದರಿಗಳ ಹಿನ್ನೆಲೆಯಲ್ಲಿರುವ ಕಾರಣಗಳಲ್ಲಿ ಮತ್ತು ತರ್ಕಗಳಲ್ಲಿ ಪುರುಷ ಪ್ರಾಧಾನ್ಯತೆಯು ಸೇರಿಕೊಂಡು ರಾಜಕೀಯವನ್ನು ರೂಪಿಸುತ್ತಿರುತ್ತದೆ. ಈ ಧೋರಣೆಯ ಪ್ರಕಾರ, ಹೆಣ್ಣೆಂದರೆ ಭೋಗಾಸಕ್ತಿಯ ಮತ್ತು ಅತಾರ್ಕಿಕತೆಯ ಸಹಯೋಗಿ. ಪೃಕೃತಿಗೆ ಹತ್ತಿರವಾದವಳು ಭಾವತೀವ್ರತೆಯುಳ್ಳವಳು. ಮನೆಗೆಲಸಕ್ಕೆ ಸೀಮಿತಳು ಎಂಬೆಲ್ಲಾ.
ಪ್ರದರ್ಶನ ಕಿಟಕಿಗಳೊಳಗೆ ಇರುವಂಥ ಮೈಮಾಟವುಳ್ಳ ಸೂಪರ್ ಮಾಡೆಲ್ ಒಬ್ಬರು ಹೇಳುತ್ತಾರೆ, ‘ದೇಹದ ತೂಕ ಇಳಿಸುವ ಪ್ರಯತ್ನದಲ್ಲಿ ಆರೋಗ್ಯ ಹಾಳಾಗುತ್ತದೆ. ಕೂದಲು ಉದುರುತ್ತದೆ. ಬಳಕುವಂತೆ ಕಾಣಿಸುವ ದೇಹ ಸಾಧನೆಗಾಗಿ ಅಪಾರ ಶ್ರಮ ಪಡಬೇಕು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರೆ ಏನೇನು ಎಷ್ಟೆಷ್ಟು ಆಹಾರ ಪಾನೀಯ ಸೇವಿಸಬೇಕು ಅನ್ನುವ ಲೆಕ್ಕಾಚಾರ ಇರಬೇಕು. ನನ್ನ ಆಹಾರವನ್ನು, ಅದಕ್ಕೆ ಬಳಸುವ ಪದಾರ್ಥಗಳನ್ನು ನಾನೇ ನಿರ್ಧರಿಸುತ್ತೇನೆ. ನಾಳೆ ಬೇರೆ ಊರಿಗೆ ಹೋಗುವುದಿದ್ದರೆ ಇಂದೇ ನನ್ನ ಊಟವನ್ನು ನಾನು ತಯಾರಿಸಿಕೊಳ್ಳಬೇಕು. ಎಷ್ಟೋ ಸಾರಿ ನನಗೆ ಬೇಕಾದ್ದನ್ನು ಸೇವಿಸಲಾಗದ್ದಕ್ಕೆ ಸಿಟ್ಟು ಬಂದು ಅತ್ತಿದ್ದೇನೆ. ಆದರೆ ಏನು ಮಾಡುವುದು ಇದು ನನ್ನ ವೃತ್ತಿಯ ಭಾಗ.’
ಹೀಗೆ, ದೈಹಿಕ ಸ್ವರೂಪ ಮತ್ತು ಸೌಂದರ್ಯಗಳ ಹುಸಿ ಮಾದರಿಗಳ ಕಲ್ಪನೆಯನ್ನು ತಮ್ಮ ಸುತ್ತಲಿನ ಸಮಾಜ ಮತ್ತು ಮಾಧ್ಯಮಗಳ ಸತತ ಹೇರುವಿಕೆಯಿಂದಾಗಿ ಬಹಳಷ್ಟು ಹೆಂಗಸರು ತಮ್ಮ ದೈಹಿಕ ಸ್ವರೂಪ ಮತ್ತು ಸೌಂದರ್ಯಗಳ ಕುರಿತಂತೆ ಅತೃಪ್ತರಾಗಿರುತ್ತಾರೆ. ತನ್ನ ಯಾವುದೋ ಒಂದು ಅಂಗ ಬಹಳ ದೊಡ್ಡದಾಗಿದೆ, ಬಹಳ ಚಿಕ್ಕದಾಗಿದೆ ಅಥವಾ ಕೊಬ್ಬಿನಂಶ ಹೆಚ್ಚಾಗಿದೆ. ಸಣಕಲಾಗಿದ್ದೀನಿ, ಬಹಳ ಕುಳ್ಳಿ, ಬಹಳ ಲಂಬು ಆಗಿದ್ದೀನಿ ಅಂದುಕೊಂಡು ನೋಯುತ್ತಿರುತ್ತಾರೆ, ಒಳಗೇ ಬೇಯುತ್ತಿರುತ್ತಾರೆ. ಹೊರಗಿನಿಂದ ದಾಳಿಯಿಡುವ ಹುಸಿ ಕಾಲ್ಪನಿಕ ಬಿಂಬಗಳಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ ಸಾಧ್ಯ. ಹೆಣ್ಣಾಗಿರುವುದು ಅಷ್ಟು ಸುಲಭವಲ್ಲ. ಕಾಲದಿಂದಲೂ ಹೆಣ್ಣಿನ ದೇಹವು ಹೆಣ್ಣಿನ ಅಸ್ಮಿತೆಯ ಕೇಂದ್ರವಾಗಿಬಿಟ್ಟಿದೆ.
ಈ ರೀತಿಯ ಬಾಡಿ ಶೇಮಿಂಗ್ ಮಾತುಗಳಿಗೆ ಈಡಾಗುವವರು ತಮ್ಮ ದೇಹವು ಒಂದು ಆಭರಣವಲ್ಲ, ಪ್ರದರ್ಶನಕ್ಕಿಲ್ಲ. ಅದು ತನ್ನ ವ್ಯಕ್ತಿತ್ವದ ರೂಪ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ನನ್ನ ದೇಹ ನನ್ನದು. ಈ ದೇಹದಲ್ಲೇ ನಾನು ಬದುಕಬೇಕಾಗಿರುವುದು. ಬದುಕುತ್ತೇನೆ. ಉಳಕೊಳ್ಳುತ್ತೇನೆ. ಈ ನನ್ನ ದೇಹಕ್ಕೆ ಹೊಂದಿಕೊಳ್ಳುತ್ತೇನೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಅವರ ಮಾತುಗಳನ್ನು ಧೋರಣೆಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದಿಲ್ಲ. ಎಂಬ ದೃಢ ನಿರ್ಧಾರ ಕೈಗೊಂಡು ಮುಂದಿನ ಬದುಕನ್ನು ಬದುಕಬೇಕು.
*
ಪರಿಚಯ: ಪರಮೇಶ್ವರ ಗುರುಸ್ವಾಮಿ ಅವರು ಮುನ್ನೂರಕ್ಕೂ ಮಿಕ್ಕಿ ಸಾಕ್ಷ್ಯ, ಶೈಕ್ಷಣಿಕ, ಅರಿವು ಮೂಡಿಸುವ, ಪ್ರೇರಣಾ ಮತ್ತು ಕಥಾ ಆಧಾರಿತ ಕಿರುಚಿತ್ರಗಳ ನಿರ್ದೇಶನ-ಛಾಯಾಗ್ರಹಣ ಮಾಡಿದ್ದಾರೆ. ಚಲನಚಿತ್ರ ನಿರ್ಮಾಣ ಮತ್ತು ರಸಗ್ರಹಣ ಕಮ್ಮಟಗಳನ್ನು ಆಯೋಜಿಸಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮತ್ತು ಚಲನಚಿತ್ರ ಅಧ್ಯಯನ ತರಗತಿಗಳಿಗೆ ಪಾಠ ಮಾಡಿದ್ದಾರೆ. ಸಾಹಿತ್ಯ ಸಿನೆಮಾ ಮತ್ತಿತರ ಸಾಂಸ್ಕೃತಿಕ ಕಲೆಗಳಲ್ಲಿನ ಅಭಿವ್ಯಕ್ತಿಗಳಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ಇವರಿಗೆ ಸದಾ ಕುತೂಹಲ ಆಸಕ್ತಿ ಇರುವುದರಿಂದ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಾರೆ.
ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ನೊಂದ ನೋವ ನೋಯದವರೆತ್ತ ಬಲ್ಲರು
Summaniruvudu Hege series on Body Shaming controversial statement by Dindigul Leoni and response from writer Parameshwara Guruswamy
Published On - 5:21 pm, Tue, 6 April 21