ಮೈಸೂರು: ಯುದ್ಧ ಹಿಂಗೆಂದಾಕ್ಷಣ ಈಗಿನವರಿಗೆ ಸಿನಿಮಾ ದೃಶ್ಯಗಳಲ್ಲೋ, ಚಿತ್ರಪಟಗಳಲ್ಲೋ ಕಂಡ ಯುದ್ಧದ ದೃಶ್ಯಗಳು ನೆನಪಾಗಬಹುದು. ಹಿಂದೆ ರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿಯೋ, ಸಾಮ್ರಾಜ್ಯ ಉಳಿಸಿಕೊಳ್ಳುವ ಸಲುವಾಗಿಯೋ ಯುದ್ಧ ನಡೆಸುತ್ತಿದ್ದರು. ನಮ್ಮ ದೇಶದಲ್ಲಿ ಸ್ವಾತಂತ್ರಕ್ಕಾಗಿಯೂ ಯುದ್ಧ ನಡೆದಿದೆ. ಆದರೆ, ಯುದ್ಧ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ..
ಕಾಡಿನ ಮೃಗಗಳು ತಮ್ಮ ಅಸ್ತಿತ್ವಕ್ಕಾಗಿ, ಜಾಗಕ್ಕಾಗಿ ಸದಾ ಒಂದಿಲ್ಲೊಂದು ತೆರನಾಗಿ ಕಾದಾಟ ನಡೆಸುತ್ತಲೇ ಇರುತ್ತವೆ. ಅದರಲ್ಲಿಯೂ ಹುಲಿಗಳ ನಡುವೆ ಸಾಮ್ರಾಜ್ಯ ಸ್ಥಾಪನೆಗಾಗಿ ಕಾಳಗ ನಡೆಯುತ್ತಿರುತ್ತದೆ. ಆ ದೃಷ್ಟಿಯಲ್ಲಿ ನೋಡಿದರೆ ಅವುಗಳ ಜೀವನ ಶೈಲಿ ಮನುಷ್ಯನ ಜೀವನ ಶೈಲಿಗೆ ಭಿನ್ನವಾಗಿಲ್ಲ ಎಂದು ಧಾರಾಳವಾಗಿ ಹೇಳಬಹುದು.
ಹುಲಿಗಳು ಸಂಘ ಜೀವಿಗಳಲ್ಲ, ಅವು ಒಂಟಿಯಾಗಿಯೇ ತಮ್ಮ ಜೀವನ ನಡೆಸುತ್ತವೆ. ಹೆಣ್ಣು ಹುಲಿಗಳು ಮಾತ್ರ ತಮ್ಮ ಮರಿಗಳ ಜೊತೆ ಎರಡು ವರ್ಷಗಳ ಕಾಲ ಜೊತೆಯಾಗಿ ಇರುತ್ತವೆ. ಆ ಸಂದರ್ಭದಲ್ಲಿ ಮಾತ್ರ ತಾಯಿ ಮತ್ತು ಮರಿಗಳು ಜೊತೆ ಜೊತೆಯಾಗಿ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಎರಡು ವರ್ಷ ಅವಧಿಯಲ್ಲಿ ತಾಯಿ ಹುಲಿ ತನ್ನ ಮರಿಗಳಿಗೆ ಬದುಕಿನ ಪಾಠ ಕಲಿಸಿಕೊಟ್ಟು ನಂತರ ದೂರವಾಗುತ್ತದೆ. ಬೇಟೆಯಾಡುವುದು, ಸಾಮ್ರಾಜ್ಯ ಸ್ಥಾಪನೆ ಹೀಗೆ ಎಲ್ಲ ರೀತಿಯ ಜೀವನ ಕ್ರಮ ಹೇಳಿಕೊಡುತ್ತವೆ. ಇವೆಲ್ಲವನ್ನೂ ಕಲಿತ ಮೇಲೆ ಮರಿ ಹುಲಿಗಳು ಗುಂಪಿನಿಂದ ಬೇರ್ಪಟ್ಟು ತನ್ನದೇ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಳ್ಳುತ್ತವೆ.
ಹುಲಿಗಳೂ ಜಾಗಕ್ಕಾಗಿ ಕಾದಾಡುತ್ತವೆ
ಹುಲಿಗಳು ಸಂಘಜೀವಿ ಅಲ್ಲದಿದ್ದರೂ ತನ್ನ ಇರುವಿಕೆಗೆ ಕಾಡಿನಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತವೆ. ಒಂದು ಕಾಡಿನಲ್ಲಿ 8 ರಿಂದ 10 ಚದರ ಕಿ.ಮೀ ವರಗೆ ವಿಸ್ತೀರ್ಣ ಗುರುತು ಮಾಡಿಕೊಂಡಿರುತ್ತವೆ. ಅರಣ್ಯದ ಆಯಕಟ್ಟಿನ ಸ್ಥಳದ ಮರಗಳಲ್ಲಿ ಪಂಜದಿಂದ ಗುರುತು ಮಾಡುತ್ತವೆ. ಜೊತೆಗೆ ಮರಗಳಿಗೆ ಮೂತ್ರ ವಿಸರ್ಜನೆ ಮಾಡಿ ಗಡಿ ಗುರುತು ಮಾಡುತ್ತವೆ. ಈ ರೀತಿ ಗಡಿ ಗುರುತು ಮಾಡುವುದರಿಂದ ಇದು ತನ್ನ ಸಾಮ್ರಾಜ್ಯ ಎಂದು ಬೇರೆ ಹುಲಿಗಳಿಗೆ ಸಂದೇಶ ನೀಡುತ್ತವೆ.
ಹುಲಿಗಳು ಒಂದು ಬಾರಿ ಗಡಿ ಗುರುತು ಮಾಡಿದ ಮೇಲೆ ಮತ್ತೊಂದು ಹುಲಿ ಅಲ್ಲಿಗೆ ಬಂದರೆ ದೊಡ್ಡ ಕಾಳಗವೇ ನಡೆಯುತ್ತದೆ. ಪ್ರಸ್ತುತ ಕಾಡಿನಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವುಗಳ ನಡುವೆ ಕಾಳಗ ಹೆಚ್ಚುತ್ತಿದೆ. ಸಹಜವಾಗಿ ಆಹಾರ ಹುಡುಕಿ ಹೊರಡುವ ಹುಲಿಗಳು ಬೇರೆ ಹುಲಿಗಳ ವ್ಯಾಪ್ತಿಗೆ ಕಾಲಿಡುತ್ತವೆ. ಈ ಸಂಧರ್ಭದಲ್ಲಿ ಮತ್ತೊಂದು ಹುಲಿ ಆ ಜಾಗದಲ್ಲಿ ಎದುರು ಸಿಕ್ಕರೆ ಘರ್ಷಣೆ ಏರ್ಪಡುವುದು ಖಚಿತ ಮತ್ತು ಹೆಚ್ಚಿನ ಸಂದರ್ಭದಲ್ಲಿ ಜಗಳದಲ್ಲಿ ಗೆಲ್ಲುವ ಬಲಿಷ್ಠ ಹುಲಿ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಳ್ಳುತ್ತದೆ.
ಹುಲಿಗಳು ನಾಡಿಗೇಕೆ ಬರುತ್ತವೆ
ಹುಲಿಗಳು ಕಾಡಿನಿಂದ ಆಚೆ ಬರಲು ಪ್ರಮುಖ ಕಾರಣ ಕಾಡಿನ ವಿಸ್ತೀರ್ಣ ಕಿರಿದಾಗುತ್ತಿರುವುದು, ಕಾಳಗದಲ್ಲಿ ಗಾಯಗೊಳ್ಳುವುದು ಮತ್ತು ಹೆಚ್ಚುತ್ತಿರುವ ಬೇಟೆಯಿಂದಾಗಿ ಆಹಾರದ ಕೊರತೆ ಉಂಟಾಗುತ್ತಿರುವುದು. ಕಾದಾಟದ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ಹುಲಿಗಳು ಬೇರೆ ಹುಲಿ ಅಥವಾ ಮುಳ್ಳು ಹಂದಿಗಳ ಜೊತೆ ಸೆಣೆಸಿದಾಗ ಗಾಯಗೊಂಡು ಬೇಟೆಯಾಡದ ಸ್ಥಿತಿಗೆ ತಲುಪುತ್ತವೆ.
ಇಂತಹ ಸಂದರ್ಭದಲ್ಲಿ ಹುಲಿಗಳು ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡು ಕಾಡಂಚಿನ ಭಾಗಕ್ಕೆ ಬಂದು ಸೇರುತ್ತವೆ. ಅಲ್ಲಿ ಸುಲಭವಾಗಿ ಸಿಗುವ ಜಾನುವಾರುಗಳನ್ನು ಹಿಡಿದು ಆಹಾರ ಸಂಪಾದನೆ ಮಾಡುತ್ತೆವೆ. ಹೀಗೆ ಬೇಟೆಯಾಡಲಾಗದ ಸ್ಥಿತಿ ತಲುಪಿದಾಗಲೇ ಹುಲಿಗಳು ಮಾನವನ ಮೇಲೂ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ.
ಇದೊಂದು ರೀತಿಯ ಸರಪಳಿ ಇದ್ದಹಾಗೆ. ಮುನುಷ್ಯರು ಕಾಡನ್ನು ಕಡಿಯದೇ ಇದ್ದರೆ ಅವುಗಳ ವಾಸಸ್ಥಾನಕ್ಕೆ ಕೊರತೆಯಾಗುವುದಿಲ್ಲ. ನಾವು ಬೇಟೆಯಾಡದಿದ್ದರೆ ಅವುಗಳಿಗೆ ಆಹಾರ ಕೊರತೆಯೂ ಆಗುವುದಿಲ್ಲ. ನಮ್ಮ ಹಸ್ತಕ್ಷೇಪ ಇರದಿದ್ದರೆ ಹುಲಿ ನಾಡಿಗೆ ಬರುವ ಪ್ರಮೇಯ ಸಹಜವಾಗಿ ತಪ್ಪುತ್ತದೆ. ಆದ್ದರಿಂದ ಯಾವ ಕೊಂಡಿಯೂ ಕಳಚದ ಹಾಗೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ.
ಹುಲಿಯನ್ನು ಅಟ್ಟಾಡಿಸಿಕೊಂಡು ಓಡಿಸಿದ ಆನೆ: ಪ್ರವಾಸಿಗರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆ
Published On - 7:34 pm, Sat, 26 December 20